ಯಾದಗಿರಿ ಜಿಲ್ಲೆಯಾದ್ಯಂತ ಸತತ ಮೂರು ದಿನಗಳಿಂದ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳು ಸೃಷ್ಟಿಯಾಗಿದೆ. ಸತತ ಮಳೆಯಿಂದಾಗಿ ಬೆಳೆ ಹಾಗೂ ಮನೆಗಳಿಗೆ ಹಾನಿಯುಂಟಾಗಿದೆ.
ಯಾದಗಿರಿ ತಾಲೂಕಿನ ಪಗಲಾಪುರ ಗ್ರಾಮದ ಕಿರು ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಯಾದಗಿರಿಯಿಂದ ರಾಯಚೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ಈಗ ಮುಳುಗಡೆಯಾಗಿರುವುದರಿಂದ ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿದೆ.
ಅಷ್ಟೇ ಅಲ್ಲದೆ, ನಗರದ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಕೊಯಿಲೂರ ಸೇತುವೆಯೂ ಮುಳುಗಡೆ ಆಗಿದೆ. ಸೇತುವೆ ನೀರು ಜಮೀನಿಗೆ ನುಗ್ಗಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ನೀರು ಪಾಲಾಗಿದ್ದು, ರೈತರ ಬದುಕು ಕಂಗಾಲಾಗಿದೆ.
ದೋರಣಹಳ್ಳಿ, ಪಗಲಾಪುರ, ಸೇರಿ ಹಲವು ಗ್ರಾಮಕ್ಕೆ ಮಳೆ ನೀರು ನುಗ್ಗಿವೆ. ಮಳೆ ನೀರು ನುಗ್ಗಿದ ಪರಿಣಾಮ ರಸ್ತೆ ಸಂಪರ್ಕ ಸ್ಥಗ್ಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ವಾಹನ ಸವಾರರು ದಿಕ್ಕು ತೋಚದೆ ಸೇತುವೆ ಬದಿಯಲ್ಲಿ ನಿಂತು, ನೀರಿನ ಪ್ರಮಾಣ ಕಡಿಮೆಯಾದರೆ ಸಾಕು ಎಂದು ಗಂಟೆಗಟ್ಟಲೆ ಕಾದು ನಿಂತಿರುವ ದೃಶ್ಯ ಕಂಡು ಬಂತು.
ಜಿಲ್ಲಾಡಳಿತವು ಕೂಡಲೇ ರೈತರ ಬೆಳೆ ಹಾನಿಗೆ ಪರಿಹಾರ ಹಾಗೂ ಸಂತ್ರಸ್ತರಾದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮನೆ ಮೇಲೆ ಗುಡ್ಡ ಕುಸಿದು ಅಪಾರ ಹಾನಿ: ಮನೆಮಂದಿ ಪ್ರಾಣಾಪಾಯದಿಂದ ಪಾರು
ಪಗಲಾಪುರ ಸೇತುವೆ ಕುಸಿದು ವಾರಗಳೇ ಕಳೆದಿವೆ. ಆದ್ರೂ ಅಧಿಕಾರಿಗಳು ದುರಸ್ತಿ ಮಾಡುವ ಕೆಲಸಕ್ಕೆ ಮುಂದಾಗಿಲ್ಲ. ಅಧಿಕಾರಿಗಳು ಎಚ್ಚೆತ್ತು ಸೇತುವೆ ಮೇಲ್ದರ್ಜೆಗೆ ಏರಿಸಬೇಕು. ಇಲ್ಲದಿದ್ದರೆ ಯಾದಗಿರಿ ನಗರದ ಪ್ರಮುಖ ವೃತ್ತದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
