ಬೀದರ್‌ | ಒಲವಿನ ಬಾಂಧವ್ಯ ಬೆಸೆದ ʼವನಭೋಜನʼ!

Date:

Advertisements

ಅಪರೂಪವೆಂಬಂತೆ ಅಲ್ಲಿ ಸೇರಿದ ಪ್ರತಿಯೊಬ್ಬರೂ ತಮ್ಮ ದಾಂಪತ್ಯ ಜೀವನದ ಸುಮಧುರ ಕ್ಷಣ, ನೋವು-ನಲಿವಿನ ಸರಕಗಳನ್ನು ಒಬ್ಬರನೊಬ್ಬರು ಎಳೆಎಳೆಯಾಗಿ ಹಂಚಿಕೊಂಡರು. ಪ್ರೀತಿ-ಸ್ನೇಹ ಬಾಂಧವ್ಯದ ಜೊತೆಗೆ ಬಾಲ್ಯದ ಆಟಗಳಿಗೆ ಹೆಜ್ಜೆ ಹಾಕಿದರು. ಹೊಸ-ಹಳೆಬರ ಸಮ್ಮಿಲನ, ಆತ್ಮೀಯತೆ ಭಾವ-ಮನಸ್ಸಿನ ಬೆಸುಗೆಯ ನಿನಾದ ಮಾರ್ದನಿಸುತ್ತಿತ್ತು. ಬೆಳ್ಳಿಗಿಯಿಂದಲೇ ಹಬ್ಬದ ಸಂಭ್ರಮ ಮೇಳೈಸಿತ್ತು. ದಂಪತಿಗಳ ಬಾಂಧವ್ಯದ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾದ ವನಭೋಜನ ಎಲ್ಲರನ್ನೂ ಉಲ್ಲಾಸದ ಕಡಲಿನಲ್ಲಿ ಮಿಂದೇಳುವಂತೆ ಮಾಡಿತು.

ಇಂಥದೊಂದು ಅಪರೂಪದ ಸೌಹಾರ್ದತೆ ಕಂಡು ಬಂದಿದ್ದು ಔರಾದ ತಾಲೂಕಿನ ಜೊನ್ನೆಕೇರಿ ಗ್ರಾಮದ ಪತ್ರಿಸ್ವಾಮಿ ತಪೋವನ ಪರಿಸರದಲ್ಲಿ, ಔರಾದ ತಾಲೂಕಿನ ಬಸವ ಬಾಂಧವ್ಯ ಬಳಗದ ಯೋಚನಾ ಲಹರಿಯಲ್ಲಿ ಇದೊಂದು ವಿಭಿನ್ನತೆಗೆ ಸಾಕ್ಷಿಯಾಗಿತ್ತು.

WhatsApp Image 2024 08 27 at 3.34.59 PM
ಕಾರ್ಯಕ್ರಮಕ್ಕೂ ಮುನ್ನ ಷಟಸ್ಥಲ ಧ್ವಜಾರೋಹಣ ನೆರೆವೇರಿತು.

ಹಸಿರಿನ ಅಂಗಳದಲ್ಲಿ ಸೇರಿದ 30ಕ್ಕೂ ಅಧಿಕ ದಂಪತಿಗಳು ತಮ್ಮ ದೈನಂದಿನ ಎಲ್ಲ ಜಂಜಾಟಗಳು ಬದಿಗಿಟ್ಟು ಪರಸ್ಪರ ನೋವು, ಸಂಕಟ, ಸಂಭ್ರಮಗಳನ್ನು ಹಂಚಿಕೊಂಡರು. ವಿವಿಧ ವೃತ್ತಿಯಲ್ಲಿರುವ ದಂಪತಿಗಳ ಭಾವಸೇತುವೆ ವನಭೋಜನದಲ್ಲಿ ಮುಖಾಮುಖಿಯಾಯ್ತು. ದಾಂಪತ್ಯ ಬದುಕಿನ ಸಿಹಿ-ಕಹಿ ಕ್ಷಣಗಳನ್ನು ಮೆಲಕು ಹಾಕಿದರು, ಸದ್ಯದ ಬದುಕಿನ ಕುರಿತು ಕುಶಲೋಪರಿ ಹಂಚಿಕೊಂಡು ಅವಿಸ್ಮರಣೀಯ ಕ್ಷಣಗಳು ಕಳೆದರು.

Advertisements
WhatsApp Image 2024 08 27 at 11.43.37 AM
ಮಕ್ಕಳೊಂದಿಗೆ ಹೆಜ್ಜೆ ಹಾಕಿ ಖುಷಿಯಲ್ಲಿ ತೇಲಾಡಿದರು.

ಕೆಲ ವರ್ಷಗಳ ಹಿಂದೆ ಎಲ್ಲ ಕಡೆ ಅವಿಭಕ್ತ ಕುಟುಂಬಗಳಿದ್ದವು. ಇದೀಗ ಬಹುತೇಕ ವಿಭಕ್ತ ಕುಟುಂಬಗಳೇ. ಈ ಕಾಲದಲ್ಲಿ ಸಣ್ಣ ಕುಟುಂಬವಾದರೂ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು ದೂರದ ಮಾತು. ʼಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತುʼ ಎನ್ನುವ ವ್ಯವಹಾರಿಕ ಬದುಕಿನಲ್ಲಿ ನೆಮ್ಮದಿ ಎಂಬುದು ಅಪರೂಪ ಎನಿಸುತ್ತಿದೆ. ಆದರೆ ವಾಸ್ತವ ಸ್ಥಿತಿ ಮರೆತ ಜೀವ ಜೀವಗಳು ಮಕ್ಕಳು, ಕುಟುಂಬದೊಂದಿಗೆ ಬೆರೆತು ಸಂತೋಷ, ಸೌಂದರ್ಯ ಇಮ್ಮಡಿಗೊಳಿಸಿಕೊಂಡರು.

ಮನೆಯ ಸದಸ್ಯರೆಲ್ಲರೂ ಜತೆಗೂಡಿ ಮಾಡುವ ವನಭೋಜನಕ್ಕೆ ವಿಶೇಷ ಮಹತ್ವ. ಆದರೆ ಇಲ್ಲಿ ನಾಲ್ಕು ದಿಕ್ಕಿನಿಂದ ಆಗಮಿಸಿದ ದಂಪತಿಗಳು ಸಮತತ್ವ ಸಂಕೇತಕ್ಕೆ ಅಣಿಯಾಗಿ ಪರಸ್ಪರ ಜತೆಗೂಡಿ, ಭೇದ-ಭಾವ ಮರೆತು ಒಂದಾದರು. ವನಭೋಜನದ ನೆವದಲ್ಲಾದರೂ ವಿವಿಧ ಕುಟುಂಬದ ಸದಸ್ಯರೆಲ್ಲರೂ ಒಂದಾಗಿ ಮನೆಯ ವಾತಾವರಣದಿಂದ ಹೊರಗೆ ಬಂದು ಒಟ್ಟಿಗೆ ಊಟ ಮಾಡುತ್ತಾ ಸಂವಹನ ನಡೆಯಲಿ ಎಂಬುದೇ ವನಭೋಜನ ಹಿಂದಿನ ಉದ್ದೇಶವಾಗಿತ್ತು. ಅಂತಹದ್ದೊಂದು ವಿಶಿಷ್ಟ ಕಾರ್ಯವನ್ನು ಬಸವ ಬಾಂಧವ್ಯ ಆಯೋಜಿಸುವ ಮೂಲಕ ಮರುಚಾಲನೆ ನೀಡಿತು.

WhatsApp Image 2024 08 27 at 2.27.14 PM
ಕಲಾವಿದ ತುಕರಾಮ ನಾಗೂರೆ ತಂಡದಿಂದ ಜಾದು ಕಾರ್ಯಕ್ರಮ ನಡೆಯಿತು.

ದೈಹಿಕ ಶಿಕ್ಷಣ ಶಿಕ್ಷಕ ಗುರುನಾಥ ದೇಶಮುಖ ಅವರ ಡ್ಯಾನ್ಸ್‌ಗೆ ಎಲ್ಲ ದಂಪತಿಗಳು ಭರ್ಜರಿಯಾಗಿ ಹೆಜ್ಜೆ ಹಾಕಿ ಹಾಕಿ ಮೈಮರೆತು ಕುಣಿದರೆ, ಇನ್ನು ಕೆಲವರು ಬಾಲ್ಯದ ಆಟಗಳನ್ನಾಡಿ ಮಕ್ಕಳಂತೆ ಉಲ್ಲಾಸದಲ್ಲಿ ತೇಲಾಡಿ ಸಂಭ್ರಮಿಸಿದರು. ತುಕರಾಮ ನಾಗೂರೆ ತಂಡದವರು ನಡೆಸಿಕೊಟ್ಟ ಜಾದು ಮತ್ತು ಹಾಸ್ಯ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಬಸವಾದಿ ಶರಣರ ವಚನ ವೈಭವ ಮಾರ್ಧನಿಸಿತು, ದಾಂಪತ್ಯದ ಕುರಿತಾದ ನೆರೆದವರ ಅತಿಥ್ಯ ಹಿತವಚನ ಎದೆಗೀಳಿಯಿತು. ಜೋಳದ ರೊಟ್ಟಿ, ಭಜ್ಜಿ ಮತ್ತು ಚಪಾತಿ, ಪಲ್ಯೆದೊಂದಿಗೆ ಮೊಸರು, ಚಟ್ನಿ ಸವಿದು ತೃಪ್ತರಾದರು.

ದಾಂಪತ್ಯ ಬದುಕಿಗೆ ಮಾರ್ಗ ತೋರಿದ ಶರಣರು :

ಗದುಗಿನ ಸಾಹಿತಿ ಸಿದ್ದು ಯಾಪಲಪರವಿ ವನಭೋಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ʼಇಂದಿನ ಆಡಂಬರದ ಬದುಕಿನಲ್ಲಿ ನೆಮ್ಮದಿ ಅಪರೂಪವಾಗಿದೆ. ಪರಸ್ಪರ ಭಾವನೆಗಳು ಹಂಚಿಕೊಳ್ಳಲು ಸಮಯವಿಲ್ಲದಷ್ಟು ಒತ್ತಡದ ಬದುಕು ದೂಡುತ್ತಿದ್ದೇವೆ. ಆದರೆ ಬಸವಾದಿ ಶರಣರು ಕಾಯಕ, ದಾಸೋಹ ಜೊತೆಗೆ ಅವರ ಸರಳ ಬದುಕು ಅದೆಷ್ಟು ವೈವಿದ್ಯವಾಗಿತ್ತು ಎಂಬುದು ನಮಗೆ ರಹದಾರಿಯಾಗಬೇಕುʼ ಎಂದರು.

ʼಬದುಕಿನ ಸೌಂದರ್ಯ ಬಸವಾದಿ ಶರಣರು ತೋರಿಸಿಕೊಟ್ಟಿದ್ದಾರೆ. ಶರಣರ ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಂಡು ಬದುಕಬೇಕು. ಕೌಟುಂಬಿಕ ಕಲಹಗಳು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಅಪರೂಪದ ಕಾರ್ಯಕ್ರಮಗಳು ಮನಸ್ಸಿಗೆ ಸಂತೃಪ್ತಿ, ನೆಮ್ಮದಿ ಹಾಗೂ ಉತ್ಸಾಹ ಹೆಚ್ಚಿಸುತ್ತವೆʼ ಎಂದು ನುಡಿದರು.

WhatsApp Image 2024 08 27 at 2.29.50 PM 1
ಗದುಗಿನ ಸಾಹಿತಿ ಸಿದ್ದು ಯಾಪಲಪರವಿ ಅವರು ʼದಾಂಪತ್ಯ ಬದುಕುʼ ಕುರಿತು ವಿಶೇಷ ಉಪನ್ಯಾಸ ನೀಡಿದರು.

ವಿಶೇಷ ಅತಿಥಿಗಳಾಗಿ ಆಗಮಿಸಿದ ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ವಿನಯಕುಮಾರ್‌ ಮಾಳಗೆ ಮಾತನಾಡಿ, ʼನಾವೆಲ್ಲರೂ ಮುಂದಿನ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸದೇ ಪರಿಸರ ಮೇಲೆ ಸಂಹಾರ ನಡೆಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದರೂ ಅಂತರ್ಜಲ ಮಟ್ಟ ಪಾತಾಳ ಕುಸಿಯುತ್ತದೆ. ಇದಕ್ಕೆ ಕಾರಣ ಏನೆಂಬುದು ನಾವೆಲ್ಲರೂ ಚರ್ಚಿಸುವುದು ಅಗತ್ಯವಾಗಿದೆ. ಹೀಗಾಗಿ ಪರಿಸರ ನಮ್ಮ ಬದುಕಿನ ಭಾಗವಾಗಿ ಪ್ರಕೃತಿ ಕಾಪಿಟ್ಟುಕೊಳ್ಳಲು ಕಂಕಣಬದ್ಧರಾಗಿ ದುಡಿಯೋಣʼ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದ್ದೇವರ 74ನೆಯ ಜನ್ಮದಿನವನ್ನು ಸರಳವಾಗಿ ಆಚರಣೆ ಮಾಡಲಾಯಿತು. ಇದಕ್ಕೂ ಇತ್ತೀಚೆಗೆ ನಿಧನರಾದ ಬಸವಕಲ್ಯಾಣದ ಅನುಭವ ಮಂಟಪ ಸಂಚಾಲಕ ವಿ.ಸಿದ್ದರಾಮಣ್ಣ ಹಾಗೂ ಗಡಿಯಲ್ಲಿ ಕರ್ತವ್ಯದ ವೇಳೆ ಹುತಾತ್ಮರಾದ ಯೋಧ ಅನಿಲಕುಮಾರ್ ನವಾಡೆ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ಜೀವ ವೈವಿಧ್ಯ ಪ್ರಶಸ್ತಿ ಪುರಸ್ಕೃತ ರಿಯಾಜ್‌ ಪಾಶಾ ಕೊಳ್ಳೂರು ಹಾಗೂ ವಿನಯ ಮಾಳಗೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

WhatsApp Image 2024 08 27 at 2.28.57 PM
ವನಭೋಜನದಲ್ಲಿ ಭಾಗವಹಿಸಿದ ದಂಪತಿಗಳಿಗೆ ಆರತಿ ಬೆಳಗಿ ಬರಮಾಡಿಕೊಂಡರು.

ಕಳೆದುಹೋಗುತ್ತಿರುವ ಎಷ್ಟೋ ಅಮೂಲ್ಯ ಸಂಪ್ರದಾಯ,ಆಚರಣೆಗಳ,‌ ಬದುಕಿನ ಅನೇಕ ಸುಮಧುರ ನೆನಪುಗಳನ್ನು ಮರು ಆಚರಿಸಿಕೊಂಡು ಬರುವ ಜೊತೆಗೆ ವಿಭಿನ್ನ ಯೋಚನೆಗಳೊಂದಿಗೆ ಮುನ್ನಡೆಯುತ್ತಿರುವ ಬಸವ ಬಾಂಧವ್ಯ ಬಳಗದ ಕಾರ್ಯ ಸಮಾಜಕ್ಕೆ ಮಾದರಿಯಾಗಬಲ್ಲುದು ಎಂದು ಕೊಂಡಾಡಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದರ್ಶನಾತಿಥ್ಯ- ಪೊಲೀಸರಿಂದ ಪೊಲೀಸರಿಗಾದ ಅವಮಾನ

ಕಾರ್ಯಕ್ರಮದಲ್ಲಿ ಪ್ರಮುಖರಾದ ಮಾತೆ ಭಾರತಿ ಅಕ್ಕ, ಗಜಾನನ ಮಳ್ಳಾ, ಜಗನ್ನಾಥ ಮೂಲಗೆ, ಬಸವರಾಜ ಬಿರಾದರ್, ಯೋಗೇಶ್ವರಿ, ಮಹಾದೇವ ಮಡಿವಾಳ, ಶಿವಾನಂದ ಸ್ವಾಮಿ, ಪ್ರವೀಣ ಸ್ವಾಮಿ, ಬಾಲರಾಜ್ ಎಂಡೆ, ಜಗನಾಥ್ ಬಿರಾದಾರ್, ರಾಜಕುಮಾರ್ ಹಲಮಂಡಗೆ, ಸಿದ್ದೇಶ ಸ್ವಾಮಿ, ಮಹೇಶ್ ಮಜಗೆ, ಸಂದೀಪ ಪಾಟೀಲ್, ವೀರೇಶ್ ಅಲ್ಮಾಜೆ, ಬಾಲಾಜಿ ಕುಂಬಾರ್, ಕಲ್ಲಪ್ಪಾ ಬಿರಾದರ್‌, ಸಂಜುಕುಮಾರ್ ಬಿರಾದಾರ, ಮಹಾದೇವ ಘೂಳೆ, ರಾಜಕುಮಾರ್ ಸೇರಿದಂತೆ ಬಸವ ಬಾಂಧವ್ಯ ಬಳಗದ ಸದಸ್ಯರ ಕುಟುಂಬಸ್ಥರಿದ್ದರು. ಬಾಲಾಜಿ ಅಮರವಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಹಾನಂದಾ ಎಂಡೆ ಸ್ವಾಗತಿಸಿದರು. ಮಲ್ಲಿಕಾರ್ಜುನ ಟಂಕಸಾಲೆ ನಿರೂಪಿಸಿದರು.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X