ಲಿಂಗಸುಗೂರು ಕೃಷಿ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಲಿಂಗಸುಗೂರು ತಾಲೂಕಿನಿಂದ ಸಿಂಧನೂರಿಗೆ ಸ್ಥಳಾಂತರಿಸಲು ಹೊರಡಿಸಲಾದ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಎಸ್ಎಫ್ಐ ಮುಖಂಡ ರಮೇಶ್ ವೀರಾಪುರ ಆಗ್ರಹಿಸಿದ್ದಾರೆ.
ಈ ದಿನ.ಕಾಮ್ ಜೊತೆ ಮಾತನಾಡಿದ ಅವರು, ಕೃಷಿ ಇಲಾಖೆಯ ಅಧೀನ ಕಾರ್ಯದರ್ಶಿ ಇಂದ್ರ ಎಂ ರವರು ಸ್ಥಳಾಂತರಿಸಲು ಆದೇಶ ಹೊರಡಿಸಿರುವುದು ದುರಂತ. ಈ ಭಾಗದ ರೈತರಿಗೆ ಅಧಿಕಾರಿಗಳು ಫಸಲು ತಿನ್ನಿಸುವ ಬದಲು ಮಣ್ಣು ಮುಕ್ಕಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
“ಕೃಷಿ ಉಪನಿರ್ದೇಶರ ಕಚೇರಿ ಸ್ಥಳಾಂತರವಾದರೆ ಈ ಭಾಗದ ರೈತರು ಸಮಸ್ಯೆಗಳ ಸುರಿಮಳೆಯನ್ನು ಎದುರಿಸಬೇಕಾಗುತ್ತದೆ. ಲಿಂಗಸುಗೂರು ತಾಲೂಕಿನಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿರುವ ಸಿಂಧನೂರಿಗೆ ರೈತರು ಪ್ರಯಾಣಿಸಬೇಕಾಗುತ್ತದೆ. ಇದಕ್ಕೆ 500 ರೂಪಾಯಿಯಿಂದ 1000 ರೂಪಾಯಿವರಗೆ ಖರ್ಚು ತಗಲುತ್ತದೆ. ಅಲ್ಲದೇ, ಇಡೀ ದಿನ ಇದಕ್ಕೆಂದೇ ಮೀಸಲಿಡಬೇಕಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.
ಈಗಾಗಲೇ ತಾಲೂಕಿನ ಮಂಜೂರಾತಿ ಹಂತದಲ್ಲಿದ್ದ ಪ್ರಾದೇಶಿಕ ಸಾರಿಗೆ ಕಚೇರಿ, ಜಿಲ್ಲಾ ನ್ಯಾಯಾಲಯ ಹಾಗೂ ಕೆಪಿಟಿಸಿಎಲ್ ಕಚೇರಿಗಳು ಸಿಂಧನೂರಿಗೆ ಸ್ಥಳಾಂತರವಾಗಿವೆ. ಒಂದೊಂದಾಗಿ ಕಚೇರಿಯನ್ನು ಸ್ಥಳಾಂತರಕ್ಕೆ ಕೈ ಹಾಕುತ್ತಿರುವುದು ವಿಪರ್ಯಾಸ. ಕೃಷಿ ಇಲಾಖೆ ಕೂಡ ಸ್ಥಳಾಂತರಗೊಳ್ಳುತ್ತಿರುವುದು ತುಂಬಾ ಬೇಸರದ ಸಂಗತಿ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಕೃಷಿ ಇಲಾಖೆ ಉಪ ನಿರ್ದೇಶಕರ ಕಚೇರಿ ಸಿಂಧನೂರಿಗೆ ಸ್ಥಳಾಂತರ: ಕಣ್ಮುಚ್ಚಿ ಕುಳಿತ ಜನಪ್ರತಿನಿಧಿಗಳು!
ಲಿಂಗಸುಗೂರು ಕ್ಷೇತ್ರ ದಿವಾಳಿಯತ್ತ ಸಾಗಿದೆ. ಜನಪ್ರತಿನಿಧಿಗಳು ತಾಲೂಕಿನ ಕಚೇರಿಗಳು ಸ್ಥಳಾಂತರವಾಗುತ್ತಿರುವುದಕ್ಕೂ ತಮಗೂ ಯಾವ ಸಂಬಂಧವಿಲ್ಲದಂತೆ ಬೆಂಗಳೂರು, ದಿಲ್ಲಿ ಸುತ್ತುತ್ತಿದ್ದಾರೆ. ಕಷ್ಟಕ್ಕೆ ಕರಿಬೇಡ, ಊಟಕ್ಕೆ ಮರಿಬೇಡ ಎನ್ನುವಂತೆ ಲಿಂಗಸುಗೂರು ಕ್ಷೇತ್ರದ ಶಾಸಕರು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೃಷಿ ಉಪ ನಿರ್ದೇಶಕರು 2 ಕಚೇರಿ ಸ್ಥಳಾಂತರವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
