ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಜಿಲ್ಲೆಯ ಹಳ್ಳ-ಕೊಳ್ಳ, ಕೆರೆಗಳು ಮೈದುಂಬಿ ಹರಿಯುತ್ತಿವೆ.
ಮಾಂಜ್ರಾ ನದಿ ಒಳಹರಿವು ಹೆಚ್ಚಿದ್ದು, ನದಿಪಾತ್ರದ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದೆ. ನದಿ ಸುತ್ತಲಿನ ಗ್ರಾಮಗಳಾದ ಕೌಠಾ(ಬಿ), ಕೌಠಾ (ಕೆ), ಇಸ್ಲಾಂಪುರ, ಬಾಚೆಪಳ್ಳಿ, ಬಂಪಳ್ಳಿ, ಗಡಿಕುಶನೂರ, ಮಣಗೆಂಪುರ ಸೇರಿದಂತೆ ಇತರೆ ಗ್ರಾಮಗಳ ರೈತರಿಗೆ ಹಾನಿಯಾಗಿದೆ.
ನದಿ ದಂಡೆ ಮೇಲಿನ ಹೊಲಗಳಲ್ಲಿ ಬೆಳೆದ ಉದ್ದು, ಹೆಸರು ಸೋಯಾ, ಕಬ್ಬಿನ ಹೊಲಗಳು ಮಳೆಗೆ ಜಲಾವೃತವಾಗಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಭಾರಿ ಮಳೆಯಿಂದಾಗಿ ಕಮಲನಗರ ತಾಲೂಕಿನ ಬಸನಾಳ -ಕೋರಿಯಾಳ ಗ್ರಾಮಗಳ ನಡುವಿನ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತವಾಗಿದೆ. ಸುತ್ತಲಿನ ಹೊಲಗಳಿಗೆ ನೀರು ನುಗ್ಗಿದ ಪರಿಣಾಮ ಕೈಗೆ ಬಂದ ಉದ್ದು, ಹೆಸರು, ಸೋಯಾ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇದರಿಂದ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಬಸನಾಳ ಗ್ರಾಮದ ರೈತ ಸದಾನಂದ ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ಕೌಠಾ(ಬಿ)-ಇಸ್ಲಾಂಪುರ ಸಂಪರ್ಕ ಬಂದ್:
ಸತತ ಮಳೆಗೆ ಮಾಂಜ್ರಾ ನದಿ ಉಕ್ಕಿ ಹರಿಯುತ್ತಿದ್ದು, ಹಿನ್ನೀರಿನ ಹರಿವು ಹೆಚ್ಚಾದ ಪರಿಣಾಮ ಬೀದರ್ ತಾಲೂಕಿನ ಇಸ್ಲಾಂಪುರ -ಕೌಠಾ(ಬಿ) ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆದ ಸೇತುವೆ ಸಂಪೂರ್ಣ ಮುಳುಗಡೆಯಾಗಿ ರಸ್ತೆ ಸಂಪರ್ಕ ಬಂದ್ ಆಗಿದೆ.