ಯುವ ಕವಯತ್ರಿ ಮಂಜುಳಾ ಹುಲಿಕುಂಟೆ ಅವರ ʼಹಿಪ್ಪೆ ಹೂವಿನ ಘಮಲುʼ ಕವನಸಂಕಲನಕ್ಕೆ ಹಿರಿಯ ಲೇಖಕಿ ದು. ಸರಸ್ವತಿ ಅವರು ಬರೆದಿರುವ ಮುನ್ನುಡಿ…
‘ದೀಪದುಳುವಿನ ಕಾತುರ’ದಲ್ಲಿ ಕವಿತೆ ಬರೆಯುವ ಕಾಯಕ ಆರಂಭಿಸಿದ ಮಂಜುಳಾ ಈಗ ‘ಹಿಪ್ಪೆ ಹೂವಿನ ಘಮಲನ್ನು ತನ್ನ ಎರಡನೆಯ ಸಂಕಲನದ ಮೂಲಕ ಮುಂದಿಕ್ಕಿದ್ದಾಳೆ. ಮಂಜುಳಾ ಮತ್ತು ಪ್ರಕಟಿಸುತ್ತಿರುವ ಡಾ. ಮಮತಾ ಕೆ.ಎನ್. ಅದಕ್ಕೊಂದು ಬೆನ್ನುಡಿ ಬರೆಯಲು ಹೇಳಿದರು. ಬೆನ್ನುಡಿ ಎಂದ ಮಂಜುಳಾ ಮುನ್ನುಡಿಯತ್ತ ಎಳೆದಳು. ಬೆನ್ನುಡಿಯೋ, ಮುನ್ನುಡಿಯೋ ಎಂಬ ಗೋಜಿಗೆ ಹೋಗದೆ ಹಿಪ್ಪೆ ಹೂವಿನ ಘಮಲಿನೊಳಗಿನ ಕವಿತೆಗಳ ಅಘ್ರಾಣಿಸಿ ಅನಿಸಿದ್ದಕ್ಕೆ ಅಕ್ಷರಗಳ ರೂಪ ಕೊಟ್ಟಿದ್ದೇನೆ.
ನಡೆದಷ್ಟೂ ಮುಗಿಯದ, ಸೆಣಸಿದಷ್ಟೂ ಹಣಿಯುವ, ಮುಗ್ಗರಿಸುವಾಗಲೆಲ್ಲ ಎತ್ತಿ ನಿಲ್ಲಿಸುವ ಬದುಕು ಸುಲಭದ್ದಲ್ಲ. ಇಂಥ ಬದುಕಿಗೊಂದು ಆಸರೆ ಬೇಕು- ಒರಗಲು, ಬೆರಗಾಗಲು, ಹುಡುಕಾಡಲು. ಇಂತಹ ಬದುಕನ್ನು ಸವೆಸಲೋ, ನಡೆಯಲೋ, ಜಯಿಸಲೋ, ಮುಗಿಸಲೋ ಅಂತೂ ಯಾವುದಕ್ಕೋ ದೇವರೋ, ದೈವವೋ, ಸಿದ್ಧಾಂತವೂ ಇನ್ನೂ ಏನೇನನ್ನೋ ನಂಬಿ, ಶ್ರದ್ದೆ-ಬದ್ಧತೆ ಇದ್ದೋ ಇಲ್ಲದೆಯೋ ಆತುಕೊಂಡಿರುತ್ತೇವೆ. ಹೊಡಿ, ಬಡಿ, ಕಾಡಿಸು ನಿನ್ನೇ ನಂಬಿರುವೆ ಎಂದು ಈ ಕವಿ ನೆಮ್ಮಿ, ನೆಚ್ಚಿರುವುದು ಪ್ರೇಮವನ್ನು. ಈ ಪ್ರೇಮ- ನೋವು ಸಂಕಟಗಳಿಗೆಲ್ಲಾ ಕೆಲವೊಮ್ಮೆ ದಿವ್ಯ ಔಷಧವಾದರೆ; ಕೆಲವೊಮ್ಮೆ ಸಂಕಟಕ್ಕೂ ಕಾರಣವಾಗುತ್ತದೆ. ಪೆಟ್ಟು ಕೊಟ್ಟು ಓಡಿಸಿದರೂ ಮತ್ತೆ ತಾಯಿಗೆ ಆತುಕೊಳ್ಳುವ ಮಗುವಂತೆ, ಹಠಹಿಡಿದು ರಚ್ಚೆ ಮಾಡಿ ತಾಯಿಯ ಗಮನ ಸೆಳೆವ ಮಗುವಂತೆ, ಬಂಗ ಪಟ್ಟರೂ ಸರಿಯೇ ನಿನ್ನ ಹಂಗೇಕೆ ಎಂದು ದೂರವಾಗುವ ಮಗುವಂತೆ, ಕತ್ತರಿಸಿಕೊಂಡರೂ ಮತ್ತೇ ತಾನೇ ಚಿಗುರುವೆನೆಂಬ ಹಠಮಾರಿಯಂತೆ, ನೀನಿಲ್ಲದೆ ನಾನುಂಟೇ ಎಂದು ಶರಣಾಗಿಬಿಡುವ ಮಗುವಂತೆ.. ಪ್ರೇಮಕ್ಕೆ ಆತುಕೊಂಡಿದ್ದಾಳೆ ಈ ಕವಿ. ಸಿಡಿದರೂ, ಬಡಿದಾಡಿದರೂ, ಕತ್ತರಿಸಿಕೊಂಡರೂ, ಏನೆಲ್ಲಾ ಆದರೂ ಪ್ರೇಮದ ನಂಟು, ಅಂಟೇ. ಬೆಳಕಿಗೆ ಬೆರಗಾಗಿ ಸುಟ್ಟುಕೊಂಡ ದೀಪದುಳುವೀಗ ಘಾಟು, ಘಮಲು, ಮತ್ತಿನ ಅಂಟಿಗೆ ಸಿಕ್ಕಿದೆ. ಅಂಟು ಒಮ್ಮೆ ಬಂಧನವೆನಿಸಿದರೆ ಮತ್ತೊಮ್ಮೆ ಬಿಡುಗಡೆ ಎನಿಸುತ್ತದೆ. ಹಿಡಿದಿಟ್ಟುಕೊಳ್ಳಬೇಕೆನಿಸುತ್ತದೆ, ತಾನೇ ಹಿಡಿತಕ್ಕೆ ಜಾರಿ ಬಿಡಬೇಕೆನಿಸುತ್ತದೆ. ಎಲ್ಲವನೂ ನೀಗಿಕೊಳ್ಳಲು ಕಾವ್ಯ ಈ ಕವಿಗೆ ರಹದಾರಿಯಾಗಿದೆ.
ಹಿಪ್ಪೆ ಹೂವಿನ ಘಮಲಿನೊಳಗಿನ ಕವಿತೆಗಳಲ್ಲೂ ಪ್ರೇಮ ಏನೆಲ್ಲಾ ಆಗಿದೆ ನೋಡಿ-
‘ಪ್ರೇಮಕ್ಕಿಂತ ದೊಡ್ಡ ಬಂಡಾಯ ಮತ್ತೊಂದಿಲ್ಲ!’ (ಪ್ರೇಮವೆಂಬ ಬಂಡಾಯ)
‘..ಎದೆಯಲ್ಲಿ ನೆತ್ತರು ಜಿನುಗುವಾಗ
ಪ್ರೇಮದ ಕವಿತೆ ಬರೆಯಬೇಕು..!’ (ನೆತ್ತರು ಜಿನುಗುವಾಗ)
ಪ್ರೇಮ ‘ಕಣ್ಕಟ್ಟು’, ‘ಸುಪ್ತ ಕನಸು’ ಆಗಿರುವಂತೆಯೇ, ‘ದೀರ್ಘ ನಿಟ್ಟುಸಿರಲಿ ಕಟ್ಟಿಡುವ ವ್ಯಾಖ್ಯಾನ’ವೂ ಆಗಿದೆ, ‘ಬಿಡುಗಡೆಯ ದಾರಿ ತೋರಿ ಜೊತೆಗೆ ನಡೆಯುವ’ ಜೊತೆಗಾರನೂ ಆಗಿದೆ. ಇಂತಹ ಪ್ರೇಮ ಹೆಸರಿಡಲೂ ವ್ಯಾಖ್ಯಾನಿಸಲೂ ಆಗದ್ದಾಗಿಯೂ ಉಳಿದಿದೆ.
ನೆತ್ತರಲೂ ನವಿಲಿನ ಚಿತ್ರ ಬರೆಯುವ ಹಠವಿದ್ದರೂ ದ್ವೇಷದೆದರು ಶರಣಾಗುವುದು ಪ್ರೇಮಕ್ಕೆ
‘..ಕ್ಷಮಿಸಿ
ನಾನೀಗ ನಿಮ್ಮ ದ್ವೇಷವನ್ನ
ಬದುಕುವ ಹಂತದಲ್ಲಿಲ್ಲ
ಎದೆಗಪ್ಪಿಕೊಳ್ಳುವ
ಪ್ರೇಮಕ್ಕೆ ಶರಣಾಗಿದ್ದೇನೆ…
ನನ್ನ ಅಂಗೈಗಂಟಿದ
ನನ್ನದೇ ನೆತ್ತರನಲ್ಲಿ ನವಿಲಿನ
ಚಿತ್ರ ಬರೆಯಬೇಕಿದೆ… (ಪ್ರೇಮಕ್ಕೆ ಶರಣಾಗಿದ್ದೇನೆ)
ಬಂಧನದ ಸೆಳೆತದ ಎದುರು ಪ್ರೇಮ ರೆಕ್ಕೆಯಾಗಬಯಸುತ್ತದೆ-
‘..ಬಂಧಿಯಾಗಬೇಡಾ
ಪ್ರೇಮ ರೆಕ್ಕೆ ಎಂದುಕೊಂಡವಳ ಪ್ರೇಮಿ ನೀನು
ಮೀರಲೇ ಬೇಕಿದ್ದರೇ ಅವಳನ್ನೂ ಮೀರಿಕೋ
ಅವಳ ರೆಕ್ಕೆಯ ಭಾರ ನೀನಾಗದಂತೆ
ಮತ್ತಷ್ಟು ಸುಧಾರಿಸಿಕೋ’ (ಪ್ರೇಮ ರೆಕ್ಕೆ ಎಂದುಕೊಂಡವಳ ಪ್ರೇಮಿಗೆ)
ಪ್ರೇಮದಲ್ಲಿ ಉಂಡ ನೋವಿಗೆ ಯಾವುದೂ ಸಮವಲ್ಲದೇ ಹೋದರೂ ಪ್ರೇಮಕ್ಕಾಗಿ ಮತ್ತೆ ಕಾಯುವ ಶ್ರದ್ಧೆ, ಹಂಬಲ ಕವಿಯದು-
‘..ಮತ್ತೆ ಮೊದಲಿನಂತೆ ಕಾಯಬಲ್ಲಳು ರಾಧೆ
ಕತ್ತರಿಸಿದ ಒಲವ ಕೊರಳಿಗೆ
ದೂರಾದ ದಾರಿಗಳಿಗೆ
ಸೋತ ಹೆಜ್ಜೆಗಳಿಗೆ
ರಾಧೆಯ ಒಡಲ ಸಂಕಟಕ್ಕೆ
ಮತ್ತೊಂದು ಜಗತ್ತು ಕೊಟ್ಟರೂ ಸಾಕಾಗುವುದಿಲ್ಲಾ…’
ಪ್ರೇಮಿ ಹಚ್ಚುವ ಕಿಚ್ಚೂ ಸಹ ಎದೆಯ ಕುಂಡದಲ್ಲಿ ನೆನಪಾಗಿ ಉರಿಯುತ್ತದೆ-
‘..ಜನ್ಮಜನ್ಮಗಳಿಗೂ
ಸಾಕೆನಿಸುವಷ್ಟು ಕಿಚ್ಚು ಹಚ್ಚಿ ಹೊರಟವನ
ನೆನಪಿನಲ್ಲುರಿವ ಎದೆಯ ಕುಂಡಕ್ಕೆ
ಇವನ ಜನ್ಮಾಷ್ಟಮಿಯೂ
ತುಪ್ಪ ಸುರಿಯುತ್ತದೇ…’ (ಜನ್ಮಾಷ್ಟಮಿ ಎಂಬ ಎದೆಯ ಅಗ್ನಿಕುಂಡ)
ದುಃಖ-ದುಮ್ಮಾನ, ಹಿಂಸೆ ಅಸಮಾನತೆಯ, ಪ್ರೇಮದ ಹಲವು ಅವತಾರಗಳ ಅಭಿವ್ಯಕ್ತಿಯಾದ ಕವಿತೆಯೂ ದುರಿತ ಕಾಲದಲ್ಲಿ ಕೈಕಟ್ಟಿ ಕೂರಬಹುದು ಇಲ್ಲ ನಿಕೃಷ್ಟವೂ ಆಗಿಬಿಡಬಲ್ಲದು, ನೀಲಿಗಟ್ಟಲೂಬಹದು.
‘..ಪ್ರೇಮಿಸಿದವರೆಲ್ಲರ ಕಣ್ಣು ತಲ್ಲಣಗಳ ತುಂಬಿಕೊಂಡಾಗ
ನಾಳಿನ ಆತಂಕಗಳ ನಡುವೆ ಸಿಲುಕಿ ನರಳುವಾಗ
ಪ್ರೇಮ ಕವಿತೆಗೆಲ್ಲಿಯ ಜಾಗ’ (ಪ್ರೇಮವೇ ಕ್ರೌರ್ಯವೆನಿಸುವಾಗ..)
‘..ಕವಿತೆ ಕಟ್ಟಲೂ ಕಸುವಿಲ್ಲದ
ಎದೆಯೊಳಗೆ…
ದುರಿತ ಕಾಲದಲ್ಲಿ
ಕವಿತೆಯೂ ಕೈಕೊಟ್ಟು
ಬದುಕೂ ಉಸಿರುಗಟ್ಟಿಸಿ ಕಾಡುತ್ತದೆ
ಹಾ
ನೋವೀಗ
ಹಾಳೆಗಿಳಿಯುವಷ್ಟು
ಹಗುರಲ್ಲ’ (ದುರಿತ ಕಾಲ)
ನೆಲದೊಳಗಡಗಿದ ನೀರ ಒರತೆಯಂತೆ
ನೆಲದ ಮೇಲೆಲ್ಲಾ ರಕ್ತದ್ದೇ ಹರಿವು
ರಕ್ತ ಶುದ್ಧಿಗಾಗಿಯೇ ರಕ್ತ ಸುರಿಸುವವರ
ಮತ್ತೆ ಮತ್ತೆ ಹೆರುತ್ತಲೇ ಇರುವ
ಭೂತಾಯಿ ಮುಡಿದ ಹೂ, ರಕ್ತದಲ್ಲರಳಿದ್ದೂ..
ಇಲ್ಲಿ ಹೂವಿಗೂ ರಕ್ತದ್ದೇ ಬಣ್ಣ
ಕವಿತೆ ನೀಲಿಗಟ್ಟುತ್ತದೆ.. (ಕವಿತೆ ಕೈ ಜಾರುತ್ತದೆ)
ಪ್ರೇಮದ ಅಮಲಿನಲೋ, ವೇದನೆಯಲೋ ಕಳೆದೇ ಹೋದಂತೆ ಎನಿಸಿದರೂ ಕವಿಯ ಎಚ್ಚರದ ಕಣ್ಣುಗಳಿಂದ ತಾರತಮ್ಯ, ಹಿಂಸೆ, ಅನ್ಯಾಯಗಳು ತಪ್ಪಿಸಿಕೊಳ್ಳುವುದಿಲ್ಲ. ದೇಶ, ಧರ್ಮ, ಜಾತಿ ಹೆಸರಿನಲಿ ಹೆಣ್ಣ ಬಲಿಕೊಡುವುದಕ್ಕೆ ತಣ್ಣಗೆ, ಕಡು ವ್ಯಂಗ್ಯದಲಿ ಪ್ರತಿರೋಧ ಒಡ್ಡುವುದನ್ನು ಕವಿತೆಗಳಲಿ ಕಾಣಬಹುದು-
‘..ಭೂಮಿಗಿಳಿದ ಮದ್ದುಗುಂಡುಗಳಿಗಿಂತಲೂ
ನೆಲದ ಹೆಣ್ಣುಗಳ ಎದೆಗಿಳಿದ
ನಂಜಿನ ನರಕ ದೊಡ್ಡದೇ
ಬೇಕಿದ್ದರೇ ನಮ್ಮದೇ ಮಣಿಪುರದ ಮೆರವಣಿಗೆ ನೋಡಿ’ (ಕವಿತೆ ಕೈ ಜಾರುತ್ತದೆ)
‘..ಮಿಥಿಲೆಯ ಅನಾಥ ಅರಸಿ
ಮಣ್ಣನ್ನೇ ತಾಯೆಂದ ತಬ್ಬಲಿ ಸೀತೆ
ಹಿಡಿ ಪ್ರೀತಿಯಲ್ಲದೇ
ಮತ್ತೇನ ಬಯಸಿ ಹಿಂದೆ ನಡೆದಳೋ ರಾಮ…
ಮತ್ತೊಬ್ಬಳು ಮೈಥಿಲಿ
ಒಲವಿಲ್ಲದವನೆದೆಯ ಮೂಲೆ ಮೂಲೆಯಲಿ
ತಾನಿಟ್ಟ ಹೂಮುತ್ತಿಗಾಗಿ ತಡಕುತ್ತಾಳೆ…!!’ (ಮತ್ತೊಬ್ಬಳು ಮೈಥಿಲಿ)
ಬೆವರಿಳಿಸಿ ದುಡಿದೂ ದಮನಿತರಾದವರು ಸುಳ್ಳುಗಳ ಸಂಕೋಲೆಯಿಂದ ಮುಕ್ತರಾದ ದಿನವೇ ಕವಿಗೆ ನೆಲದ ಮೊದಲ ಹಬ್ಬ
‘..ಹೆಣ್ಣು ಹೊನ್ನು ಮಣ್ಣಲ್ಲೆಕೂ
ಮಾಲೀಕರೆಂದು
ನೆಲದ ಮಕ್ಕಳ ನೆತ್ತರನೇ
ನೀರಾಗಿಸಿ
ಅವರ ಬೆವರಲ್ಲರಳಿದ
ಕಲ್ಲಿಗೆ ಮುಡಿಸಿ
ಮಡಿಯ ಹೆಸರಿನಲಿ ಊರ ಹೊರಗಿಡುತ್ತಾರೆ…
‘..ಸಂಕೋಲೆಗಳಿಂದ ಬಿಡಿಸಿಕೊಂಡ ದಿನ
ಈ ನೆಲದ ಮೊದಲ ಹಬ್ಬ’ (ನೆಲದ ನಿಜ ಹಬ್ಬ)
ಬಲೆಗೆ ಬೀಳು, ಇಲ್ಲ ಕತ್ತಿಗೆ ಕುತ್ತಿಗೆಯೊಡ್ಡು ಎಂದು ಬೊಗಸೆಯೊಡ್ಡಿ ಬೇಡುವ ‘ಕರುಣಾಮಯಿ’ ಬೇಟೆಗಾರನ ಹಿಂಸೆಗೂ ಜಗ್ಗದೆ ಉಳಿವ ಕವಿಗೆ ಕ್ಷುದ್ರ ಗ್ರಹದೊಳಗೂ ಇರುವ ಹೊಸ ಜಗದ ಅರಿವಿದೆ, ಹಾಗಾಗಿಯೇ ಅಣಕಿಸುವವರ ಬೆರಳ ತುದಿಯ ಬೆರಗಾಗಿ ಉಳಿಯಲು, ಹೊಸತುಗಳಿಗೆ ಎದೆಯ ಹದ ಮಾಡಿಕೊಳ್ಳಲು ತಿಳಿದಿದೆ.
‘..ಕ್ಷುದ್ರಗ್ರಹವೊಂದು ಹೊಸ ಜಗತ್ತಾಗುವಂತೆ
ಚೂರಾದ ಪ್ರತಿಭಾರೀ ಹೊಸದೊಂದು ಜಗತ್ತೇ ಆಗಿದ್ದೇನೆ
ಅಣಕಿಸುವವರ ಬೆರಳ ತುದಿಗೆ ಬೆರಗಾಗೇ ಉಳಿದಿದ್ದೇನೆ…
ಎಲ್ಲ ಹೊಸತುಗಳಿಗೆ ಎದೆಯ ಹದ ಮಾಡಿಕೊಂಡಿದ್ದೇನೆ
..ಸಿಕ್ಕಿಬಿದ್ದ ಮೊಲಗಳ ಮುಂದೆ
ಬೊಗಸೆಯೊಡ್ಡಿ ಬೇಡುತ್ತಾನೆ ಬೇಟೆಗಾರ
ಬಲೆಗೆ ಬಂದು ಬಿದ್ದುಬಿಡಿ, ಇಲ್ಲಾ ಕುತ್ತಿಗೆಗಳ
ಮೇಲಿಟ್ಟಿರುವ
ಕತ್ತಿಗಳಿಗೆ ಸಾಲಾಗಿ ನಿಂತು
ನಿಮ್ಮ ಕೊರಳ ಒಪ್ಪಿಸಿ
ಆಹಾ ಎಂಥಾ ಕರುಣಾಮಹಿ’ (ಆಹಾ ಎಂಥಾ ಕರುಣಾಮಹಿ)
ಜನಕವಿಯ ಸಾವು ಕವಿ ಮನಕೆ ಗಾಢವಾಗಿ ತಟ್ಟಿದಾಗ ಕವಿತೆ ಕರುಳ ಬಂಧವೊಂದರ ಕಳಕಳಿಯಾಗಿ ವಿದಾಯ ಹೇಳುತ್ತದೆ-
‘..ನಮ್ಮದೇ ಹಸಿವು ಅನ್ನಗಳ ಕುರಿತು
ಕಟ್ಟಿದ ಹಾಡೊಂದು
ಒಡಲ ಹಸಿವಿಗೆ ಅನ್ನ ನೀಡಿದ್ದು
ಕಣ್ಣುತುಂಬಿದ್ದು ಎಲ್ಲವೂ ನೆನಪಿದೆ…
ಇದು ಕವಿತೆಯಲ್ಲ ಸರ್
ಕರುಳ ಬಂಧವೊಂದರ ಕಳಕಳಿ…
ಎದೆಯ ಪಸೆಯನ್ನೆಲ್ಲಾ ಹಸನು ಮಾಡಿ
ನಿಮ್ಮ ಪದಗಳ ಬಿತ್ತಿಕೊಳ್ಳುತ್ತೇವೆ
ಉಳ್ಳವರ ಪಕ್ಕವೇ ನಿಂತು
ಪಕ್ಕನೆ ನಕ್ಕು ಅವರ
ಕ್ರೌರ್ಯಕ್ಕೊಂದು ಕನ್ನಡಿಯಾಗುತ್ತೇವೆ
ನಿಮ್ಮಂತೆ ಹೇಳಬೇಕಾದನ್ನೆಲ್ಲಾ ಹೇಳುತ್ತಲೇ
ನಿಮ್ಮನ್ನ ಕಾಯ್ದುಕೊಳ್ಳುತ್ತೇವೆ
ಹೋಗಿ ಬನ್ನಿ’ (ಡಾ.ಸಿದ್ದಲಿಂಗಯ್ಯನವರ ನೆನಪಿಗೆ ಬರೆದ ಕರುಳ ಬಂಧವೊಂದರ ಕಳಕಳಿ)
ಅಸ್ಪೃಶ್ಯಯರ ಬದುಕಿನಲ್ಲಿ ಊರು-ಕೇರಿ ಏಕಕಾಲಕ್ಕೆ ಬೆಚ್ಚನೆಯ ನೆನಪಾಗಿರುವಂತೆ, ಮಾಯದ ಗಾಯವೂ ಆಗಿರುತ್ತದೆ. ಅಲ್ಲಾಗುವ ಬದಲಾವಣೆಗಳು ತನ್ನ ಕುರುಹುಗಳನ್ನು ಕತ್ತರಿಸಿ ಹಾಕಿದರೂ ಗುರುತಿಗಾಗಿ ನಡೆಸುವ ಹುಡುಕಾಟಕೆ ಕತ್ತರಿಸಿ ಹಾಕಿದವರಿಗೂ ಏನೂ ದಕ್ಕದಿರುವ ಅರಿವೂ ಇದೆ
ಊರೆನ್ನುವ ಯಾವ
ಕುರುಹನ್ನೂ ಉಳಿಸಿಕೊಳ್ಳದ
ಅದೇ ನೆಲದಲ್ಲಿ
ನನ್ನ ಹುಟ್ಟನ್ನೇ
ಹುಡುಕಾಡುತ್ತೇನೆ…
ಉರುಳಿಬಿದ್ದ
ಹೊಂಗೇ ಮರಗಳ
ಕೊಂಬೆ ಕೊಂಬೆಗಳ ತುಂಬಾ
ಕೂಡಿಟ್ಟಿದ್ದ
ನನ್ನ ಗುರುತುಗಳನ್ನೂ
ಗುರುತುಗಳ ಕಾಪಿಟ್ಟುಕೊಂಡ
ಹಕ್ಕಿಗೂಡುಗಳನ್ನೂ
ಕನಿಕರವೇ ಇಲ್ಲದಂತೆ
ಕತ್ತರಿಸಿ ಕೆಡವಿದ ಅವರೆಲ್ಲಾ
ನೆರಳಿಲ್ಲದ ಅದೇ
ನೆಲದಲ್ಲಿ ನೆತ್ತರು ಕಾರುತ್ತಾ
ದಕ್ಕದ ಯಾವುದಕ್ಕಾಗೋ
ಕಾಯುತ್ತಿದ್ದಾರೆ…’ (ಊರು ಬಿಡುವ ಮೊದಲು)
ಒಲವು ಮತ್ತು ಒಲವ ಅಭಿವ್ಯಕ್ತಿಯಾದ ಕವಿತೆ ಮಾತ್ರವೇ ಅಮೂಲ್ಯವಾಗಿರುವ ಕವಿಗೆ, ಅವನ್ನು ಕಸಿದುಕೊಂಡಾಗಲೂ ಕುಸಿಯದೇ ನಿರಾಳವಾಗುವ ಕಸುವು ಕವಿತೆಗಿದೆ-
‘..ಅವರು ಕಸಿದು ಕೊಳ್ಳಲು ನೋಡುತ್ತಾರೆ
ಖಾಲಿ ಎದೆಯೊಳಗೆ ಕೂಡಿಟ್ಟ ಜೋಡಿ ಕವಿತೆ..
ಮುಚ್ಚಿಟ್ಟು ಬದುಕಿಗಿಷ್ಟು ಉಳಿಸಿಕೊಂಡ ಒಲವು
ಬೆನ್ನಿಗೆ ಕಟ್ಟಿಕೊಂಡ ನೆನಪ ಜೋಳಿಗೆಯನ್ನೂ.. ..
ಅದ್ಯಾಕೋ..
ನಾನಂತೂ
ಅವರು ಕದ್ದಷ್ಟೂ ಹಗುರಾಗುತ್ತೇನೆ
ಕಸಿದುಕೊಂಡಷ್ಟೂ ನಿರಾಳವಾಗುತ್ತೇನೆ…’ (ಅವರು ಕದಿಯಲೆತ್ನಿಸುತ್ತಾರೆ)
ಕಸಿದರೂ ಖಾಲಿಯಾಗದೆ ಉಳಿವುದು ಕೊಡುವುದಷ್ಟನ್ನೇ ಬಲ್ಲ ಪ್ರೀತಿಗಷ್ಟೇ ಸಾಧ್ಯವೆಂಬ ಅರಿವನ್ನು ಕವಿತೆಯಲ್ಲಿ ಕಾಣಬಹದು-
‘..ಪ್ರೀತಿಸುವುದೆಂದರೆ
ಕೈತುತ್ತಿಟ್ಟು, ನೋವಿಗೆ ಹೆಗಲಾಗಿ
ಮರುಗಿದಾಗಲೆಲ್ಲಾ ಮಡಿಲಾಗುವುದಷ್ಟೇ…’ (ಒಮ್ಮೊಮ್ಮೆ ಪ್ರೀತಿಗೆ ಬೀಳುತ್ತೇನೆ)
ಪ್ರೇಮದಲ್ಲಿ ತನಗೂ ಪಾಲಿದೆ ಎಂಬ ನಂಬಿಕೆಯೇ ಎಲ್ಲವನೂ ದಾಟಿ, ಹಾರುವ ಭರವಸೆಯಾಗುವುದನ್ನು ಕವಿತೆಗಳಲ್ಲಿ ಕಾಣಬಹುದು.
‘..ಯಾವುದೋ ಪ್ರೇಮವೊಂದು
ನಾಳೆ ನನ್ನ ಪಾಲಿಗೂ ಇದೆ ಎಂದೇ
ನೋವುಗಳ ದಾಟಿಕೊಂಡಿದ್ದೇನೆ
ಏಕಾಂತದ ಆಳದಲ್ಲಿ
ಹುದುಗಿದ್ದವಳಿಗೆ ಹಾರಲು ಕಲಿಸಿದ
ಪ್ರೇಮವೀಗ ಅವಳ ಬೆನ್ನಿನ ರೆಕ್ಕೆ’ (ಪ್ರೇಮವೆಂಬ ರೆಕ್ಕೆ)
ಒಳಗಿನ ಲೋಕವೋ ಹೊರಗಿನ ಲೋಕವೋ ಅಂತೂ ಉತ್ಕಟತೆಯ ಭಾವವೇ ಎಲ್ಲಾ ಕವಿತೆಗಳಲ್ಲೂ ಕೆಲವೊಮ್ಮೆ ಇಣುಕಿ, ಕೆಲವೊಮ್ಮೆ ಆರ್ದ್ರವಾಗಿ, ಕೆಲವೊಮ್ಮೆ ಗಾಢವಾಗಿ ಹಿಪ್ಪೆ ಹೂವಿನ ಘಮಲು, ಘಾಟು, ಗಂಧ, ಮತ್ತಿನಂತೆ ವ್ಯಾಪಿಸಿಕೊಂಡಿದೆ.
‘ಇವಳು ಹಿಪ್ಪೆ ಹೂವು
ಘಮಲು, ಘಾಟು, ಗಂಧ, ಮತ್ತು ಹೊತ್ತು
ನೆಲವ ಆವರಿಸುತ್ತಾಳೆ’ (ಹಿಪ್ಪೆ ಹೂವು ಮತ್ತವಳು)
‘ಬೆಳಕು ತೀಡಿ ಬದುಕ ಹಾದಿಗೆ ತಂದು ಬಿಟ್ಟವನ ಸನಿಹ’ವೂ ಕವಿಗೆ ಹಿಪ್ಪೆ ಹೂವಿನಂತೆ ಹಿತ
‘ಹಿಪ್ಪೆ ಹೂವಿನ ಘಮಲು
ಹಿತ್ತಲಾವರಿಸಿ
ಕತ್ತಲಾದ ಸಂಜೆ
ಇವನು ಎದುರಾದ..
ಮನದ ಕತ್ತಲೆಗೆ
ಬೆಳಕು ತೀಡಿ
ಬದುಕ ದಾರಿಗೆ ತಂದು ಬಿಟ್ಟ..
ಬದುಕೀಗ ಇವನ ಋಣ..
ಇವನ ಸನಿಹಕ್ಕದೇ
ಹಿಪ್ಪೆ ಹೂವಿನ ಹಿತ’ (ಹಿಪ್ಪೆ ಹೂವಿನ ಘಮಲು)
ಘಮಲು, ಘಾಟು, ಗಂಧ, ಮತ್ತು ಹೊತ್ತು ಹಿಪ್ಪೆ ಹೂ ಅರಳಿ ಗಂಧವಾಗುವುದು ಅರೆಕಾಲವಷ್ಟೆ. ಅದಕ್ಕಾಗಿ ಬಿಸಿಲು, ಬೇಗೆ, ಬಿರುಗಾಳಿ, ಮಳೆಗೆ ಎದೆಕೊಟ್ಟು ನಿಲ್ಲುವುದು ಹಲವು ಕಾಲ. ಯಾಕೆಂದರೆ ಅದು ಒಡಲಲಿ ಹೊತ್ತಿರುವುದು ಮರವಾಗುವ ಬಸಿರು ಬೀಜವ. ಮಾಗಿ ಕಳಿತು ಉದುರಿ ಮೊಳೆತ ಬೀಜ, ಬೇರು ಊರಿದಷ್ಟೂ ಆಕಾಶಕ್ಕೆ ಚಾಚುವ ಮರವಾಗುತ್ತದೆ. ಬಿಸಿಲು, ಗಾಳಿ, ಮಳೆಗಳು ಬಸಿರ ಕಸುವಾದರೆ ಘಾಟು, ಘಮಲು, ನಶೆ ಬಸಿರು ಬೆಳೆಯುವ ಗುರುತುಗಳು. ದುಃಖ-ದುಮ್ಮಾನ, ನೋವು-ಸಂಕಟ, ನಿಂದನೆ ಅಪಮಾನಗಳೆಲ್ಲ ವ್ಯಸನಗಳಾಗದೆ ಬೆಳೆದು ನೆರಳಾಗುವ ಕಸುವೇ ಆಗಬೇಕು. ಆರಂಭದಿಂದಲೇ ಕಾವ್ಯವನ್ನು ಗಂಭೀರ ಕಸುಬಾಗಿಸಿಕೊಂಡಿರುವ ಮಂಜುಳಾ ಬೆಳೆದು ನೆರಳಾಗಲೆಂದು ಮನದುಂಬಿ ಹಾರೈಸುವೆ.
ದು.ಸರಸ್ವತಿ