ರಾಜ್ಯ ಕಾಂಗ್ರೆಸ್ ಸರ್ಕಾರ ಜಿಂದಾಲ್ ಕಂಪನಿಗೆ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡಲು ಮುಂದಾಗಿರುವುದು ಜನವಿರೋಧಿ ನಿರ್ಧಾರ ಎಂದು ಆರ್‌ಪಿಐ ರಾಜ್ಯಾಧ್ಯಕ್ಷ ಸತೀಶ್ ಖಂಡಿಸಿದ್ದಾರೆ.
ರಾಜ್ಯ ಸರ್ಕಾರವು ಸುಮಾರು 3,667 ಎಕರೆ ಜಮೀನು ತೀರಾ ಕಡಿಮೆ ಬೆಲೆಗೆ ಜಿಂದಾಲ್ ಕಂಪನಿಗೆ ಮಾರಾಟ ಮಾಡಿದ್ದಾರೆ. ಆದರೆ ಅದಕ್ಕಿಂತ ಎರಡು ಪಟ್ಟು ಹಣದಿಂದ ಖರೀದಿಸಲು ರೈತರು ಸಿದ್ಧರಿದ್ದಾರೆ. ಜಿಂದಾಲ್‌ಗೆ ನೀಡುವ ಭೂಮಿ ರೈತರಿಗೆ ನೀಡಬೇಕುʼ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು .
ʼಕಳೆದ ಬಿಜೆಪಿ ನೇತ್ರತ್ವದ ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ಭೂಮಿ ನೀಡಲು ಮುಂದಾದ ವೇಳೆ ಅಂದು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿ ಸರ್ಕಾರದ ಮೇಲೆ ಒತ್ತಡ ಹೇರಿದ ಕಾರಣಕ್ಕೆ ಅದನ್ನು ಕೈಬಿಟ್ಟಿತ್ತು. ಈಗ ಅದೇ ಭೂಮಿಯಲ್ಲಿ ರೈತರು ಉತ್ತಮ ಬೆಳೆ ಬೆಳೆದಿದ್ದಾರೆ. ಜೋಳ, ತೆಂಗು ಸೇರಿದಂತೆ ಇತರೆ ಬೆಳೆ ಬೆಳಯುತ್ತಿದ್ದಾರೆ. ಇಂತಹ ಫಲವತ್ತಾದ ಭೂಮಿಯನ್ನು ಎಕರೆಗೆ 5 ಲಕ್ಷ ರೂ. ಕೊಟ್ಟು ಖರೀದಿಸಲು ನಾವು ಸಿದ್ಧರಿದ್ದೇವೆ, ನಮಗೆ ಕೊಡಿʼ ಎಂದು ಮನವಿ ಮಾಡಿದ್ದಾರೆ.
ಇಂತಹ ಫಲವತ್ತಾದ ಜಮೀನನ್ನು ರೈತರಿಗೆ ಕೊಡದೆ ಜಿಂದಾಲ್ ಕಂಪನಿಗೆ ನೀಡಲು ಸರ್ಕಾರ ಯಾವ ರೀತಿಯ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಈ ಭೂಮಿಯನ್ನು 1,22,000 ಲಕ್ಷ ರೂ.ಗೆ ಜಿಂದಾಲ್‌ಗೆ ನೀಡಿರುವುದರಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆʼ ಎಂದರು.
ʼರಾಜ್ಯದಲ್ಲಿ ಉದ್ಯೋಗ ಸೃಷ್ಟಿಸಲು ಬಹುರಾಷ್ಟ್ರೀಯ ಕಂಪನಿಗಳಿಗೆ ರಾಜ್ಯದ ಜಮೀನು ನೀಡುತ್ತಿದ್ದೀರಿ, ಆದರೆ ಇಲ್ಲಿಯ ಭೂಮಿ, ನೀರು, ವಿದ್ಯುತ್ ಪಡೆದು ಲಾಭ ಗಳಿಸುವ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ. ಆದರೆ ಸರ್ಕಾರಗಳು ಮಾತ್ರ ಇದರ ಬಗ್ಗೆ ಚಕಾರ ಎತ್ತುವುದಿಲ್ಲ. ಇಂತಹ ಜನವಿರೋಧಿ ನಿರ್ಧಾರ ಖಂಡಿಸಿ ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳ ನೇತ್ರತ್ವದಲ್ಲಿ ʼಜಿಂದಾಲ್ ಚಲೋʼ ಚಳವಳಿ ರೂಪಿಸಲಾಗುವುದುʼ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ; ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
ಈ ಸಂದರ್ಭದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ವೆಂಕಟರಾಮಪ್ಪ, ರಾಜ್ಯ ಸಮಿತಿ ಸದಸ್ಯ ಭಟ್ಟಿ ಎರ್ರಿಸ್ವಾಮಿ, ಯಾದಗಿರಿ ದಿಗ್ಗಿ, ವಿರೂಪಾಕ್ಷಪ್ಪ, ಜಿಲ್ಲಾ ಮುಖಂಡ ಹೇಮಂತ್ ರಾಜ್, ಬಳ್ಳಾರಿ ಜಿಲ್ಲಾಧ್ಯಕ್ಷ ಎಸ್.ನಾಗೇಶ್, ವಿಜಯನಗರ ಜಿಲ್ಲಾಧ್ಯಕ್ಷ ಸುಬಾನಿ, ಬಳ್ಳಾರಿ ನಗರ ಅಧ್ಯಕ್ಷ ಬೆಳ್ಳಿ ಕಟ್ಟೆಪ್ಪ, ಎಸ್.ಟಿ.ಘಟಕ ಜಿಲ್ಲಾಧ್ಯಕ್ಷ ಡಿ.ವೀರೇಶ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
