ಗದಗ ಜಿಲ್ಲೆಯ ರೋಣ ತಾಲೂಕಿನಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಕಾಣೆಯಾಗಿದ್ದ ಮಹಿಳೆಯೋರ್ವರು ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ತೋಟಗಂಟಿ ಗ್ರಾಮದಿಂದ ಕಾಣೆಯಾಗಿದ್ದ ವಿವಾಹಿತ ಮಹಿಳೆ ಅದೇ ಗ್ರಾಮದ ಹೊಲದಲ್ಲಿನ ನೀರಿಲ್ಲದ ಹಳೆ ಬಾವಿಯಲ್ಲಿ ಮೂರು ದಿನಗಳ ನಂತರ ಪತ್ತೆಯಾಗಿದ್ದಾರೆ. ನಾಪತ್ತೆಯಾಗಿ, ಪತ್ತೆಯಾದ ಮಹಿಳೆಯನ್ನು ಪಾರ್ವತಿ ಎಂದು ಗುರುತಿಸಲಾಗಿದೆ. ಸದ್ಯ ಮಹಿಳೆಯನ್ನು ರಕ್ಷಿಸಲಾಗಿದ್ದು, ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ತೋಟಗಂಟಿ ಗ್ರಾಮದಿಂದ ಕೋಚಲಾಪುರಕ್ಕೆ ಹೋಗುವ ಮಾರ್ಗದಲ್ಲಿರುವ ಮನೆಯಲ್ಲಿ ವಾಸವಿದ್ದ ಪಾರ್ವತಿ– ವೀರಯ್ಯ ಕಲ್ಮಠ ದಂಪತಿಗೆ ಆರು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಕಳೆದ ಆಗಸ್ಟ್ 20ರಂದು ಪಾರ್ವತಿ ನಾಪತ್ತೆಯಾಗಿದ್ದರು. ಗಂಡ ಹಾಗೂ ಕುಟುಂಬಸ್ಥರು ಎಲ್ಲೆಡೆ ಹುಡುಕಿ, ಎಲ್ಲಿಯೂ ಸಿಗದೆ ಇದ್ದಾಗ ನರೇಗಲ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ದೂರು ನೀಡಿದ್ದರು.
ಆಗಸ್ಟ್ 22ರಂದು ಗ್ರಾಮದಿಂದ ಅಂದಾಜು 1 ಕಿ.ಮೀ. ದೂರದ ಬಾವಿಯಲ್ಲಿ ಮಹಿಳೆಯೊಬ್ಬರು ಅರಚುತ್ತಿರುವುದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕರಿಗೆ ಕೇಳಿಸಿದೆ. ಆಗ ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ.
“ಆ.20ರಂದು ಬೆಳಗ್ಗೆ 5ರ ಸುಮಾರಿಗೆ ಮನೆ ಮುಂದೆ ಇರುವ ಕಸ ಗುಡಿಸಲೆಂದು ನಿಂತಿದ್ದಾಗ ವಯಸ್ಕ ಮಹಿಳೆಯೊಬ್ಬರು ನನ್ನ ಕುತ್ತಿಗೆ ಭಾಗ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದಳು. ಕೈಬಳೆ, ಕಾಲುಂಗರ ನೀಡುವಂತೆ ಒತ್ತಾಯಿಸಿದಳು. ಬಳಿಕ ನನ್ನನ್ನು ಎಳೆದುಕೊಂಡು ಬಂದು ಬಾವಿಗೆ ತಳ್ಳಿದಳು. ಬಾವಿಗೆ ಬಿದ್ದ ಮಾರನೇ ದಿನ ನನಗೆ ಪ್ರಜ್ಞೆ ಬಂದಿದೆ. ಆಗ ಕಿರುಚಿದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಆ. 22ರಂದು ಧ್ವನಿ ಕೇಳಿದ ಜನರು ನನ್ನ ಕಾಪಾಡಿದ್ದಾರೆ” ಎಂದು ತೊಂದರೆಗೆ ಒಳಗಾಗಿದ್ದ ಮಹಿಳೆ ಪಾರ್ವತಿ ಮಾಹಿತಿ ನೀಡಿದ್ದಾರೆ
“ಕಾಣೆಯಾದ ನಂತರ ಹೊಲ, ಮನಿ, ಊರೂರು ಹುಡುಕಿದ್ದೆವು. ಎಲ್ಲಿಯೂ ಸಿಗದ ಕಾರಣ ದೂರು ಕೊಟ್ಟಿದ್ದೆವು. ಬಾವಿಯಲ್ಲಿ ಬಿದ್ದು ರಕ್ಷಣೆಗೆ ಕೂಗುತ್ತಿರುವ ವಿಷಯ ಗೊತ್ತಾದ ನಂತರ ಆಕೆಯನ್ನು ರಕ್ಷಿಸಿ, ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ” ಎಂದು ಮಹಿಳೆಯ ಪತಿ ವೀರಯ್ಯ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು ವಿಶ್ವವಿದ್ಯಾನಿಲಯ: ‘ಮಾಮ್ ಇನ್ಸ್ಪೈರ್’ ಪ್ರಶಸ್ತಿಗೆ ಅರ್ಜಿ ಆಹ್ವಾನ
ಈ ವಿಚಿತ್ರ ರೀತಿಯ ಘಟನೆಗೆ ಗ್ರಾಮದ ಇತರೆ ಮಹಿಳೆಯರು ಆತಂಕಗೊಂಡಿದ್ದಾರೆ. ನಸುಕಿನ ಜಾವ ಓಡಾಡಲು ಹೆದರುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಈ ಕುರಿತು ನಮ್ಮಲ್ಲಿ ಪ್ರಕರಣ ದಾಖಲಾಗಿಲ್ಲ. ಆದರೆ, ಎಂ.ಎಲ್.ಸಿ ಆಗಿದೆ. ಮಹಿಳೆಯನ್ನು ಬಾವಿಯಿಂದ ಹೊರಗೆ ತೆಗೆದಾಗ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗದಗಕ್ಕೆ ಕರೆದುಕೊಂಡು ಹೋಗಿದ್ದಾರೆ. ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುವುದು” ಎಂದು ನರೇಗಲ್ ಪೊಲೀಸ್ ಠಾಣೆ ಎಸ್ಐ ಐಶ್ವರ್ಯ ನಾಗರಾಳ ತಿಳಿಸಿದ್ದಾರೆ.
