ಅತಿಯಾದ ಕುಡಿತದಿಂದ ಅನಾರೋಗ್ಯವುಂಟಾದ ಕಾರಣ ತಮಿಳು ನಟ ಬಿಜಿಲಿ ರಮೇಶ್ ಇಂದು ನಿಧನರಾಗಿದ್ದಾರೆ.
ಕುಡಿತದ ಕಾರಣದಿಂದ ಕಳೆದ ಕೆಲವು ದಿನಗಳಿಂದ ಲಿವರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ 46 ವರ್ಷದ ರಮೇಶ್ ಇಂದು ಬೆಳಗ್ಗೆ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ.
ತಮಿಳು ಚಿತ್ರರಂಗದಲ್ಲಿ ರಮೇಶ್ ಚಿತ್ರರಂಗಕ್ಕೆ ಕಾಲಿಡುವ ಮುನ್ನ ಯೂಟ್ಯೂಬ್‌ನಲ್ಲಿ ಪ್ರ್ಯಾಂಕ್ ವಿಡಿಯೋಗಳನ್ನು ಮಾಡಿ ಜನಪ್ರಿಯರಾಗಿದ್ದರು. ಆ ಬಳಿಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ 2018 ರಲ್ಲಿ ನಯನತಾರಾ ಅಭಿನಯಿಸಿದ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ‘ಕೊಲಮಾವು ಕೊಕಿಲ’ ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಹಲವು ಸಿನಿಮಾಗಳಲ್ಲಿ ಅವಕಾಶಗಳು ದೊರೆತವು.
ʼನಟ್ಪೆತುನೈʼ, ʼಆದೈʼ, ʼಪೊನ್ಮಗಲ್ ವಂದಾಲ್ʼ, ʼಕೋಮಾಲಿʼ ಯಂತಹ ಸಿನಿಮಾದಲ್ಲಿನ ಅವರ ಹಾಸ್ಯ ಪಾತ್ರದ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾನವ ಘನತೆಗಾಗಿ ಹೋರಾಟ – ಕನ್ನಡ ತಮಿಳು ಎಂಬ ಗಡಿಗೆರೆಗಳು ಸಲ್ಲದು
ಸ್ಟಾರ್ ನಟ ರಜಿನಿಕಾಂತ್ ಅವರ ದೊಡ್ಡ ಅಭಿಮಾನಿಯಾಗಿದ್ದ ಅವರು ಒಂದು ಸಲವಾದರೂ ಅವರೊಂದಿಗೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು.
ಬಣ್ಣದ ಲೋಕದಲ್ಲಿ ಮಿಂಚಿದ್ದ ರಮೇಶ್ ನಿಜ ಜೀವನದಲ್ಲಿ ಕುಡಿತದ ಚಟಕ್ಕೆ ಅಂಟುಕೊಂಡಿದ್ದರು. ಇದರಿಂದ ಅವರ ಆರೋಗ್ಯ ಹದಗೆಡಲು ಪ್ರಾರಂಭವಾಗಿತ್ತು. ಮದ್ಯಪಾನದಿಂದ ಆರೋಗ್ಯ ಹಾಳಾದ ಕಾರಣ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅತಿಯಾದ ಕುಡಿತದಿಂದಾಗಿ ಅವರ ಲಿವರ್‌ಗೆ ಹಾನಿಯಾಗಿತ್ತು.
ಅನೇಕರು ಅವರ ಆರ್ಥಿಕ ಸಂಕಷ್ಟಕ್ಕೆ ಮಿಡಿದು ಧನಸಹಾಯವನ್ನು ಮಾಡಿದ್ದರು. ನಟನ ನಿಧನಕ್ಕೆ ಚಿತ್ರರಂಗದ ಆಪ್ತರು ಹಾಗೂ ಗಣ್ಯರು ಕಂಬನಿ ಮಿಡಿದಿದ್ದಾರೆ. ಚೆನ್ನೈನ ಎಂಜಿಆರ್ ನಗರದಲ್ಲಿರುವ ರುದ್ರಭೂಮಿಯಲ್ಲಿ ಸಂಜೆ 5 ಗಂಟೆಗೆ ಅವರ ಅಂತಿಮ ಸಂಸ್ಕಾರ ನಡೆಯಲಿದೆ.
