ಜಿಲ್ಲೆಯಲ್ಲಿ ಶನಿವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಜನರನ್ನು ಹೊರಗೆ ಬಿಡದೇ ದೋ ಅಂತ ಮಳೆ ಸುರಿಯುತ್ತಿದೆ. ಇದರಿಂದ ಜಿಲ್ಲೆಯ ಕೆಲವೆಡೆ ನದಿ, ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಇನ್ನೊಂದೆಡೆ ಮಳೆಯಿಂದಾಗಿ ವಿವಿಧ ತಾಲೂಕಿನಲ್ಲಿ 38 ಮನೆಗಳಿಗೆ ಹಾನಿಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಮಳೆ ಸೋಮವಾರ ಕೂಡ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆ (ಸೆ.2) ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಶಾಲಾ ಶಿಕ್ಷಣ ಇಲಾಖೆ (ಆಡಳಿತ) ಉಪನಿರ್ದೇಶಕ ಸಲೀಂ ಪಾಷಾ ಆದೇಶ ಹೊರಡಿಸಿದ್ದಾರೆ.
ʼಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಮಕ್ಕಳಿಗೆ ಶಾಲೆಗೆ ಹಾಜರಾಗಲು ಅನಾನೂಕುಲವಾಗುತ್ತಿರುವ ಪ್ರಯುಕ್ತ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಒಂದು ದಿನದ ರಜೆ ಘೋಷಿಸಲಾಗಿದೆʼ ಎಂದು ಆದೇಶದಲ್ಲಿ ತಿಳಿಸಿದ್ದಾರೆ.