ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನ ಹಂಚಿಕೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರಕ್ಕೆ ಬಹಳ ತಾರತಮ್ಯವಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಇದನ್ನು ಕೂಡಲೇ ಸರಿಪಡಿಸುವ ಅಗತ್ಯವಿದೆ ಎಂದು ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಚಿಟಗುಪ್ಪ ತಾಲೂಕಿನ ಮನ್ನಾಎಖ್ಖೆಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಕ್ಷಿಣ ಮಂಡಲ ಕಾರ್ಯಕಾರಿಣಿ ಸಭೆ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ʼಕೆಕೆಆರ್‌ಡಿಬಿಯಿಂದ ಬೀದರ್ ಜಿಲ್ಲೆಯಲ್ಲೇ ದಕ್ಷಿಣ ಕ್ಷೇತ್ರಕ್ಕೆ ಅತೀ ಕಡಿಮೆ ಅನುದಾನ ಬರುತ್ತಿದೆ. ಹೀಗಾಗಿ ಕೇವಲ ಹಳ್ಳಿಗಳಿಂದ ಕೂಡಿದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ʼಕಳೆದ ವರ್ಷ ದಕ್ಷಿಣ ಕ್ಷೇತ್ರಕ್ಕೆ ₹24 ಕೋಟಿ ಅನುದಾನ ಬಂದಿತ್ತು. ಪ್ರಸಕ್ತ ವರ್ಷ ₹28 ಕೋಟಿ ರೂ. ಬಂದಿದೆ. ಆದರೆ ಪಕ್ಕದ ಹುಮನಾಬಾದ್, ಬಸವಕಲ್ಯಾಣ, ಭಾಲ್ಕಿ ಕ್ಷೇತ್ರಗಳಿಗೆ ₹60 ಕೋಟಿಗಿಂತ ಅಧಿಕ ಅನುದಾನ ಬಂದಿದೆ. ಹೀಗೆ ನಮಗೇಕೆ ಅನ್ಯಾಯʼ ಎಂದು ಪ್ರಶ್ನಿಸಿದರು.
ʼನಂಜುಂಡಪ್ಪ ಸಮಿತಿ ವರದಿ ಪ್ರಕಾರ ಹಿಂದುಳಿದ, ಅತೀ ಹಿಂದುಳಿದ ಕ್ಷೇತ್ರಗಳಿಗೆ ಕೆಕೆಆರ್ ಡಿಬಿಯಿಂದ ಅನುದಾನ ಹಂಚಿಕೆ ನಡೆದಿದೆ. ಮುಂಚೆ ಬೀದರ್ ದಕ್ಷಿಣ ಕ್ಷೇತ್ರ ಇರಲಿಲ್ಲ. 2008ರಲ್ಲಿ ದಕ್ಷಿಣ ಕ್ಷೇತ್ರ ಉದಯವಾಗಿದೆ. ಇದಕ್ಕಿಂತ ಮುಂಚೆ ನಂಜುಂಡಪ್ಪ ವರದಿ ನೀಡಿದೆ. ಬೀದರ್ ನಗರ ಒಳಗೊಂಡ ಹಿಂದಿನ ಮಾನದಂಡ ಈಗ ಅನುಸರಿಸಿ ಅನುದಾನ ಹಂಚಿಕೆ ಮಾಡುತ್ತಿದ್ದರಿಂದ ನಮ್ಮ ಕ್ಷೇತ್ರಕ್ಕೆ ಕಡಿಮೆ ಅನುದಾನ ಬಿಡುಗಡೆಯಾಗಿ ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ. ಈ ಮಾನದಂಡ ಬದಲಿಸಿ ತಾರತಮ್ಯ ನಿವಾರಣೆ ಮಾಡಬೇಕಿದೆ. ಈಗಾಗಲೇ ಈ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿದೆʼ ಎಂದರು.
ಹೆಚ್ಚು ಬಿಜೆಪಿ ಸದಸ್ಯತ್ವ ಮಾಡಿಸಿದವರಿಗೆ ʼತಿರುಪತಿ ದರ್ಶನʼ :
ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ತಳಮಟ್ಟದಿಂದ ಮಜಬೂತ್ ಮಾಡಲು ನಿರಂತರ ಪ್ರಯತ್ನ ನಡೆದಿವೆ. ಕಳೆದ ಸಲ ಸದಸ್ಯತ್ವ ಅಭಿಯಾನದ ವೇಳೆ 50 ಸಾವಿರ ಸದಸ್ಯತ್ವ ಮಾಡಲಾಗಿತ್ತು. ಈ ಬಾರಿ 75 ಸಾವಿರ ಸದಸ್ಯತ್ವದ ಗುರಿಯಿದೆ. ಕ್ಷೇತ್ರದಲ್ಲಿ 229 ಬೂತ್ ಇವೆ. ಅತೀ ಹೆಚ್ಚು ಸದಸ್ಯತ್ವ ಮಾಡಿದ ಬೂತ್ ಪ್ರಮುಖರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪ್ರವಾಸದ ವ್ಯವಸ್ಥೆ ಮಾಡುವುದಾಗಿ ಬೆಲ್ದಾಳೆ ಅವರು ಕಾರ್ಯಕರ್ತರಿಗೆ ಹುರಿದುಂಬಿಸಿದರು.
ʼರಾಷ್ಟ್ರೀಯತೆ, ರಾಷ್ಟ್ರವಾದ, ಸಶಕ್ತ ಭಾರತ ಕಟ್ಟುವ ಚಳವಳಿಯಾಗಿದೆ. 2047ರಲ್ಲಿ ವಿಕಸಿತ ಭಾರತ, ವಿಶ್ವಗುರು ಭಾರತ ನಿರ್ಮಾಣವೇ ಪಕ್ಷದ ಏಕೈಕ ಗುರಿಯಾಗಿದೆ. 20 ಕೋಟಿ ಸದಸ್ಯರ ಮೂಲಕ ವಿಶ್ವದಲ್ಲೇ ಅತೀ ದೊಡ್ಡ ಪಕ್ಷ ನಮ್ಮದು. ಇದಕ್ಕೆಲ್ಲ ಕಾರ್ಯಕರ್ತರ ಅವಿರತ ಶ್ರಮವೇ ಕಾರಣ. ಇಂಥ ದೊಡ್ಡ ಬಳಗದಲ್ಲಿ ನಾವು ಇರುವುದು ನಮ್ಮ ಸೌಭಾಗ್ಯವಾಗಿದೆʼ ಎಂದರು.
ಮಂಡಲ ಪ್ರಭಾರಿ ಸೂರ್ಯಕಾಂತ ಚಿಲ್ಲಾಬಟ್ಟೆ, ಉಸ್ತುವಾರಿ ಪೀರಪ್ಪ ಔರಾದೆ ಮಾತನಾಡಿ, ʼದೇಶದ ಹಿತ, ಸಶಕ್ತ ಭಾರತ ನಿರ್ಮಾಣ ಹಾಗೂ ಭಾರತ ಮತ್ತೆ ವಿಶ್ವ ಗುರುವಾಗಿ ವಿಶ್ವಕ್ಕೆ ಬೆಳಕು ತೋರಿಸುವ ಶಕ್ತಿ ಸಾಮರ್ಥ್ಯ ಭಾರತಕ್ಕೆ ಮಾತ್ರ ಇದೆ . ಎಲ್ಲರೂ ಮೋದಿ ಅವರ 2047 ವಿಕಸಿತ ಭಾರತ, ವಿಶ್ವ ಗುರು ಭಾರತ ಕನಸು ನನಸಾಗಿಸಲು ಸಂಕಲ್ಪದೊಂದಿಗೆ ದುಡಿಯಬೇಕಿದೆ. ಕಾಂಗ್ರೆಸ್ ಇಂದು ದೇಶದಲ್ಲಿ, ರಾಜ್ಯದಲ್ಲಿ ಜಾತಿ ಜಗಳ ಹೆಚ್ಚುವ, ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆʼ ಎಂದರು.
ದೇಶ ವಿರೋಧಿ ಹೇಳಿಕೆ ಕೊಡುವ ಕೆಲಸ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಸಮಾಜಘಾತುಕ ಶಕ್ತಿಗಳ ಪರವಾಗಿ ಕಾಂಗ್ರೆಸ್ ನಿಲ್ಲುತ್ತಿರುವುದು ಆತಂಕಕಾರಿ ಬೆಳವಣಿಗೆ. ಕಾಂಗ್ರೆಸ್ ಸಮಾಜಕ್ಕೆ ದೊಡ್ಡ ಗಂಡಾಂತರವಾಗಿದೆ. ಹೀಗಾಗಿ ದೇಶ ಮಜಬೂತ್ ಆಗಬೇಕಾದರೆ ಕಾಂಗ್ರೆಸ್ ಮುಕ್ತ ಸಮಾಜ ನಿರ್ಮಾಣ ಅಗತ್ಯವಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಇಡೀ ದಿನದ ಕ್ಷಣ ಕ್ಷಣದ ಸುದ್ದಿಗಳು 01/09/2024
ಸಭೆಯಲ್ಲಿ ಮಾಜಿ ಜಿಪಂ ಸದಸ್ಯರಾದ ಶಕುಂತಲಾ ಬೆಲ್ದಾಳೆ ಸೇರಿದಂತೆ ಪ್ರಮುಖರಾದ ಸದಾನಂದ ಜೋಶಿ, ರಾಜರೆಡ್ಡಿ ಶಾಬಾದ, ಚಂದ್ರಯ್ಯ ಸ್ವಾಮಿ, ಸಂಜೀವಕುಮಾರ ಕೊಳಿ, ಪೀರಪ್ಪ ಔರಾದೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಹೋಮಾ ತುಕ್ಕಾರೆಡ್ಡಿ, ಶಿವಕುಮಾರ ಸ್ವಾಮಿ, ಶಿವಕುಮಾರ ಪಾಟೀಲ, ಮಾಣಿಕಪ್ಪ ಖಾಶೆಂಪೂರ, ಪ್ರಭು ಮೆಂಗಾ, ಹಣಮಂತರಾವ ಪಾಟೀಲ, ಜಗನಾಥ ಜಮಾದಾರ, ಶ್ರೀನಿವಾಸ ಪತ್ತಾರ, ಗುರುನಾಥ ಅದೆ, ಅರುಣ ಬಾವಗಿ, ಸಂತೋಷರೆಡ್ಡಿ, ಜನಾರ್ಧನರೆಡ್ಡಿ, ಜಗನಾಥ ಪಾಟೀಲ, ಬುದ್ಧಯ್ಯ ಆಚಾರ್ಯ, ಸಂತೋಷ ನೀಡವಂಚಾ, ಬಾಬುರಾವ ಹಾಗೂ ಪಕ್ಷದ ಕಾರ್ಯಕರ್ತರಿದ್ದರು.