ಕಾನೂನಿನ ಆದೇಶ ಪಾಲಿಸಿಕೊಂಡು ಗೌರಿ ಗಣೇಶ ಹಬ್ಬವನ್ನು ಆಚರಣೆ ಮಾಡಬೇಕು ಎಂದು ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ತಿಳಿಸಿದರು.
ಕೊಡಗು ಜಿಲ್ಲೆಯ ವಿರಾಜಪೇಟೆ ಪುರಸಭೆ ಸಭಾಂಗಣದಲ್ಲಿ ನಡೆದ ಗೌರಿ ಗಣೇಶ ಜನೋತ್ಸವ ಸಮಿತಿಗಳ ಪೂರ್ವಭಾವಿ ಸಭೆಯಲ್ಲಿ ಮತನಾಡಿದರು.
“ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿರುವ ವೀರರಾಜೇಂದ್ರ ಪೇಟೆ ಗೌರಿ ಗಣೇಶ ಉತ್ಸವ ಪ್ರತಿ ವರ್ಷ ನಡೆದುಕೊಂಡು ಬಂದಿದೆ. ಕಾನೂನು ಪಾಲನೆಯಾಗಬೇಕು, ಯಾವುದೇ ಅಹಿತಕರ ಘಟನೆಗಳಿಗೆ ಕಾರಣವಾಗಬಾರದು. ಹಬ್ಬದ ಆಚರಣೆ ಸೂಕ್ತ ರೀತಿಯಲ್ಲಿ ನಡೆಯಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ವಿರಾಜಪೇಟೆ ನಗರದಲ್ಲಿ ಸುಮಾರು 4೦ ವರ್ಷಗಳಿಂದ ವಿವಿಧ ಉತ್ಸವ ಸಮಿತಿಗಳ ಆಶ್ರಯದಲ್ಲಿ ಒಂಬತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಲಾಗುತ್ತಿದೆ. ದೇಶದ ಕಾನೂನು ಎಲ್ಲ ಧರ್ಮಗಳಿಗೂ ಒಂದೆಯಾಗಿದ್ದು, ಉತ್ಸವ ಆಚರಣಾ ವೇಳೆಯಲ್ಲಿ ಇಲಾಖೆಗಳ ಅದೇಶ ಪಾಲಿಸಿ, ಸಾಮರಸ್ಯಕ್ಕೆ ಯಾವುದೇ ಚ್ಯುತಿ ಬಾರದ ಹಾಗೆ ನಡೆದುಕೊಳ್ಳಬೇಕು” ಎಂದು ಸೂಚಿಸಿದರು.
ಜೈನರ ಬೀದಿಯ ಬಸವೇಶ್ವರ ಗೌರಿ ದೇಗುಲದ ಸಮಿತಿ ಸದಸ್ಯ ನರೇಂದ್ರ ಕಾಮತ್ ಮಾತನಾಡಿ, “ನಗರದಲ್ಲಿ ರಾತ್ರಿ 8 ಗಂಟೆಗೆ ಮಹಾಪೂಜೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಕಾರ್ಯಕ್ರಮದ ನಡುವಿನಲ್ಲಿ ಇಲಾಖೆಯ ಆಧಿಕಾರಿಗಳು ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ತಾಕೀತು ಮಾಡುತ್ತಾರೆ. ಹೀಗಾಗದಂತೆ ಸಮಯಾವಕಾಶ ಕಲ್ಪಿಸಬೇಕು” ಎಂದರು.
ಕಾವೇರಿ ಗಣೇಶೋತ್ಸವ ಸಮಿತಿ ನಂಬುಡುಮಾಡ ರಾಜಪ್ಪ ಮಾತನಾಡಿ, “ಸ್ಥಳೀಯ ಶಾಲೆ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸತತವಾಗಿ 30 ವರ್ಷಗಳಿಂದ ರಾತ್ರಿ ವೇಳೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಸರ್ಕಾರಿ ಅದೇಶದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಅಯೋಜನೆ ಮಾಡುವುದು ಕಷ್ಟಾಸಾಧ್ಯವಾಗಿದ್ದು, ಶಾಸಕರು, ಕಲಾವಿದರು ಮತ್ತು ಶಾಲಾ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಅನುವುಮಾಡಿಕೊಡಬೇಕು” ಎಂದು ಕೇಳಿಕೊಂಡರು.
ಪುರಸಭೆಯ ಮುಖ್ಯಾಧಿಕಾರಿ ಚಂದ್ರ ಕುಮಾರ್ ಮಾತನಾಡಿ, “ಜಲ ಮಾಲಿನ್ಯ ಮಂಡಳಿಯ ಆದೇಶದಂತೆ ಪಿಒಪಿ ಮೂರ್ತಿಗಳನ್ನು ನಿಷೇಧ ಮಾಡಲಾಗಿದ್ದು, ʼನೈಜ ಮಣ್ಣಿನಿಂದ ನಿರ್ಮಿಸಲಾದ ಮೂರ್ತಿಗಳನ್ನು ಎಲ್ಲ ಸಮಿತಿಗಳು ಬಳಸಬೇಕು. ವಿಸರ್ಜನೆ ವೇಳೆ ಕೆರೆಯಲ್ಲಿ ಮೂರ್ತಿಯನ್ನು ಬಿಟ್ಟು ಇನ್ನಿತರ ಅಂದರೆ ಹೂವು, ಹಣ್ಣು ಹಾಗೂ ಇತರ ವಸ್ತುಗಳನ್ನು ನದಿ ಹಾಗೂ ಕೆರೆಗಳಲ್ಲಿ ಹಾಕುವಂತಿಲ್ಲʼವೆಂಬ ಆದೇಶವನ್ನು ಪರಿಪಾಲನೆ ಮಾಡಬೇಕು” ಎಂದು ಸೂಚಿಸಿದರು.
“ಉತ್ಸವದ ಅಂಗವಾಗಿ ನಗರದ ಶೃಂಗಾರ ಹಾಗೂ ಸಮಿತಿಗಳಿಗೆ ಆರ್ಜಿ ವಿಲೇವಾರಿಗಾಗಿ ಯಕಗವಾಕ್ಷಿ ಕೇಂದ್ರದ ಮೂಲಕ ಉತ್ಸವಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಸಮಿತಿಗಳು ಅರ್ಜಿ ಸಲ್ಲಿಸಿದ ನಂತರ ಪರೀಶಿಲನೆ ಮಾಡಿ ಅನುಮತಿ ನೀಡಲಾಗುತ್ತದೆ” ಎಂದು ಮಾಹಿತಿ ನೀಡಿದರು.
ವಿರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ಮೋಹನ್ ಕುಮಾರ್ ಮಾತನಾಡಿ, “ಇಲಾಖೆಗೆ ಬಂದ ಮಾಹಿತಿಯನ್ವಯ ವಿರಾಜಪೇಟೆ ಉಪ ವಿಭಾಗದಲ್ಲಿ ನಗರ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ 101 ಸ್ಥಳಗಳಲ್ಲಿ ಸಾರ್ವಜನಿಕ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಉತ್ಸವಕ್ಕೆ ಧ್ವನಿವರ್ದಕ ಅಳವಡಿಕೆಯ ಕುರಿತು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬೆಳಿಗ್ಗೆ 6 ರಿಂದ ರಾತ್ರಿ 10 ರವೆರೆಗೆ ಅವಕಾಶ ಮಾಡಿಕೊಡಲಾಗಿದೆ. ರಾತ್ರಿ 10 ರಿಂದ ಮುಂಜಾನೆ 6ರ ವರೆಗೆ ಯಾವುದೇ ಧ್ವನಿವರ್ಧಕ ಅಳವಡಿಸಲು ಅನುಮತಿ ಇಲ್ಲ. ಧ್ವನಿವರ್ಧಕ ಅಳವಡಿಸಲು ಎರಡು ವಿಧಗಳಿವೆ. ಮೂರ್ತಿ ಪ್ರತಿಷ್ಠಾಪನೆಯ ಸ್ಥಳ ಮತ್ತು ಕಾರ್ಯಕ್ರಮ ವಿಸರ್ಜನೆ ವೇಳೆಗೆ ಪ್ರತ್ಯೇಕ ಅನುಮತಿ ಪಡೆಯುವುದು ಕಡ್ಡಾಯವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯದಲ್ಲಿ ಮೂಲಸೌಕರ್ಯಗಳ ಮರೀಚಿಕೆ: ಶಿವಕುಮಾರ ಗೋಲಾ
ಸಭೆಯಲ್ಲಿ ಗೌರಿ ಗಣೇಶೋತ್ಸವ ಜನೋತ್ಸವ ಸಮಿತಿಯ ಕಾರ್ಯದರ್ಶಿ ಶಬರೀಶ್ ಶೆಟ್ಟಿ, ತಹಶೀಲ್ದಾರ್ ರಾಮಚಂದ್ರ, ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಡಿ ಪಿರಾಜೇಶ್, ಚೆಸ್ಕಾಂ ಅಭಿಯಂತರ ಸುರೇಶ್, ಲೋಕೋಪಯೋಗಿ ಇಲಾಖೆ ಅಭಿಯಂತರ ಲಿಂಗರಾಜ್, ಅಗ್ನಿಶಾಮಕ ಇಲಾಖೆ ಅಧಿಕಾರಿ ಮಂಜೇಗೌಡ, ವಿರಾಜಪೇಟೆ ವೃತ್ತ ನೀರಿಕ್ಷಕ ಶಿವರುದ್ರ, ಕುಟ್ಟ ವೃತ್ತ ನೀರಿಕ್ಷಕ ಮಂಜಪ್ಪ ಸಿ ಎ, ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್, ಗಾಮಾಂತರ ಠಾಣೆ ಪಿಎಸ್ಐ ಮಂಜುನಾಥ್, ಪುರಸಭೆ ಚುನಾಯಿತ ಪ್ರತಿನಿಧಿಗಳು, ಸರ್ಕಾರ ನಾಮ ನಿರ್ದೇಶಿತ ಸದಸ್ಯರು ಇದ್ದರು.