ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಸಹಾಯಕರು ಅಕ್ಕಿ, ಹಾಲಿನ ಪುಡಿ ಹಾಗೂ ತರಕಾರಿಗಳನ್ನು ಕದ್ದು ಒಯ್ಯುತ್ತಿರುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದರು. ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಕುರಿತು, ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ರಮೇಶ್ ಹಂಗನಕಟ್ಟಿ ಹಾಗೂ ಗ್ರಾಮಸ್ಥರು ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವ್ಯವಹಾರದ ಕುರಿತು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಮಕ್ಕಳಿಗೆ ಕೊಡುವಂತಹ ಆಹಾರವನ್ನು ಕದ್ದು ಮನೆಗೆ ಒಯ್ಯುವ ಸ್ಥಳೀಯ ಅಡುಗೆ ಸಹಾಯಕರನ್ನು ಅಮಾನತು ಮಾಡಬೇಕು. ಈ ಕೃತ್ಯದಲ್ಲಿ ಶಿಕ್ಷಕ-ಶಿಕ್ಷಕಿಯರು ಕೂಡ ಭಾಗಿಯಾಗಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಶಿವಮೊಗ್ಗ | ಚಾಲನೆಯ ವೇಳೆ ಮೊಬೈಲ್ ಬಳಸಿದ ಖಾಸಗಿ ಬಸ್ ಚಾಲಕ: ಬಿತ್ತು ಐದು ಸಾವಿರ ದಂಡ!
ಅಡುಗೆ ಸಹಾಯಕಿಯರನ್ನು ಕರ್ತವ್ಯದಿಂದ ಅಮಾನತುಗೊಳಿಸಿ, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಶಿರಹಟ್ಟಿಗೆ ಬಂದು ಶಿಕ್ಷಣ ಇಲಾಖೆಯ ಕಚೇರಿಯ ಎದುರು ಧರಣಿ ಮಾಡುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ಮುಖಂಡರು, ಸೂರಣಗಿ ಗ್ರಾಮಸ್ಥರು ಉಪಸ್ಥಿತರಿದ್ದರು.
