ಕೋಲಾರ ನಗರದ ಬಾಲಕಿಯರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಯಲ್ಲಿ ಲೋಪಗಳಿದ್ದು, ತಾತ್ಕಾಲಿಕವಾಗಿ ತಡೆ ನೀಡುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸೂಚಿಸಿದರು.
ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಾಲೇಜು ಕಟ್ಟಡ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಕಾಲೇಜು ಕಟ್ಟಡ ನಿರ್ಮಾಣಕ್ಕೆ ₹5 ಕೋಟಿ ಅನುದಾನ ಬಿಡುಗಡೆಯಾಗಿದೆ. ಯೋಜನಾಬದ್ಧವಾಗಿ ಕಟ್ಟಡ ಕಾಮಗಾರಿ ನಡೆಸಬೇಕು. ಬೇಕಾಬಿಟ್ಟಿ ಕಟ್ಟಡ ಕಾಮಗಾರಿ ನಡೆಸಿದರೆ ಜಾಗದ ಕೊರತೆಯಾಗಲಿದೆ. ಆದ್ದರಿಂದ ತಾತ್ಕಾಲಿಕವಾಗಿ ಕಾಮಗಾರಿಯನ್ನು ನಿಲ್ಲಿಸಿ ಎಂದು ತಾಕೀತು ಮಾಡಿದರು.
ಜಾಗ ಇದೆಯೆಂದು ಬೇಕಾಬಿಟ್ಟಿಯಾಗಿ ಕಟ್ಟಡ ನಿರ್ಮಿಸಿದರೆ ಮುಂದೆ ವಿದ್ಯಾರ್ಥಿಗಳು ಒಡಾಡುವುದಕ್ಕೂ ಜಾಗ ಇರುವುದಿಲ್ಲ. ಪ್ರಾಂಶುಪಾಲರು ಇದರ ಜವಾಬ್ದಾರಿವಹಿಸಿಕೊಳ್ಳಬೇಕು. ಚಿಕ್ಕ ಗಾತ್ರದ ಕಬ್ಬಿಣ ಬಳಸಿ 5 ಅಂತಸ್ತಿನ ಕಟ್ಟಡ ನಿರ್ಮಾಣ ಹೇಗೆ ಸಾಧ್ಯ. ಪ್ರಸ್ತುತ ಕಾಮಗಾರಿ ಸ್ಥಗಿತಗೊಳಿಸಿ, ಪ್ಲಾನ್ ಕೊಟ್ಟ ನಂತರ ಕಾಮಗಾರಿ ಆರಂಭಿಸಿ ಎಂದು ಹೇಳಿದರು.
ಬಾಲಕರ ಕಾಲೇಜಿನಲ್ಲೂ ಕಳಪೆ ಕಾಮಗಾರಿಯಾಗಿದೆಯೆಂದು ವರದಿಯಾಗಿದೆ. ಕೂಡಲೇ ಎನ್.ಡಿ.ಟಿಯಿಂದ ಪರಿಶೀಲನೆ ನಡೆಸಿ ಗುತ್ತಿಗೆದಾರರು, ಏಜೆನ್ಸಿ ಕುರಿತು ವರದಿ ನೀಡಿ ಎಂದು ಸೂಚಿಸಿದರು.
ಇದೇ ವೇಳೆ ಶೌಚಾಲಯ, ಕುಡಿಯವ ನೀರು, ಸಾರಿಗೆ ಬಸ್ ಸಮಸ್ಯೆ ಬಗೆಹರಿಸುವಂತೆ ಕಾಲೇಜಿನ ವಿದ್ಯಾರ್ಥಿಗಳು ಸಚಿವರಲ್ಲಿ ಮನವಿ ಮಾಡಿದರು. ವಿದ್ಯಾರ್ಥಿಗಳ ಅಹವಾಲು ಆಲಿಸಿದ ಸಚಿವರು ಕೂಡಲೇ ಸಮಸ್ಯೆ ಬಗೆಹರಿಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಮತ್ತು ಕೆ.ಎಸ್.ಆರ್.ಟಿ.ಸಿ ಡಿಸಿಗೆ ಸೂಚಿಸಿದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ನನ್ನ ಸ್ವಂತ ಹಣದಲ್ಲಿ ಕೊಳವೆ ಬಾವಿ ಕೊರೆಸಿ, ನೀರಿನ ವ್ಯವಸ್ಥೆ ಮಾಡಿಸಿದ್ದೇನೆ. ಸರಿಯಾಗಿ ಬಳಸಿಕೊಂಡಿಲ್ಲ ಎಂದು ಕಾಲೇಜು ಆಡಳಿತ ಸಿಬ್ಬಂದಿ ವಿರುದ್ಧ ಗರಂ ಆದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಅಕ್ಕ ವಿಶ್ವ ಕನ್ನಡ ಸಮ್ಮೇಳನ; ಕಲಾವಿದ ಗೋ.ನಾ.ಸ್ವಾಮಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ
ಈ ಸಂದರ್ಭದಲ್ಲಿ ಪ್ರಾಂಶುಪಾಲ ಗಂಗಾಧರ್ ರಾವ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಕೆಪಿಸಿಸಿ ಸದಸ್ಯೆ ನಂದಿನಿ ಪ್ರವೀಣ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಉರಟ ಅಗ್ರಹಾರ ಚೌಡರೆಡ್ಡಿ, ಮಲೇಷಿಯಾ ರಾಜಕುಮಾರ್ ಸೇರಿದಂತೆ ಇತರರಿದ್ದರು.