ಹಾಸನ ನಗರದಲ್ಲಿ ಸೆಪ್ಟೆಂಬರ್ 5ರಂದು ಸಂಜೆ 4 ಗಂಟೆಗೆ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಸಮಾಜ ಸೇವಕ ಜಿ ಒ ಮಹಂತಪ್ಪನವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮತ್ತು ಜನಪರ ಚಳುವಳಿಗಳ ಒಕ್ಕೂಟ ತಿಳಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಘಟನಾಕಾರರು, “ಚಿತ್ರದುರ್ಗ ಜಿಲ್ಲೆಯಿಂದ ಹಾಸನಕ್ಕೆ ಬಂದು ಬದುಕು ಕಟ್ಟಿಕೊಂಡಿದ್ದ ಜಿ ಒ ಮಹಂತಪ್ಪನವರು ಸಮಾಜ ಸೇವಕರಾಗಿ ಎಲ್ಲರ ಪ್ರೀತಿಪಾತ್ರರಾಗಿದ್ದರು. ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯವನ್ನು ಸಂಘಟಿಸಿ, ಆ ಸಂಘದಲ್ಲಿ ಅನೇಕ ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾಗಿ, ರಾಜ್ಯದ ಮುಖಂಡರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಹಾಸನ ತಾಲೂಕಿನ ಅಧ್ಯಕ್ಷರಾಗಿಯೂ ದುಡಿದಿದ್ದ ಅವರು ಎಲ್ಲ ಚಳುವಳಿಗಳ ಒಡನಾಡಿಯಾಗಿದ್ದರು” ಎಂದು ಸ್ಮರಿಸಿದರು.
“ದಲಿತ, ರೈತ, ಜನಪರ ಸಂಘಟನೆಗಳ ಯಾವುದೇ ಹೋರಾಟ, ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದು, ಸಹಕಾರ ನೀಡುತ್ತಿದ್ದ ಅವರು ‘ಬಂಧುತ್ವ ವೇಧಿಕೆ’ ಕಚೇರಿ ಮಾಡಿ ಅದನ್ನು ಎಲ್ಲ ಸಂಘ ಸಂಸ್ಥೆಗಳ ಸಭೆ ಕಾರ್ಯಕ್ರಮಗಳನ್ನು ನಡೆಸಲು ಉಚಿತವಾಗಿ ನೀಡುತ್ತಿದ್ದರು. ಇಂತಹ ಸಹೃದಯಿ, ಪ್ರೀತಿಯ ವ್ಯಕ್ತಿತ್ವವುಳ್ಳ ಮಹಂತಪ್ಪನವರ ನಿಧನ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ; ಸಿಎಂ ಬಳಿ ನಿಯೋಗ ಹೋಗುವಂತೆ ಶಾಸಕ ಬಿ ಪಿ ಹರೀಶ್ ಸಲಹೆ
“ಕಾರ್ಯಕ್ರಮಕ್ಕೆ ಎಲ್ಲ ದಲಿತ, ಜನಪರ ಸಂಘಟನೆಗಳು ಮತ್ತು ಚಳುವಳಿಗಳು ಹಾಗೂ ಅವರ ಒಡನಾಡಿ ಬಂಧುಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು” ಎಂದು ಕರೆ ನೀಡಿದರು.
ದಸಂಸ ಮುಖಂಡ ಎಚ್ ಕೆ ಸಂದೇಶ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ದಸಂಸ ರಾಜ್ಯ ಸಂಚಾಲಕ ಎಂ ಸೋಮಶೇಖರ್, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ ಆರ್ ವಿಜಯ್ ಕುಮಾರ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂ ಜಿ, ಜಿಲ್ಲಾ ವಾಲ್ಮಿಕಿ ಸಂಘದ ಮುಖಂಡ ಮಧು ನಾಯ್ಕ ಇದ್ದರು.