ನದಾಫ್, ಪಿಂಜಾರ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ ಸ್ಥಾಪಿಸಿ, ಸೂಕ್ತ ಅನುದಾನ ಘೋಷಿಸಬೇಕೆಂದು ಅಖಿಲ ಕರ್ನಾಟಕ ಪಿಂಜಾರ, ನದಾಫ್ ಮನ್ಸೂರಿ ಹಕ್ಕುಗಳ ಸಂಘದ ಪದಾಧಿಕಾರಿಗಳು ರಾಯಚೂರು ಜಿಲ್ಲಾಧಿಕಾರಿಗಳ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯದಲ್ಲಿ ಸುಮಾರು 30 ರಿಂದ 35 ಲಕ್ಷಗಳ ಜನಸಂಖ್ಯೆ ಹೊಂದಿರುವ ನದಾಫ್/ಪಿಂಜಾರ ಜನಾಂಗವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ, ರಾಜಕೀಯ ಹಾಗೂ ಹಲವಾರು ರಂಗಗಳಲ್ಲಿ ಅತ್ಯಂತ ಹಿಂದುಳಿದಿದೆ. ಕಡುಬಡತನದ ನೆರಳಲ್ಲಿ ಕಷ್ಟಕರ ಜೀವನವನ್ನು ನಡೆಸುತ್ತಿರುವ ಶೋಷಿತ ಸಮಾಜವಾಗಿದೆ ಎಂದು ತಿಳಿಸಿದರು.
ಸಮುದಾಯ ಹಿಂದುಳಿದ ಪ್ರವರ್ಗ-1 ರಲ್ಲಿ ಬರುತ್ತದೆ. ಆದರೆ ಸರ್ಕಾರದ ಯಾವುದೇ ಯೋಜನೆಗಳು ಈ ನಮ್ಮ ಜನಾಂಗಕ್ಕೆ ತಲುಪಿಸಿರುವುದಿಲ್ಲ. ಸರಕಾರದ ಯೋಜನೆಗಳಿಂದ ನಮ್ಮ ಸಮುದಾಯದವರು ವಂಚಿತರಾಗಿದ್ದಾರೆ. ಸುಮಾರು ವರ್ಷಗಳಿಂದ ನಮ್ಮ ಜನಾಂಗದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಬೇಕೆಂದು ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಹಿಂದಿನ ಬಿಜೆಪಿ ಸರ್ಕಾರ ಆಡಳಿತದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿರವರು ಪಿಂಜಾರ, ನದಾಫ್ ಹಾಗೂ ಇತರ 13 ಜಾತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಘೋಷಿಸಿದ್ದರು. ಆದರೆ ಈಗಿರುವ ಕಾಂಗ್ರೆಸ್ ಸರ್ಕಾರ ಇದುವರೆಗೆ ಯಾವುದೇ ರೀತಿಯಲ್ಲಿ ಸದರಿ ಜಾತಿಯವರಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ಚನ್ನಗಿರಿಯಲ್ಲಿ ಯುವಕನ ಕಸ್ಟಡಿ ಸಾವು: ಸತ್ಯಶೋಧನಾ ವರದಿ ಬಿಡುಗಡೆ
ಕಾಂಗ್ರೆಸ್ ಪಕ್ಷಕ್ಕೆ ಪಿಂಜಾರ ಸಮುದಾಯವು ಸಂಪೂರ್ಣ ಮತ ಚಲಾಯಿಸಿ ಅಧಿಕಾರಕ್ಕೆ ಬರಲು ಕಾರರ್ಣಕರ್ತರಾಗಿದ್ದೇವೆ. ಅಧಿಕಾರ ಬಂದು ವರ್ಷ ಕಳೆದರೂ ಕೂಡ ಜನಾಂಗಕ್ಕೆ ಇದುವರೆಗೆ ಯಾವುದೇ ಯೋಜನೆಗಳು ನೀಡಿಲ್ಲ. ಕಾಂಗ್ರೆಸ್‌ನವರು ಹಿಂದುಳಿದ ನಾಯಕರೆಂದು ಕೇವಲ ಭಾಷಣಗಳಲ್ಲಿ ಬಿಂಬಿಸಿಕೊಳ್ಳುತ್ತಾ ಇರುವುದು ವಿಪರ್ಯಾಸ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
