ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ತಾಲೂಕಿನ ಸೀಸಂದ್ರ ಗೋಪಾಲಗೌಡ, ಅರ್ಬಾಜ್ ಪಾಷ ಹಾಗೂ ಎಸ್.ಜೈದೀಪ್ ಅವರನ್ನು ರಾಜ್ಯಪಾಲರ ಆದೇಶಾನುಸಾರ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಕೆ ಮಂಜುನಾಥ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಸೀಸಂದ್ರ ಗ್ರಾಮದ ಎಂ.ಗೋಪಾಲಗೌಡ ಅವರು ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಜಿಲ್ಲಾ ಅಧ್ಯಕ್ಷ, ರಾಜ್ಯ ಉಪಾಧ್ಯಕ್ಷರಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಬೆಂಗಳೂರು ವಿವಿಯ ಉಳಿವಿಗಾಗಿ ಹಾಗೂ ಬಲವರ್ಧನೆಗಾಗಿ ಸಾಕಷ್ಟು ಹೋರಾಟಗಳನ್ನು ರೂಪಿಸಿದ್ದು, ಇವರ ಹೋರಾಟಕ್ಕೆ ಸಂದ ಗೌರವ ಇದಾಗಿದೆ.
ಇನ್ನೂ ಕೋಲಾರದ ಷಹೀನ್ ಷಾ ನಗರದ ಅರ್ಬಾಜ್ ಪಾಷ ಅವರು ಸುಮಾರು 10 ವರ್ಷಗಳ ಉಪನ್ಯಾಸಕ ವೃತ್ತಿಯೊಂದಿಗೆ ಬೆಂಗಳೂರಿನ ಕಿಂಗ್ ಸ್ಟನ್ ಕಾಲೇಜಿನಲ್ಲಿ 7 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಶೈಕ್ಷಣಿಕ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಮತ್ತೊಬ್ಬರು ನಗರದ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಜೈದೀಪ್ ಅವರ ಶಿಕ್ಷಣ ಕ್ಷೇತ್ರದ ಸೇವೆಯನ್ನು ಗುರುತಿಸಿ ಬೆಂಗಳೂರು ಉತ್ತರ ವಿವಿಗೆ ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಈದಿನ ಸಹಾಯವಾಣಿ ಬಿಡುಗಡೆಗೊಳಿಸಿದ ಸಚಿವ ಎಂ.ಸಿ.ಸುಧಾಕರ್
ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ನೂತನ ಸಿಂಡಿಕೇಟ್ ಸದಸ್ಯರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಕೊತ್ತೂರು ಮಂಜುನಾಥ್, ಎಸ್.ಎನ್ ನಾರಾಯಣಸ್ವಾಮಿ, ಎಂಎಲ್ಸಿ ಅನಿಲ್ ಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಮುಖಂಡರಿಗೆ ಧನ್ಯವಾದಗಳು. ಹಿರಿಯರ ಮಾರ್ಗದರ್ಶನದಲ್ಲಿ ಹೊಸ ವಿವಿಯನ್ನು ಮಾದರಿ ವಿಶ್ವವಿದ್ಯಾಲಯವಾಗಿಸಲು ಒಗ್ಗಟ್ಟಿನಿಂದ ಶ್ರಮಿಸುತ್ತೇವೆ ಎಂದು ತಿಳಿಸಿದ್ದಾರೆ.