ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೆಪ್ಟಂಬರ್ 18 ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡರು ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಣಯ
ಕೈಗೊಳ್ಳಲಾಗಿದೆ. ರೈತರ ಅನೇಕ ಬೇಡಿಕೆ, ಹಕ್ಕೊತ್ತಾಯಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಈ ಧರಣಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದ್ವೀರಪ್ಪ ಮಾತನಾಡಿ ರೈತರ ಪಂಪ್ಸೆಟ್ ಗಳಿಗೆ ಆಧಾರ್ ಕಾರ್ಡ್ ಜೋಡಿಸುವ, ಬ್ಯಾಂಕ್ ಗಳು ಎನ್ ಓ ಸಿ ಮತ್ತು ಸಾಲ ವಸೂಲಾತಿಯ ಸಮಸ್ಯೆಯ ಬಗ್ಗೆ, ಬೆಳೆ ಪರಿಹಾರದಲ್ಲಿ ಆಗುತ್ತಿರುವ ತಾರತಮ್ಯ ವಿಳಂಬ, ರೈತರ ಜಮೀನುಗಳಿಗೆ ದಾರಿಗಳ ಸಮಸ್ಯೆ ಈ ರೀತಿ ಹತ್ತು ಹಲವು ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ರೈತ ಸಂಘ ಸೆಪ್ಟೆಂಬರ್ 18 ರಂದು ಧರಣಿ ನಡೆಸಲಿದೆ ಎಂದು ಮಾಹಿತಿ ನೀಡಿದರು.
ಸರ್ಕಾರ ಈ ಕೂಡಲೇ ಎಚ್ಚೆತ್ತು ನಮ್ಮ ಬೇಡಿಕೆಗಳನ್ನ ಅಹವಾಲುಗಳನ್ನು ಪರಿಗಣನೆಗೆ ತೆಗೆದುಕೊಂಡು ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ ನಂತರದ ದಿನಗಳಲ್ಲಿ ರಾಜ್ಯದ್ಯಂತ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು
ಹಕ್ಕೊತ್ತಾಯಗಳು :
ಎಲ್ಲ ಹೆಸ್ಕಾಂ ಗಳು ರೈತರ ಪಂಪ್ಸೆಟ್ ಗಳಿಗೆ ಆಧಾರ್ ಜೋಡಣೆ ಕಾರ್ಯವನ್ನು ಕೈಬಿಡಬೇಕು,
ಭದ್ರಾ ಮೇಲ್ದಂಡೆಯ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಎಲ್ಲಾ ಕೆರೆಗಳಿಗೆ ಮತ್ತು ರೈತರ ಬೆಳೆಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು, ಬ್ಯಾಂಕ್ ಗಳು ಮತ್ತು ಸಾಲ ವಸೂಲಾತಿ ಸಂಸ್ಥೆಗಳು ರೈತರಿಂದ ಸಾಲ ವಸೂಲಿ ಮಾಡುವ ಮತ್ತು ಎನ್ ಓ ಸಿ ಕೊಡುವ ಸಂದರ್ಭದಲ್ಲಿ ರೈತರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಬೇಕು ಮತ್ತು ಸಾಲ ವಸೂಲಿ ನಿಲ್ಲಿಸಬೇಕು, ಬೆಳೆ ವಿಮೆ ಮತ್ತು ಬೆಳೆ ಪರಿಹಾರ ವಿತರಣೆಯಲ್ಲಿ ಆಗುತ್ತಿರುವ ತಾರತಮ್ಯವನ್ನು ಸರಿಪಡಿಸಬೇಕು, ರೈತರ ಜಮೀನುಗಳಿಗೆ ಹೋಗುವ ಬಂಡಿದಾರಿ ಮತ್ತು ದಾರಿಗಳ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಬೇಕು, ರೈತರಿಗೆ ಕನಿಷ್ಠ ಬೆಲೆಯಲ್ಲಿ ಪಹಣಿ ಮತ್ತು ಇತರ ಭೂ ಕಂದಾಯ ದಾಖಲೆಗಳು ಸಿಗುವಂತೆ ಕ್ರಮ ಕೈಗೊಳ್ಳಬೇಕು, ಮತ್ತು ಭೂ ಕಂದಾಯದ ದಾಖಲೆಗಳಲ್ಲಿ ಆಗುವ ತಪ್ಪುಗಳಿಗೆ ಕಂದಾಯ ಇಲಾಖೆ ನೌಕರರೇ ಹೊಣೆಗಾರರಾಗಬೇಕು, ಖಾಸಗಿ ಶಾಲಾ ಮತ್ತು ಶೈಕ್ಷಣಿಕ ಸಂಸ್ಥೆಗಳು ಅನಧಿಕೃತ ಶುಲ್ಕ ವಸೂಲಿ ನಿಲ್ಲಿಸಬೇಕು. ಹಾಗೆ ಪಡೆದಿರುವ ಶುಲ್ಕವನ್ನು ಹಿಂತಿರುಗಿಸಬೇಕು, ರೈತರ ತೋಟಗಳಲ್ಲಿ ಕಳ್ಳತನ ಹೆಚ್ಚಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಬಗರ್ ಹುಕುಂ ರೈತರ ಸಾಗುವಳಿ ನೀಡುವ ಸಂಬಂಧ ಕ್ರಮ ಕೈಗೊಳ್ಳಬೇಕು, ಸರ್ಕಾರಿ ಆಸ್ಪತ್ರೆಗಳ ಭ್ರಷ್ಟಾಚಾರ ನಿಲ್ಲಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳು ಸಂಪೂರ್ಣ ಚಿಕಿತ್ಸಾ ವೆಚ್ಚಭರಿಸಬೇಕು, ಅದು ಮಾನವೀಯ ನೆಲೆಯಲ್ಲಿರಬೇಕು, ರೈತರ ಬೆಳೆಗಳಿಗೆ ಬೆಲೆ ಆಯೋಗಗಳ ಪ್ರಕಾರ ಬೆಲೆ ಲಾಭಾಂಶ ಪದ್ಧತಿಯಲ್ಲಿ ಲಾಭಾಂಶ ಹಂಚಿಕೆ ಬೆಲೆ ನೀತಿ ಜಾರಿಯಾಗಬೇಕು ಎಂಬ ಪ್ರಮುಖ ಹಕ್ಕೊತ್ತಾಯಗಳಾಗಿವೆ.
ಸಭೆಯಲ್ಲಿ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ರಾಜ್ಯ ಪದಾಧಿಕಾರಿಗಳಾದ ಕುರುವ ಗಣೇಶ್, ಹೊನ್ನೂರು ಮುನಿಯಪ್ಪ, ಮಹೇಶ್ ತರೀಕೆರೆ, ನಿಂಗಪ್ಪ ದೀವಿಐಟ್ಟಿಗಿ, ಭರಮಣ್ಣ, ಅಮೀನ್ ಪಾಷಾ, ನಜೀರ್ ಸಾಬ್ ಮೂಲೆಮನೆ, ಮಲ್ಲಿಕಾರ್ಜುನ್ ರಾಂದುರ್ಗ, ಕಬ್ಬಿಗೆರೆ ನಾಗರಾಜ್, ಜಿಲ್ಲಾ ಪದಾಧಿಕಾರಿಗಳಾದ ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ್, ನಿಜಲಿಂಗಪ್ಪ, ರಾಮರೆಡ್ಡಿ, ಸದಾಶಿವಪ್ಪ, ತಾಲ್ಲೂಕ್ ಪದಾಧಿಕಾರಿಗಳಾದ ಮಂಜುನಾಥ್, ತಿಪ್ಪೇಸ್ವಾಮಿ ಕೆ.ಟಿ., ಬೋರೇಶ್, ರಂಗಸ್ವಾಮಿ, ರವಿ ಸೇರಿದಂತೆ ಇತರರು ಹಾಜರಿದ್ದರು.
