ಶ್ರೀಮಂತ ಯುವಜನರು ಬಡ ಯುವತಿಯರನ್ನು ಪ್ರೇಮ ಪಾಶಕ್ಕೆ ಬೀಳಿಸಿ ವಂಚಿಸುತ್ತಿರುವ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಡ ಯುವತಿಯರ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲಿ ಜಾಗೃತಿ ಮೂಡಿಸುವ ʼದಿ ರೂಲರ್ಸ್ʼ ಚಲನಚಿತ್ರ ಆಗಸ್ಟ್ 30ರಂದು ತೆರೆ ಕಾಣಲಿದೆ ಎಂದು ನಟ, ನಿರ್ದೇಶಕ ಹಾಗೂ ಅಂಬೇಡ್ಕರ್ ಸೇವಾ ಸಮಿತಿ (ಎಎಸ್‌ಎಸ್ಕೆ) ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್ ಹೇಳಿದರು.
ಬೀದರ್ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ʼಆಗಸ್ಟ್30ರಂದು ಬೀದರ್ ಹಾಗೂ ಭಾಲ್ಕಿ ಚಿತ್ರಮಂದಿರದಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆ ಆಗಲಿದೆʼ ಎಂದು ಮಾಹಿತಿ ನೀಡಿದರು.
ʼ2023ರ ಸೆಪ್ಟೆಂಬರ್‌ನಲ್ಲಿ ಚಿತ್ರದ ಕಥೆ ಸಿದ್ಧಗೊಂಡಿತ್ತು. ನವೆಂಬರ್ 26ರಂದು ಸಂವಿಧಾನ ದಿನಾಚರಣೆಯ ದಿನದಂದು ಶೂಟಿಂಗ್ ಆರಂಭಗೊಂಡಿತ್ತು. ಈಗ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ನಿರ್ಮಾಣಕ್ಕೆ 4.5 ಕೋಟಿ ರೂಪಾಯಿ ಖರ್ಚಾಗಿದೆ. ಚಿತ್ರದ ನಿರ್ಮಾಪಕ ಅಶ್ವಸ್ಥ್ ಬೆಳಗೆರೆ ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ನಾನು ನಟಿಸಿದ್ದೇನೆʼ ಎಂದರು.
ʼಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ರೀತುಗೌಡ ನಟಿಯಾಗಿ, ಅವರ ತಾಯಿ ದುರ್ಗಮ್ಮ ಸಹ ಅಭಿನಯಿಸಿದ್ದಾರೆ. ಉದಯ ಭಾಸ್ಕರ್ ಅವರು ನಿರ್ದೇಶಿಸಿ ಪ್ರೋತ್ಸಾಹಿಸಿದ್ದಾರೆʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವೃದ್ಧಾಪ್ಯ ವೇತನ, ಅನ್ನಭಾಗ್ಯ ಸಿಗದೆ ವೃದ್ಧೆ ಪರದಾಟ
ಪತ್ರಿಕಾಗೋಷ್ಠಿಯಲ್ಲಿ ಮಹೇಶ್ ಗೋರನಾಳಕರ್, ಲೋಕೇಶ ಕಾಂಬಳೆ, ಪ್ರಕಾಶ್ ರಾವಣ, ಮುಕೇಶ ಚೆಲವಾ, ಸಿದ್ದಾರ್ಥ ನಾಟೇಕರ್, ಗೋಪಾಲ್ ದೊಡ್ಡಿ, ಭೀಮರಾವ್, ನೀಲೇಶ್ ಮೇಲಕೆರಿ, ಮುಕೇಶ್ ಪಾಂಡೆ, ಉದ್ದೇಶ್ ಸಿಂಗೆ ಇದ್ದರು.