ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ 2ನೇ ವಾರ್ಡ್‌ನ ದುರ್ಗಾ ದೇವಿ ದೇವಸ್ಥಾನ ಹಿಂದುಗಡೆಯ ವಿದ್ಯುತ್ ಕಂಬವೊಂದು ಸಂಪೂರ್ಣ ಶಿಥಲಗೊಂಡಿದ್ದು ಗ್ರಾಮಸ್ಥರು ಆತಂಕದಲ್ಲೇ ಓಡಾಡುವಂತಾಗಿದೆ.
ವಿದ್ಯುತ್ ಕಂಬ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಕಬ್ಬಿಣದ ಸರಳುಗಳು ಕಾಣುತ್ತಿವೆ. ಕಂಬ ಯಾವಾಗ ಮುರಿದು ಬೀಳುತ್ತೋ ಎಂಬ ಭಯ ಇಲ್ಲಿಯ ನಿವಾಸಿಗಳಿಗೆ ಕಾಡುತ್ತಿದೆ. ಶಿಥಿಲಗೊಂಡ ಕಂಬ ಬದಲಾಯಿಸದ ಜೆಸ್ಕಾಂ ಅಧಿಕಾರಿಗಳು ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆʼ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ʼಓಣಿಯಲ್ಲಿ ಮಕ್ಕಳು ಸೇರಿದಂತೆ ಸಾರ್ವಜನಿಕರು ದಿನನಿತ್ಯ ಶಿಥಿಲಗೊಂಡ ವಿದ್ಯುತ್ ಕಂಬದ ಹತ್ತಿರದಿಂದಲೇ ತಿರುಗಾಡುತ್ತಾರೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆಗಾರರಾಗುತ್ತಾರೆ. ಕೂಡಲೇ ಕಂಬ ತೆರವುಗೊಳಿಸಬೇಕುʼ ಎಂದು ಆಗ್ರಹಿಸಿದರು.

ಗ್ರಾಮದ ನಿವಾಸಿ ಯಮನೂರಪ್ಪ ಮಾತನಾಡಿ, ʼವಿದ್ಯುತ್ ಕಂಬದ ಕೆಳಭಾಗದಲ್ಲಿ ಸಿಮೆಂಟ್ ಉದುರಿದ ಪರಿಣಾಮ, ಕಬ್ಬಿಣದ ಸರಳುಗಳು ತೇಲಿ ಸ್ಟ್ರೀಟ್ ಲೈಟ್ ಪೋಲ್ ಮುರಿದು ಬೀಳುವ ಹಂತಕ್ಕೆ ತಲುಪಿದೆ. ಈ ಬಗ್ಗೆ ಗ್ರಾಮ ಪಂಚಾಯತಿ ಹಾಗೂ ಜೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಗಮನಕ್ಕೆ ತಂದರೂ ಪ್ರಯೋಜನ ಆಗಲಿಲ್ಲ. ಆಕಸ್ಮಾತ್ ಕಂಬ ಮುರಿದು ಅಪಾಯ ಸಂಭವಿಸಿದರೆ ಅದಕ್ಕೆ ಜೆಸ್ಕಾಂ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆʼ ಎಂದು ಹೇಳಿದರು .
ʼಗ್ರಾಮದ ಇತರೆ ವಾರ್ಡ್‌ಗಳಲ್ಲಿ ಕೆಲ ಕಂಬಗಳು ಶಿಥಿಲಗೊಂಡು ಮುರಿದು ಬೀಳುವ ಹಂತಕ್ಕೆ ತಲುಪಿವೆ. ಯಾವುದೇ ಅಹಿತಕರ ಘಟನೆ ಜರುಗುವ ಮುಂಚೆ ಜೆಸ್ಕಾಂ ಶಾಖಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಒಲವಿನ ಬಾಂಧವ್ಯ ಬೆಸೆದ ʼವನಭೋಜನʼ!
ಜೆಸ್ಕಾಂ ಅಧಿಕಾರಿಗಳು ವಾರ್ಡಿನ ನಿವಾಸಿಗಳ ಜೀವದ ಜೊತೆ ಆಟವಾಡುತ್ತಿರುವುದು ವಿಪರ್ಯಾಸ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ಕ್ರಮ ಕೈಗೊಂಡು ಮುಂದಿನ ಅನಾಹುತಕ್ಕೆ ಕಡಿವಾಣ ಹಾಕುವರೇ ಎಂಬುದನ್ನು ಕಾದು ನೋಡಬೇಕು.