’ಅಸ್ಪೃಶ್ಯರು’ ಗುರುತಿಗೆ ತುತ್ತಾದವರು ತಮ್ಮ ಗುರುತನ್ನು ಮರೆಮಾಚಿಕೊಂಡು ಬದುಕಬೇಕಾದ ದಯನೀಯ ಸ್ಥಿತಿ ವರ್ತಮಾನದಲ್ಲೂ ಜೀವಂತವಾಗಿರುವುದನ್ನು ಬಾಬ್ ಮಾರ್ಲಿ ಕಾಣಿಸುತ್ತಾನೆ.
ಭಾರತ ಸಾಮಾಜಿಕ ಸಂರಚನೆ ಅರಿವಿಲ್ಲದವರು ಈ ದೇಶದಲ್ಲಿ ಜಾತಿ ಎಲ್ಲಿದೆ? ಎಂದು ಕೇಳಿ ಮುಂದೋಗಿ ಬಿಡುತ್ತಾರೆ. ಅಷ್ಟೆ ಅಲ್ಲ, ಹೆಜ್ಜೆ ಹೆಜ್ಜೆಗೂ ಜಾತಿವ್ಯವಸ್ಥೆಯ ವಿಷಸರ್ಪಗಳು ಮಿಸುಕಾಡುವುದು ಕಂಡಿದ್ದರೂ ಅದನ್ನು ಪ್ರಜ್ಞಾಪೂರ್ವಕವಾಗಿ ಮರೆಮಾಚಿ ಬ್ರಹ್ಮಜ್ಞಾನವನ್ನು (?) ಬೋಧಿಸುತ್ತಾರೆ. ಇಂತಹವರದ್ದು ನಿರ್ದಯಿ ಮನೋಸ್ಥಿತಿ.
ಈ ದೇಶದಲ್ಲಿ ಜಾತೀಯತೆ ಇರುವುದೇ ಆಗಿರುವಾಗ ಅದರ ಬಗ್ಗೆ ಮಾತಾಡದೆ ಸುಮ್ಮನಿರಲಾದೀತೆ? ಜಾತೀಯತೆಯ ಬಗ್ಗೆ ಯಾರೊಬ್ಬರೂ ಮಾತನಾಡಬಾರದು ಎನ್ನುವುದಾದರೆ ಅಂತಹ ವ್ಯವಸ್ಥೆಯಾದರೂ ಯಾಕೆ ಜೀವಂತವಾಗಿರಬೇಕು? ಜೀವಂತವಾಗಿರುವುದೇ ಆದರೆ ಅದರ ಬಗ್ಗೆ ಮಾತನಾಡುವುದು, ಬರೆಯುವುದು, ನಾಟಕ ಮಾಡುವುದು, ಸಿನಿಮಾ ತೋರಿಸುವುದು ಅಪರಾಧವಾದರೂ ಹೇಗಾದೀತು? ಇಂತಹ ಪ್ರಶ್ನೆಗಳನ್ನು ಈ ಎಲೈಟ್ ಸೊಸೈಟಿಯ ಮುಂದೆ ಎಸೆಯುವ ಕಾಲ ಬಂದಿದೆ. ’ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’ ನಾಟಕ ’ಜಾತಿ ಎಲ್ಲಿದೆ?’ ಎನ್ನುವ ಸುಭಿಕ್ಷ ಸೋಗಲಾಡಿ ಸಮಾಜದ ಮುಖಕ್ಕೆ ಅನೇಕ ಪ್ರಶ್ನೆಗಳನ್ನು ಎಸೆಯುತ್ತಾ ಹೊರಟಿದೆ.
ನಾವು ಆಡುವ ಮಾತು, ಹಾಡುವ ಹಾಡು, ತಿನ್ನುವ ಅನ್ನ, ಬರೆಯುವ ಅಕ್ಷರಗಳು ಜಾತಿಯ ಗುರುತನ್ನು ಕಾಣಿಸುತ್ತದೆ. ಈ ಗುರುತುಗಳೂ ಬಹಿಷ್ಕರಿಸಲ್ಪಟ್ಟ ಗುರುತುಗಳು ಇದನ್ನು ಮರೆಮಾಚಲು ಪ್ರತಿಕ್ಷಣವೂ ಹೆಣಗಾಡಬೇಕಾದ ಜನಸಮುದಾಯವೊಂದಕ್ಕೆ ಸ್ಥೈರ್ಯ ತುಂಬುವಲ್ಲಿ ’ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’ ರಂಗದ ಮೇಲೆ ಸಂವಾದಿಸುತ್ತಾನೆ. ಜುಮೈಕಾದ ಸ್ಲಂವೊಂದರಿಂದ ಬಂದ ಬಾಬ್ ಮಾರ್ಲಿಯನ್ನು ರೂಪಕವಾಗಿಟ್ಟುಕೊಂಡು ಹೆಣೆಯಲ್ಪಟ್ಟ ನಾಟಕ ’ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’.
ಓರ್ವ ಯುವತಿ, ಇಬ್ಬರು ಯುವಕರು ಒಂದುಗೂಡಿ ತಮ್ಮ ಜಾತಿಯನ್ನು ಮರೆಮಾಚಿಕೊಂಡು ಬೆಂಗಳೂರು ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ತಮ್ಮ ಪ್ರತಿಭೆ, ವಿದ್ಯೆಯಿಂದ ಭವಿಷ್ಯವನ್ನು ಕಟ್ಟಿಕೊಳ್ಳಲು ಪರದಾಡುವುದಿದೆಯಲ್ಲಾ ಮತ್ತು ಬಾಡಿಗೆಗೆ ಮನೆಯನ್ನು ನಿರಾಕರಿಸುವಷ್ಟು ಜಾತಿಶ್ರೇಷ್ಠತೆಯ ರಣರೋಗವನ್ನು ಎದುರುಗೊಳ್ಳುವುದಿದೆಯಲ್ಲಾ ಅದೇ ಬಾಬ್ ಮಾರ್ಲಿ ನಾಟಕದ ದ್ರವ್ಯ. ಮನುಷ್ಯ ಮನುಷ್ಯನ ವಿರುದ್ದವೇ ಸೃಷ್ಟಿಸಿದ ’ಅಸ್ಪೃಶ್ಯತೆ’ ಎಂಬ ಅನಿಷ್ಠದ ವಿರುದ್ದ ಈ ಆಧುನಿಕ ಕಾಲಘಟ್ಟದಲ್ಲೂ ಹೋರಾಡಬೇಕಾಗಿ ಬಂದಿರುವುದು ವಿಪರ್ಯಾಸ.
’ಅಸ್ಪೃಶ್ಯರು’ ಗುರುತಿಗೆ ತುತ್ತಾದವರು ತಮ್ಮ ಗುರುತನ್ನು ಮರೆಮಾಚಿಕೊಂಡು ಬದುಕಬೇಕಾದ ದಯನೀಯ ಸ್ಥಿತಿ ವರ್ತಮಾನದಲ್ಲೂ ಜೀವಂತವಾಗಿರುವುದನ್ನು ಬಾಬ್ ಮಾರ್ಲಿ ಕಾಣಿಸುತ್ತಾನೆ. ಎಲ್ಲಿಯವರೆಗೂ ಶ್ರೇಷ್ಠ -ಕನಿಷ್ಠ, ಮೇಲು-ಕೀಳು ಎನ್ನುವುದು ಇರುತ್ತದೆಯೋ ಅಲ್ಲಿಯವರೆಗೂ ಸಂಘರ್ಷ ಇರುತ್ತದೆ ಎನ್ನುವುದನ್ನು ಜಾತಿ ಎಲ್ಲಿದೆ ಎನ್ನುವ ಜಾತಿಗ್ರಸ್ತರು ಅರ್ಥಮಾಡಿಕೊಳ್ಳಬೇಕು.
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಂಡ ಜಂಗಮ ಕಲೆಕ್ಟಿವ್ ಬೆಂಗಳೂರು ಇವರ ಬಾಬ್ ಮಾರ್ಲಿ ನಾಟಕ (ಪ್ರಾಯೋಜಕತೆ: ಅಹರ್ನಿಶಿ ಪ್ರಕಾಶನ, ಮಿಲಿಂದ ಶಿವಮೊಗ್ಗ) ಈ ಸಮಾಜವನ್ನು ದಿಟ್ಟವಾಗಿ ಪ್ರಶ್ನಿಸುವ ಎದೆಗಾರಿಕೆಯನ್ನು ಪ್ರಸ್ತುತಪಡಿಸಿತು. ಎನ್.ಕೆ ಹನುಮಂತಯ್ಯ, ಚಂದ್ರಶೇಖರ್ ಕೆ ಅವರ ಪಠ್ಯ ಆಕರವನ್ನು (ಡ್ರಮ್ ಬರ್ಗ್: ವಿ.ಎಲ್ ನರಸಿಂಹ ಮೂರ್ತಿ)ಬಳಸಿಕೊಂಡು ನಾಟಕ ರೂಪ ರಚಿಸಿ ನಿರ್ದೇಶಿಸಿದ ಪ್ರತಿಭಾವಂತ ಕೆ ಪಿ ಲಕ್ಷ್ಮಣ್ ಧೈರ್ಯವನ್ನು ಮೆಚ್ಚತಕ್ಕದ್ದು. ಅಪಮಾನಗಳನ್ನು ಉಂಡವರು ಮಾತ್ರ ಅಪಮಾನ ಅಳೆಯಬಲ್ಲರು.
ನಾಟಕವನ್ನು ಕಥಾಹಂದರ ಹಿಡಿದಿಟ್ಟುಕೊಂಡಂತೆ ಪಾತ್ರಧಾರಿಗಳಾದ ಶ್ವೇತಾ ಹೆಚ್, ಕೆ.ಚಂದ್ರಶೇಖರ್, ಭರತ್ ಡಿಂಗ್ರಿ ಅವರ ಅಭಿನಯ ಸಾಮರ್ಥ್ಯ ಪ್ರೇಕ್ಷಕರಲ್ಲೂ ಪ್ರತಿಫಲಿಸುವಷ್ಟು ಪ್ರಭಾವಿತವಾಗಿತ್ತು ಎನ್ನಬಹುದು. ಮರಾಠಿ ರಂಗಭೂಮಿಯ ನಂತರ ಹಿಂದಿ, ಮರಾಠಿ ಚಿತ್ರರಂಗದಲ್ಲಿ ನಾಗರಾಜು ಮಂಜುಳೆ, ತಮಿಳು ಸಿನಿಮಾರಂಗದಲ್ಲಿ ವೇಟ್ರಿ ಮಾರನ್. ಪ.ರಂಜಿತ್, ಮಾರಿ ಸೆಲ್ವರಾಜ್ ಅವರುಗಳು ಅಸ್ಪೃಶ್ಯ ಕಥನಗಳನ್ನು ಆತ್ಮಸ್ಥೈರ್ಯದಿಂದ ಪ್ರಸ್ತುತಪಡಿಸುತ್ತಿರುವ ಈ ಹೊತ್ತಿನಲ್ಲಿ ಕನ್ನಡ ರಂಗಭೂಮಿಯಲ್ಲಿ ಜಂಗಮ ಕಲೆಕ್ಟಿವ್‌ನ ಕೆ ಪಿ ಲಕ್ಷ್ಮಣ್ ಮತ್ತವರ ತಂಡ ಇಂತಹುದ್ದೆ ಹಾದಿ ತುಳಿದಿರುವುದು ಜಾತೀಯತೆಯನ್ನು ಪೋಷಿಸುತ್ತಲೇ ʼಜಾತಿ ಎಲ್ಲಿದೆ..ʼ ಎನ್ನುವವರ ಎದೆಗೆ ಹೊನೆಕೆ ಕುಟ್ಟಿದಂತಾಗಿದೆ. ಆಳದ ಅಳುವಿನ ಮತ್ತು ವ್ಯವಸ್ಥೆ ನಿರೂಪಿಸಿದ ಕೇಡಿಗೆ ಕನ್ನಡಿ ಹಿಡಿದ ’ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’.

ಎನ್ ರವಿಕುಮಾರ್
ಪತ್ರಕರ್ತ, ಲೇಖಕ
ನೋಡಲೇಬೇಕಾದ ನಾಟಕ… ನಿಮ್ಮ ಮಾತುಗಳು ಓದಿದ ನಂತರ ಹಾಗನ್ನಿಸಿತು…