ಪೊಲೀಸ್ ಇಲಾಖೆ ಎಂದಾಕ್ಷಣ ನ್ಯಾಯ ಸಿಗುವುದಿಲ್ಲ ಎಂಬ ಸಾಮಾನ್ಯ ಜನಾಭಿಪ್ರಾಯವನ್ನು ದರ್ಶನಾತಿಥ್ಯ ಇನ್ನಷ್ಟು ಗಟ್ಟಿಗೊಳಿಸಿದೆ. ಇರುವವರು-ಇಲ್ಲದವರ ನಡುವಿನ ವ್ಯತ್ಯಾಸವನ್ನು ಹಾಗೂ ವ್ಯವಸ್ಥೆಯ ಹುಳುಕನ್ನು ಎತ್ತಿ ತೋರಿಸುತ್ತಿದೆ. ಇದು ದರ್ಶನ್ ಬಂಧನಕ್ಕಾಗಿ ಹಗಲಿರುಳು ಶ್ರಮಿಸಿದ ಪೊಲೀಸರಿಗೆ ಮಾಡಿದ ಅವಮಾನವಾಗಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಆತಿಥ್ಯ ನೀಡಿದ್ದು ಬೆಳಕಿಗೆ ಬಂದಿದೆ. ಬ್ಯಾರಕ್‌ನ ಮುಂಭಾಗದಲ್ಲಿ ಆರೋಪಿ ದರ್ಶನ್ ಜೊತೆ ರೌಡಿಗಳು ಕೂತು ಮಾತನಾಡುತ್ತಿರುವ ಚಿತ್ರ, ಜೈಲಿನಿಂದ ಹೊರಗಿರುವ ರೌಡಿಗಳೊಂದಿಗೆ ಮಾತನಾಡುತ್ತಿರುವ ವಿಡಿಯೋ ತುಣುಕು ವೈರಲ್ ಆಗಿದೆ. ಹೈ ಪ್ರೊಫೈಲ್ ಆರೋಪಿಯೊಬ್ಬನಿಗೆ ಜೈಲಿನೊಳಗೆ ಇಷ್ಟೆಲ್ಲ ಸವಲತ್ತು, ಸೌಕರ್ಯ, ಸಹಕಾರ ಸಿಗುವುದು ಸಾಮಾನ್ಯರಿಗೆ ಅಚ್ಚರಿಯ ವಿಷಯ. ಆದರೆ, ಜೈಲು ಸಿಬ್ಬಂದಿಗೆ ಇದು ಹೊಸತಲ್ಲ.
ಜೈಲಿನ ಸುದ್ದಿ ಹೊರಬರುತ್ತಿದ್ದಂತೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಕಾರಾಗೃಹಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಿಶೇಷ ಆತಿಥ್ಯ ನೀಡಿರುವ ಪ್ರಕರಣದಲ್ಲಿ ಒಂಬತ್ತು ಮಂದಿ ಜೈಲು ಸಿಬ್ಬಂದಿಯನ್ನು ಅಮಾನತು ಮಾಡಿದ ಬೆನ್ನಲ್ಲೇ ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ. ಹಾಗೆಯೇ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರದಿಂದ ಬೇರೆಡೆಗೆ ವರ್ಗಾಯಿಸುವ ಚಿಂತನೆ ನಡೆಸಿದ್ದಾರೆ. ಇದು ಆಡಳಿತಾತ್ಮಕವಾಗಿ ನಡೆಯಬೇಕಾದ್ದು, ನಡೆದಿದೆ.
ಇನ್ನು ಕೊಲೆ ಆರೋಪ ಹೊತ್ತ ನಟ ದರ್ಶನ್‌ಗೆ ಜೈಲಿನ ಬದುಕು ಬುದ್ಧಿ ಕಲಿಸಬೇಕಾಗಿತ್ತು. ಜೈಲಿನ ವಾತಾವರಣ, ಒಬ್ಬಂಟಿತನ ಪಶ್ಚಾತ್ತಾಪಕ್ಕೆ ದಾರಿ ಮಾಡಿಕೊಟ್ಟು, ಮನುಷ್ಯನನ್ನಾಗಿಸಬೇಕಾಗಿತ್ತು. ಆದರೆ ಅಲ್ಲಿಯೂ ಆತನಿಗೆ ಐಷಾರಾಮಿ ಬದುಕು ಕಲ್ಪಿಸಿಕೊಟ್ಟ ಜೈಲು ಸಿಬ್ಬಂದಿಯಿಂದಾಗಿ, ಕಷ್ಟ ಕೋಟಲೆಗಳು ಹತ್ತಿರವೂ ಸುಳಿದಿಲ್ಲ. ಸುಧಾರಿಸುವಂತೆಯೂ ಕಾಣುತ್ತಿಲ್ಲ.
ತಪ್ಪಿನ ಮೇಲೆ ತಪ್ಪು ಮಾಡುತ್ತಲೇ ಹೋಗುತ್ತಿರುವ ದರ್ಶನ್, ಜೈಲಿನಲ್ಲಿಯೂ ʼಬಾಸ್ʼನಂತೆಯೇ ಬದುಕುತ್ತಿದ್ದಾರೆ. ಸಮಯ ಸಿಕ್ಕಾಗ ರೌಡಿ ನಾಗನೊಂದಿಗೆ ಹರಟೆ ಹೊಡೆಯುವ ದರ್ಶನ್, ತಮಗಾಗಿ ಕೊಲೆ ಕೃತ್ಯದಲ್ಲಿ ಭಾಗಿಯಾದ ತಮ್ಮ ಸ್ನೇಹಿತರನ್ನು ಕಣ್ಣೆತ್ತಿಯೂ ನೋಡುತ್ತಿಲ್ಲವೆಂಬ ಆರೋಪಕ್ಕೂ ಗುರಿಯಾಗಿದ್ದಾರೆ.
ದರ್ಶನ್ ಜೊತೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಎ5 ಆರೋಪಿ ನಂದೀಶ್ ಕುಟುಂಬ ಇಂದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ನಂದೀಶ್ ತಂದೆ ಶ್ರೀನಿವಾಸಯ್ಯನವರು, ಇದುವರೆಗೂ ದರ್ಶನ್ ಆಗಲೀ ಅವರ ವಕೀಲರಾಗಲೀ ನಮ್ಮ ಮಗನನ್ನು ಭೇಟಿ ಮಾಡಿಲ್ಲ. ಸಾಲದ ಹೊರೆ ಹೆಗಲೇರಿದೆ. ಸಮಾಜ ನಮ್ಮನ್ನು ಕೊಲೆಗಾರರಂತೆ ನೋಡುತ್ತಿದೆ. ಮಗನಿಗೆ ಬೇಲ್ ಕೊಡಿಸುವ ಸ್ಥಿತಿಯಲ್ಲಿ ನಾವಿಲ್ಲ. ಲಕ್ಷಾಂತರ ರೂಪಾಯಿ ಬೇಕು, ಎಲ್ಲಿಂದ ತರುವುದು, ನಮಗೇ ಊಟಕ್ಕಿಲ್ಲ. ಮಗನನ್ನು ಕರೆದುಕೊಂಡು ಹೋಗಿದ್ದಾರೆ, ಅವರೇ ಕರೆದುಕೊಂಡು ಬರಲಿ. ಬಿಡಿಸಿಕೊಡಿ ಅಂತ ನಾವು ದರ್ಶನ್ ಅವರನ್ನ ಕೇಳುವುದಕ್ಕೆ ಸಾಧ್ಯವೇ? ನಮ್ಮ ಮಗನಿಗೆ 3 ಬಾರಿ ಜೈಲೂಟ ಕೊಡುತ್ತಿದ್ದಾರೆ. ದರ್ಶನ್‌ಗೆ ಒಳ್ಳೆ ಊಟ ಸಿಗುತ್ತಿದೆ ಅಂತ ಕೇಳಿ ಬೇಜಾರು ಆಗುತ್ತದೆ. ಆದರೆ ನಾವೇನು ಮಾಡುವುದಕ್ಕಾಗುತ್ತೆ? ನೀವು ಮಾತ್ರ ಒಳ್ಳೆಯ ಆಹಾರ ತಿನ್ನುತ್ತಿದ್ದೀರಿ, ನಮ್ಮ ಹುಡುಗನಿಗೆ ಮಾತ್ರ ಜೈಲೂಟ ಅಂತ ಕೇಳುವುದಕ್ಕೆ ಆಗುತ್ತಾ? ದುಡ್ಡು ಇರೋರದು ಏನು ಬೇಕಾದರೂ ನಡೆಯುತ್ತದೆ ಎಂದಿರುವುದು, ಇರುವವರು-ಇಲ್ಲದವರ ನಡುವಿನ ವ್ಯತ್ಯಾಸವನ್ನು ಹಾಗೂ ವ್ಯವಸ್ಥೆಯ ಹುಳುಕನ್ನು ಎತ್ತಿ ತೋರಿಸುತ್ತಿದೆ.
ಜೈಲಿನೊಳಗೆ ಅಡಿಗಡಿಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಖೈದಿಗಳನ್ನು ಅವರ ಅಪರಾಧ ಕೃತ್ಯಗಳಿಗೆ ತಕ್ಕಂತೆ ವಿಂಗಡಿಸಿ, ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಆದರೂ ಜೈಲಿನಲ್ಲಿ ಬೀಡಿ, ಸಿಗರೇಟ್, ಮದ್ಯ, ಗಾಂಜಾ, ಮೊಬೈಲ್ ಎಲ್ಲವೂ ಸಿಗುತ್ತದೆ. ತಮಿಳುನಾಡಿನ ಶಶಿಕಲಾಗೆ ವಿಶೇಷ ಆತಿಥ್ಯ ನೀಡಲಾಗಿತ್ತು. ಅದು ಬೆಳಕಿಗೆ ಬಂದು, ಮೊಕದ್ದಮೆ ದಾಖಲಾಗಿ, ಜೈಲಾಧಿಕಾರಿ ಕೆಲಸ ಕಳೆದುಕೊಂಡಿದ್ದರು. ಇದು ಜೈಲಿನಲ್ಲಿರುವ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಗೊತ್ತಿಲ್ಲದ ವಿಷಯವಲ್ಲ. ಆದರೂ ನಟ ದರ್ಶನ್ ಅದೇ ಕಾರಾಗೃಹವಾಸಿ ಆದಾಗ, ಅದೇ ಸಿಬ್ಬಂದಿ ಆತ ಚಿತ್ರನಟ, ಪ್ರಭಾವಿ, ಹಣವಂತ ಎಂಬ ಕಾರಣಕ್ಕೆ, ಆತನಿಗೆ ರಾಜಾತಿಥ್ಯ ವ್ಯವಸ್ಥೆ ಕಲ್ಪಿಸಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಾನವ ಘನತೆಗಾಗಿ ಹೋರಾಟ – ಕನ್ನಡ ತಮಿಳು ಎಂಬ ಗಡಿಗೆರೆಗಳು ಸಲ್ಲದು
ಈ ಕಾರಣದಿಂದಲೇ ಪೊಲೀಸ್ ಇಲಾಖೆ ಎಂದಾಕ್ಷಣ ಜನ ತಿರಸ್ಕಾರದಿಂದ ಕಂಡು, ದೂರ ಸರಿಯುತ್ತಾರೆ. ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರದೊಂದಿಗೆ ದರ್ಪ, ದೌರ್ಜನ್ಯ, ಸ್ವಜನಪಕ್ಷಪಾತ, ದಬ್ಬಾಳಿಕೆ, ಜಾತಿ ಮನೋಭಾವ ಕೂಡ ರಕ್ತ ಮಾಂಸದಂತೆ ಬೆರೆತುಹಹೋಗಿದೆ. ಹೀಗಾಗಿ ಪೊಲೀಸ್ ಇಲಾಖೆಯ ಬಗ್ಗೆ ಜನರಲ್ಲಿ ಅವ್ಯಕ್ತ ಭಯ ಮಾತ್ರವಲ್ಲ, ತಿರಸ್ಕಾರವೂ ಮನೆ ಮಾಡಿದೆ. ಹಾಗೆಂದು ಇಡೀ ಪೊಲೀಸ್ ಇಲಾಖೆ ಜನವಿರೋಧಿತನವನ್ನು ಮೈಗೂಡಿಸಿಕೊಂಡಿದೆ ಎಂದರ್ಥವಲ್ಲ. ಇಲ್ಲಿಯೂ ಕೆಲವರಾದರೂ ಜನಪರ, ಪ್ರಾಮಾಣಿಕ, ದಕ್ಷ ಪೊಲೀಸ್ ಅಧಿಕಾರಿಗಳು ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಂತಹವರ ಪೈಕಿ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಕೇಸನ್ನು ನಿರ್ವಹಿಸಿದ ಪೊಲೀಸ್ ಅಧಿಕಾರಿ ಗಿರೀಶ್ ಮತ್ತವರ ತಂಡವೂ ಒಂದು. ರೇಣುಕಸ್ವಾಮಿ ಕೊಲೆಯಾದ ಕ್ಷಣದಿಂದ ಇಂಚಿಂಚು ಬಿಡದೆ ಸಾಕ್ಷ್ಯ ಕಲೆ ಹಾಕಿರುವ, ಅದನ್ನು ತನಿಖೆ ಮತ್ತು ವಿಚಾರಣೆಗಳಿಂದ ಗಟ್ಟಿಗೊಳಿಸುತ್ತ ಸಾಗಿದ್ದಾರೆ. ಅಪಾರ ಶ್ರಮ, ಸಮಯ ಮತ್ತು ಬುದ್ಧಿವಂತಿಕೆಯಿಂದ ಕಾರ್ಯ ನಿರ್ವಹಿಸಿರುವ ಪೊಲೀಸರು, ಅತ್ಯಂತ ದಕ್ಷತೆಯಿಂದ ಈ ಕೊಲೆ ಕೇಸನ್ನು ಬೆಳಕಿಗೆ ತಂದು ಆರೋಪಿಗಳನ್ನು ಬಂಧಿಸಿ, ಕಂಬಿ ಹಿಂದೆ ಕೂರಿಸಿದ್ದಾರೆ. ಏಕೆಂದರೆ, ಜನಪ್ರಿಯ ನಟ ಎಂಬ ಕಾರಣಕ್ಕೆ ರಾಜಕೀಯ ಪ್ರಭಾವ, ಹಣದ ಆಮಿಷ, ಒತ್ತಡ, ವರ್ಗಾವಣೆ ಎಲ್ಲವೂ ಇರುತ್ತದೆ. ಆದರೆ ಪೊಲೀಸ್ ಅಧಿಕಾರಿಗಳು ಅದಕ್ಕೆ ಬಲಿಯಾಗದೆ, ನ್ಯಾಯ ನಿಷ್ಠುರತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಇಲಾಖೆಗೆ ಗೌರವ ತಂದಿದ್ದಾರೆ.
ರಾಜ್ಯ ಸರ್ಕಾರವೂ ಕೂಡ, ದರ್ಶನ್ ಒಬ್ಬ ಜನಪ್ರಿಯ ನಟ, ಪ್ರಭಾವಿ ಎಂಬುದನ್ನು ಮರೆತು ವಿಚಾರಣೆ ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡಿತ್ತು. ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೇ ಬಿಡಲಾಗಿತ್ತು. ಹಸ್ತಕ್ಷೇಪ ಮಾಡದೆ ಮುಕ್ತ ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದೆಲ್ಲದರ ಪರಿಣಾಮವಾಗಿ ನಟ ದರ್ಶನ್ ಮತ್ತು ಸಹಚರರು ಇಂದು ಪರಪ್ಪನ ಅಗ್ರಹಾರ ಕಾರಾಗೃಹವಾಸಿಗಳಾಗಿ, ಪೊಲೀಸ್ ಇಲಾಖೆಯ ಕ್ರಮ ಜನಮನ್ನಣೆಗೆ ಪಾತ್ರವಾಗಿತ್ತು.
ಈಗ ಜೈಲಿನಲ್ಲಿ ಆಗಿರುವ ಲೋಪ, ದರ್ಶನ್ ಬಂಧನಕ್ಕಾಗಿ ಹಗಲಿರುಳು ಶ್ರಮಿಸಿದ ಪೊಲೀಸರಿಗೆ ಮಾಡಿದ ಅವಮಾನ. ಪೊಲೀಸರಿಂದ ಪೊಲೀಸರಿಗೇ ಆದ ಅಪಚಾರ.
ಪೊಲೀಸ್ ಇಲಾಖೆ ಎಂದಾಕ್ಷಣ ನ್ಯಾಯ ಸಿಗುವುದಿಲ್ಲ ಎಂಬ ಸಾಮಾನ್ಯ ಜನಾಭಿಪ್ರಾಯವನ್ನು ದರ್ಶನಾತಿಥ್ಯ ಇನ್ನಷ್ಟು ಗಟ್ಟಿಗೊಳಿಸಿದೆ. ಅದಕ್ಕಿಂತಲೂ ಹೆಚ್ಚಾಗಿ, ಕಾಂಗ್ರೆಸ್ ಸರ್ಕಾರ ರಚನೆಯಾಗಿ, ಡಾ. ಜಿ. ಪರಮೇಶ್ವರ್ ಗೃಹ ಸಚಿವರಾದಾಗಿನಿಂದ, ಅವರೊಬ್ಬ ಅಸಮರ್ಥ ಗೃಹ ಸಚಿವ ಎಂದು ಬಿಂಬಿಸಲಾಗಿತ್ತು. ಇಂದು ಜೈಲು ಸಿಬ್ಬಂದಿಯಿಂದಾದ ಅವಘಡ ಅದನ್ನು ಸಮರ್ಥಿಸಿ ಮಾತನಾಡುವವರಿಗೆ ಸುವರ್ಣ ಅವಕಾಶ ಕಲ್ಪಿಸಿಕೊಟ್ಟಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕನಸು ಕಂಡಿದ್ದ ಸರ್ವರಿಗೂ ಸಮಾನ ನ್ಯಾಯ ಎಂಬ ಪರಿಕಲ್ಪನೆ, ನಟ ದರ್ಶನ್ ವಿಚಾರದಲ್ಲಿ ಉಲ್ಟಾ ಹೊಡೆದಿದೆ.
ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮತ್ತು ದಕ್ಷತೆಯನ್ನು ತಂದು ಜನಸ್ನೇಹಿಯನ್ನಾಗಿಸಬೇಕಿರುವುದು ಕೇವಲ ಜನರ ದೃಷ್ಟಿಯಿಂದ ಮಾತ್ರವಲ್ಲ; ಅಂಬೇಡ್ಕರ್ ಅವರ ಅಮೂಲ್ಯ ಸಂವಿಧಾನವನ್ನು ಸಂರಕ್ಷಿಸುವ ಸಲುವಾಗಿಯೂ ಸಹ ಅತ್ಯಗತ್ಯವಾಗಿದೆ. ಅದನ್ನು ಗೃಹ ಸಚಿವರು ಮತ್ತು ಸರ್ಕಾರ ಮಾಡಬೇಕಿದೆ.
