ದೇಶದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ಖಂಡಿಸಿ ಹೊಸಪೇಟೆಯಲ್ಲಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಮೌನ ಪ್ರತಿಭಟನೆ ನಡೆಯಿತು.
ಹೊಸಪೇಟೆಯ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಒಕ್ಕೂಟ ಪ್ರಮುಖರು ಕೈಯಲ್ಲಿ ಕಪ್ಪು ಬಟ್ಟೆ, ಭಿತ್ತಿ ಪತ್ರ ಹಿಡಿದು ಪ್ರದರ್ಶಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಕಲ್ಕತ್ತಾದಲ್ಲಿ ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಇಡೀ ಜಗತ್ತೇ ಬೆಚ್ಚಿ ಬೀಳುವಂತಾಗಿದೆ. ಸರ್ಕಾರ ಮಕ್ಕಳ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕು. ಆದರೆ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಲ್ಲಿ ವಿಫಲವಾಗುತ್ತಿದೆʼ ಎಂದು ಆರೋಪಿಸಿದರು .
ಮಹಿಳೆಯ ಖಾಸಗಿ ಬದುಕಿನ ಕುರಿತು ಸಮಾಜ ಕೀಳಾಗಿ ನೋಡುತ್ತಿರುವುದು ಖಂಡನೀಯವಾಗಿದೆ. ʼನಮ್ಮ ಉಡುಪು- ನಮ್ಮ ಹಕ್ಕು, ನಮ್ಮ ಬದುಕು -ನಮ್ಮ ಹಕ್ಕುʼ ಎನ್ನುವಂತೆ ಮಹಿಳೆ ನಿರ್ಭಯವಾಗಿ ಸ್ವಾತಂತ್ರ್ಯದ ಬದುಕು ಸಾಗಿಸಬಹುದಾಗಿದೆʼ ಎಂದು ಹೇಳಿದರು.
ಈ ವೇಳೆ ರಾಜ್ಯ ಸಮನ್ವಯ ಸಮಿತಿಯ ಡಾ.ಸಬಿಯಾ ಭೂಮಿಗೌಡ, ವಾಣಿ ಪೆರಿಯೋಡಿ, ಸುಮನ, ಗೌರಿ, ಎಸ್.ಆರ್.ಹಿರೇಮಠ, ಹಾಗೂ ವಿಜಯನಗರ ಜಿಲ್ಲಾ ಸಮನ್ವಯ ಸಮಿತಿಯ ಸದಸ್ಯರು, ಹೊಸಪೇಟೆ ನಗರದ ದಲಿತ, ರೈತ, ಜನಪರ ಸಂಘಟನೆಗಳ ಪ್ರಮುಖರು, ಸ್ಥಳೀಯ ಕಲಾವಿದರು ಭಾಗವಹಿಸಿದ್ದರು.
