ಸ್ವಾತಂತ್ರ್ಯ ಅಂದರೆ ಕೇವಲ ಬ್ರಿಟಿಷರಿಂದ ಪಡೆದುಕೊಂಡಿದ್ದಲ್ಲ. ನಮ್ಮ ಅಭಿವ್ಯಕ್ತಿಗೆ ಪೂರಕವಾದ ವಾತಾವರಣ ನಿರ್ಮಿಸುವುದೇ ನಿಜವಾದ ಸ್ವಾತಂತ್ರ್ಯ. ಅಂತಹ ಸ್ವಾತಂತ್ರ್ಯವನ್ನು ಕಟ್ಟಿಕೊಡುವಂತಹ ರಂಗಭೂಮಿ ನಿರ್ಮಾಣವಾಗಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ ವಿ ನಾಗರಾಜಮೂರ್ತಿ ಹೇಳಿದರು.
ಧಾರವಾಡ ನಗರದ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಶಾಂತಕವಿಗಳ ಟ್ರಸ್ಟ್ ಸಹಯೋಗದಲ್ಲಿ ಮೂರುದಿನಗಳ ನಾಟಕೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ರಂಗಭೂಮಿಗೆ ಪ್ರಪ್ರಥಮ ನಾಟಕ ಕೊಟ್ಟಂತಹ ಸಕ್ಕರಿ ಬಾಳಾಚಾರ್ಯ ಹೆಸರಿನಲ್ಲಿಯೇ ನಮ್ಮ ಮೊದಲ ನಾಟಕೋತ್ಸವವನ್ನು ಆಯೋಜಿಸಿರುವುದಕ್ಕೆ ನನಗೆ ಅತ್ಯಂತ ಸಂತೋಷವಾಗುತ್ತಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ ವಿ ನಾಗರಾಜಮೂರ್ತಿ ಹೇಳಿದರು.
“ನಾಟಕ ಪ್ರದರ್ಶನ ಮಾಡಲು ಇವತ್ತಿಗೂ ನಮಗೆ ಮರಾಠಿ ನಾಟಕಗಳ ಹಾವಳಿ ಇಲ್ಲ. ಆದರೂ ಬೇರೆ ಬೇರೆ ರೀತಿಯ ಅನೇಕ ತೊಂದರೆಗಳಿವೆ. ಕನ್ನಡ ರಂಗಭೂಮಿಯನ್ನು ಕಟ್ಟುವಂತಹ ಕೆಲಸವನ್ನು, ಕನ್ನಡಿಗನ ಮನಸ್ಸು ಕಟ್ಟುವಂತಹ, ಕನ್ನಡ ಚಳವಳಿ ಕಟ್ಟುವಂತಹ ಚಳವಳಿಯ ಮೊಟ್ಟಮೊದಲ ಕವಿ ಅಂದರೆ ಅದು ಸಕ್ಕರಿ ಬಾಳಚಾರ್ಯ. ಅವರು ವೃತ್ತಿ ರಂಗಭೂಮಿಯನ್ನು ಉದ್ಧಾರ ಮಾಡಬೇಕೆಂದುಕೊಂಡಿದ್ದರು. ಕರ್ನಾಟಕ ಮತ್ತು ಭಾರತೀಯ ರಂಗಭೂಮಿಯ ಇತಿಹಾಸವನ್ನು ದಾಖಲಿಸುವಂತಹ ಯಾರೇ ಆದರೂ ಕೂಡ ಈ ಶಾಂತಕವಿಯ ಇತಿಹಾಸ ಬಿಟ್ಟು ದಾಖಲೆ ಮಾಡಲು ಸಾಧ್ಯವೇ ಇಲ್ಲ. ಸಕ್ಕರಿ ಬಾಳಚಾರ್ಯ ಅಂತಹ ಮಹಾನ್ ನಾಟಕಕಾರ” ಎಂದು ಅಭಿಪ್ರಾಯಪಟ್ಟರು.
“ಇಂದು ಮರಾಠಿ, ಬಂಗಾಳಿ ರಂಗಭೂಮಿಗಳಾಗಿಲಿ ಅದೆಲ್ಲವನ್ನೂ ಮೀರಿ ಕನ್ನಡ ರಂಗಭೂಮಿ ಮತ್ತು ಕೇರಳದ ರಂಗಭೂಮಿಯಿದೆ ಅಂದರೆ ಅದಕ್ಕೆ ಮೂಲ ಕಾರಣ ನಮ್ಮ ವೃತ್ತಿ ರಂಗಭೂಮಿಯನ್ನು ಕಟ್ಟಿದಂತಹ ಪುಣ್ಯಾತ್ಮರು. ಅವರು ಹಾಕಿಕೊಟ್ಟಂತಹ ಭದ್ರಬುನಾದಿಯ ಮೇಲೆ ಇವತ್ತು ನಮ್ಮ ಹವ್ಯಾಸಿ ರಂಗಭೂಮಿಯಾಗಿರಲಿ, ಜಾನಪದ ರಂಗಭೂಮಿಯಾಗಿರಲಿ ಮತ್ತು ಮಕ್ಕಳ ರಂಗಭೂಮಿಯಾಗಿರಲಿ ಕ್ರಿಯಾಶೀಲವಾಗಿ ಬೆಳೆಯುವುದಕ್ಕೆ ಸಾಧ್ಯವಾಗಿದೆ” ಎಂದು ಸ್ಮರಿಸಿದರು.
“ಇವತ್ತು ನಮ್ಮಲ್ಲಿ ಬಹಳ ಮುಖ್ಯವಾಗಿ ಪ್ರಸಿದ್ಧ ನಾಟಕಕಾರ ಡಿ ಎಸ್ ಚೌಗಲೆ ಇದಾರೆ, ಅವರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ, ಈಗಿನ ನಾಟಕಗಳಲ್ಲಿ ಬಹಳ ಕೊರತೆ ಇದೆ. ನಮ್ಮಲ್ಲಿ ರೂಪಾಂತರಗಳಂತಹವೇ ಜಾಸ್ತಿಯಾಗುತ್ತಿವೆಯೇ ಹೊರತು ನಿಜವಾದ ಸ್ವತಂತ್ರ ನಾಟಕಗಳ ಸಂಖ್ಯೆ ಬಹಳ ಕಡಿಮೆಯಾಗುತ್ತಿವೆ. ಹಾಗಾಗಿ ಮತ್ತೆಮತ್ತೆ ಪ್ರಯತ್ನ ಮಾಡಿ ನಮ್ಮ ನಾಟಕಕಾರರನ್ನು ಬಳಸಿಕೊಳ್ಳಬೇಕಿದೆ. ಮಹಾಭಾರತ, ರಾಮಾಯಣವೇ ಆಗಬೇಕಂತೇನಿಲ್ಲ. ನಮ್ಮಲ್ಲಿ ಹಲವಾರು ವಿಷಯಗಳಿವೆ” ಎಂದು ಸಲಹೆ ನೀಡಿದರು.
“ನಿತ್ಯವೂ ಟಿವಿಗಳಲ್ಲಿ, ಇವತ್ತಿನ ರಾಜಕಾರಣವನ್ನು ನೋಡುತ್ತಿದ್ದರೆ ರಾಮಾಯಣ-ಮಹಾಭಾರತಕ್ಕಿಂತ ದೊಡ್ಡ ದೊಡ್ಡ ಕತೆಗಳು, ವಿಚಾರಗಳು, ವಿಷಯಗಳು ನಮ್ಮ ಮುಂದೆ ಬರುತ್ತವೆ. ದಿನನಿತ್ಯ ಅತ್ಯಾಚಾರಗಳಾಗುತ್ತಿವೆ. ದಿನನಿತ್ಯ ಭ್ರಷ್ಟಾಚಾರವಾಗುತ್ತಿದೆ. ಒಬ್ಬ ರಾಜಕಾರಣಿ ಸುಳ್ಳು ಹೇಳುತ್ತಿದ್ದರೆ, ಅವನನ್ನು ಮೀರಿಸಿ ಕೆಲವು ರಾಜಕಾರಣಿ ಸುಳ್ಳು ಹೇಳುತ್ತಿದ್ದಾರೆ. ಇಂತಹ ಒಳ್ಳೆಯ ನಾಟಕದ ವಸ್ತುಗಳಿವೆ. ನಮ್ಮ ಚೌಗಲೆಯವರು ಪ್ರಯತ್ನಪಟ್ಟು ಈ ದರಿದ್ರ ಭ್ರಷ್ಟ ರಾಜಕಾರಣವನ್ನು ಹತ್ತಿಕ್ಕುವಂತಹ ಒಳ್ಳೊಳ್ಳೆಯ ನಾಟಕಗಳನ್ನು ಬರೆದರೆ ಬಹುಶಃ ಜನಗಳಿಗೆ ಅರ್ಥವಾಗಬಹುದು. ಯಾಕೆಂದರೆ ಇವತ್ತು ಜನರ ಮನಸ್ಸನ್ನು ಕದಡುವಂತಹ, ಮನುಷ್ಯನ ಮನಸ್ಸಿನ ನಡುವೆ ಬೆಂಕಿ ಹಚ್ಚುವಂತಹ ಕೋಮುವಾದವಿದೆ. ಒಂದುವೇಳೆ ನಾವು ಆರ್ಥಿಕ ಭ್ರಷ್ಟಾಚಾರವನ್ನು ಸರ್ಕಾರದ ಮಟ್ಟದಲ್ಲಿ ಲೋಕಾಯುಕ್ತ, ಸಿಬಿಐ, ಇಡಿಗಳ ಮೂಲಕ ತಡೆಗಟ್ಟಬಹುದು. ಆದರೆ ಈ ಮಾನಸಿಕ ಭ್ರಷ್ಟಾಚಾರ, ನೈತಿಕ ಭ್ರಷ್ಟಾಚಾರಗಳನ್ನು ತಡೆಗಟ್ಟಲು ನಮ್ಮ ಸಾಂಸ್ಕೃತಿಕ ಮಾಧ್ಯಮವೇ ಅತ್ಯಂತ ಮುಖ್ಯವಾಗುತ್ತದೆ” ಎಂದರು.
“ಒಬ್ಬ ಎಂಪಿಯಾದವನು ಹಾಸನದಲ್ಲಿ ಮಾಡಿರುವಂತಹ ದರಿದ್ರ ಕೆಲಸವನ್ನೇ ನೋಡಿ. ಅದರಿಂದಾಗಿ ನೂರಾರು ಜನ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆಂದರೆ ಇದಕ್ಕಿಂತ ನಾಚಿಕೆಗೇಡಿನ ವಿಚಾರ ಇದೆಯಾ? ನಾವೆಲ್ಲ ಯೋಚನೆ ಮಾಡಬೇಕಾಗಿದೆ. ಮಣಿಪುರದಲ್ಲಿ ಒಬ್ಬ ಹೆಣ್ಣುಮಗಳನ್ನು ಬೆತ್ತಲೆ ಮಾಡಿ ಓಡಿಸಿಕೊಂಡು ಸಾವಿರಾರು ಜನ ಹೋಗುತ್ತಾರೆ ಅಂದರೆ ಕರ್ನಾಟಕದಲ್ಲಿ ಒಬ್ಬ ದೊಡ್ಡ ಸಿನಿಮಾ ನಟ, ಸಾಮಾನ್ಯ ವ್ಯಕ್ತಿಯನ್ನು ಧಾರುಣವಾಗಿ ಕೊಲೆ ಮಾಡಿ ಸಾಯಿಸುತ್ತಾನಂದರೆ ನಾವು ಇಂತಹ ವಿಷಯಗಳ ಕುರಿತು ಯೋಚನೆ ಮಾಡಬೇಕು. ಜನರನ್ನು ಎಚ್ಚರಿಸುವಂತಹ ಕಾರ್ಯಕ್ಕೆ ಮುಂದಾಗಬೇಕು. ನಾಟಕಕಾರರು ಸಿದ್ಧರಾಗಬೇಕು ಎನ್ನುತ್ತಾ, ಪ್ರೇಕ್ಷಕರ ಒತ್ತಾಯದ ಮೇರೆಗೆ ʼಶಾಂತಕವಿಗಳ ಜನ್ಮದಿನವನ್ನು ಕರ್ನಾಟಕ ರಂಗಭೂಮಿ ದಿನʼವೆಂದು ಘೋಷಿಸಲು ಸಕಾರಾತ್ಮಕವಾಗಿ ಪ್ರಯತ್ನಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ʼಈದಿನʼ ಫಲಶೃತಿ : ವರದಿಯಾದ ಗಂಟೆಯಲ್ಲೇ ವೃದ್ಧೆ ಮನೆಗೆ ಧಾವಿಸಿದ ಅಧಿಕಾರಿ
ವೇದಿಕೆಯಲ್ಲಿ ರಂಗಾಯಣ ನಿರ್ದೇಶಕರು ರಾಜು ತಾಳಿಕೋಟೆ, ಬೆಳಗಾವಿ ಖ್ಯಾತ ನಾಟಕಕಾರ ಡಾ. ಡಿ ಎಸ್ ಚೌಗಲೆ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಗಾಯತ್ರಿ ಹೆಗ್ಗೋಡು, ದಾವಣಗೆರೆ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ನಾಟಕ ನಿರ್ದೇಶಕ ಪ್ರಕಾಶ ಗರುಡ ಹಾಗೂ ಧಾರವಾಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಇದ್ದರು.
ವರದಿ : ಶಿವರಾಜ್ ಮೋತಿ