ದೇಶದ ವಿವಿಧೆಡೆ ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದು, ಪ್ರಜಾತಂತ್ರ ವ್ಯವಸ್ಥೆಗೆ ರಾಜ್ಯಪಾಲರ ಹುದ್ದೆ ಮಾರಕವಾಗಿ ಪರಿಣಮಿಸಿದೆ. ರಾಜ್ಯಪಾಲರ ಹುದ್ದೆಯನ್ನ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.
ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆನಂತರ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಭಾರತದ ಒಕ್ಕೂಟ ವ್ಯವಸ್ಥೆ ಅಸ್ಥಿರಗೊಳಿಸಲು ರಾಜಕೀಯವಾಗಿ ದುರ್ಬಳಕೆಯಾಗುತ್ತಿರುವ ಹಾಗೂ ಪ್ರಜಾತಂತ್ರಕ್ಕೆ ರಾಜ್ಯಪಾಲರ ಹುದ್ದೆ ಮಾರಕವಾಗಿದೆ. ಸಂವಿಧಾನಾತ್ಮಕವಾಗಿ ಅಗತ್ಯ ಕ್ರಮಕೈಗೊಳ್ಳಬೇಕು. ಆದರೆ, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಸಂದರ್ಭದಲ್ಲಿ ರಾಜ್ಯಪಾಲರ ಕಚೇರಿ ರಾಜಕೀಯ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ರಾಜ್ಯಪಾಲರ ಕಚೇರಿಗೆ ಲೋಕಾಯುಕ್ತ ಸಂಸ್ಥೆ ಇತರೇ ಪ್ರಕರಣಗಳಲ್ಲಿ ತನಿಖೆಗೆ ಅನುಮತಿ ಕೇಳಿ ವರ್ಷಗಳೇ ಕಳೆದರೂ ಅವುಗಳ ಬಗ್ಗೆ ಯಾವುದೇ ತೀರ್ಮಾನ ಮಾಡದ ರಾಜ್ಯಪಾಲರು, ಮುಡಾ ಪ್ರಕರಣದಲ್ಲಿ ತೆಗೆದುಕೊಂಡ ತೀರ್ಮಾನ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಲಿಂಗಸುಗೂರು | ಕೃಷಿ ಉಪ ನಿರ್ದೇಶಕರ ಕಚೇರಿ ಸಿಂಧನೂರಿಗೆ ಸ್ಥಳಾಂತರ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಒಂದು ಪಕ್ಷದ ಸರ್ಕಾರವು ತನಗಾಗದೆ ಇರುವ ರಾಜ್ಯದಲ್ಲಿ ಆಡಳಿತ ನಡೆಸುವ ಮತ್ತೊಂದು ಪಕ್ಷದ ಸರ್ಕಾರವನ್ನು ವಜಾಗೊಳಿಸಿರುವ ಉದಾಹರಣೆಗಳು ಸಾಕಷ್ಟು ಇವೆ. ರಾಜ್ಯಪಾಲರ ಹುದ್ದೆ ಅನಾವಶ್ಯಕವಾಗಿದ್ದು ಈ ಹುದ್ದೆಗಾಗಿ ಜನರಿಂದ ಸಂಗ್ರಹಿಸಿದ ಅಪಾರ ಪ್ರಮಾಣದ ತೆರಿಗೆ ಹಣವು ಅನಾವಶ್ಯಕವಾಗಿ ವ್ಯಯವಾಗಲಿದೆ. ಕೂಡಲೇ ರಾಜ್ಯಪಾಲರ ಹುದ್ದೆ ರದ್ದು ಮಾಡಬೇಕು ಎಂದು ರಾಷ್ಟ್ರಪತಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಶೇಖರ ಕ್ಯಾತನಟ್ಟಿ, ಆನಂದ, ಭಾಷುಮಿಯಾ, ಮಾರೆಪ್ಪ ಹರವಿ, ಆಂಜನೇಯ ಕುರುಬದೊಡ್ಡಿ, ರಂಗಾರೆಡ್ಡಿ, ಹುಸೇನ ಬಾಷಾ, ಯಮನಪ್ಪ, ಸುಲೋಚನಾ ಪಾಲ್ಗೊಂಡಿದ್ದರು.
