ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಟಾಫ್ ನರ್ಸ್ ಶಶಿಕಾಂತ್ ಬೆನ್ನೂರ ಅವರ ಆತ್ಮಹತ್ಯೆಗೆ ಕಾರಣರಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ವಿಜಯಪುರ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.
ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ ಮಾತನಾಡಿ, “ಶಶಿಕಾಂತ್ ಬೆನ್ನೂರ ಎಂಬುವವರು ತಾಳಿಕೋಟೆ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ, ʼನನ್ನ ಸಾವಿಗೆ ಆಸ್ಪತ್ರೆ ಅಧಿಕಾರಿ, ಸಿಬ್ಬಂದಿಗಳೇ ಕಾರಣʼವೆಂದು ಡೆತ್ ನೋಟ್ ಬರೆದು ತಮ್ಮ ವಾಟ್ಸಪ್ ಸ್ಟೇಟಸ್ ಹಾಕಿದ್ದಾರೆ. ಬಳಿಕ ಕೆಲವು ಆಪ್ತರಿಗೆ ಕರೆಮಾಡಿ, ʼಜಾತಿನಿಂದನೆ, ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆʼ ಎಂದು ಹೇಳಿದ್ದು, ಕೂಡಲೇ ಸಾವಿಗೆ ಶರಣಾಗಿದ್ದಾರೆ” ಎಂದರು.
“ಶೋಷಿತ ಸಮಾಜದ ಜನರು ತಲತಲಾಂತರದಿಂದ ಶೋಷಣೆಗೆ ಒಳಗಾಗಿರುವುದು ಈ ದೇಶದ ಇತಿಹಾಸವಾಗಿದೆ. ಪ್ರತಿಕ್ಷಣ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಜಾತೀಯತೆಗಳು ನಡೆಯುತ್ತಲೇ ಇರುತ್ತವೆ. ಪ್ರಜಾಪ್ರಭುತ್ವದ ಕಾಲಘಟ್ಟದಲ್ಲಿದ್ದರೂ ಕೂಡಾ ಜಾತೀಯತೆ, ಅಸ್ಪೃಶ್ಯತೆ ಕಿತ್ತು ಹಾಕಲು ಯಾವುದೇ ಸರ್ಕಾರಕ್ಕೂ ಸಾಧ್ಯವಾಗಿಲ್ಲ. ಇಂತಹ ದೌರ್ಜನ್ಯಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ಸರ್ಕಾರ ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ. ಇದು ಈ ದೇಶದ ದುರ್ದೈವ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಪ್ರಸ್ತುತ ದಿನದಲ್ಲಿ ಗೌರವಯುತ ಸ್ಥಾನದಲ್ಲಿರುವ ದಲಿತ ನೌಕರ ಶಶಿಕಾಂತ್ ಬೆನ್ನೂರ ಅವರೊಬ್ಬರದೇ ಸಾವಲ್ಲ. ಜಾತೀಯತೆಯನ್ನು ಅನುಭವಿಸುತ್ತಿರುವ ಪ್ರತಿಯೊಬ್ಬರೂ ಪ್ರತಿದಿನ ಸಾವಿನ ಜತೆಗೆ ಹೋರಾಟ ನಡೆಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಸರ್ಕಾರಿ ನೌಕರರನ್ನೂ ಬದುಕಲು ಬಿಡದ ಈ ಸಮಾಜಕ್ಕೆ ಧಿಕ್ಕಾರವಿರಲಿ. ದಲಿತರ ಮತಗಳನ್ನು ತೆಗೆದುಕೊಳ್ಳುವ ರಾಜಕಾರಣಿಗಳು ನೌಕರನ ಸಾವಿನ ಬಗ್ಗೆ ಮಾತನಾಡುತ್ತಿಲ್ಲ. ಸಾವಿಗೆ ಕಾರಣರಾದವರ ಮೇಲೆ ಈವರೆಗೆ ಕಾನೂನು ಕ್ರಮವಾಗಿಲ್ಲ. ಜಿಲ್ಲಾಡಳಿತ ಏನು ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾಮಗಾರಿ ಅರ್ಧಕ್ಕೆ ನಿಂತು ಪಾಳುಬಿದ್ದ ಕಟ್ಟಡದಂತಾದ ಮೌಲಾನ ಆಝಾದ್ ಶಾಲೆ: ಗಮನಿಸುವರೇ ಸಚಿವ ಜಮೀರ್?
“ಸ್ಟಾಪ್ ನರ್ಸ್ ದಲಿತ ನೌಕರನ ಸಾವಿಗೆ ಕಾರಣರಾದವರ ವಿರುದ್ಧ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳದಿದ್ದಲ್ಲಿ ವಿಜಯಪುರ ಬಂದ್ ಮಾಡುವ ಮೂಲಕ ಹೋರಾಟ ಹಮ್ಮಿಕೊಳ್ಳುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಂಡಿತ್ ಯಾಕಾಗೋಡ, ಸಂದೇಶ್ ಕುಮುಟಗಿ, ಮೊಹಮ್ಮದ ಯಾಸಿನ್, ಯುವರಾಜ್ ಓಲೇಕಾರ ಸೇರಿದಂತೆ ಇತರರು ಇದ್ದರು.