ಕಾಣೆಯಾಗಿದ್ದ 18 ವರ್ಷದ ಯುವತಿಯೊಬ್ಬರು ಮೂರು ದಿನಗಳ ನಂತರ ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದ ಮುಳ್ಳಿನ ಪೊದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಬಸವಕಲ್ಯಾಣ ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿದ್ದಾರೆ. ಆದರೆ ಯುವತಿಯ ಪೋಷಕರು ಕೆಲ ವರ್ಷಗಳಿಂದ ತಾಲೂಕಿನ ಗುಣತೀರ್ಥವಾಡಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಮೂರು ದಿನಗಳ ಹಿಂದೆ ರಾತ್ರಿ ವೇಳೆ ಯುವತಿ ನಾಪತ್ತೆಯಾಗಿದ್ದಳು.
ಯುವತಿ ತಲೆ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಾಯಗಳಿದ್ದು, ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ತಲೆ ಮೇಲೆ ಕಲ್ಲು ಎತ್ತು ಹಾಕಿ ಕೊಲೆಗೈದು ಮುಳ್ಳು ಕಂಟಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್, ಚಂದ್ರಕಾಂತ ಪೂಜಾರಿ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಅಲಿಸಾಬ್, ಕೃಷ್ಣಕುಮಾರ್ ಪಾಟೀಲ್, ಶ್ರೀನಿವಾಸ ಅಲ್ಲಪೂರ, ಪಿಎಸ್ಐ ಅಂಬರೀಶ್ ವಾಗ್ಮೋಡೆ, ಸುವರ್ಣ ಮಲಶೆಟ್ಟಿ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.