ಮುಡಾ ಪ್ರಕರಣದಲ್ಲಿ ತನ್ನ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮತ್ತೆ ಮುಂದೂಡಿದೆ.
ಸೆಪ್ಟೆಂಬರ್ 2 ಮಧ್ಯಾಹ್ನ 2:30ರಂದು ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ದೂರುದಾರರ ಪರ ವಕೀಲರು ಮತ್ತು ಸಿಎಂ ಪರ ವಕೀಲರ ಮನವಿಯ ಮೇರೆಗೆ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ.
ಇದನ್ನು ಓದಿದ್ದೀರಾ? ಮೈಸೂರು | ಮುಡಾ ಮಾಜಿ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು
ಇಂದು ದೂರುದಾರ ಮೈಸೂರಿನ ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲ ಕೆ ಜಿ ರಾಘವನ್ ವಾದ ಮಂಡಿಸಿದ್ದಾರೆ. “ಸಣ್ಣ ಪ್ರಮಾಣದ ಅನುಮಾನಗಳಿದ್ದರೂ ತನಿಖೆಗೆ ಅನುಮತಿಸಬೇಕು. ಅದನ್ನು ಕಡೆಗಣಿಸಬಾರದು” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಬಳಿ ಮನವಿ ಮಾಡಿದ್ದಾರೆ.
“1998-99ರವರೆಗೆ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದರು. 2004-05ರವರಗೆಗೆ ಮತ್ತೆ ಡಿಸಿಎಂ ಆಗಿದ್ದರು. 2013-18ರವರೆಗೆ ಸಿಎಂ ಆಗಿದ್ದರು. ಈಗ 2023ರಿಂದ ಸಿಎಂ ಆಗಿದ್ದಾರೆ. ಇಷ್ಟು ಸಮಯದವರೆಗೂ ಸಿಎಂ ಗಮನಕ್ಕೆ ಬಂದಿಲ್ಲವೇ” ಎಂದು ಕೆ ಜಿ ರಾಘವನ್ ಪ್ರಶ್ನಿಸಿದ್ದಾರೆ.
ವಿಚಾರಣೆಯನ್ನು ಸೆಪ್ಟೆಂಬರ್ 9ರ ಮಧ್ಯಾಹ್ನ 2:30 ಗಂಟೆಗೆ ಮುಂದೂಡಿಕೆ ಮಾಡಿರುವ ಪೀಠವು, ಸೆಪ್ಟೆಂಬರ್ 12ರ ಒಳಗಾಗಿ ಈ ಪ್ರಕರಣದ ಎಲ್ಲಾ ವಾದಗಳು ಮುಗಿಯಬೇಕು. ಇನ್ನಷ್ಟು ವಿಳಂಬ ಸರಿಯಲ್ಲ ಎಂದು ತಿಳಿಸಿದೆ.
ಅಡ್ವೊಕೇಟ್ ಜನರಲ್ ಕೋರಿಕೆಯಂತೆ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದ ನ್ಯಾಯಾಲಯ.
— ಬಾರ್ & ಬೆಂಚ್ – Kannada Bar & Bench (@Kbarandbench) September 2, 2024
