ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯೊಂದಿಗೆ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪಿಡಿಪಿ ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇಂತಹ ವದಂತಿಗಳಿಗೆ ತೆರೆ ಎಳೆದಿರುವ ಮುಫ್ತಿ, ಬಿಜೆಪಿ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಸರ್ಕಾರ ರಚನೆಗಾಗಿ ಮಾತ್ರವೇ ಎನ್‌ಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತದೆ. ಅವರು 1947ರಿಂದ ಹಾಗೆಯೇ ಮಾಡುತ್ತಿದ್ದಾರೆ. ಅವರಿಗೆ ಬೇರೆ ಯಾವುದೇ ಗುರಿ ಇಲ್ಲ. ಅವರು ಸರ್ಕಾರ ರಚನೆಗಾಗಿ, ಮಂತ್ರಿ ಸ್ಥಾನಕ್ಕಾಗಿ ಮೈತ್ರಿ ಮಾಡಿಕೊಳ್ಳುತ್ತಾರೆ” ಎಂದು ಆರೋಪಿಸಿದ್ದಾರೆ.
“ತಮ್ಮ ಪಕ್ಷವು ಸಿದ್ದಾಂತಗಳಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ. ಆದರೆ, ವಿಧಾನಸಭಾ ಚುನಾವಣೆಯ ನಂತರ ತನ್ನ ಪಕ್ಷದ ಬೆಂಬಲವಿಲ್ಲದೆ ಯಾವುದೇ ಪಕ್ಷವು ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದ್ದಾರೆ.
“ನಾವು 2002ರಲ್ಲಿ ಕೇವಲ 16 ಶಾಸಕರೊಂದಿಗೆ ಸರ್ಕಾರ ರಚಿಸಿದ್ದೇವೆ. ದೇವರ ಇಚ್ಛೆ, ಈ ಬಾರಿಯೂ, ಪಿಡಿಪಿ ಇಲ್ಲದೆ ಯಾವುದೇ ಸರ್ಕಾರ ರಚನೆಯಾಗುವುದಿಲ್ಲ. ಆದಾಗ್ಯೂ, PDPಯು ತನ್ನ ಸಿದ್ದಾಂತವನ್ನು ಅನುಷ್ಠಾನಗೊಳಿಸಲು ಹೆಚ್ಚು ಒತ್ತುಕೊಡುತ್ತದೆ. ಅಲ್ಲದೆ, ಸರ್ಕಾರ ರಚನೆಯ ಮೇಲೆ ಹೆಚ್ಚು ಗಮನ ನೀಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
2015ರಲ್ಲಿ ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿದ್ದ ಮುಫ್ತಿ, ಚುನಾವಣೆಯ ನಂತರ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿತಗೊಳಿಸಿದ್ದರು. ಕಾಶ್ಮೀರ ಸಮಸ್ಯೆಯ ಪರಿಹಾರಕ್ಕಾಗಿ ನಾವು ಬಿಜೆಪಿ ಜೊತೆ ಕೈಜೋಡಿಸಿದ್ದೆವು. ಆದರೆ, ಬಿಜೆಪಿ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿರುವುದರಿಂದ ಬಿಜೆಪಿ ಜೊತೆಗೆ ಮೈತ್ರಿ ಮುರಿದಿದ್ದೇವೆ ಎಂದು ಅವರು ಹೇಳಿದ್ದರು.