“ರೈತ ವಿರೋಧಿಯಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯ. ಆದ್ದರಿಂದ, ಮಾನವೀಯ ನೆಲೆಯಲ್ಲಿ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕೆಲಸ ಮಾಡಬೇಕು” ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧುಬಂಗಾರಪ್ಪ ಎಚ್ಚರಿಸಿದರು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕಚೇರಿ ಆವರಣದಲ್ಲಿ ಆಯೋಜಿಸಿಲಾದ ಬಗರ್ ಹುಕುಂ ಅಕ್ರಮ-ಸಕ್ರಮ ಸಮಿತಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಅರಣ್ಯ ರಕ್ಷಕರು ಹಾಗೂ ವನ ಪಾಲಕರ ಅಮಾನವೀಯ ವರ್ತನೆ ಅಕ್ಷ್ಯಮ್ಯ ಅಪರಾಧ. ಅನೇಕ ವರ್ಷದಿಂದ ಕಾನು, ಸೊಪ್ಪಿನ ಬೆಟ್ಟ, ಹುಲ್ಲುಜಾಡು, ಈ ಪ್ರದೇಶಗಳಲ್ಲಿ ಕೃಷಿ ಮಾಡಿಕೊಂಡು ಬಂದಿರುವ ರೈತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುವ ಕಾರ್ಯ ಮಾಡುತ್ತಿದ್ದಾರೆ. ಈ ರೀತಿಯ ವರ್ತನೆ ಸರಿಯಲ್ಲ” ಎಂದರು.
“ಅರಣ್ಯ ಭೂಮಿ ವಿಚಾರವಾಗಿ ನ್ಯಾಯಲಯದ ಹಂತದಲ್ಲಿ ತನಿಖೆ ನಡೆಯುತ್ತಿದೆ. ಆದ್ದರಿಂದ, ಅರಣ್ಯ ಅಧಿಕಾರಿಗಳು ಎಚ್ಚರಿಕೆಯ ಹೆಜ್ಜೆ ಇಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ರೈತರನ್ನು ಏಕಾ ಏಕಿ ಒಕ್ಕಲೆಬ್ಬಿಸುವ ಕ್ರಮದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಅಧಿಕಾರಿಗಳು ತಾಳ್ಮೆಯ ಗುಣ ಬೆಳೆಸಿಕೊಳ್ಳಬೇಕು” ಎಂದು ತಾಕೀತು ಮಾಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮನೆ ಮೇಲೆ ಗುಡ್ಡ ಕುಸಿದು ಅಪಾರ ಹಾನಿ: ಮನೆಮಂದಿ ಪ್ರಾಣಾಪಾಯದಿಂದ ಪಾರು
“ಅರಣ್ಯ ಮತ್ತು ಕಂದಾಯ ಭೂಮಿಗೆ ಸಂಬಂಧಪಟ್ಟಂತೆ ಅನೇಕ ವರ್ಷದಿಂದ ಸಮಸ್ಯೆಗಳು ಜೀವಂತವಾಗಿವೆ. ಈ ಎಲ್ಲ ತೊಡಕುಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಬಗರ್ ಹುಕುಂ ಸಮಿತಿಗೆ ಸಲ್ಲಿಸಿರುವ ಸಾಕಷ್ಟು ಅರ್ಜಿಗಳನ್ನು ಈ ಹಿಂದೆ ತಿರಸ್ಕರಿಸಲಾಗಿದೆ. ಇದರಿಂದ, ಪಾರಂಪರಿಕವಾಗಿ ಸಾಗುವಳಿ ಮಾಡಿಕೊಂಡು ಬಂದ ಕುಟುಂಬಗಳಿಗೆ ತೊಂದರೆ ಆಗಲಿದೆ. ರೈತರಿಂದ ಪುನಃ ದೂರುಗಳನ್ನು ಪಡೆದು ಕಾನೂನಿನ ಪ್ರಕಾರ ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳಬೇಕು” ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಯತೀಶ್, ತಾಲ್ಲೂಕು ಇ.ಒ ಪ್ರದೀಪ್ ಕುಮಾರ್, ತಹಶೀಲ್ದಾರ್ ಮಂಜುಳಾ, ಡಿಎಫ್ಒ ಮೋಹನ್ ಕುಮಾರ್ ಡಿ, ಆಎಫ್ಒ ಶಬುಬ್ತಾ ಶೇಖ್,ಪರುಶುರಾಮ, ಜಾವೀದ್ ಅಹ್ಮದ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ ಶೇಖರ್ ಸೇರಿದಂತೆ ಬಗರ್ ಹುಕುಂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
