ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಂದೆ ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಸಮಸ್ಯೆಗಳನ್ನು ಹೇಳಲು ಹೋದಾಗ ಸ್ಥಳೀಯ ನಾಯಕರು ತಡೆದಿದ್ದರಿಂದ ಸಚಿವರ ಎದುರೇ ಕೈ ಕಾರ್ಯಕರ್ತರ ತಳ್ಳಾಟ, ವಾಗ್ವಾದ ನಡೆದಿದೆ
ಚಿತ್ರದುರ್ಗ ಜಿಲ್ಲಾ ಪ್ರವಾಸ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಏರ್ಪಡಿಸಿದ್ದರು. ಸಭೆಯಲ್ಲಿ ಕಾರ್ಯಕರ್ತರ ಸಚಿವರ ಮುಂದೆ ಸ್ಥಳೀಯ ಸಭಸ್ಯೆ ಹೇಳಲು ಹೋದಾಗ ಕೆಲ ನಾಯಕರು ತಡೆದ ಕಾರಣ ಸಚಿವರ ಮುಂದೆ ಹೖಡ್ರಾಮ ಸೃಷ್ಠಿಯಾಗಿದೆ.
ಸಚಿವರಿದ್ದ ವೇದಿಕೆಯಲ್ಲಿ ಚಿತ್ರದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀಕಾಂತ್ ಮಾತನಾಡುತ್ತಾ ರಾಜ್ಯದಲ್ಲಿ ಕಾರ್ಯಕರ್ತರ ಶ್ರಮದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಅಧಿಕಾರಕ್ಕೆ ಬಂದ ನಂತರ ಕಾರ್ಯಕರ್ತರದು ನಾಯಿ ಪಾಡಾಗಿದೆ, ನಮ್ಮ ಸಮಸ್ಯೆಗಳನ್ನು ಕೇಳುವವರು ಯಾರು ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆ, ವೇದಿಕೆ ಮೇಲಿದ್ದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ, ಮಾತನಾಡಲು ಬಿಡದೆ ಮೈಕ್ ಕಿತ್ತುಕೊಳ್ಳಲು ಪ್ರಯತ್ನಿಸಿ, ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಕಾರ್ಯಕರ್ತರ ಬೆಂಬಲಿಗರ ಮಧ್ಯೆ ನೂಕಾಟ ವಾಗ್ವಾದ ನಡೆದು ಮಧ್ಯೆ ಪ್ರವೇಶಿಸಿದ ಇತರ ಮುಖಂಡರು ಸಚಿವರು ವಾತಾವರಣ ತಿಳಿಗೊಳಿಸಿದರು.

ನಂತರ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನನಗೆ ಜಿಲ್ಲೆಗೆ ಆಗಮಿಸಿದಾಗ ನೀವು ನನಗೆ ನೀಡಿದ ಅದ್ದೂರಿಯ ಸ್ವಾಗತವನ್ನು ನೋಡಿ ನಾನು ಮೂಕವಿಸ್ಮಿತಳಾಗಿದ್ದೇನೆ. ಆದರೆ ಸಭೆಯಲ್ಲಿ ನಡೆದ ಈ ಒಂದು ಸಣ್ಣ ಘಟನೆ ಹೊರಗೆ ತಪ್ಪು ಸಂದೇಶ ನೀಡಲಿದೆ. ಬೇರೆ ಎಲ್ಲವೂ ಮರೆತು ಹೋಗಿ ಇದೊಂದು ಸಣ್ಣ ಗಲಾಟೆಯ ಘಟನೆಯೇ ಮಾಧ್ಯಮಗಳಲ್ಲಿ ರಾರಾಜಿಸುತ್ತದೆ. ನಿಮ್ಮ ಅಹವಾಲುಗಳು ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಕೊಳ್ಳೋಣ. ನಿಮ್ಮ ಸಮಸ್ಯೆಗಳನ್ನು ಪಕ್ಷದ ಅಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ಇದು ಈ ಬಾರಿಯ ಸಮಸ್ಯೆಯಲ್ಲ. ಪ್ರತಿ ಬಾರಿಯೂ ಜಿಲ್ಲಾ ಕಾಂಗ್ರೆಸ್ ನಲ್ಲಿ ಈ ರೀತಿ ಆಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಅದನ್ನು ರಾಜ್ಯದ ಪ್ರಮುಖರು ಬಂದಾಗ ಅವರ ಎದುರು ಹೇಳಲು ಬಿಡುವುದಿಲ್ಲ. ಪಕ್ಷದ ಕಾರ್ಯಕರ್ತರ ಸಮಸ್ಯೆಗಳನ್ನು ಅವರ ಎದುರು ಹೇಳಲು ಬಿಡುವುದಿಲ್ಲ. ಹಾಗಿದ್ದರೆ ಯಾರ ಬಳಿ ಹೇಳಿಕೊಳ್ಳುವುದು. ಜಿಲ್ಲೆಯಲ್ಲಿ ಗಾಂಜಾ, ಬಾಲ್ಯ ವಿವಾಹ ಸೇರಿದಂತೆ ಇತರ ಜ್ವಲಂತ ಸಮಸ್ಯೆಗಳಿವೆ. ಕಾರ್ಯಕರ್ತರ ಸಮಸ್ಯೆಗಳೂ ಇವೆ. ಇವುಗಳನ್ನು ಜಿಲ್ಲಾ ಅಧ್ಯಕ್ಷರು, ಕಾರ್ಯಾಧ್ಯಕ್ಷ, ಇತರ ಮುಖಂಡರು ರಾಜ್ಯದ ನಾಯಕರು ಬಂದಾಗ ಹೇಳಲು ಬಿಡದೆ ಕಾರ್ಯಕರ್ತರ ಪಾಡು ನಾಯಿ ಪಾಡಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ತಾಜ್ ಪೀರ್, ಕಾರ್ಯಧ್ಯಕ್ಷ ಹಾಲಸ್ವಾಮಿ, ಮುರಳಿಧರ್ ಹಾಲಪ್ಪ, ಟಿ ರಘು, ಮೋಕ್ಷ ರಾಣಿ, ಮೆಹಬೂಬ್ ಖಾನ್ ಇತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
