ನಮ್ಮ ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಿಂದ ಕೈಬಿಡಬೇಕು ಎಂದು ಆಗ್ರಹಿಸಿ ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಸರಿಕಟ್ಟೆಯಲ್ಲಿ ಸಭೆ ಏರ್ಪಡಿಸಿದ್ದರು.
ಸಭೆಯಲ್ಲಿ ವೆಂಕಟೇಶ್ ಹಾಗಲಗಂಚಿ ಮಾತನಾಡಿ, “ನಾವು ಮಲೆನಾಡಿನಲ್ಲಿ ತಲತಲಾಂತರದಿಂದ ವಾಸವಾಗಿದ್ದೇವೆ. ಶಾಲೆ, ಜಮೀನುಗಳು, ನಾವು ಬದುಕು ಕಟ್ಟಿಕೊಂಡಿರುವ ಅಡಿಕೆ, ಕಾಫಿ, ಹೊಲ ಗದ್ದೆಗಳ ಪ್ರದೇಶವನ್ನು 2024ರ ಜುಲೈ 30ರಂದು ಕೇಂದ್ರ ಪರಿಸರ ಇಲಾಖೆ ಕಸ್ತೂರಿ ರಂಗನ್ ವರದಿಯಂತೆ ನೈಸರ್ಗಿಕ ಸೂಕ್ಷ್ಮ ಪ್ರದೇಶವೆಂದು ಕರಡು ಅಧಿಸೂಚನೆ ಹೊರಡಿಸಿದೆ” ಎಂದರು.
“ನಾವು ಒತ್ತುವರಿಯೆಂದು ಹೇಳಬಾರದು, ಸಾಗುವಳಿಯೆಂದು ಕರೆಯಬೇಕು. ನಮ್ಮಿಂದ ಅರಣ್ಯ ನಾಶವಾಗಲಿಲ್ಲ, ಕಾಡಿಗೆ ಬೆಂಕಿ ಬಿದ್ದರೆ ಅದನ್ನು ಹೋಗಿಸುವುದು ಅಲ್ಲಿ ವಾಸಮಾಡುವ ಜನರು. ಸೊಪ್ಪಿನ ಬೆಟ್ಟ, ಆಡ್ಯ, ಕಟ್ಟಿಗೆ ಕಾಡು ಎಂಬ ನಾನಾ ಹೆಸರಿನಿಂದ ವಿಂಗಡಿಸುತ್ತಿದ್ದರು. ಸುತ್ತಮುತ್ತ ಹತ್ತು ಮರಗಳು, ಹಸಿರು ಗಿಡಗಂಟಿಗಳು ಇದ್ದರೆ ಅದನ್ನು ಅರಣ್ಯವೆಂದು ಘೋಷಿಸಿರುವುದು ಖಂಡನೀಯ. ಸೆಕ್ಷನ್ 4(1), ಅರಣ್ಯ ಕಾಯ್ದೆ, ಗೋವರ್ಧನ್ ತಿರುವಳಲ್ ಸೇರಿದಂತೆ ಮುಂತಾದ ಕಾಯ್ದೆಗಳಿಂದ ಕಾಡನ್ನು ನಾಶ ಮಾಡಲು ಹೊರಟಿದ್ದಾರೆ. ಈ ನೆಪದಲ್ಲಿ ಅಲ್ಲಿಯ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಕರ್ನಾಟಕ ಜನಶಕ್ತಿ ಕೌಳಿ ರಾಮು ಮಾತನಾಡಿ, “ಮಲೆನಾಡಿಗೆ ಇದು ಅವೈಜ್ಞಾನಿಕವಾಗಿದ್ದು, ಉಪಗ್ರಹ ಆಧಾರಿತ ಚಿತ್ರದಲ್ಲಿ ತೋರಿಸುವಂತೆ ನಾವು ಸ್ವಂತ ಬೆಳೆದ ಕೃಷಿ ಭೂಮಿಯನ್ನೂ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಘೋಷಿಸಿದೆ. ಸರ್ಕಾರ ಈ ರೀತಿಯಲ್ಲಿ ಆದೇಶ ಮಾಡುವುದರಿಂದ ನಮ್ಮ ಬದಕು ನಶಿಸಿಹೋಗಲಿದೆ. ಜನರು ಮಾಡಿರುವ ಜಾಗವನ್ನು ಅರಣ್ಯ ಪ್ರದೇಶವೆಂದು ಸುಳ್ಳು ದಾಖಲೆಗಳನ್ನ ಇಟ್ಟುಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸನ್ನ ಕುಮಾರ್ ಕಿಬ್ಬಳ್ಳಿ ಮಾತನಾಡಿ, “ಮಲೆನಾಡಿನ ಮೂಲ ಮತ್ತು ಪ್ರಮುಖ ಬೆಳೆಗಳು ನಾಶವಾಗಿ ಮುಂದಿನ ದಿನಗಳಲ್ಲಿ ರೈತರು, ಬೆಳೆಗಾರರು, ಗ್ರಾಮಸ್ಥರು ಹಾಗೂ ಕಾರ್ಮಿಕರು ತಮ್ಮ ಜೀವನ ಕಳೆದುಕೊಳ್ಳುವ ಆತಂಕದಲ್ಲಿದ್ದೇವೆ. ರೈತರ ಜಾಗವನ್ನ ಡಿ-ನೋಟಿಫಿಕೇಷನ್, ರಿಸರ್ವ್ ಫಾರೆಸ್ಟ್, ಪರಿಸರ ಸೂಕ್ಮ ಪ್ರದೇಶ(ಇಕೋ ಸೆನ್ಸಿಟಿವ್ ಝೋನ್)ವೆಂದು ಘೋಷಿಸಿ, ಈ ಹಿಂದೆ ಇದ್ದ ಅಧಿಕಾರಿಗಳು ಕಂದಾಯ ಭೂಮಿಯನ್ನು ಅರಣ್ಯ ಭೂಮಿಯಾಗಿ ಎಷ್ಟೋ ಹೆಕ್ಟೇರ್ ಜಾಗವನ್ನು ಪರಿವರ್ತಿಸಿದ್ದಾರೆ. ಮಲೆನಾಡಿನಲ್ಲಿ ಜನಸಂದಣಿ ಕಡಿಮೆಯಿದ್ದು, ಪ್ರದೇಶದ ವಿಸ್ತೀರ್ಣ ಜಾಸ್ತಿ ಇದೆ. ಆದರೂ ಸರ್ಕಾರ ಜನವಿರೋಧಿ ಅರಣ್ಯ ಕಾಯ್ದೆಗಳನ್ನು ಜಾರಿ ಮಾಡಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಪತ್ತೆ: ತಡವಾಗಿ ಬೆಳಕಿಗೆ ಬಂದ ಘಟನೆ
ಸಭೆಗೆ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಮಲೆನಾಡಿಗೆ ಮಾರಕವಾಗಿರುವ ಈ ಯೋಜನೆಯನ್ನು ಕೈಬಿಡಬೇಕೆಂದು ಮಲೆನಾಡಿನ ಜನರು ಈ ಆಕ್ಷೇಪಣಾ ಪತ್ರವನ್ನು ಸರ್ಕಾರಕ್ಕೆ ಬರೆದಿದ್ದು, ಒತ್ತುವರಿ ಸಮಸ್ಯೆ ಇರುವವರು ಆಕ್ಷೇಪಣೆ ಪತ್ರ ಸಲ್ಲಿಸಬೇಕಾದರೆ Ministry of environment, forest and climate change Indira paryavaram bhavan, CGO complex, jor bagh road, Ali ghaj new dehli – 110003. Email address: esz-mef@nic.in ಈ ವಿಳಾಸಕ್ಕೆ ಪತ್ರ ಬರೆಯಬಹದು ಎಂದು ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿ ತಿಳಿಸಿದೆ.