ಚಿತ್ರದುರ್ಗ | ಭಾರೀ ಮಳೆಗೆ ನಲುಗಿದ ನಿವಾಸಿಗಳು; ಸ್ಥಳೀಯ ಆಡಳಿತ ನಿರ್ಲಕ್ಷ್ಯ, ಆರೋಪ

Date:

Advertisements

ಅತ್ಯಂತ ಕಡಿಮೆ ಬೀಳುವ ಪ್ರದೇಶ, ಬರದ ನಾಡು ಎಂದೇ ಹೆಸರಾದ ಬಯಲುಸೀಮೆ ಚಳ್ಳಕೆರೆಯಲ್ಲಿ ಅತಿಹೆಚ್ಚು ಮಳೆ ಬೀಳುವುದೇ ಅಪರೂಪ. ಅತಿ ಹೆಚ್ಚು ಮಳೆ ಬಂದರೂ ನೆರೆಯಂತೂ ಕನಸಿನ ಮಾತು. ಆದರೆ ಆಗಸ್ಟ್ 20ರ ಸಂಜೆಯಿಂದ ಸುರಿದ ಭಾರೀ ಮಳೆಗೆ ಚಳ್ಳಕೆರೆ ನಗರ ಪ್ರದೇಶ ಮತ್ತು ರಹೀಂ ನಗರ ಪ್ರದೇಶದ ನಿವಾಸಿಗಳು ನೆರೆಯನ್ನು ಅಕ್ಷರಶಃ ಅನುಭವಿಸಿದ್ದುಂಟು.

ಅಲ್ಲಿಯ ನಿವಾಸಿಗಳು ಅಂದು ರಾತ್ರಿ ಊಟ ಮುಗಿಸಿ ನಿದ್ರೆಗೆ ಜಾರುವ ಸಮಯ. ಎಲ್ಲರೂ ಮಲಗಲು ತಯಾರಾಗುತ್ತಿದ್ದರು. ಹೊರಗಡೆ ಧೋ…. ಎಂದು ಸುರಿಯುತ್ತಿರುವ ಮಳೆಯ ಅಬ್ಬರ. ರಾಜಕಾಲುವೆಯ ಪಕ್ಕದಲ್ಲಿರುವ ಮೊದಲನೇ ಸಾಲಿನಲ್ಲಿ ಇರುವ ತಗ್ಗಿನ ಪ್ರದೇಶದ ಮನೆಗಳಲ್ಲಿರುವವರಿಗೆ ಸಣ್ಣದಾಗಿ ಕಾಲಕೆಳಗೆ ನೀರು ಬರಲು ಪ್ರಾರಂಭಿಸಿದೆ. ಮನೆಯ ಹಿರಿಯರಲ್ಲಿ ಏನೋ ಒಂದು ಬಗೆಯ ಆತಂಕ ಶುರುವಾಗಿದೆ. ಬರುಬರುತ್ತ ನೀರು ಏರಿಕೆಯಾಗಿದ್ದು, ಅಲ್ಲಿನ ಪ್ರದೇಶದ ಬಹುತೇಕ ಮನೆಗಳು ರಾಜಕಾಲುವೆಯಿಂದ ಹೊರ ನುಗ್ಗಿದ ನೀರಿನಿಂದ ಆವೃತವಾಗಿವೆ.

ಆಯಿಲ್ ಸಿಟಿ ಎಂದೇ ಹೆಸರಾಗಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರ ಆಗಸ್ಟ್ 20ರ ರಾತ್ರಿ ಸುರಿದ ಭಾರೀ ಮಳೆಗೆ ಅಕ್ಷರಶಃ ಮಲೆನಾಡಿನ ಸ್ವರೂಪ ಪಡೆದಿದೆ. ಅದರಲ್ಲೂ ರಾಜಕಾಲುವೆಯ ಅಕ್ಕಪಕ್ಕದ ಪ್ರದೇಶ ಮತ್ತು ಅಲ್ಲಿನ ಮನೆಗಳ ನಿವಾಸಿಗಳು ನಲುಗಿ ಹೋಗಿದ್ದು, ಯಾವಾಗ ಮನೆಯೊಳಗೆ ನೀರು ನುಗ್ಗುವುದೋ ಏನೋ ಎಂಬ ಆತಂಕ ಕೆಲವರದಾದರೆ, ನುಗ್ಗಿರುವ ನೀರು ಯಾವಾಗ ಕಡಿಮೆಯಾಗುತ್ತದೋ ಎಂದು ರಾತ್ರಿ ಇಡೀ ನೀರಿನಲ್ಲೇ ಜೀವ ಬಿಗಿಹಿಡಿದು ಕುಳಿತು ಕಾಲ ದೂಡುವ ಶೋಚನೀಯ ಪರಿಸ್ಥಿತಿ ಎದುರಾಗಿತ್ತು.

Advertisements

ಅಲ್ಲಿನ ನಿವಾಸಿಗಳು ಹೇಳುವ ಪ್ರಕಾರ ಆಗಸ್ಟ್ 20ರ ರಾತ್ರಿ ಸುಮಾರು 9-30ರ ಸಮಯಕ್ಕೆ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹೋಗದೆ ಮನೆಯೊಳಕ್ಕೆ ನುಗ್ಗಲು ಪ್ರಾರಂಭಿಸಿದೆ. ನುಗ್ಗಿದ ನೀರು ಕ್ರಮೇಣ ಏರಿಕೆಯಾಗಿ ಮರುದಿನ ಬೆಳಿಗ್ಗೆ 12 ಗಂಟೆಯವರೆಗೂ ಬಹಳಷ್ಟು ಮನೆಗಳಲ್ಲಿ ಮೂರು ಅಡಿಯವರಿಗೆ ನೀರು ತುಂಬಿತ್ತು. ಮಕ್ಕಳು, ವೃದ್ಧರೊಂದಿಗೆ ಮನೆ ಮಂದಿ ಮಂಚದ ಮೇಲೆ, ಅಕ್ಕಪಕ್ಕದವರ ತಾರಸಿಗಳಲ್ಲಿ, ದಿಬ್ಬಗಳಿಗೆ ಹೋಗಿ ಕುಳಿತು ರಾತ್ರಿ ಪೂರ್ತಿ ನಿದ್ದೆ ಇಲ್ಲದೆ ಕಾಲ ದೂಡಿದ ಪರಿಸ್ಥಿತಿಯನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ.

ಇತ್ತೀಚೆಗೆ ಭಾರೀ ಮಳೆಯಿಂದ ವೈನಾಡು, ಶಿರೂರುಗಳಲ್ಲಿ ಆದ ಅನಾಹುತಗಳನ್ನು ನೋಡಿದವರಿಗೆ ಅದೇ ಸ್ಥಿತಿಯಲ್ಲಿ ಕಾಲ ಕೆಳಗೆ ನೀರು ಇರುವ ಅವರ ಸ್ಥಿತಿ, ಮನೋಸ್ಥೈರ್ಯ, ಆತಂಕ ಸೇರಿ ಹೇಗಾಗಿರಬಹುದು. ಅವರ ಬದುಕು ಅಕ್ಷರಶಃ ನರಕವಾಗಿದೆ.‌ ಕುಡಿಯಲು ನೀರಿಲ್ಲ, ಬಟ್ಟೆ ಬರೆ ನೀರಿನಲ್ಲಿ ಮುಳುಗಿವೆ, ಮನೆಯಲ್ಲಿ ಇಟ್ಟಿದ್ದ ರಾಗಿ, ಅಕ್ಕಿ, ದವಸ-ಧಾನ್ಯಗಳು ನೀರುಪಾಲಾಗಿದ್ದು, ಮುಗ್ಗಾಗಿ ಹಾಳಾಗಿವೆ. ಚೀಲದಲ್ಲಿ ನೆನೆದು ಕೊಳೆಯುತ್ತಿರುವ ಸ್ಥಿತಿ ಕಂಡುಬಂದಿತ್ತು.

ಅಲ್ಲಿನ ಗೃಹಿಣಿಯರು ಈ ದಿನ.ಕಾಮ್‌ನೊಂದಿಗೆ ಅಳಲು ತೋಡಿಕೊಂಡಿದ್ದು, “ಮಳೆ ಬಂದ ಮರುದಿನ ಕುಡಿಯಲು ನೀರಿಲ್ಲ, ಮನೆಗಳಲ್ಲಿ ತಿನ್ನಲು, ಅಡುಗೆ ಮಾಡಿಕೊಳ್ಳಲು, ಮಕ್ಕಳಿಗೆ ಕೊಡಲು ಕೆಲ ಮನೆಗಳಲ್ಲಿ ಏನೂ ಇಲ್ಲದಂತಾಗಿದ್ದು, ಮೇಲಿನ ಮನೆಗಳವರು ಕೆಲವರು ಸಹಾಯದ ಹಸ್ತ ಚಾಚಿದ್ದಾರೆ. ಕೆಲವರು ಊಟಕ್ಕೆ ಹೋಟೆಲ್‌ಗಳ ಮೊರೆ ಹೋಗಿದ್ದಾರೆ” ಎಂದು ತಿಳಿಸಿದ್ದಾರೆ.

“ಇಷ್ಟೆಲ್ಲ ಘಟನೆ ನಡೆದರೂ ಬೆಳಿಗ್ಗೆ ಹತ್ತು ಗಂಟೆಯ ತನಕ ಯಾವುದೇ ಜನಪ್ರತಿನಿಧಿಗಳೂ ಕೂಡಾ ಇವರ ರಕ್ಷಣೆಗೆ ಧಾವಿಸಿಲ್ಲ. ಬೇರೆ ಸೂರಿನ ಅಥವಾ ಗಂಜಿ ಕೇಂದ್ರದ ವ್ಯವಸ್ಥೆ ಮಾಡಿಲ್ಲ. ಕನಿಷ್ಠ, ಊಟಕ್ಕೆ ಆಹಾರ ಧಾನ್ಯಗಳನ್ನಾದರೂ ಪರಿಹಾರವಾಗಿ ಕೊಡುವ ವ್ಯವಸ್ಥೆ ಮಾಡಿಲ್ಲ. ಅಧಿಕಾರಿಗಳು, ಶಾಸಕರು ಹಾಗೂ ಜನಪ್ರತಿನಿಧಿಗಳು ಅಸಡ್ಡೆ ತೋರಿದ್ದು, ನಿರ್ಲಕ್ಷ್ಯ ವಹಿಸಿದ್ದಾರೆ. ಇಂತ ಆಡಳಿತದ ಲಜ್ಜೆಗೇಡಿತನಕ್ಕೆ ಧಿಕ್ಕಾರವಿರಲಿ” ಎಂದು ಸ್ಥಳೀಯರು ಛೀಮಾರಿ ಹಾಕಿದ್ದಾರೆ.

ಸಂತ್ರಸ್ತ ಗೃಹಿಣಿ ರಾಧಮ್ಮ ಹೇಳುವ ಪ್ರಕಾರ, “ಸುಮಾರು ಮೂರು ಅಡಿ ನೀರು ಮನೆಯೊಳಗೆ ನುಗ್ಗಿ ಇಡೀ ರಾತ್ರಿ ನೀರು ಕಡಿಮೆಯಾಗಲೇ ಇಲ್ಲ.‌ ಸೊಂಟದ ಮಟ್ಟಕ್ಕೆ ನೀರು ಏರಿಕೆಯಾಗಿದೆ. ಬಟ್ಟೆ ಬರೆ ಕಾಳುಗಳು ನೀರಿನಲ್ಲಿ ಮುಳುಗಿವೆ. ನಂತರ ಮರುದಿನ ಬೆಳಿಗ್ಗೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರು ಭೇಟಿ ನೀಡಿದರು. ಆದರೆ ಏನೂ ಪರಿಹಾರವಾಗಿಲ್ಲ. ಮುಂದೆ ಇರುವ ಒಂದೆರಡು ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಹೋಗಿದ್ದಾರೆ. ಆದರೆ ಹಿಂದೆ ಸಾಕಷ್ಟು ಹಾನಿಗಳಾಗಿರುವವರ ಮನೆಗಳಿಗೆ ಭೇಟಿ ನೀಡಿಲ್ಲ, ಅವರ ಅಹವಾಲು ಆಲಿಸಿಲ್ಲ. ಪರಿಹಾರ ನೀಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಬ್ಬ ಗೃಹಿಣಿ ಶಾಂತಮ್ಮ ಮಾತನಾಡಿ, “ರಾತ್ರಿಯೆಲ್ಲ ನೀರು ನಿಂತಿದ್ದು, ರಾಜಕಾಲುವೆಯಲ್ಲಿ ಗಿಡಗಂಟಿ ತೆರವುಗೊಳಿಸಿದ ಮೇಲೆ ಬೆಳಿಗ್ಗೆ 12 ಗಂಟೆ ಸುಮಾರಿಗೆ ನೀರು ಇಳಿಕೆಯಾಗಿದೆ. ಬಹಳ ವರ್ಷಗಳ ಹಿಂದಿನಿಂದಲೂ ಇದೇ ರೀತಿ ನೀರು ನುಗ್ಗಿದಾಗ ಆಗಿನ ಜನಪ್ರತಿನಿಧಿಗಳು ಅಲ್ಪಸ್ವಲ್ಪ ಅಕ್ಕಿ ಬೇಳೆ, ಮಕ್ಕಳಿಗೆ ಪೆನ್ನು ಪುಸ್ತಕಗಳನ್ನು ಪರಿಹಾರವಾಗಿ ನೀಡಿದ್ದರು. ಆದರೆ ಈ ಬಾರಿ ಯಾರೂ ಕೂಡ ಯಾವುದೇ ಪರಿಹಾರವನ್ನು ನೀಡಿಲ್ಲ. ಬಂದು ಸಮಸ್ಯೆ ಆಲಿಸಿಲ್ಲ” ಎಂದು ದುಗುಡ ವ್ಯಕ್ತಪಡಿಸಿದರು.

WhatsApp Image 2024 08 30 at 4.30.16 PM

ಮಳೆ ಸಂತ್ರಸ್ತರಾದ ವಾಣಿ ಮತ್ತು ಭಾಗ್ಯಮ್ಮ ಮಾತನಾಡಿ, “ಮಳೆ ಹೆಚ್ಚಾದಾಗಲೆಲ್ಲ ಇದೇ ರೀತಿ ಸಮಸ್ಯೆ ಇದೆ. ಈ ಬಾರಿ ಹೆಚ್ಚು ಮಳೆಯಾದ ಕಾರಣ ಹೆಚ್ಚು ನೀರು ನುಗ್ಗಿದೆ. ನೆಪ ಮಾತ್ರಕ್ಕೆ ಕೆಲ ಅಧಿಕಾರಿಗಳು ಭೇಟಿ ನೀಡಿದ್ದಾರೆ.‌ ಯಾವುದೇ ಪರಿಹಾರ ಒದಗಿಸಿಲ್ಲ. ಬಹಳ ವರ್ಷಗಳಿಂದ ಸರಿಪಡಿಸಲು ಮನವಿ ನೀಡಿದರೂ ಯಾವುದೇ ಕೆಲಸವಾಗಿಲ್ಲ. ನೀರಿನಲ್ಲಿ ಮುಳುಗಿ ಹಾಳಾದ ಅಕ್ಕಿ ಕಾಳುಗಳನ್ನು ಬಿಸಾಕುವಂತಾಗಿದೆ. ಆಹಾರದ ಕಿಟ್ಟುಗಳನ್ನೂ ಕೂಡ ಪರಿಹಾರವಾಗಿ ನೀಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳೆಯಿಂದಾಗಿ ಮನೆಗೋಡೆಗಳು ಸುಮಾರು ಮೂರು ಅಡಿಗಳವರೆಗೆ ನೆನೆದು ನಿಂತಿದ್ದ ಸ್ಥಿತಿ ಕಂಡುಬಂದಿದೆ. ಅಲ್ಲಿನ ಗೃಹಿಣಿಯರು ಚೀಲದಲ್ಲಿ ತೋಯ್ದಿದ್ದ ಅಕ್ಕಿ ಬೇಳೆಕಾಳುಗಳನ್ನು ತೋರಿಸಿ ಅಳಲನ್ನು ತೋಡಿಕೊಂಡರು. ತೋಯ್ದ ಬಟ್ಟೆ ಬರೆಗಳನ್ನು ಹೊರಗೆ ಒಣಗಲು ಹಾಕಿದ್ದ ದೃಶ್ಯಗಳು ಕಂಡುಬಂದವು.

WhatsApp Image 2024 08 30 at 4.33.39 PM

ಮನೆಯೊಂದರಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿರುವ ಅಜ್ಜಿ ಕಾಳಮ್ಮನ ಮನೆಗೆ ಹಿಂದಿನಿಂದ ಹಳ್ಳದ ನೀರು ನುಗ್ಗಿದ್ದು, ಅಕ್ಷರಶಃ ಮನೆ ಬಿದ್ದುಹೋಗುವ ಸ್ಥಿತಿಗೆ ಬಂದಿದೆ. ಬಿದ್ದಿದ್ದ ಮನೆಯನ್ನು ಸ್ವಚ್ಛ ಮಾಡಲಾಗದೆ, ಬಾಗಿಲಲ್ಲಿ ಕುಳಿತು ಬಂದವರ ಬಳಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದ 75ರ ಇಳಿ ವಯಸ್ಸಿನ ವೃದ್ದೆ ರೋಧನ ವ್ಯಕ್ತಪಡಿಸಿದ್ದಾರೆ.

ನಿವಾಸಿ ಲೀಲಮ್ಮ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಇದಕ್ಕೆಲ್ಲ ಕಾರಣ ಅಲ್ಲಿನ ರಾಜಕಾಲುವೆ ಒತ್ತುವರಿಯಾಗಿದ್ದು, ಅವೈಜ್ಞಾನಿಕವಾಗಿದೆ. ಅಲ್ಲದೆ ಹೂಳು ತುಂಬಿದ್ದು, ಗಿಡಗಂಟಿಗಳು ಪ್ಲಾಸ್ಟಿಕ್, ಕಸ ತುಂಬಿಕೊಂಡಿದೆ. ಅಕ್ಕ ಪಕ್ಕದಲ್ಲಿ ತಡೆಗೋಡೆಯಿಲ್ಲ. ಕಸ ಕಡ್ಡಿ, ಪ್ಲಾಸ್ಟಿಕ್, ಹೂಳು ತುಂಬಿರುವ ಕಾರಣ ರಾಜಕಾಲುವೆಯಲ್ಲಿ ನೀರು ಮುಂದೆ ಸರಾಗವಾಗಿ ಸಾಗಲಾರದೆ ತಗ್ಗಿನ ಪ್ರದೇಶಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ. ಬಹಳಷ್ಟು ಬಾರಿ ಶಾಸಕರಿಗೆ, ನಗರಸಭೆಯವರ ಗಮನಕ್ಕೆ ತಂದರೂ ಕೂಡಾ ಯಾವುದೇ ಪರಿಹಾರವಾಗಿಲ್ಲ. ಅರ್ಧಕ್ಕೆ ನಿಲ್ಲಿಸಿರುವ ರಾಜಕಾಲುವೆ ತಡೆಗೋಡೆ ಪೂರ್ಣಗೊಳಿಸುವಂತೆ ಮನವಿ ಮಾಡಿದರೂ ಕಿವಿಗೊಟ್ಟಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

WhatsApp Image 2024 08 30 at 4.33.39 PM 1

ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಅಲ್ಲಿನ ಸ್ಥಳೀಯ ಅಜ್ಜಯ್ಯ, “ಇಲ್ಲಿನ ರಾಜಕಾಲುವೆಗೆ ಕಟ್ಟಿರುವ ತಡೆಗೋಡೆ ಅರ್ಧಂಬರ್ಧವಾಗಿದ್ದು, ಪೂರ್ತಿಗೊಳಿಸಿ ಹೂಳು ತೆಗೆದರೆ ನೀರು ಸರಾಗವಾಗಿ ಮುಂದೆ ಹೋಗುತ್ತದೆ. ತಡೆಗೋಡೆಯ ಕಾಮಗಾರಿಯನ್ನು ಅರ್ಧಂಬರ್ಧಕ್ಕೆ ನಿಲ್ಲಿಸಿ ಏಳೆಂಟು ವರ್ಷಗಳಾಗಿವೆ. ಇದನ್ನು ಪೂರ್ತಿಗೊಳಿಸಲು ಸಮಸ್ಯೆ ಪರಿಹಾರ ಮಾಡಿಕೊಡಲು ಹಲವು ಬಾರಿ ಮನವಿ ಸಲ್ಲಿಸಿದರೂ ಶಾಸಕರಾಗಲಿ, ಅಧಿಕಾರಿಗಳಾಗಲಿ, ಸ್ಥಳೀಯ ಜನ ಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂತ್ರಸ್ತ ನಿವಾಸಿ ಕೃಷ್ಣಮೂರ್ತಿ ಮಾತನಾಡಿ, “ಇಷ್ಟೆಲ್ಲಾ ಅವಾಂತರ ಆದರೂ, ನೀರು ನುಗ್ಗಿ ನಮ್ಮ ಬದುಕು ಬೀದಿಗೆ ಬಂದಿದ್ದರೂ ನಾವು ಬದುಕಿದ್ದೆವೊ, ಸತ್ತಿದ್ದೇವೋ ಎಂದು ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ತಿರುಗಿಯೂ ನೋಡಿಲ್ಲ. ಅಸಲಿಗೆ ಅವರ ಮುಖವನ್ನು ಇತ್ತೀಚೆಗೆ ನಾವು ನೋಡಿಯೇ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

WhatsApp Image 2024 08 30 at 4.33.38 PM

ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮಹೇಶ್ ಮಾತನಾಡಿ, “ಟೌನ್ ಭಾಗದ ಮಳೆನೀರು ಮತ್ತು ಚರಂಡಿಯ ನೀರು ಇದೇ ರಾಜಕಾಲುವೆಗೆ ಹರಿದು ಮುಂದೆ ಸಾಗುತ್ತದೆ. ರಾಜಕಾಲುವೆ ಒತ್ತುವರಿ, ಪ್ಲಾಸ್ಟಿಕ್ ಹಾಗೂ ಇತರ ಹೂಳು ತುಂಬಿ, ಗಿಡಗಂಟಿಗಳು ಬೆಳೆದು, ತಡೆಗೋಡೆ ಇಲ್ಲದ ಕಾರಣ ರಹೀಮ್ ನಗರದಂತ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ.‌ ಇಲ್ಲಿನ ಸೇತುವೆಗಳು ರಸ್ತೆಗಳಿಗಿಂತ ಕೆಳಮಟ್ಟಕ್ಕಿದ್ದು, ಸೇತುವೆಗಳಲ್ಲಿ ಕಸ ಕಡ್ಡಿ ಕಟ್ಟಿಕೊಂಡು ಸೇತುವೆ ಮೇಲೆ ನೀರು ಹರಿಯುತ್ತದೆ. ಇಂತಹ ಕೊಳಚೆ ನೀರನ್ನು ಶುದ್ಧೀಕರಿಸದೆ ಕೆರೆಗಳಿಗೆ ಬಿಡುತ್ತಿದ್ದು, ಕೆರೆಗಳು ಕೂಡಾ ಕೊಳಚೆ ಪ್ರದೇಶಗಳಾಗಿ ಮಾರ್ಪಟ್ಟಿವೆ” ಎಂದು ಆತಂಕ ವ್ಯಕ್ತಪಡಿಸಿದರು.

WhatsApp Image 2024 08 30 at 4.33.37 PM

“ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆಗಳಿಗೆ, ನಗರಸಭೆ ಅಧಿಕಾರಿಗಳಿಗೆ, ಶಾಸಕರಿಗೆ ಈ ಸಮಸ್ಯೆಗಳ ಪರಿಜ್ಞಾನವೂ ಇಲ್ಲ. ಬಗೆಹರಿಸುವ ಇಚ್ಛಾಶಕ್ತಿಯೂ ಇಲ್ಲ. ನಗರಸಭೆ ಮತ್ತು ಇತರ ಇಲಾಖೆಗಳ ದುರಾಡಳಿತವೇ ಇದಕ್ಕೆ ಕಾರಣವಾಗಿದೆ.‌ ಈ ಕೂಡಲೇ ಜನಪ್ರತಿನಿಧಿಗಳು, ಜಿಲ್ಲಾಡಳಿತ, ನಗರಸಭೆ ಎಲ್ಲರೂ ಸೇರಿ ಇಲ್ಲಿಗೆ ಅಗತ್ಯವಾಗಿ ಬೇಕಾಗಿರುವ ವೈಜ್ಞಾನಿಕ ಕಾಮಗಾರಿ ನಡೆಸಿ ತಡೆಗೋಡೆ ನಿರ್ಮಿಸಿ, ಜನರ ಸಮಸ್ಯೆ ಪರಿಹರಿಸಿ, ಇಲ್ಲದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ” ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ ಕೋಟೆ ಮೇಲೆ ಲೋಹದ ಹಕ್ಕಿಗಳ ಚಿತ್ತಾರ; ಕಣ್ತುಂಬಿಕೊಂಡ ಜನ

“ಒಟ್ಟಾರೆಯಾಗಿ ರಹೀಂ ನಗರದ ತಗ್ಗು ಪ್ರದೇಶದ ಮನೆಗಳಲ್ಲಿ ವಾಸಿಸುವ ಜನ ರಾಜಕಾಲುವೆಯಿಂದ ಸಮಸ್ಯೆಗೊಳಗಾಗಿದ್ದು, ಇದರ ನಿವಾರಣೆಗೆ ಇತ್ತೀಚಿನ ವರ್ಷಗಳಲ್ಲಿ ಶಾಸಕರಾಗಲಿ ಅಥವಾ ಯಾವುದೇ ಅಧಿಕಾರಿಗಳಾಗಲಿ ಕ್ರಮವಹಿಸದಿರುವುದು ಆಡಳಿತದ ನಿರ್ಲಕ್ಷ್ಯವಾಗಿದೆ. ಈಗಲಾದರೂ ಈ ಸಮಸ್ಯೆಯನ್ನು ಅರಿತು ಶಾಸಕರು, ಜನಪ್ರತಿನಿಧಿಗಳು ಮತ್ತು ಸ್ಥಳೀಯ ಆಡಳಿತ ಕೂಡಲೇ ರಾಜಕಾಲುವೆಯ ಒತ್ತುವರಿ ತೆರವು, ಹೂಳು ತೆಗೆಸುವುದು ಮತ್ತು ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸುವಂತಹ ಕ್ರಮಗಳನ್ನು ತೆಗೆದುಕೊಂಡು ಸ್ಥಳೀಯರ ಸಮಸ್ಯೆಗಳನ್ನು ನಿವಾರಿಸಬೇಕು. ಅವರ ಸಮಸ್ಯೆಗಳಿಗೆ ಪರಿಹಾರ ನೀಡಿ ಸ್ಪಂದಿಸಬೇಕು” ಎಂದು ಸ್ಥಳಿಯ ನಿವಾಸಿಗಳು ಆಗ್ರಹಿಸಿದರು.

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X