ದೇಶದ ಜನತೆಗೆ ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ಭರ್ಜರಿ ಶಾಕ್ ತಟ್ಟಿದೆ. ಗ್ಯಾಸ್ ಸಿಲಿಂಡರ್ ಬೆಲೆ ಇಂದಿನಿಂದ ಭಾರಿ ಏರಿಕೆಯಾಗಿದ್ದು, ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್ ಬೆಲೆ ಏರಿಕೆ ಮಾಡಲು ನಿರ್ಧರಿಸಿರುವುದರಿಂದ ಜನರ ಜೇಬಿಗೆ ಕತ್ತರಿ ಬೀಳಲಿದೆ.
ತೈಲ ಮಾರುಕಟ್ಟೆ ಕಂಪನಿಗಳು ಬೆಲೆ ಏರಿಕೆಯ ಬಗ್ಗೆ ಘೋಷಣೆ ಮಾಡಿದ ನಂತರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಶನಿವಾರದಿಂದ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ದರವನ್ನು ಸೆಪ್ಟೆಂಬರ್ 1 ರಿಂದ 39 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ಚಿಲ್ಲರೆ ಬೆಲೆಯನ್ನು 1,691.50 ರೂ.ಗೆ ಜಾರಿಗೊಳಿಸಲಾಗಿದೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.
ಆಗಸ್ಟ್ 1 ರಂದು, ತೈಲ ಕಂಪನಿಗಳು ನವದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಂತಹ ಮೆಟ್ರೋ ನಗರಗಳನ್ನು ಒಳಗೊಂಡಂತೆ ದೇಶಾದ್ಯಂತ 19 ಕೆಜಿ ಸಿಲಿಂಡರ್‌ಗೆ ರೂ 8.50 ಹೆಚ್ಚಳ ಮಾಡಿ ಘೋಷಿಸಿದ್ದವು. ಆಗಸ್ಟ್‌ನಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆ 8.50 ರೂಪಾಯಿ ಏರಿಕೆ ಮಾಡಲಾಗಿತ್ತು. ಇತ್ತ ಇಂದಿನಿಂದ ಚೆನ್ನೈನಲ್ಲಿ ವಾಣಿಜ್ಯ ಬಳಕೆಗಾಗಿ 19 ಕೆಜಿ ಅಡುಗೆ ಅನಿಲ ಸಿಲಿಂಡರ್ ಅನ್ನು 1,855 ರೂ.ಗೆ ಮಾರಾಟ ಮಾಡುವುದಾಗಿ ಘೋಷಿಸಿವೆ. ಅದೇ ರೀತಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕೋಲ್ಕತ್ತಾದಲ್ಲಿ 1,756 ರೂ. ಮತ್ತು ಮುಂಬೈನಲ್ಲಿ 1,598 ರೂ.ಗೆ ನಿಗದಿಪಡಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಹರಿಯಾಣ, ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಬದಲು
ಬೆಂಗಳೂರಿನಲ್ಲಿಯೂ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆ 38 ರೂಪಾಯಿ ಏರಿಕೆಯಾಗಿದ್ದು, ಇಂದಿನಿಂದ 1769.50 ರೂಪಾಯಿಗೆ ಸಿಲಿಂಡರ್ ಸಿಗಲಿದೆ. ಅದೇ ಸಮಯದಲ್ಲಿ, ದೇಶೀಯ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹಾಗಾಗಿ ಗೃಹಬಳಕೆಯ ಸಿಲಿಂಡರ್ ಬೆಲೆ ರೂ.805.50 ಆಗಿ ಮುಂದುವರಿದಿದೆ.
ಎಲ್‌ಪಿಜಿ ಬೆಲೆಗಳಲ್ಲಿನ ಹಠಾತ್ ಹೆಚ್ಚಳವು ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಂದ ಹಿಡಿದು ಸಣ್ಣ-ಪ್ರಮಾಣದ ಕೈಗಾರಿಕೆಗಳವರೆಗೆ ವಿವಿಧ ವಲಯಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರಬಹುದು. ಯಾಕೆಂದರೆ ಗ್ಯಾಸ್ ಬೆಲೆ ಏರಿಕೆಯಾದಂತೆ ಹೋಟೆಲ್‌ಗಳು ತಿಂಡಿಗಳ ಬೆಲೆಯನ್ನೂ ಏರಿಸುತ್ತವೆ. ಹೀಗಾಗಿ ಈಗಾಗಲೇ ದಿನನಿತ್ಯದ ಬಹುತೇಕ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗಂತೂ ಈ ಬೆಲೆ ಏರಿಕೆಯು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
