ರಾಜ್ಯಪಾಲರು, ಸಾಂವಿಧಾನಿಕ ಸಂಸ್ಥೆಗಳು, ತನಿಖಾ ಏಜೆನ್ಸಿಗಳು ಬಿಜೆಪಿ ಪಕ್ಷದ ದಾಳವಾಗುತ್ತಿದ್ದಾರೆ. ಇದರ ವಿರುದ್ಧ ರಾಷ್ಟ್ರೀಯ ಅಭಿಯಾನ ರೂಪಿಸಲು ಪ್ರಗತಿಪರ ಚಿಂತಕರು ಯೋಜನೆ ಹಾಕಿಕೊಂಡಿದ್ದು, ಸೆಪ್ಟೆಂಬರ್ 8ರಂದು ಬೆಂಗಳೂರಿನಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ.
ಈ ಅಭಿಯಾನಕ್ಕೆ ನಿವೃತ್ತ ಜಸ್ಟೀಸ್ ಗೋಪಾಲಗೌಡ, ಹಿರಿಯ ಸಾಹಿತಿ ದೇವನೂರ ಮಹಾದೇವ, ಸಬೀಹಾ ಭೂಮಿಗೌಡ, ಜಿ.ರಾಮಕೃಷ್ಣ, ಬಿ.ಟಿ ಲಲಿತ ನಾಯಕ್, ಜಾಣಗೆರೆ ವೆಂಕಟರಾಮಯ್ಯ, ಶಂಕರ ಹಲಗತ್ತಿ, ಮೀನಾಕ್ಷಿ ಬಾಳಿ, ರಾಘವೇಂದ್ರ ಕುಷ್ಟಗಿ, ಆರ್.ಕೆ.ಹುಡಗಿ, ಎಸ್.ಜಿ ಸಿದ್ದರಾಮಯ್ಯ, ಡಾ.ವಿಜಯಮ್ಮ, ಬಡಗಲಪುರ ನಾಗೇಂದ್ರ, ಜೆ.ಎಂ ವೀರಸಂಗಯ್ಯ ಮುಂತಾದವರು ಕರೆ ನೀಡಿದ್ದಾರೆ.
ಈ ಅಭಿಯಾನದ ಸಂಬಂಧ ಸೆಪ್ಟೆಂಬರ್ 3ನೇ ವಾರದಲ್ಲಿ ದೆಹಲಿಯಲ್ಲಿ ಅಖಿಲ ಭಾರತ ಮಟ್ಟದ ಸಮಾಲೋಚನಾ ಸಭೆ ನಡೆಯಲಿದ್ದು, ಸೆ. 8ರಂದು ಬೆಂಗಳೂರಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ.
ಭಾರತದ ಪ್ರಜಾತಂತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ರಾಜ್ಯಗಳು ಮತ್ತು ಒಕ್ಕೂಟ ಸರ್ಕಾರದ ಮಧ್ಯೆ ಕೆಲವು ತಿಕ್ಕಾಟಗಳು ಇದ್ದೇ ಇವೆ. ಹಲವು ಸಾರಿ ಈ ತಿಕ್ಕಾಟ ಮತ್ತು ಕೇಂದ್ರ ಸರ್ಕಾರದ ನಡೆಗಳು ಅಪ್ರಜಾತಾಂತ್ರಿಕ ಮತ್ತು ಅನಾರೋಗ್ಯಕರವಾಗಿ ನಡೆದಿತ್ತಾದರೂ, ಈ ಹೊತ್ತಿನ ವಿದ್ಯಮಾನ ಅತ್ಯಂತ ಅಪಾಯಕಾರಿಯಾದುದು. ಸಾಂವಿಧಾನಿಕವಾಗಿ, ಶಾಸನಾತ್ಮಕವಾಗಿ, ವಿತ್ತೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಕೇಂದ್ರದ ದಾಳಿಯು ಒಕ್ಕೂಟ ವ್ಯವಸ್ಥೆಯನ್ನು ಮುಗಿಸುವ ದಿಕ್ಕಿನಲ್ಲಿ ಸಾಗಿದೆ. ಅಂತಹ ಸಂದರ್ಭದಲ್ಲಿ ಪ್ರಾದೇಶಿಕ ರಾಜಕೀಯ ವ್ಯವಸ್ಥೆಯು ಅದಕ್ಕೆ ತಡೆಯೊಡ್ಡಿ ನಿಲ್ಲುವ ಪ್ರಯತ್ನ ಮಾಡುತ್ತಾ ಬಂದಿದೆ .ಹೀಗಾಗಿ ದೇಶದ ವಿವಿಧ ರಾಜ್ಯಗಳ ಪ್ರಾದೇಶಿಕ ನಾಯಕರ ವಿರುದ್ಧ ವಿವಿಧ ಆರೋಪಗಳನ್ನು ಹೊರಿಸಿ ಅವರನ್ನು ಗುರಿ ಮಾಡಿ ದಮನ ಮಾಡುವ ಪ್ರಯತ್ನವೂ ನಡೆದಿದೆ.
ಇಂದು ಸ್ವತಂತ್ರವೆಂದು ಭಾವಿಸಲಾದ ಎಲ್ಲ ತನಿಖಾ ಸಂಸ್ಥೆಗಳು ರಾಜಕೀಯ ವಿರೋಧಿಗಳ ಮೇಲೆ ಹೂಡಲಾದ ಬಾಣಗಳಂತೆ ಕೆಲಸ ಮಾಡುತ್ತಿವೆ. ರಾಜ್ಯಪಾಲರ ಕಚೇರಿಯನ್ನು ಅಂತಹ ಕುತಂತ್ರದ ದಾಳಿಯ ಸ್ಥಳೀಯ ಕಚೇರಿಯಂತೆ ಬಳಸಲಾಗುತ್ತಿದೆ. 2014ರಿಂದ ಈಚೆಗೆ ಒಕ್ಕೂಟ ಸರ್ಕಾರವು ರಾಜ್ಯಗಳ ಸ್ವಾಯತ್ತತೆಯ ಮೇಲೆ ಯುದ್ಧವನ್ನೇ ಹೂಡಿದಂತಿದೆ. ಹಲವು ಬಗೆಯಲ್ಲಿ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಲಾಗುತ್ತಿದೆ ಮಾತ್ರವಲ್ಲದೇ, ರಾಜ್ಯಗಳಲ್ಲಿ ಗಟ್ಟಿಯಾದ ಬೇರುಗಳನ್ನುಳ್ಳ ನಾಯಕ-ನಾಯಕಿಯರನ್ನು ದುರ್ಬಲಗೊಳಿಸುವ ಸಂಚು ನಡೆದಿದೆ. ಮಾಧ್ಯಮಗಳ ಒಂದು ವಿಭಾಗ ಅವರ ಕೈ ಜೋಡಿಸಿದೆ ಮತ್ತು ಹುನ್ನಾರದ ಭಾಗವಾಗಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತಿದೆ. ದೇಶದ ಎಲ್ಲಾ ರಾಜಕೀಯ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಒಂದೋ ಕೇಂದ್ರಕ್ಕೆ ಅಡಿಯಾಳಾಗಬೇಕು ಇಲ್ಲವೇ ಜೈಲಿಗೆ ಹೋಗಬೇಕು ಎಂಬ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಇದು ಭಾರತದ ಸ್ವಾತಂತ್ರ್ಯ ಚಳವಳಿಯ, ಸಾಂವಿಧಾನಿಕ ಗಣತಂತ್ರದ ಆಶಯಗಳಿಗೆ ವಿರುದ್ಧವಾದುದು. ದೇಶವನ್ನು ಸರ್ವಾಧಿಕಾರಕ್ಕೆ ತಳ್ಳುವ ಇಂತಹ ಪ್ರಯತ್ನಗಳ ವಿರುದ್ಧ ಜನರು ಒಂದಾಗಬೇಕಿದೆ. ಇದಕ್ಕಾಗಿ ಕರ್ನಾಟಕದಿಂದಲೇ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಅಭಿಯೋಜನೆ ನೀಡಿರುವ ರಾಜ್ಯಪಾಲರ ನಡೆಯು ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿಯಾಗಿದೆ. ಇದರ ವಿರುದ್ಧ ಕರ್ನಾಟಕದ ಜನತೆ ಒಂದಾಗಿದ್ದಾರೆ. ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಒಕ್ಕೂಟ ವ್ಯವಸ್ಥೆಯ ಪರವಾಗಿ, ರಾಜ್ಯಪಾಲರ ಕಚೇರಿಯ ದುರ್ಬಳಕೆಯ ವಿರುದ್ಧ ನಾಗರಿಕರ ಪ್ರತಿರೋಧ ರೂಪುಗೊಳ್ಳಬೇಕಿದೆ ಎಂದು ‘ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿಯ ವಿರುದ್ಧ ಕರ್ನಾಟಕದ ಜನತೆ’ ಎಂಬ ಧ್ಯೇಯವಾಕ್ಯದಡಿ ಪ್ರಗತಿಪರ ಚಿಂತಕರು ಅಭಿಯಾನ ಹಮ್ಮಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಸೆ. 2ಕ್ಕೆ ಮುಂದೂಡಿಕೆ
ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 8ರಂದು ಒಂದು ಪ್ರತಿಭಟನಾ ಸಭೆ ನಡೆಯಲಿದೆ. ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಒಕ್ಕೂಟ ವ್ಯವಸ್ಥೆಯ ಪರವಾಗಿ, ರಾಜ್ಯಪಾಲರ ಕಚೇರಿಯ ದುರ್ಬಳಕೆಯ ವಿರುದ್ಧ ನಾಗರಿಕರ ಪ್ರತಿರೋಧ ರೂಪುಗೊಳ್ಳಬೇಕಿದೆ. ಕರ್ನಾಟಕದ ಹಾಗೂ ಭಾರತದ ಸಮಸ್ತ ಪ್ರಜಾತಂತ್ರವಾದಿ ಜನತೆ ಇದರ ಭಾಗವಾಗಬೇಕೆಂದು ಮನವಿ ಮಾಡಿದ್ದಾರೆ.
