ಉತ್ತರ ಪ್ರದೇಶ ಸರ್ಕಾರದ ಅಧೀನದಲ್ಲಿರುವ ‘ಮಾನವ ಸಂಪದ’ ಪೋರ್ಟಲ್‌ನಲ್ಲಿ ತಮ್ಮ ಆಸ್ತಿ ವಿವರಗಳನ್ನು ನೀಡದ ಎರಡು ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರ ವೇತನವನ್ನು ಉತ್ತರ ಪ್ರದೇಶ ಸರ್ಕಾರ ತಡೆಹಿಡಿದಿದೆ. ಆಸ್ತಿ ವಿವರಗಳನ್ನು ಒದಗಿಸಲು ಒಂದು ತಿಂಗಳ ಗಡುವನ್ನು ನೀಡಿದೆ.
ಉತ್ತರ ಪ್ರದೇಶದ ಎಲ್ಲ ಸರ್ಕಾರಿ ನೌಕರರು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳನ್ನು ‘ಮಾನವ ಸಂಪದ’ ಪೋರ್ಟಲ್‌ನಲ್ಲಿ ಆಗಸ್ಟ್ 31ರೊಳಗೆ ಘೋಷಿಸುವಂತೆ ಸರ್ಕಾರ ಆದೇಶಿಸಿತ್ತು. ಆದರೆ, 2 ಲಕ್ಷಕ್ಕೂ ಹೆಚ್ಚು ನೌಕರರು ಇನ್ನೂ ತಮ್ಮ ಆಸ್ತಿ ವಿವರಗಳನ್ನು ಇನ್ನೂ ನೀಡಿಲ್ಲ. ಹೀಗಾಗಿ, ಅವರೆಲ್ಲರ ಆಗಸ್ಟ್ ತಿಂಗಳ ವೇತನವನ್ನು ತಡೆಹಿಡಿಯಲಾಗಿದೆ. ಅಲ್ಲದೆ, ನೌಕರರ ನಿರ್ಲಕ್ಷ್ಯವು ಅವರ ಬಡ್ತಿಯ ಮೇಲೂ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.
ನೌಕರರು ತಮ್ಮ ಆಸ್ತಿ ವಿವರಗಳನ್ನು ಘೋಷಿಸಲು ಮೊದಲು 2023ರ ಡಿಸೆಂಬರ್ 31ರವರೆಗೆ ಗಡುವು ನೀಡಲಾಗಿತ್ತು. ಬಳಿಕ ಜೂನ್ 30ರವರೆಗೆ ಗಡುವನ್ನು ವಿಸ್ತರಿಸಲಾಗಿತ್ತು. ಆ ನಂತರವೂ ಎಲ್ಲ ನೌಕರರು ಆಸ್ತಿ ವಿವರಗಳನ್ನು ಒದಗಿಸದ ಕಾರಣ ಜುಲೈ 31ರವರೆಗೆ ವಿಸ್ತರಿಸಿ, ಬಳಿಕ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿತ್ತು. ಪದೇ ಪದೇ ಗಡುವನ್ನು ವಿಸ್ತರಿಸಿದ್ದರ ಹೊರತಾಗಿಯೂ ಕೇಲವ 71% ಉದ್ಯೋಗಿಗಳು ಮಾತ್ರ ತಮ್ಮ ಆಸ್ತಿ ಕುರಿತ ಮಾಹಿತಿಯಲ್ಲಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ ಎಂದು ವರದಿಯಾಗಿದೆ.
“ಸರ್ಕಾರಿ ನೌಕರರು ತಮ್ಮ ಆಸ್ತಿ ವಿವರ ಘೋಷಿಸುವ ಕ್ರಮವು ಸರ್ಕಾರದೊಳಗೆ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ನಾವು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದ್ದೇವೆ” ಎಂದು ಉತ್ತರ ಪ್ರದೇಶ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಮಹಿಳೆಯರ ಮೇಲಿನ ನಿಲ್ಲದ ಶೋಷಣೆ; ಶಿಕ್ಷಣ ಒಂದೇ ಪರಿಹಾರ
ಆಗಸ್ಟ್ 31ರೊಳಗೆ ಆಸ್ತಿ ವಿವರಗಳನ್ನು ನೀಡಿರುವವರಿಗೆ ಮಾತ್ರ ಆಗಸ್ಟ್ ತಿಂಗಳ ವೇತನ ಪಾವತಿಸಲಾಗುವುದು. ಮಾಹಿತಿ ಅಪ್‌ಲೋಡ್ ಮಾಡದವರ ಸಂಬಳವನ್ನು ತಡೆಹಿಡಿಯಲಾಗುವುದು ಎಂದು ಈ ಹಿಂದೆಯೇ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದರು. ಇದೀಗ, ಆಸ್ತಿ ವಿವರ ಘೋಷಿಸುವ ಗುಡುವನ್ನು ಮತ್ತೆ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಏತನ್ಮಧ್ಯೆ, ಪ್ರತಿಪಕ್ಷ ಸಮಾಜವಾದಿ ಪಕ್ಷವು (ಎಸ್‌ಪಿ) ಸರ್ಕಾರ ಗಡುವು ವಿಸ್ತರಣೆಯ ಕ್ರಮವನ್ನು ಪ್ರಶ್ನಿಸಿದೆ. ಸರ್ಕಾರವು ಪದೇ ಪದೇ ಗಡುವನ್ನು ವಿಸ್ತರಣೆ ಮಾಡಿದರೂ ತನ್ನ ಆದೇಶವನ್ನು ಕಟ್ಟುನಿಟ್ಟಾಗಿ ಯಾಕೆ ಜಾರಿಗೆ ತರಲು ಸಾಧ್ಯವಾಗಿಲ್ಲ ಎಂದು ಕೇಳಿದೆ.
ಉತ್ತರ ಪ್ರದೇಶದಲ್ಲಿ 17.8 ಲಕ್ಷ ಸರ್ಕಾರಿ ನೌಕರರಿದ್ದಾರೆ ಎಂದು ವರದಿಗಳು ಹೇಳುತ್ತವೆ.