ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿಪೇಠ ಗ್ರಾಮದಲ್ಲಿರುವ ಬಿಸಿಎಂ ಹಾಸ್ಟೆಲ್ ವಾರ್ಡನ್ ಸರಿಯಾಗಿ ಕಚೇರಿಗೆ ಹಾಜರಾಗದೆ ಕರ್ತವ್ಯಲೋಪ ಎಸಗುತ್ತಿದ್ದಾರೆ. ಇತರೆ ಸಿಬ್ಬಂದಿಗಳು ಶುಚಿ, ರುಚಿಯಾದ ಅಡುಗೆ ಮಾಡದಿರುವುದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.
ಗೋಗಿಪೇಠ ವಸತಿ ನಿಲಯದಲ್ಲಿ ಸುಮಾರು ಐವತ್ತು ವಿದ್ಯಾರ್ಥಿಗಳಿದ್ದು, ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಕೊಳೆತ ತರಕಾರಿಗಳಿಂದ ಅಡುಗೆ ಮಾಡಿ ಮಕ್ಕಳಿಗೆ ಉಣಬಡಿಸುತ್ತಿದ್ದಾರೆ. ಮಕ್ಕಳಿಗೆ ಆರೋಗ್ಯದ ಸಮಸ್ಯೆಯಾದರೆ ಹೊಣೆ ಯಾರು?
ವಿದ್ಯಾರ್ಥಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಾರ್ಡನ್ ಪ್ರತಿದಿನ ವಸತಿ ನಿಲಯಕ್ಕೆ ಸರಿಯಾಗಿ ಬರುವುದಿಲ್ಲ. ಮುಖ್ಯ ಅಡುಗೆ ಸಿಬ್ಬಂದಿಯಾದ ಜಗದೀಶ್ ವಾರಕ್ಕೊಮ್ಮೆ ಬರುತ್ತಾರೆ. ಆದರೂ ವಿದ್ಯಾರ್ಥಿಗಳ ಮೇಲೆಯೇ ಜೊರು ಮಾಡುತ್ತಾರೆ. ನಾವು ಹಾಕಿದನ್ನೇ ತಿನ್ನಬೇಕು, ಯಾರೂ ಎದುರುತ್ತರ ಕೊಡುವಂತಿಲ್ಲವೆಂದು ದಬ್ಬಾಳಿಕೆ ಮಾಡುತ್ತಾರೆ” ಎಂದು ಆರೋಪಿಸಿದರು.
“ಅಡುಗೆಗೆ ಕೊಳೆತಿರುವ ಸೊಪ್ಪು ತರಕಾರಿಗಳನ್ನು ಹಾಕುತ್ತಾರೆ. ಊಟ ಸರಿಯಾಗಿ ಕೊಡುವುದಿಲ್ಲವೆಂದು ಸಮಸ್ಯೆ ತಿಳಿಸಿದರೆ, ಅಡುಗೆ ಸಿಬ್ಬಂದಿ ನಮ್ಮ ಪಾಲಕರಿಗೆ ಫೋನ್ ಮಾಡಿ ನಿಮ್ಮ ಮಗ ಸರಿಯಾಗಿಲ್ಲ ಓದಿಕೊಳ್ಳುತ್ತಿಲ್ಲ. ಹಾಸ್ಟೆಲ್‌ನಲ್ಲಿ ಜಗಳ ಮಾಡುತ್ತಾನೆಂದು ನಮ್ಮ ವಿರುದ್ದ ಇಲ್ಲಸಲ್ಲದ ದೂರು ಹೇಳುತ್ತಾರೆ” ಎಂದರು.
“ವಾರ್ಡನ್ ಪಾರ್ವತಿ ಮೇಡಂ ವಾರಗಟ್ಟಲೆ ಹಾಸ್ಟೆಲ್‌ಗೆ ಬರುವುದಿಲ್ಲ. ಅವರಿಗೆ ಇಲ್ಲಿಯ ಸಮಸ್ಯೆಗಳನ್ನು ಹೇಳಿಕೊಂಡರೆ ಅವರೂ ಕೂಡ ನಮ್ಮ ಮೇಲೆ ಕೂಗಾಡುತ್ತಾರೆ. ಜಾಸ್ತಿ ಮಾತನಾಡಿದರೆ ಹಾಸ್ಟೆಲ್‌ನಿಂದ ಆಚೆ ಹಾಕ್ತೀನಿ, ಊಟ ಕೊಡುವುದಿಲ್ಲವೆಂದು ಬೆದರಿಕೆ ಒಡ್ಡುತ್ತಾರೆ. ನಮಗೆ ಇಲ್ಲಿದ್ದುಕೊಂಡು ವ್ಯಾಸಂಗ ಮಾಡಲು ತುಂಬಾ ತೊಂದರೆಯಾಗುತ್ತಿದೆ. ನಮ್ಮ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ಅನುಕೂಲವಾಗುತ್ತಿಲ್ಲ. ದಯವಿಟ್ಟು ನಮ್ಮ ಸಮಸ್ಯೆ ಬಗೆಹರಿಸಿಕೊಡಿ” ಎಂದು ಕಣ್ಣೀರಿಟ್ಟಿದ್ದಾರೆ.
“ನಾವು ಬಡವರ ಮಕ್ಕಳು, ಮನೆಯಲ್ಲಿದ್ದುಕೊಂಡು ಓದಲು ಸರಿಯಾದ ಅನುಕೂಲವಿಲ್ಲವೆಂದು ವಸತಿನಿಲಯಕ್ಕೆ ಸೇರಿಕೊಂಡರೆ, ಇಲ್ಲಿ ನಮ್ಮನ್ನು ಅಪರಾಧಿಗಳಂತೆ ನೋಡುತ್ತಿದ್ದಾರೆ. ನಮ್ಮ ಓದಿಗೆ ಯಾವುದೇ ರೀತಿಯ ಅನುಕೂಲ ಮಾಡಿಕೊಡುತ್ತಿಲ್ಲ. ಸರಿಯಾದ ಊಟವನ್ನೂ ನೀಡುವುದಿಲ್ಲ” ಎಂದು ಅವಲತ್ತುಕೊಂಡಿದ್ದಾರೆ.
ಈ ಕುರಿತು ಈ ದಿನ.ಕಾಮ್ ವಾರ್ಡನ್ ಪಾರ್ವತಿಯವರನ್ನು ಸಂರ್ಪಕಿಸಿದ್ದಾಗ, “ನಾನು ತಾಲೂಕು ಅಧಿಕಾರಿಯವರ ಅನುಮತಿಯ ಮೇರೆಗೆ ರಜೆ ತೆಗೆದುಕೊಂಡು ಮದುವೆಗೆ ಹೋಗಿದ್ದೆ. ಇನ್ನೊಂದು ದಿನ ನನಗೆ ಆರೋಗ್ಯದ ಸಮಸ್ಯೆಯಿಂದಾಗಿ ಹಾಸ್ಷೆಲ್‌ಗೆ ಹೋಗಲು ಸಾಧ್ಯವಾಗಿಲ್ಲ. ಹಾಸ್ಟೆಲ್ ವಿಷಯ ಹೇಳುವುದಾದರೆ ಸ್ವಂತ ಕಟ್ಟಡವಿಲ್ಲ. ಇದೊಂದು ಕೊರತೆಯನ್ನು ಬಿಟ್ಟರೆ ಹಾಸ್ಟೆಲ್‌ನಲ್ಲಿ ಯಾವುದೇ ಕೊರತೆ ಇಲ್ಲ” ಎಂದು ಪ್ರತಿಕ್ರಿಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯದಲ್ಲಿ ಮೂಲಸೌಕರ್ಯಗಳ ಮರೀಚಿಕೆ: ಶಿವಕುಮಾರ ಗೋಲಾ
ತಾಲೂಕು ಅಧಿಕಾರಿ ಚೌದ್ರಿಯವರು ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ್ದು, “ಸಮಸ್ಯೆ ತಿಳಿದ ಬಳಿಕ ನಾನು ವಸತಿ ನಿಯಕ್ಕೆ ಭೇಟಿ ಮಾಡಿದ್ದೇನೆ. ವಾರ್ಡನ್ ಪ್ರತಿದಿನ ಹಾಸ್ಷೆಲ್‌ಗೆ ಹೊಗುತ್ತಾರೆ. ಎರಡ್ಮೂರು ದಿನಗಳ ಹಿಂದೆ ಅವರು ನನಗೆ ತಿಳಿಸಿಯೇ ರಜೆ ತೆಗೆದುಕೊಂಡಿದ್ದಾರೆ” ಎಂದರು.
“ಸ್ವಂತ ಕಟ್ಟಡದ ಕೊರತೆ ಬಿಟ್ಟರೆ ಹಾಸ್ಟೆಲ್‌ನಲ್ಲಿ ಯಾವ ಸಮಸ್ಯೆಯೂ ಇಲ್ಲ. ಸ್ವಂತ ಕಟ್ಟಡ ಬೇಕೆಂದು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಇನ್ನು ಈ ವಿಚಾರದ ಕುರಿತು ಪ್ರತಿಕ್ರಿಯೆ ಬಂದಿಲ್ಲ” ಎಂದು ತಿಳಿಸಿದರು.
ವರದಿ : ಈ ದಿನ.ಕಾಮ್ ಸಿಟಿಜನ್ ಜರ್ನಲಿಸ್ಟ್ : ಸುನೀಲ ಹೊಸಮನಿ