- ಷೇರುಗಳಲ್ಲಿ ತಿರುಚುವಿಕೆ ಪರಿಶೀಲಿಸಿ ಮೇ 2ರ ಒಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಾಗಿದ್ದ ಸೆಬಿ
- ಎರಡು ತಿಂಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ನಿರ್ದೇಶಿಸಿದ್ದ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ
ಅದಾನಿ ಸಮೂಹಗಳ ವಿರುದ್ಧ ಹಿಂಡೆನ್‌ಬರ್ಗ್ ಮಾಡಿರುವ ಷೇರು ವ್ಯವಹಾರಗಳಲ್ಲಿ ತಿರುಚುವಿಕೆಯ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಆರು ತಿಂಗಳ ಕಾಲಾವಕಾಶ ನೀಡಬೇಕೆಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಶನಿವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಮೇ 2ರ ಒಳಗೆ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸುವಂತೆ ಸೆಬಿಗೆ ಆದೇಶಿಸಲಾಗಿತ್ತು. “ವಿಷಯದ ಸಂಕೀರ್ಣತೆ” ಮತ್ತು “ನ್ಯಾಯದ ಹಿತಾಸಕ್ತಿ”ಯನ್ನು ಉಲ್ಲೇಖಿಸಿ, ಸೆಬಿ ಅವಧಿ ವಿಸ್ತರಣೆಗೆ ಮನವಿ ಮಾಡಿದೆ.
ಸೆಬಿ ನ್ಯಾಯಾಲಯದ ಮುಂದೆ ಸಲ್ಲಿಸಿದ ಅರ್ಜಿಯಲ್ಲಿ, “ವಂಚನೆಗೆ ಕಾರಣವಾದ 12 ಸಂಶಯಾಸ್ಪದ ವಹಿವಾಟುಗಳ ತನಿಖೆಗೆ ಸಂಬಂಧಿಸಿದಂತೆ, ವ್ಯವಹಾರಗಳು ಸಂಕೀರ್ಣವಾಗಿವೆ ಮತ್ತು ಅನೇಕ ಉಪ ವ್ಯವಹಾರಗಳನ್ನು ಹೊಂದಿವೆ ಮತ್ತು ಇವುಗಳ ಬಗ್ಗೆ ಕಠಿಣ ತನಿಖೆಯ ಅಗತ್ಯವಿದೆ ಎಂದು ಪ್ರಾಥಮಿಕವಾಗಿ ಗಮನಿಸಲಾಗಿದೆ. ಈ ವಹಿವಾಟುಗಳ ತನಿಖೆಯನ್ನು ಪೂರ್ಣಗೊಳಿಸಲು ಸೆಬಿಗೆ ಕನಿಷ್ಠ 15 ತಿಂಗಳುಗಳ ಅಗತ್ಯವಿದೆ, ಆದರೆ ಆರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಲು ಎಲ್ಲಾ ಸಮಂಜಸ ಪ್ರಯತ್ನಗಳನ್ನು ಮಾಡಲಾಗುವುದು” ಸೆಬಿ ತಿಳಿಸಿದೆ.
ಅದಾನಿ ಸಮೂಹವು ಸಾರ್ವಜನಿಕ ಷೇರುಗಳನ್ನು ನಿರ್ವಹಿಸುವ ಕನಿಷ್ಠ ನಿಯಮಗಳನ್ನು ಉಲ್ಲಂಘಿಸಿದೆಯೇ, ಸಂಬಂಧಿತ ಸಂಸ್ಥೆಗಳೊಂದಿಗೆ ವಹಿವಾಟುಗಳನ್ನು ಬಹಿರಂಗಪಡಿಸಲು ವಿಫಲವಾಗಿದೆಯೇ ಮತ್ತು ಷೇರುಗಳ ಬೆಲೆಗಳಲ್ಲಿ ಯಾವುದೇ ತಿರುಚುವಿಕೆ ನಡೆದಿದೆಯೇ ಎಂದು ಪರಿಶೀಲಿಸಲು ಸೆಬಿಗೆ ನ್ಯಾಯಾಲಯ ಮಾರ್ಚ್ 2ರಂದು ಸೂಚಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು, ಎರಡು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು.
ಈ ಸುದ್ದಿ ಓದಿದ್ದೀರಾ? ದ್ವೇಷ ಭಾಷಣ ಮಾಡುವವರ ವಿರುದ್ದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ: ಸುಪ್ರೀಂ ಕೋರ್ಟ್
ಅಮೆರಿಕ ಮೂಲದ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ಜನವರಿ 24ರಂದು ಪ್ರಕಟಿಸಿದ ವರದಿಯು ಅದಾನಿ ಸಮೂಹದ ಹಗರಣಗಳತ್ತ ಬೊಟ್ಟು ಮಾಡಿತ್ತು. ಷೇರುಗಳ ತಿರುಚುವಿಕೆ ಆಗಿದೆ, ಕೃತಕವಾಗಿ ಷೇರುಗಳ ಬೆಲೆ ಏರಿಸಲಾಗಿದೆ, ಕಡಲಾಚೆಯ ತೆರಿಗೆ ಸ್ವರ್ಗಗಳನ್ನು ಅಸಮರ್ಪಕವಾಗಿ ಬಳಸಲಾಗಿದೆ ಎಂದು ವರದಿ ಆರೋಪಿಸಿತ್ತು.
ಈ ಹಿನ್ನೆಲೆಯಲ್ಲಿ ಹೂಡಿಕೆದಾರರ ಸಂರಕ್ಷಣಾ ಕಾರ್ಯವಿಧಾನಗಳನ್ನು ಪರಿಶೀಲಿಸಲು ನ್ಯಾಯಾಲಯವು ತಜ್ಞರ ಸಮಿತಿಯನ್ನು ರಚಿಸಿತ್ತು.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಸಲ್ಲಿಸಿರುವ ಮನವಿಯಲ್ಲಿ, ಏಪ್ರಿಲ್‌ನಲ್ಲಿ ತಜ್ಞರ ಸಮಿತಿಯೊಂದಿಗೆ ಎರಡು ಸಭೆಗಳಲ್ಲಿ ಭಾಗವಹಿಸಿರುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ತನಿಖೆಯ ಸ್ಥಿತಿ ಮತ್ತು ಮಧ್ಯಂತರ ಸಂಶೋಧನೆಗಳ ಬಗ್ಗೆ ಸಮಿತಿಗೆ ತಿಳಿಸಲಾಗಿದೆ ಎಂದು ಸೆಬಿ ಹೇಳಿಕೊಂಡಿದೆ.
ನ್ಯಾಯಾಲಯವು ನೇಮಿಸಿದ ಮಾಜಿ ನ್ಯಾಯಮೂರ್ತಿ ಸಪ್ರೆ ಸಮಿತಿಗೆ ಕೇಂದ್ರ ಮತ್ತು ಸೆಬಿ ಅಧ್ಯಕ್ಷರು ಸೇರಿದಂತೆ ಇತರ ಶಾಸನಬದ್ಧ ಏಜೆನ್ಸಿಗಳು ಸಹಾಯ ಮಾಡುತ್ತವೆ. ಅದಾನಿ ಸಮೂಹದ ಷೇರುಗಳ ಕುಸಿತದ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಏರಿಳಿತದಿಂದ ಭಾರತೀಯ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವ ಅವಶ್ಯಕತೆಯಿದೆ ಎಂದು ಫೆಬ್ರವರಿ 10ರಂದು ಸುಪ್ರೀಂ ಕೋರ್ಟ್ ಹೇಳಿತ್ತು.
ನಿಯಂತ್ರಕ ಕಾರ್ಯವಿಧಾನವನ್ನು ಬಲಪಡಿಸಲು ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ಸ್ಥಾಪಿಸಲು ಪರಿಗಣಿಸುವಂತೆ ನ್ಯಾಯಾಲಯವು ಕೇಂದ್ರವನ್ನು ಕೇಳಿತ್ತು. ನಿಯಂತ್ರಣ ವ್ಯವಸ್ಥೆಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ನೇತೃತ್ವದ ಸಮಿತಿಯನ್ನು ರಚಿಸುವ ಸುಪ್ರೀಂ ಕೋರ್ಟ್‌ನ ಪ್ರಸ್ತಾವನೆಗೆ ಕೇಂದ್ರವು ಒಪ್ಪಿಗೆ ನೀಡಿತ್ತು.
ವಕೀಲರಾದ ಎಂ ಎಲ್ ಶರ್ಮಾ ಮತ್ತು ವಿಶಾಲ್ ತಿವಾರಿ, ಕಾಂಗ್ರೆಸ್ ಮುಖಂಡ ಜಯ ಠಾಕೂರ್ ಮತ್ತು ಸಾಮಾಜಿಕ ಕಾರ್ಯಕರ್ತ ಮುಖೇಶ್ ಕುಮಾರ್ ಅವರು ಸುಪ್ರೀಂ ಕೋರ್ಟ್‌ಗೆ ನಾಲ್ಕು ಸಾರ್ವಜನಿಕ ಹಿತಾಸಕ್ತಿಗಳನ್ನು ಸಲ್ಲಿಸಿದ್ದು, ಈ ಕುರಿತಂತೆ ತನಿಖೆಗೆ ಆದೇಶಿಸಬೇಕು ಎಂದು ಮನವಿ ಮಾಡಿದ್ದರು.
ಶನಿವಾರದ ಮಾಧ್ಯಮ ಹೇಳಿಕೆಯಲ್ಲಿ, ಅದಾನಿ ಸಮೂಹವು “ತನಿಖೆಯನ್ನು ಸ್ವಾಗತಿಸುತ್ತದೆ” ಮತ್ತು “ಸೆಬಿಯೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದೆ ಮತ್ತು ನಮ್ಮ ಎಲ್ಲಾ ಬೆಂಬಲ ಮತ್ತು ಸಹಕಾರವನ್ನು ನೀಡುವುದನ್ನು ಮುಂದುವರಿಸುತ್ತದೆ” ಎಂದು ತಿಳಿಸಿದೆ.
ತನಿಖೆಯನ್ನು ಮುಚ್ಚಿ ಹಾಕುವ ಪ್ರಯತ್ನ; ಕಾಂಗ್ರೆಸ್
ಅದಾನಿ ಸಮೂಹಗಳ ವಿರುದ್ಧ ಷೇರು ವ್ಯವಹಾರಗಳಲ್ಲಿ ತಿರುಚುವಿಕೆಯ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಆರು ತಿಂಗಳ ಕಾಲಾವಕಾಶ ಕೋರಿರುವ ಸೆಬಿ ಮನವಿಗೆ ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
“ಸೆಬಿ ಆರು ತಿಂಗಳು ಕಾಲಾವಕಾಶ ಕೋರಿಸುವುದು ತನಿಖೆಯನ್ನು ಮುಚ್ಚಿ ಹಾಕುವ ಪ್ರಯತ್ನ” ಎಂದು ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಅದಾನಿ ಸಮೂಹದ ಷೇರು ಮಾರುಕಟ್ಟೆ ವಹಿವಾಟುಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸಮಿತಿಯು ಆದೇಶಿಸಿದ ಎರಡು ತಿಂಗಳ ನಂತರ ಸೆಬಿಯು ಆರು ತಿಂಗಳ ಸಮಯಾವಕಾಶ ಕೋರಿದೆ. ಸೆಬಿಯ ಈ ವಿನಂತಿಯು ಹಗರಣವನ್ನು ಹೂತುಹಾಕುವ ಪ್ರಯತ್ನವಾಗಿದೆ. ಅಲ್ಲದೆ ಇದು ಹಗರಣವನ್ನು ಸಂಪೂರ್ಣವಾಗಿ ಮುಚ್ಚಿ ಹಾಕುವ ಕ್ರಮವಲ್ಲದೆ ಮತ್ತೇನು ಅಲ್ಲ. ಜಂಟಿ ಸಂಸದೀಯ ತನಿಖೆಯಿಂದ ಮಾತ್ರ ಇದರ ಸಂಪೂರ್ಣ ಸತ್ಯಾಸತ್ಯತೆ ತಿಳಿಯಲಿದೆ” ಎಂದು ಬರೆದುಕೊಂಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸೆಬಿಯ ಕ್ರಮವನ್ನು ತಮಾಷೆ ಎಂದು ಬಣ್ಣಿಸಿದ್ದಾರೆ.
“ಇದೊಂದು ಹಾಸ್ಯದ ಸಂಗತಿ. ಜುಲೈ ತಿಂಗಳ ನನ್ನ ಪತ್ರಕ್ಕೆ ಸೆಬಿ ಉತ್ತರಿಸಿದಾಗ ಅಕ್ಟೋಬರ್ 2021 ರಿಂದ ತನಿಖೆ ನಡೆಸುತ್ತಿದೆ ಎಂದು ತಿಳಿಸಿತ್ತು. ಅವರು ತಮ್ಮ ನೆಚ್ಚಿನ ಉದ್ಯಮಿಯನ್ನು ರಕ್ಷಿಸಲು ಪುನಃ ಆರು ತಿಂಗಳುಗಳ ಕಾಲ ಅವಕಾಶ ಬಯಸುತ್ತಾರೆ. ಇದರಿಂದ ಸೆಬಿ ಸತ್ಯವನ್ನು ಮುಚ್ಚಿಡಲು ಗರಿಷ್ಠ ಸಮಯವನ್ನು ಪಡೆಯಬಹುದು” ಎಂದು ತಿಳಿಸಿದ್ದಾರೆ.