ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಆರೂರು ಲಕ್ಷ್ಮೀನಾರಾಯಣರಾವ್ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಅಮೃತ ಸಿಂಚನ ಟ್ರಸ್ಟ್ ಅನ್ಯಾಯ ಎಸಗಿದ್ದು, ಇದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, “ಮೇಲಿನಪೇಟೆಯ ಆರೂರು ಲಕ್ಷ್ಮೀನಾರಾಯಣರಾವ್ ಹಿರಿಯ ಪ್ರಾಥಮಿಕ ಶಾಲೆಯನ್ನು ಅಮೃತ ಸಿಂಚನ ಟ್ರಸ್ಟ್ನವರು ದತ್ತು ತೆಗೆದುಕೊಂಡು ಕೇವಲ ಒಂದು ವರ್ಷವಾಗಿದೆ. ಶಾಲೆ ಪ್ರಾರಂಭವಾಗಿ ಕೆಲವೇ ತಿಂಗಳಾಗಿದೆ. ಶಾಲೆ ಅಭಿವೃದ್ಧಿಪಡಿಸುತ್ತೇವೆಂದು ಹೇಳಿ ಕೈಬಿಟ್ಟು ಹೋಗುತ್ತಿರುವುದು ಖಂಡನೀಯ. ಅಲ್ಲದೆ ಎಲ್ಲ ಶಿಕ್ಷಕ ವೃಂದ, ಎಸ್ಡಿಎಂಸಿ ಹಾಗೂ ಪೋಷಕರಿಗೆ ಅನ್ಯಾಯ ಎಸಗಿದಂತಾಗಿದೆ” ಎಂದು ಆರೋಪಿಸಿದರು.
“ಎಲ್ಕೆಜಿ ಹಾಗೂ ಯುಕೆಜಿಯ ಅಭಿವೃದ್ಧಿಗೆ ಬಂದ ಹಣವನ್ನು ಪಡೆದುಕೊಂಡು, ʼನಾವು ಅಭಿವೃದ್ಧಿ ಮಾಡಿದ್ದೇವೆ, ನಾವು ಅಭಿವೃದ್ಧಿ ಮಾಡಿದ್ದೇವೆʼ ಎಂದು ಹೇಳಿಕೊಂಡಿದ್ದಾರೆ. ಎರಡು ತಿಂಗಳಿಂದ ಎಲ್ಕೆಜಿ, ಯುಕೆಜಿ ಶಿಕ್ಷಕರಿಗೆ ಹಾಗೂ ಸಹಾಯಕರಿಗೆ ವೇತನ ನೀಡದೆ ನಮಗೂ ಈ ಶಾಲೆಗೂ ಯಾವುದೇ ಸಂಬಂಧವಿಲ್ಲವೆಂದು ಅರ್ಧಕ್ಕೆ ಕೈ ಬಿಟ್ಟು ಹೊರಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಶಿಕ್ಷಕರಿಗೆ ಹಾಗೂ ಸಹಾಯಕರಿಗೆ ಎರಡು ತಿಂಗಳ ಸಂಬಳವನ್ನು ನೀಡಿಲ್ಲವೆಂದು ಪ್ರಶ್ನಿಸಿದರೆ, ʼನಮಗೆ ಹಣ ಮೇಲಿನಿಂದ ಉದುರುವುದಿಲ್ಲʼವೆಂಬ ಉಡಾಫೆ ಉತ್ತರವನ್ನು ನೀಡಿ, ಟ್ರಸ್ಟ್ನವರು ಇನ್ನೊಂದು ಶಾಲೆ ಅಭಿವೃದ್ಧಿಪಡಿಸುವ ನೆಪವೊಡ್ಡಿ ಬೇರೊಂದು ಕಡೆಗೆ ಪಲಾಯನ ಮಾಡಿದ್ದಾರೆ” ಎಂದು ಸ್ಥಳೀಯರು ದೂರಿದ್ದಾರೆ.
“ಮೇಲಿನ ಪೇಟೆಯಲ್ಲಿ ಸ್ಥಳೀಯ ಭಾಗದ ಮಕ್ಕಳು ವಿದ್ಯಾಭ್ಯಾಸಕ್ಕೆ ಈ ಶಾಲೆ ಹತ್ತಿರವಾಗುತ್ತದೆಂದು ತುಂಬಾ ಮಕ್ಕಳು ಶಾಲೆಗೆ ಬರುತ್ತಿದ್ದರು. ಮಕ್ಕಳು ಶಾಲೆಗೆ ಹೋಗದೇ ಇದ್ದರೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆಂದು ಪೋಷಕರು ಆತಂಕದಲ್ಲಿದ್ದಾರೆ. ನಮ್ಮ ಶಾಲೆಗಾದ ಪರಿಸ್ಥಿತಿಯು ಬೇರೊಂದು ಶಾಲೆಗಾಗಬಾರದು. ತಪ್ಪು ಮಾಡಿದವರಿಗೆ ಕೂಡಲೇ ಶಿಕ್ಷೆಯಾಗಬೇಕು” ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು| ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸದ ಅಧಿಕಾರಿ, ಸಿಬ್ಬಂದಿಗಳಿಗೆ ಲೋಕಾಯುಕ್ತದಿಂದ ಕಾನೂನು ಕ್ರಮ
“ಅಮೃತ ಸಿಂಚನ ಟ್ರಸ್ಟ್ನವರು ವಾಗ್ದಾನ ಮಾಡಿದಂತೆ ಹಾಗೂ ಶಾಲೆಯ ಮುಂಭಾಗ ಎಲ್ಲವೂ ಉಚಿತವೆಂದು ಬೋರ್ಡ್ ಹಾಕಿದಂತೆ ನಡೆದುಕೊಂಡಿಲ್ಲ. ಈಗಾಗಲೇ ಎಲ್ಕೆಜಿ, ಯುಕೆಜಿ ಶಿಕ್ಷಕರ ಹಾಗೂ ಶಾಲಾ ಸಹಾಯಕರಿಗೆ ಎರಡು ತಿಂಗಳ ವೇತನವನ್ನು ನೀಡಿರುವುದಿಲ್ಲ. ಕೂಡಲೇ ಶಿಕ್ಷಕರಿಗೆ ಈ ವರ್ಷದ ವೇತನವನ್ನು ನೀಡಬೇಕು. ನಮ್ಮ ಶಾಲೆಗೆ ಮಾಡಿದ ಅನ್ಯಾಯ ಇನ್ನಾವ ಶಾಲೆಗೂ ಆಗಕೂಡದು. ಹಾಗಾಗಿ ಶಿಕ್ಷಣಾಧಿಕಾರಿಗಳು ತಾಲೂಕಿನ ಯಾವ ಶಾಲೆಗೂ ಈ ಅಮೃತ ಸಿಂಚನ ಟ್ರಸ್ಟನ್ನು ಸೇರಿಸಿಕೊಳ್ಳಬಾರದು” ಎಂದು ಆಗ್ರಹಿಸಿದರು.