ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ನೀಡಿರುವ ಅಭಿಯೋಜನಾ ಮಂಜೂರಾತಿ ವಜಾ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಇಂದು ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಊಟದ ವಿರಾಮದ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದಿಂದ ವಿಚಾರಣೆ ನಡೆಯುತ್ತಿದ್ದು, ಶನಿವಾರ ಬೆಳಗ್ಗೆ 10.30ಕ್ಕೆ ಆರಂಭಿಸಲಾಗಿತ್ತು. ಈ ನಡುವೆ ಊಟದ ವಿರಾಮಕ್ಕಾಗಿ ಇಂದಿನ ವಿಚಾರಣೆಯನ್ನು 2.30ಕ್ಕೆ ಮುಂದೂಡಿದರು.
ಸಿದ್ದರಾಮಯ್ಯ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದರೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ರಾಜ್ಯಪಾಲರ ಪರವಾಗಿ ವಾದ ಮಂಡಿಸಿದರು. ಇನ್ನೊಂದೆಡೆ ದೂರುದಾರರ ಪರವಾಗಿ ಮಣೀಂದರ್ ಸಿಂಗ್, ವಾದ ಮಂಡಿಸಿದ್ದು, ತನಿಖೆ ನಡೆಸಲು ಅನುಮತಿಸಬೇಕು ಎಂದು ಆಗ್ರಹಿಸಿದರು.
ತುಷಾರ್ ಮೆಹ್ತಾ ವಾದ ಏನಿತ್ತು?
ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸುವಾಗ, “ಅಭಿಯೋಜನಾ ಮಂಜೂರಾತಿ ನೀಡುವಾಗ ರಾಜ್ಯಪಾಲರು ವಿವೇಚನೆ ಬಳಸಿದ್ದಾರೆ. ಅಬ್ರಹಾಂ ಪ್ರಕರಣದಲ್ಲಿ ನೋಟಿಸ್ ನೀಡಲಾಗಿದೆ. ಸ್ನೇಹಮಯಿ ಕೃಷ್ಣ, ಪ್ರದೀಪ್ ಕುಮಾರ್ ಪ್ರಕರಣದಲ್ಲಿ ನೋಟಿಸ್ ನೀಡಿಲ್ಲ ಎಂದಿದ್ದಾರೆ. ನಿಮ್ಮ (ಸಿಎಂ) ಪಾತ್ರ ಇಲ್ಲವೆಂದಾರೆ ಅಭಿಯೋಜನಾ ಮಂಜೂರಾತಿಯನ್ನು ಏಕೆ ಪ್ರಶ್ನಿಸಿದ್ದೀರಿ? ರಾಜ್ಯಪಾಲರು ಆತುರದಿಂದ ನಿರ್ಧಾರ ಕೈಗೊಂಡಿದ್ದಾರೆ ಎಂದಿದ್ದಾರೆ. ಇಲ್ಲಿ ಯಾವುದೇ ಆತುರದ ನಿರ್ಧಾರ ಕೈಗೊಂಡಿಲ್ಲ. ಗವರ್ನರ್ ಅಥವಾ ಮುಖ್ಯಮಂತ್ರಿ ಹುದ್ದೆಯಂಥ ಸಾಂವಿಧಾನಿಕ ಹುದ್ದೆಗಳನ್ನು ವ್ಯಂಗ್ಯವಾಗಿ ಬಳಕೆ ಮಾಡಬಾರದು ವಾದ ಮಾಡುವ ವೇಳೆ ಪ್ರಸ್ತಾಪಿಸಿದರು.
ಇದೇ ವೇಳೆ ದೂರುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮಣೀಂದರ್ ಸಿಂಗ್:, “ನಮ್ಮದು ರಂಜಕತೆ ಸೃಷ್ಟಿಸುವ ಉದ್ದೇಶವಲ್ಲ. ತನಿಖೆ ನಡೆಸಬೇಕು ಎಂಬುದಷ್ಟೇ ನಮ್ಮ ಕೋರಿಕೆ ಎಂದಾಗ, ‘ಅಭಿವೃದ್ಧಿಪಡಿಸಿದ ಭೂಮಿ ಮತ್ತೆ ಕಂದಾಯ ಭೂಮಿ ಹೇಗಾಯಿತು?” ಎಂದು ನ್ಯಾಯಮೂರ್ತಿ ಪ್ರಶ್ನಿಸಿದಾಗ, ‘ಅದು ಮ್ಯಾಜಿಕ್. ತನಿಖೆಯಿಂದ ಅದು ತಿಳಿಯಬೇಕು? ನೀವು ತನಿಖೆಗೆ ಅನುಮತಿ ನೀಡಿರುವ ನಿರ್ಧಾರವನ್ನು ಎತ್ತಿಹಿಡಿದರೆ, ತನಿಖಾಧಿಕಾರಿ ತಿಳಿಸಬಹುದು” ಎಂದು ವಾದಿಸಿದರು.
