ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಗೊಂಡ ಪರಿಣಾಮ ವಿದ್ಯಾರ್ಥಿಗಳ ಕಲಿಕೆಗೆ ತೀವ್ರ ತೊಂದರೆಯಾಗುತ್ತಿದ್ದು, ಮಳೆ ಬಂದರೆ ಬಯಲಲ್ಲೇ ಕುಳಿತು ಪಾಠ ಕೇಳಬೇಕಾದ ಪರಿಸ್ಥಿತಿ ಇದೆ.
ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಒಟ್ಟು 87 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಟ್ಟು 2 ಕೋಣೆಗಳಿದ್ದು, ಅದರಲ್ಲಿ ಒಂದು ಕೋಣೆ ಸಂಪೂರ್ಣ ಶಿಥಿಲಗೊಂಡಿದರೆ, ಇರುವ ಇನ್ನೊಂದು ಹೊಸ ಕೋಣೆ ಬಿಸಿಯೂಟ ರೇಷನ್ ಶೇಖರಣೆಗೆ, ಮುಖ್ಯಗುರುಗಳ ಕಾರ್ಯಾಲಯವಾಗಿದ್ದು, ಅದೇ ಕೋಣೆಯಲ್ಲಿ ಎಲ್ಲ ತರಗತಿಯ ಮಕ್ಕಳನ್ನು ಕೂರಿಸಿ ಬೋಧನೆ ನಡೆಯುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಶಿಥಿಲಗೊಂಡ ಕೋಣೆಗಳು ಸ್ವಲ್ಪ ಮಳೆಯಾದರೂ ಸೋರುತ್ತದೆ, ಕೋಣೆಯಲ್ಲಿ ಮಳೆ ನೀರು ಸಂಗ್ರಹವಾಗುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುತ್ತಿದೆ. ಅಲ್ಲದೇ ಶಾಲೆಯ ಮೇಲ್ಛಾವಣಿ ಬಿರುಕು ಬಿಟ್ಟು ಕಬ್ಬಿಣದರ ಸರಳುಗಳು ತೇಲಿವೆ, ಇಂತಹ ಅವ್ಯವಸ್ಥೆಯಲ್ಲಿ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳಿಗೆ ಛಾವಣಿ ಯಾವಾಗ ಕುಸಿಯುತ್ತದೋ ಎಂಬ ಆತಂಕ ಕಾಡುತ್ತಿದೆ.

ಶಾಲೆಯ ಶಿಕ್ಷಕ ರುದ್ರಗೌಡ ಪಾಟೀಲ್ ಮಾತನಾಡಿ, ʼಶಾಲೆಯಲ್ಲಿ 87 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಒಂದು ಹಳೆ ಕಟ್ಟಡ, ಒಂದು ಹೊಸ ಕಟ್ಟಡ ಸೇರಿ ಎರಡು ಕೋಣೆಗಳಿವೆ. ಇನ್ನುಳಿದ ಕೊಠಡಿ ಸಂಪೂರ್ಣ ಶಿಥಿವಾಸ್ಥೆಗೆ ತಲುಪಿದೆ. ಕೂಡಿಸುವುದಕ್ಕೆ ಭಯವಾಗುತ್ತದೆ. ಈ ಕುರಿತು ಮೇಲಾಧಿಕಾರಿಗಳಿಗೆ, ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆʼ ಎಂದು ತಿಳಿಸಿದರು.
ʼಮಕ್ಕಳಿಗೆ ಸೂಕ್ತ ಕೊಠಡಿ ವ್ಯವಸ್ಥೆ ಇಲ್ಲದ ಕಾರಣ ಆತಂಕದಲ್ಲೇ ಪಾಠ, ಪ್ರವಚನ ನಡೆಯುತ್ತಿದೆ. ಇದರಿಂದ ಶಾಲೆಗೆ ಮಕ್ಕಳನ್ನು ಕಲಿಸಲು ನಮಗೂ ಭಯವಾಗುತ್ತಿದೆ. ಜನಪ್ರತಿನಿಧಿಗಳು , ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತುಕೊಂಡು ಹೊಸ ಕೊಠಡಿ ನಿರ್ಮಿಸಲು ಅಗತ್ಯ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕುʼ ಎಂದು ಪೋಷಕರು ಆಗ್ರಹಿಸಿದರು.