- ಬಿಸಿಯೂಟ ತರಲು ಪ್ರತಿದಿನ 2 ಕಿಮೀ ಪ್ರಯಾಣಿಸುವ ಮುಖ್ಯ ಶಿಕ್ಷಕ!
- ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತವರು ಜಿಲ್ಲೆಯಲ್ಲಿರುವ ಕೋಟೆಗಂಗೂರು ಶಾಲೆ
ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳ ದುಸ್ಥಿತಿಗಳು ಎಷ್ಟೇ ಹೇಳಿದರೂ ಮುಗಿಯದಷ್ಟಿವೆ. ಕೆಲವೊಂದು ಶಾಲೆಗಳಿಗೆ ಕಟ್ಟಡಗಳಿದ್ದರೆ ಮಕ್ಕಳಿರಲ್ಲ, ಇನ್ನು ಕೆಲವಲ್ಲಿ ಮಕ್ಕಳಿದ್ದರೆ ಮೂಲಭೂತ ಸೌಕರ್ಯಗಳಿರಲ್ಲ. ಇಂಥದ್ದೇ ಪರಿಸ್ಥಿತಿಗೆ ಶಿವಮೊಗ್ಗ ಜಿಲ್ಲೆಯೂ ಹೊರತಾಗಿಲ್ಲ.
ಅಂದಹಾಗೆ, ಶಿವಮೊಗ್ಗ – ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪನವರ ತವರು ಜಿಲ್ಲೆ. ಶಿವಮೊಗ್ಗ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿರುವ ಕೋಟೆಗಂಗೂರು ಶಾಲೆ ನಾನಾ ಸಮಸ್ಯೆಗಳಿಂದ ಬಳಲುತ್ತಿದೆ. ಈ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಲುಪಿಸಲು ಪ್ರತಿದಿನವೂ ಮುಖ್ಯ ಶಿಕ್ಷಕ 2 ಕಿ.ಮೀ ಪ್ರಯಾಣಿಸಬೇಕಾದ ದುಸ್ಥಿತಿ ಇದೆ. ಅದಕ್ಕಾಗಿ ಮಕ್ಕಳೋ ಅಥವಾ ಇತರೆ ಯಾರನ್ನಾದರೂ ಸಹಾಯಕರಾಗಿ ಕರೆದುಕೊಂಡ ಹೋಗಬೇಕಾದ ಅನಿವಾರ್ಯತೆ.
ಹೌದು. ಇದು ಶಿವಮೊಗ್ಗ ತಾಲೂಕಿನ ಕೋಟೆಗಂಗೂರು ಎಂಬ ಕುಗ್ರಾಮದ ಜಮೀನು, ಗದ್ದೆ, ಕೆರೆಯಂತಿರುವ ನಿರ್ಜನ ಪ್ರದೇಶದಲ್ಲಿರುವ ಶಾಲೆಯ ಪರಿಸ್ಥಿತಿ. ಈ ಶಾಲೆಗೆ ಸರಿಯಾದ ಮೂಲಭೂತ ಸೌಕರ್ಯವೇ ಇಲ್ಲ. ವಿಪರ್ಯಾಸ ಏನೆಂದರೆ ಒಂದು ಶಾಲೆಗೆ ಮೂರು ಕಟ್ಟಡ ಇದೆ. ಆದರೆ, ಅದು ಇರುವುದು ಒಂದೇ ಪ್ರದೇಶದಲ್ಲಿ ಅಲ್ಲ. ಬೇರೆ ಬೇರೆ ಭಾಗದಲ್ಲಿ ಎಂಬುದು ವಾಸ್ತವ. ಅದರಲ್ಲಿ ಒಂದು ಕಟ್ಟಡ ಇರುವುದು ಎರಡೂವರೆ ಕಿಲೋ ಮೀಟರ್ ದೂರದಲ್ಲಿ.

ಮಧ್ಯಮ ಹಾಗೂ ಬಡ ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿರುವ ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಮೂಲಭೂತ ಸೌಕರ್ಯಗಳೇ ಇಲ್ಲ. ಈ ಒಂದೇ ಶಾಲೆಯ ಎರಡು ಕಟ್ಟಡಗಳ ನಡುವಿನ ಅಂತರ 2 ಕಿ.ಮೀ.. ಇನ್ನು, ಬಿಸಿಯೂಟದ ಅಡುಗೆ ಮನೆ ಈ ಎರಡೂ ಕಟ್ಟಡಗಳಿಂದ ಮತ್ತಷ್ಟು ದೂರದಲ್ಲಿದೆ ಎಂದರೆ ನೀವು ನಂಬಲೇಬೇಕು. ಹಾಗಾಗಿ, ಪ್ರತಿದಿನ ಎರಡೆರಡು ಕಟ್ಟಡಕ್ಕೆ ಮಧ್ಯಾಹ್ನ ಬಿಸಿಯೂಟವನ್ನು ಹೊತ್ತೊಯ್ಯುವ ತಲೆನೋವು ಶಿಕ್ಷಕರದ್ದಾಗಿದೆ. ಅದಕ್ಕಾಗಿ ಶಿಕ್ಷಕರು ತಮ್ಮದೇ ದ್ವಿಚಕ್ರ ವಾಹನವನ್ನು ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಅದಕ್ಕಾಗಿ ಮಕ್ಕಳೋ ಅಥವಾ ಇತರೆ ಯಾರನ್ನಾದರೂ ಸಹಾಯಕರಾಗಿ ಕರೆದುಕೊಂಡ ಹೋಗಬೇಕಾದ ಅನಿವಾರ್ಯತೆ ಕೂಡ ಇದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದ್ದರೂ, ಈವರೆಗೆ ಪರಿಹಾರ ಸಿಕ್ಕಿಲ್ಲ.

ಒಂದೆಡೆ ಶಿಕ್ಷಕರದ್ದು ಈ ಸಮಸ್ಯೆಯಾದರೆ, ಮಂಡಿ ಉದ್ದದ ನೀರು ದಾಟಿ ಶಾಲೆಗೆ ಹೋಗುವ ಅಪಾಯ ಮಕ್ಕಳದ್ದು. ಕೋಟೆಗಂಗೂರು ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 1ರಿಂದ 5ನೇ ತರಗತಿಯ ಕಟ್ಟಡ ಊರೊಳಗಿದೆ. ಈ ಶಾಲೆಯಲ್ಲಿ ಸದ್ಯ 67 ಮಕ್ಕಳು ವಿದ್ಯಾರ್ಜನೆ ಗಳಿಸುತ್ತಿದ್ದರೆ, ಇದೇ ಶಾಲೆಯ ಭಾಗವಾಗಿರುವ 6ರಿಂದ 8ನೇ ತರಗತಿ ಕಟ್ಟಡವು ಊರಿಂದ ಹೊರಗೆ ಇದೆ. ಇಲ್ಲಿ ಪ್ರಸ್ತುತ ದಾಖಲಾತಿ 78 ಮಕ್ಕಳು. ಒಂದು ಕಟ್ಟಡ ಒಂದು ಕಡೆ, ಇನ್ನೊಂದು ಕಟ್ಟಡ ಇನ್ನೊಂದೆಡೆ ಇದ್ದರೆ, ಈ ಎರಡೂ ಶಾಲಾ ಕಟ್ಟಡಗಳ ಅಡುಗೆ ಕೋಣೆ 2 ಕಿ ಮೀ ದೂರಲ್ಲಿದೆ. ಇದು ಶಿಕ್ಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೋಟೆಗಂಗೂರು ಶಾಲೆ ಇರುವುದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲಾ ಕೇಂದ್ರದ ಶಿವಮೊಗ್ಗ ನಗರದಿಂದ 10 ಕಿ ಮೀ ದೂರದಲ್ಲಿದೆ. ಊರೊಳಗಿದ್ದ ಶಿಥಿಲ ಕಟ್ಟಡವನ್ನು ಕೆಡವಿದ ಬಳಿಕ ಗದ್ದೆಗಳ ಮಧ್ಯೆಯ ಜಮೀನಿನಲ್ಲಿ ಮೂಲಸೌಲಭ್ಯಗಳೇ ಇಲ್ಲದ ಕಟ್ಟಡ ನಿರ್ಮಿಸಿದ ಪರಿಣಾಮ ಮಕ್ಕಳು, ಶಿಕ್ಷಕರು ಮತ್ತು ಬಿಸಿಯೂಟ ನೌಕರರು ಪ್ರತಿದಿನವೂ ಸಂಕಷ್ಟ ಎದುರಿಸುವಂತಾಗಿದೆ.

2017-18ರ ವರೆಗೆ ಶಾಲೆಯಲ್ಲಿ ಎಲ್ಲವೂ ಸರಿ ಇತ್ತು. ಶಾಲೆ ಪ್ರಾರಂಭವಾಗಿದ್ದು 1955ರಲ್ಲಿ. ಅಂದಿನ ಕಿರಿಯ ಪ್ರಾಥಮಿಕ ಶಾಲೆಯು ಮೇಲ್ದರ್ಜೆಗೇರಿಸಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತೀಕರಿಸಲಾಗಿತ್ತು. ಹಳೇ ಕಟ್ಟಡದಲ್ಲಿ ಮೂರು ಕೊಠಡಿಗಳ ಪೈಕಿ ಒಂದು ಕಟ್ಟಡ ಶಿಥಿಲಗೊಂಡಿದ್ದರಿಂದ ಶಿಕ್ಷಣಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಕೆಡವಲಾಗಿತ್ತು. 2019-20ರಲ್ಲಿ ಮೂರು ಕೊಠಡಿಗಳ ಹೊಸ ಕಟ್ಟಡವನ್ನು ಹಳೇ ಕಟ್ಟಡದ ಜಾಗದಲ್ಲಿ ಕಟ್ಟುವ ಬದಲು ಊರ ಹೊರಗೆ 2 ಕಿ.ಮೀ. ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ನಿರ್ಮಾಣ ಮಾಡಲು ಪಂಚಾಯಿತಿ ಆಡಳಿತವು ‘ಹಾಳೂರ್’ ಎಂಬಲ್ಲಿ ಸ್ಥಳ ಗುರುತಿಸಿದ್ದರಿಂದ ಶಿಕ್ಷಣ ಇಲಾಖೆ ಕಟ್ಟಡ ನಿರ್ಮಿಸಿತ್ತು.
ಕಟ್ಟಡಕ್ಕೆ ಸಂಪರ್ಕ ರಸ್ತೆ, ವಿದ್ಯುತ್, ಕುಡಿಯುವ ನೀರು, ಕಾಂಪೌಂಡ್ ಸೇರಿದಂತೆ ಯಾವುದೇ ಮೂಲ ಸೌಲಭ್ಯಗಳು ಇಲ್ಲದ್ದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗದೆ ಎರಡು ವರ್ಷ ಆ ಕಟ್ಟಡ ಹಾಗೆಯೇ ಇತ್ತು. ಈ ನಡುವೆ ಪಂಚಾಯಿತಿ ಆಡಳಿತವು ಎಲ್ಲ ರೀತಿಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿ, ಶಿಕ್ಷಕರ ಮೇಲೆ ಒತ್ತಡ ತಂದು ಹೊಸ ಕಟ್ಟಡಕ್ಕೆ ಮಕ್ಕಳನ್ನು ಸ್ಥಳಾಂತರ ಮಾಡಿತ್ತು.

ಊರು ಮತ್ತು ಶಾಲೆ ನಡುವೆ ಕೆರೆ ಕೋಡಿಯ ಹಳ್ಳವಿದ್ದು ಮಕ್ಕಳು ಶಾಲೆಗೆ ಹೋಗಿ ಬರಲು ಮಳೆಗಾಲದ ನಾಲ್ಕು ತಿಂಗಳು ತುಂಬಿ ಹರಿಯುವ ಹಳ್ಳವನ್ನು ದಾಟಬೇಕು. ಕಳೆದ ತಿಂಗಳು ಜೋರು ಮಳೆಯಲ್ಲಿ ಕೆರೆ ಕೋಡಿಯಿಂದ ಭಾರೀ ಪ್ರಮಾಣದ ನೀರು ಹರಿದು ಹಳ್ಳ ದಾಟಲು ಸಾಧ್ಯವಾಗದೆ ಮಕ್ಕಳು ಶಾಲೆಗೆ 4 ಕಿ.ಮೀ. ಸುತ್ತಿ ಬಳಸಿ, ಶಾಲೆಗೆ ತೆರಳುತ್ತಿದ್ದರು.
ಹೊಸ ಕಟ್ಟಡದಲ್ಲಿ ಏಳು ಕೊಠಡಿಗಳನ್ನು ನಿರ್ಮಿಸಿ ಸಂಪೂರ್ಣ ಶಾಲೆಯನ್ನು ಸ್ಥಳಾಂತರ ಮಾಡಿದ್ದಿದ್ದರೆ ಸಮಸ್ಯೆಯೇ ಎದುರಾಗುತ್ತಿರಲಿಲ್ಲ. ಪಂಚಾಯಿತಿ ಆಡಳಿತ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ವಿವೇಚನಾರಹಿತ ನಿರ್ಧಾರವು, ಸಮಸ್ಯೆಯನ್ನು ತಂದೊಡ್ಡಿದೆ. ಅಧಿಕಾರಿಗಳ ಗೊಂದಲಕಾರಿ ನಿರ್ಧಾರದಿಂದಾಗಿ ನಾಲ್ಕು ವರ್ಷದ ಹಿಂದೆ 280 ಇದ್ದ ಮಕ್ಕಳ ಸಂಖ್ಯೆ ಈಗ 155ಕ್ಕೆ ಇಳಿದಿದೆ.

ನಿಯಮಾನುಸಾರ ಒಂದೇ ಶಾಲೆಗೆ ಎರಡೆರಡು ಕಡೆ ಬಿಸಿಯೂಟ ಅಡುಗೆ ಪರಿಕರ ಮತ್ತು ಸೌಲಭ್ಯಗಳನ್ನು ಒದಗಿಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ, ಭಡ್ತಿ ಮುಖ್ಯ ಶಿಕ್ಷಕರಾಗಿರುವ ಮಂಜಪ್ಪ ಒಬ್ಬರೇ ದಿನ ನಿತ್ಯ ನೀರು, ಹಾಲು, ಬಿಸಿಯೂಟ ತರಲು ಮತ್ತು ಪಾತ್ರೆಗಳನ್ನು ವಾಪಸ್ಸು ತೆಗೆದುಕೊಂಡು ಹೋಗಲು ದಿನಕ್ಕೆ ನಾಲ್ಕು ಬಾರಿ ಬೈಕ್‌ಗಳಲ್ಲಿ ಓಡಾಡುತ್ತಿದ್ದಾರೆ. ಈ ನಡುವೆ ಎರಡು ಬಾರಿ ಬಿಸಿ ಸಾರು ಶಿಕ್ಷಕರ ಮೈಮೇಲೆ ಚಲ್ಲಿ ಬೊಬ್ಬೆ ಕೂಡ ಉಂಟಾಗಿತ್ತು. ಸದ್ಯ ಶಿಕ್ಷಕರಿಗೆ ಪಾಠಕ್ಕಿಂತ ಬಿಸಿಯೂಟದ ಹೊರೆಯೇ ಜಾಸ್ತಿಆಗಿದೆ. ಇದರ ಸಂಬಂಧ ಪೋಷಕರು ಕೂಡ ಸಭೆ ನಡೆಸಿ, ವ್ಯವಸ್ಥೆ ಕಲ್ಪಿಸಿಕೊಡುವಂತೆ ಕೇಳಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.
ಈ ಸಂಬಂಧ ಪೋಷಕರಾದ ಸಯ್ಯದ್ ಅಹಮದ್ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಶಾಲೆಯಲ್ಲಿ ಶಿಕ್ಷಕರು ಉತ್ತಮ ಪಾಠ ಮಾಡುತ್ತಿದ್ದಾರೆ. ಊರಿನ ಆಚೆ ಇರುವ ಹಾಳೂರ್ ನಿರ್ಜನ ಪ್ರದೇಶವಾಗಿದೆ. ಸುತ್ತಮುತ್ತಲಿನಲ್ಲಿ ಮಕ್ಕಳಿಗೆ ಯಾವುದೇ ಸುರಕ್ಷತೆ ಇಲ್ಲ. ಈ ಅಧಿಕಾರಿಗಳು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡ ಯಾರೂ ಕೂಡ ಈವರೆಗೆ ಸ್ಪಂದಿಸಿಲ್ಲ” ಎಂದು ತಿಳಿಸಿದರು.
ಗ್ರಾ.ಪಂ. ಪಿ ಡಿ ಓ ಶಿವಕುಮಾರ್ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಶಾಲೆಗೆ ವಿದ್ಯುತ್ ಸಂಪರ್ಕ ನೀಡುವ ಸಲುವಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ವಾರದಲ್ಲಿ ವಿದ್ಯುತ್ ವ್ಯವಸ್ಥೆ ಮಾಡಿಸಲಾಗುವುದು. ಮೋಟಾರ್ ಇಟ್ಟು ಶಾಲೆಗೆ ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ. ಶಾಲೆಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು. ಜಮೀನು ಗದ್ದೆ ಖಾಸಗಿ ಜಾಗ ಆಗಿರುವ ಕಾರಣ ನಾವು ಕೂಡ ರಸ್ತೆ ಮಾಡಿಕೊಡಲು ಕೇಳಿದ್ದೇವೆ. ಆದರೆ ಅವರು ರಸ್ತೆ ಮಾಡಲು ಒಪ್ಪಿಲ್ಲ” ಎಂದರು.

“ಶಾಲೆಯ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಮೂರು ಬಾರಿ ಭೇಟಿ ನೀಡಿದ್ದೇನೆ. ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇನ್ನೂ ಎರಡು ಕೊಠಡಿ ವ್ಯವಸ್ಥೆ ಮಾಡಿಕೊಂಡು ಶಾಲೆಯನ್ನು ಊರಿನೊಳಗೆ ಮಾಡಬೇಕು ಎಂದು ಯೋಚಿಸುತ್ತಿದ್ದೇವೆ” ಎಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಈ ದಿನ.ಕಾಮ್ಗೆ ತಿಳಿಸಿದರು.
ಶಿವಮೊಗ್ಗ ಗ್ರಾಮಾಂತರ ಶಾಸಕಿಯಾಗಿರುವ ಶಾರದಾ ಪುರ್ಯ ನಾಯ್ಕ್ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಈ ಶಾಲಾ ಕಟ್ಟಡದ ಕಾಮಗಾರಿಯು ನನ್ನ ಅವಧಿಯಲ್ಲಿ ಆಗಿಲ್ಲ. ಈ ಹಿಂದೆ ಶಾಸಕರಾಗಿದ್ದ ಕೆ ಬಿ ಅಶೋಕ್ ನಾಯ್ಕ್ ಅವರ ಅವಧಿಯಲ್ಲಿ ಆಗಿರುವಂಥದ್ದು. ಶಾಲೆ ಕಟ್ಟುವಾಗಲೇ ಅಧಿಕಾರಿಗಳು ವಿವೇಚನೆ ಬಳಸಿ ಕಟ್ಟಿಸಬೇಕಿತ್ತು. ಈ ಬಗ್ಗೆ ನಾನು ಕೂಡ ಬಿಇಓ ಜೊತೆಗೆ ಸಭೆ ನಡೆಸಿ ಇದರ ಕುರಿತು ಏನಾದ್ರು ರೂಪರೇಷೆ ಸಿದ್ದಪಡಿಸಲು ನೋಡುತ್ತೇನೆ. ಆದಷ್ಟು ಊರಿನೊಳಗೆ ಶಾಲೆ ಮಾಡಿಕೊಡಲು ಯೋಚಿಸುತ್ತಿದ್ದೇನೆ” ಎಂದರು.
ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಕಾರ್ಯೋನ್ಮುಖರಾಗಿ ಈ ಶಾಲೆಯನ್ನು ಊರೊಳಗೆ ಸ್ಥಳಾಂತರಿಸಿ. ಸಮರ್ಪಕ ವ್ಯವಸ್ಥೆಯೊಂದಿಗೆ ಮಾಡಿಕೊಡಬೇಕು ಎಂಬುದು ಎಲ್ಲರ ಆಗ್ರಹವಾಗಿದೆ.
ಪೋಷಕರಿಗೆ ಸುರಕ್ಷತೆಯ ಭಯ: ಸುಸಜ್ಜಿತ ಗ್ರಾಮ ಪಂಚಾಯತ್ ಕಾರ್ಯಾಲಯ ಬಳಸಲು ಆಗ್ರಹ
ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ದಿನನಿತ್ಯ ಕೇಳಿ ಬರುತ್ತಿದೆ. ಈ ಶಾಲೆ ಇರುವುದು ನಿರ್ಜನ ಪ್ರದೇಶದಲ್ಲಿ. ಮಕ್ಕಳು ಶಾಲೆಗೆ ತೆರಳುವ ವೇಳೆ ಏನಾದರೂ ಸಮಸ್ಯೆ ಉಂಟಾದಲ್ಲಿ ಯಾರು ಇದಕ್ಕೆ ಹೊಣೆಗಾರರು? ಅಪಾಯಗಳು ಸಂಭವಿಸುವ ಮುನ್ನವೇ ಶಿವಮೊಗ್ಗ ಜಿಲ್ಲಾಡಳಿತ, ಈ ಶಾಲೆಯನ್ನು ಕೂಡಲೇ ಸ್ಥಳಾಂತರ ಮಾಡಬೇಕು. ಊರಿನಲ್ಲಿ ಸುಸಜ್ಜಿತವಾಗಿ ಗ್ರಾಮ ಪಂಚಾಯತ್ ಕಾರ್ಯಾಲಯವಿದೆ. ಆದರೆ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಇರುವ ಕಟ್ಟಡ ಇಲ್ಲ ಎಂಬುದು ಪೋಷಕರ ದೂರು.

ತಾತ್ಕಾಲಿಕವಾಗಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲೆ ವ್ಯವಸ್ಥೆ ಸರಿಪಡಿಸಿಕೊಡುವವರೆಗೂ ಗ್ರಾಮ ಪಂಚಾಯತ್ ಕಾರ್ಯಾಲಯವನ್ನು ಶಾಲೆಗೆ ಬಿಟ್ಟು ಕೊಡಲಿ. ಶಾಲೆ ಇರುವ ಕಟ್ಟಡದಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯ ಮಾಡಲಿ ಎಂಬ ಆಗ್ರಹ ಕೂಡ ಕೇಳಿಬಂದಿದೆ.



ಯಾರಾದ್ರೂ ಪೊಲಿಟಿಷಿಯನ್ಸ್ ಒಂದು ಪ್ರೈವೇಟ್ ಶಾಲೇ ಮಾಡಲಿ ಯಾಕೆಂದರೆ ಎಲ್ಲೆಲ್ಲಿ ನೋಡಿದರು ಪ್ರೈವೇಟ್, ಪ್ರೈವೇಟ್ ಅದೇ
ಕಾಣಸಿಗುವುದು