ಮೇಕೆದಾಟು ಯೋಜನೆಯ ಬಗ್ಗೆ ಕೇಂದ್ರ ಹಿಂದೆ ಸರಿದಿರುವ ಈ ಸಂದರ್ಭದಲ್ಲಾದರೂ, ಯೋಜನೆಯ ಸಾಧಕ-ಬಾಧಕಗಳ ಕುರಿತು ಮುಕ್ತವಾಗಿ ಚರ್ಚಿಸಲು, ಒಮ್ಮತಕ್ಕೆ ಬರಲು ಕೇಂದ್ರವೇ ಅವಕಾಶ ಕಲ್ಪಿಸಿಕೊಟ್ಟಿದೆ. ಆ ಮೂಲಕ ದಕ್ಷಿಣ ಭಾರತ ಒಂದಾಗಲು, ಒಮ್ಮತಕ್ಕೆ ಬಂದು ಒಗ್ಗಟ್ಟು ಪ್ರದರ್ಶಿಸಲು ಇದು ಸಕಾಲ.
ಮೇಕೆದಾಟು ಜಲವಿವಾದವನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೂಲಕವೇ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಉಭಯ ರಾಜ್ಯಗಳ ನಡುವೆ ಮಧ್ಯಸ್ಥಿಕೆ ವಹಿಸಿ ಮೇಕೆದಾಟು ವಿವಾದ ಬಗೆಹರಿಸಬೇಕು ಎಂಬ ಕರ್ನಾಟಕದ ಬೇಡಿಕೆಯನ್ನು ಕೇಂದ್ರ ಸರ್ಕಾರವು ತಳ್ಳಿ ಹಾಕಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದ ಹಿಂದೆ ಹಲವು ಕಾರಣಗಳಿವೆ ಎನ್ನುತ್ತಿದ್ದಾರೆ ರಾಜಕೀಯ ನಾಯಕರು. ರಾಜ್ಯಗಳ ಸಮಸ್ಯೆಯನ್ನು ರಾಜ್ಯಗಳೇ ಕೂತು ಬಗೆಹರಿಸಿಕೊಳ್ಳಲಿ ಎಂದಿರುವುದು ಸರಿ ಇದೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು. ರಾಜಕಾರಣ ಹೊರತುಪಡಿಸಿ, ಅರಣ್ಯ, ನೀರು, ಪರಿಸರ, ಕಾನೂನು ತೊಡಕುಗಳೂ ಇರುವುದರಿಂದ, ಒಮ್ಮತಕ್ಕೆ ತರುವುದು ಕಷ್ಟವೆಂದು ಕೇಂದ್ರ ಹಿಂದೆ ಸರಿದಿದೆ ಎನ್ನುವ ವಾದವೂ ಇದೆ. ಒಟ್ಟಿನಲ್ಲಿ ಕೇಂದ್ರದ ಈ ತೀರ್ಮಾನದ ಹಿಂದೆ ಹಲವು ಆಯಾಮಗಳಿರುವುದಂತೂ ನಿಜ.
ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು-ಕರ್ನಾಟಕಗಳ ನಡುವಿನ ನದಿ ನೀರು ವ್ಯಾಜ್ಯ ನಮಗೇಕೆ ಎಂದು ಕೇಂದ್ರ ಸರ್ಕಾರ ತಟಸ್ಥವಾಗಿರಬಹುದು. ಡಿಎಂಕೆ-ಕಾಂಗ್ರೆಸ್ ಇಂಡಿ ಮೈತ್ರಿಕೂಟದಲ್ಲಿರುವ ಕಾರಣ, ಅವರವರೇ ಹೊಡೆದಾಡಿಕೊಂಡರೆ, ಅದರ ರಾಜಕೀಯ ಲಾಭ ಪಡೆಯಲು ಬಿಜೆಪಿ ಹವಣಿಸಿರಬಹುದು. 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಮೇಲೆ ಅದರ ಪರಿಣಾಮ ಬೀರಬಹುದೆಂದು ಯೋಚಿಸಿರಲೂಬಹುದು.
ಈಗ ಸಮಸ್ಯೆ ಎದುರಾಗಿರುವುದು ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ, ಮೇಕೆದಾಟು ಯೋಜನೆ ಕುರಿತು. ಇದು ಇತ್ಯರ್ಥವಾಗಬೇಕಿರುವುದು ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೆರಿ ರಾಜ್ಯಗಳ ನಡುವೆ. ಕೇಂದ್ರ ಹಿಂದೆ ಸರಿದಿರುವುದು ಒಂದು ರೀತಿಯಲ್ಲಿ ದಕ್ಷಿಣ ಭಾರತ ಒಂದಾಗಲು, ಒಮ್ಮತಕ್ಕೆ ಬಂದು ಒಗ್ಗಟ್ಟು ಪ್ರದರ್ಶಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಮೇಕೆದಾಟು ಯೋಜನೆಯ ನೆಪದಲ್ಲಾದರೂ ದಕ್ಷಿಣ ಭಾರತದ ರಾಜ್ಯಗಳು ಒಂದಾದರೆ, ಆ ಒಗ್ಗಟ್ಟು ಕೇಂದ್ರದ ಮೇಲೆ ನ್ಯಾಯಸಮ್ಮತ ಪಾಲು ಕೇಳುವುದಕ್ಕೆ, ಒತ್ತಡ ಹೇರಲಿಕ್ಕೆ ಅನುಕೂಲವಾಗುತ್ತದಲ್ಲವೇ?
ಅಷ್ಟಕ್ಕೂ ಇದು ಬಗೆಹರಿಯದ ಸಮಸ್ಯೆಯಲ್ಲ. ನಾಲ್ಕು ರಾಜ್ಯಗಳು ಒಟ್ಟಿಗೆ ಕೂತರೆ ಬಗೆಹರಿಯದೇ ಇರುವುದಿಲ್ಲ.
ಮೇಕೆದಾಟು ಯೋಜನೆಯತ್ತ ನೋಡುವುದಾದರೆ… ಬೆಂಗಳೂರು ನಗರದಿಂದ 90 ಕಿಲೋ ಮೀಟರ್ ದೂರದಲ್ಲಿರುವ ರಾಮನಗರದ ಜಿಲ್ಲೆಯ ಒಂಟಿಗುಂಡು ಸ್ಥಳದಲ್ಲಿ ಹರಿಯುವ ಕಾವೇರಿ ನದಿ ಪ್ರದೇಶಕ್ಕೆ ಮೇಕೆದಾಟು ಎನ್ನಲಾಗುತ್ತದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಮೇಕೆದಾಟು ಪರಿಸರದಲ್ಲಿ ಜಲಾಶಯ ನಿರ್ಮಾಣ ಮಾಡಿ, ಮಳೆಗಾಲದ ಸಂದರ್ಭದಲ್ಲಿ ಸಮುದ್ರದ ಪಾಲಾಗುವ ಅಂದಾಜು 65-66 ಟಿಎಂಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಬೇಕು ಎಂಬುದು ರಾಜ್ಯದ ಉದ್ದೇಶ. ಅಲ್ಲದೆ ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ಉತ್ಪಾದನೆಗೂ ಈ ಯೋಜನೆಯಿಂದ ಅನುಕೂಲವಾಗಲಿದೆ.
ಒಟ್ಟು 5252.40 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗುವ ಈ ಯೋಜನೆಗೆ 3181.9 ಹೆಕ್ಟೇರ್ ಭೂ ಪ್ರದೇಶ ಬೇಕಾಗಿದೆ. ಅದು ಕಾವೇರಿ ವನ್ಯಜೀವಿ ಅಭಯಾರಣ್ಯದ ಪ್ರದೇಶವೇ ಆಗಿದೆ. ಅಷ್ಟೇ ಅಲ್ಲದೆ 1869.5 ಹೆಕ್ಟೇರ್ ಅರಣ್ಯ ಭೂಮಿ ಸ್ವಾಧೀನಪಡಿಸಬೇಕಾಗಿದೆ. 201 ಹೆಕ್ಟೇರ್ ಜಮೀನು ಕಂದಾಯ ಹಾಗೂ ಖಾಸಗಿ ಭೂಮಿಯಾಗಿದೆ. ಒಟ್ಟು 5 ಹಳ್ಳಿಗಳು ಈ ಯೋಜನೆಯಿಂದ ಮುಳುಗಡೆಯಾಗಲಿವೆ. ಈ ಕಾರಣದಿಂದಾಗಿ ಮೇಕೆದಾಟು ಯೋಜನೆಗೆ ಕಾನೂನು ಸಮ್ಮತಿ ಸಿಕ್ಕರೂ, ಕೇಂದ್ರ ಪರಿಸರ ಇಲಾಖೆ ಗ್ರೀನ್ ಸಿಗ್ನಲ್ ನೀಡುವುದು ಕಷ್ಟವಿದೆ ಎನ್ನಲಾಗುತ್ತಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅತ್ಯಾಚಾರಿಗೆ ಶಿಕ್ಷೆ; ನುಡಿದಂತೆ ನಡೆಯಲಿ ನರೇಂದ್ರ ಮೋದಿ
ಜೊತೆಗೆ ಈ ಯೋಜನೆ ಆರಂಭದಿಂದಲೂ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಡ್ಯಾಂ ನಿರ್ಮಾಣದಿಂದ ತಮಿಳುನಾಡಿನ ರೈತರಿಗೆ ನೀರಿನ ಕೊರತೆ ಉಂಟಾಗುತ್ತದೆ ಅನ್ನುವುದು ತಮಿಳುನಾಡು ಸರ್ಕಾರದ ವಾದವಾಗಿದೆ. ಮೇಕೆದಾಟು ಯೋಜನೆಯಿಂದ ಅಣೆಕಟ್ಟೆಯಲ್ಲಿ ಸಂಗ್ರಹಿಸಲಾಗುವ ನೀರಿನಲ್ಲಿ 400 ಮೆಗಾವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದನೆ ಮಾಡಿದ ಬಳಿಕ ತಮಿಳುನಾಡಿಗೆ ನೀರು ಹರಿದು ಹೋಗುತ್ತದೆ. ಪ್ರವಾಹ ಮತ್ತು ಸಂಕಷ್ಟದ ವರ್ಷಗಳಲ್ಲಿ ನೀರು ಬಳಕೆಗೆ ಇದು ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂಬುದು ಕರ್ನಾಟಕದ ವಾದವಾಗಿದೆ.
ಕಾವೇರಿ ನದಿ ನೀರಿನ ಹಂಚಿಕೆ ಕುರಿತು ನೆರೆ ರಾಜ್ಯಗಳೊಂದಿಗೆ ವಿವಾದವಿದೆ. ಈ ವಿವಾದವಿರುವುದರಿಂದ ಕಾನೂನು ಚೌಕಟ್ಟಿನಲ್ಲಿ ವೈಜ್ಞಾನಿಕವಾಗಿ ಮೇಕೆದಾಟು ಯೋಜನೆ ಜಾರಿಯಾದರೆ ತಮಿಳುನಾಡಿಗೆ ಆಗುವ ಅನುಕೂಲದ ಬಗ್ಗೆ ಪ್ರತ್ಯೇಕ ವರದಿ ತಯಾರಿಸಿ ತಮಿಳುನಾಡು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಾದ್ದು ಕರ್ನಾಟಕದ ಕೆಲಸವಾಗಬೇಕಿತ್ತು. ಅದಕ್ಕಿಂತ ಮೊದಲು ಪರಿಸರ ಮತ್ತು ಸಾಮಾಜಿಕ ಪರಿಣಾಮ ಕುರಿತು ಅಧ್ಯಯನ ನಡೆಸಬೇಕಿತ್ತು. ಸ್ಥಳೀಯರನ್ನು, ವಿಷಯ ತಜ್ಞರನ್ನು ಕರೆದು ಸಭೆ ನಡೆಸಬೇಕಿತ್ತು. ಈ ವಿಚಾರದಲ್ಲಿ ರಾಜ್ಯವನ್ನಾಳಿದ ಮೂರು ರಾಜಕೀಯ ಪಕ್ಷಗಳು ಎಡವಿವೆ. ಏಕೆಂದರೆ, ಅವರಿಗೆ ಕುಡಿಯುವ ನೀರು ಮತ್ತು ವಿದ್ಯುತ್‌ಗಿಂತ ಕಾಮಗಾರಿ ಮೊತ್ತದ ಮೇಲೆ ಕಣ್ಣಿದೆ. ಯೋಜನೆ ಆರಂಭದಲ್ಲಿದ್ದ ಅಂದಾಜು ಮೊತ್ತವಿರಲಿ, 2021ರಲ್ಲಿಯೇ ಯೋಜನೆಯ ಅಂದಾಜು ವೆಚ್ಚ 9,000 ಕೋಟಿ ರೂ. ದಾಟಿದೆ. ಆರಂಭವಾಗುವ ಕಾಲಕ್ಕೆ ಅದು ದುಪ್ಪಟ್ಟಾಗಬಹುದು, ಇರಲಿ.
ಈಗಲಾದರೂ, ಕೇಂದ್ರ ಹಿಂದೆ ಸರಿದಿರುವ ಈ ಸಂದರ್ಭದಲ್ಲಾದರೂ, ಯೋಜನೆಯ ಸಾಧಕ-ಬಾಧಕಗಳ ಕುರಿತು ಮುಕ್ತವಾಗಿ ಚರ್ಚಿಸಲು, ಆ ಮೂಲಕ ನಾಲ್ಕೂ ರಾಜ್ಯಗಳು ಒಂದಾಗಲು ಇದು ಸಕಾಲ. ದಕ್ಷಿಣ ಭಾರತಕ್ಕೆ ಇದು ಅನುಕೂಲ.
