ದೇಶದಲ್ಲಿ ಭ್ರೂಣ ಹತ್ಯೆಯನ್ನ ಸಂಪೂರ್ಣವಾಗಿ ತಡೆದು, ಸಮಾಜದಲ್ಲಿರುವ ಲಿಂಗ ತಾರತಮ್ಯ ಮನೋಭಾವ ತೊಡೆದು ಹಾಕಿ, ಸಂಪೂರ್ಣವಾಗಿ ಹೆಣ್ಣು ಮಗು ಸ್ನೇಹಿ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಬೇಟಿ ಬಚಾವೋ, ಬೇಟಿ ಪಢಾವೋ’ ಎಂಬ ಕಾರ್ಯಕ್ರಮ ಘೋಷಿಸಿದೆ. ಆದರೆ, ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಅಧಿಕಾರದಲ್ಲಿರುವ ಬಿಜೆಪಿಯೇ ಅತ್ಯಾಚಾರಿಗಳನ್ನು ಬೆಳೆಸುತ್ತಿರುವಾಗ, ಅತ್ಯಾಚಾರಿಗಳನ್ನು ಬೆಂಬಲಿಸುತ್ತಿರುವಾಗ, ದೇಶದಲ್ಲಿ ಮಹಿಳೆಯರ ರಕ್ಷಣೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಮುನ್ನೆಲೆಯಲ್ಲಿದೆ.
ಒಂದುಕಡೆ ರಾಜಕೀಯದಲ್ಲಿ ಮಹಿಳಾ ಮೀಸಲಾತಿಯನ್ನು ತರುತ್ತೇವೆ ಎಂದು ಮೋದಿ ಸರ್ಕಾರ ಮಸೂದೆ ಅಂಗೀಕರಿಸಿ ಮಹಿಳೆಯರ ಮೂಗಿಗೆ ತುಪ್ಪ ಸವರಿದೆ. ಇನ್ನೊಂದೆಡೆ ಬೇಟಿ ಬಚಾವೋ-ಬೇಟಿ ಪಡಾವೋ ಎಂಬ ಘೋಷಣೆಯನ್ನ ಮುಂದಿಟ್ಟು ‘ಅತ್ಯಾಚಾರಿ ಕೋ ಸಪೋರ್ಟ್ ಕರೋ –ಅತ್ಯಾಚಾರಿ ಕೋ ಸೇಫ್ ಕರೋ’ ಅನ್ನುವ ರೀತಿ ವರ್ತಿಸುತ್ತಿದೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಅದರಲ್ಲಿಯೂ ಅತ್ಯಾಚಾರ ಪ್ರಕರಣಗಳಲ್ಲಿ ಬೇರೆಲ್ಲ ಪಕ್ಷಗಳಿಗೆ ಹೋಲಿಸಿದರೆ, ಬಿಜೆಪಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಅರೋಪಿಗಳಾಗಿದ್ದಾರೆ. ಆದರೆ, ಮೋದಿಯೂ ಸೇರಿದಂತೆ ಬಿಜೆಪಿ ನಾಯಕರಿಗೆ ತಮ್ಮ ಪಕ್ಷದಲ್ಲಿಯೇ ಕಾಮುಕರ ದಂಡು ಇರುವುದು ಯಾವುದೇ ಮುಜುಗರವನ್ನು ಉಂಟುಮಾಡುತ್ತಿಲ್ಲ ಎಂಬುದು ವಿಷಾಧನೀಯ ಸಂಗತಿ. ಎಲ್ಲಕ್ಕಿಂತ ಮಿಗಿಲಾಗಿ ಅಂತಹ ಕಾಮುಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಬಿಜೆಪಿ ಅಥವಾ ಮೋದಿ ಸರ್ಕಾರವೇ ಕಾಮುಕರನ್ನು ಸಾಕುತ್ತಿದೆ ಎಂಬ ಅನುಮಾನವನ್ನು ಹುಟ್ಟಹಾಕಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಪ್ರಕಾರ, 2022ರಲ್ಲಿ ಭಾರತದಲ್ಲಿ 31,516 ಅತ್ಯಾಚಾರ ಪ್ರಕರಣಗಳು ಮತ್ತು 4,45,256 ದೌರ್ಜನ್ಯ ಪ್ರಕರಣಗಳು ನಡೆದಿವೆ. ಅಂದರೆ, ದಿನಕ್ಕೆ ಸರಾಸರಿ 86 ಅತ್ಯಾಚಾರ ಮತ್ತು ಪ್ರತಿ ಗಂಟೆಗೆ ಸರಾಸರಿ 49 ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆದಿವೆ. ಬೆಂಗಳೂರಿನಲ್ಲಿಯೇ ಕಳೆದ ಮೂರು ವರ್ಷಗಳಲ್ಲಿ 444 ಅತ್ಯಾಚಾರ ಮತ್ತು 2,439 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ.
ಈ ಪ್ರಮಾಣದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೂ, ಅಪರಾಧಿಗಳಿಗೆ ಶಿಕ್ಷೆಯಾಗಿರುವ ಪ್ರಕರಣಗಳು ಬೆರಳೆಣಿಕೆಯಷ್ಟು ಮಾತ್ರ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾನೂನಿಗೆ ತಿದ್ದುಪಡಿ ತರುವಂತೆ ಕಿಚ್ಚು ಹಚ್ಚಿದ 2012ರಲ್ಲಿ ನಡೆದ ನಿರ್ಭಯಾ ಪ್ರಕರಣದಲ್ಲಿಯೂ ಕೂಡ ಅಪರಾಧಿಗಳಿಗೆ ಶಿಕ್ಷೆ ಜಾರಿಯಾಗುವುದಕ್ಕೆ ಬರೋಬ್ಬರಿ 8 ವರ್ಷಗಳೇ ಬೇಕಾಯಿತು. ಇನ್ನು ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಬಿಹಾರ ಸೇರಿದಂತೆ ಬಿಜೆಪಿ ಆಡಳಿತ ನಡೆಸುತ್ತಿರುವ ಹಲವು ರಾಜ್ಯಗಳಲ್ಲಿ ಮಹಿಳೆಯರ ಮೇಲೆ, ಮುಖ್ಯವಾಗಿ ದಲಿತರ ಮೇಲೆ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಆದರೆ, ಈ ಸುದ್ದಿ ಬಗ್ಗೆ ಬಿಜೆಪಿ ನಾಯಕರು ಧ್ವನಿ ಎತ್ತುತ್ತಿಲ್ಲ. ಎಲ್ಲಿ ಬಿಜೆಪಿ ಪಕ್ಷ ಆಡಳಿತದಲ್ಲಿ ಇರುತ್ತದೊ ಅಂತಹ ಕಡೆ ಭಾರತೀಯ ಜನಾತಾ ಪಕ್ಷದ ನಾಯಕರು ಸಮಸ್ಯೆಯನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ವಿಪಕ್ಷಗಳು ಆಡಳಿತ ನಡೆಸುವ ರಾಜ್ಯಗಳಲ್ಲಿ ಮಾತ್ರ ಬಿಜೆಪಿಗರ ಧ್ವನಿ ದೊಡ್ಡದಾಗಿ ಕೇಳಿ ಬರುತ್ತದೆ. ಅದನ್ನು ಗೋದಿ ಮೀಡಿಯಾ ದೊಡ್ಡದು ಮಾಡಿ, ಇಡೀ ರಾಷ್ಟ್ರಕ್ಕೆ ಹಂಚುತ್ತದೆ. ಇದು ಬಿಜೆಪಿಯ ರಾಜಕಾರಣ ವ್ಯವಸ್ಥೆ.
ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಬಂಧನವಾಗಿದೆ. ಕುಲದೀಪ್ ಸಿಂಗ್ ಸೆಂಗರ್ ಮಾತ್ರವಲ್ಲ ಇನ್ನೂ ಹಲವಾರು ಅತ್ಯಾಚಾರ ಪ್ರಕರಣಗಳಲ್ಲಿ ಬಿಜೆಪಿ ನಾಯಕರು ಆರೋಪಿಗಳಾಗಿದ್ದಾರೆ. ಅಂತಹ ಕೆಲವು ಪ್ರಕರಣಗಳ ನೋಡೋಣ…

ಆಗಸ್ಟ್ 22, 2014ರಂದು ಅಸ್ಸಾಂನಿಂದ ಬಾಲಕಿಯೊಬ್ಬಳನ್ನು ಕಳ್ಳಸಾಗಾಣಿಕೆ ಮಾಡಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಮಧ್ಯಪ್ರದೇಶದ ಬಿಜೆಪಿ ನಾಯಕ ಮತ್ತು ಇತರ ಐದು ಮಂದಿ ವಿರುದ್ದ ಕೇಸು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಐಪಿಸಿ 372(ಅತ್ಯಾಚಾರ), 373 (ಕಳ್ಳಸಾಗಾಣಿಕೆ) ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಾಗಿತ್ತು.
ಮೇ 29. 2016ರಂದು 13ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಗುಜರಾತ್ನ ಗಾಂಧಿನಗರ ಮೂಲದ ಬಿಜೆಪಿ ನಾಯಕ ಅಶೋಕ್ ಮಕ್ವಾನಾನನ್ನು ಸರ್ದಾರ್ನಗರ ಪೊಲೀಸರು ಬಂಧಿಸಿದ್ದರು.
44ರ ಹರೆಯದ ವಿವಾಹಿತ ಮಹಿಳೆಯನ್ನು ಅತ್ಯಾಚಾರ ಮಾಡಿ ಮತ್ತು ಆಕೆಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ಮುಂಬೈನ ಕಶ್ಮೀರಾದ ಕಾರ್ಪೊರೇಟರ್ ಅನಿಲ್ ಬೋಂಸ್ಲೆ ವಿರುದ್ಧ 2017ರಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು 2017ರಲ್ಲಿ ಮಧ್ಯಪ್ರದೇಶದ ಮೊರೆನಾ ಎಂಬಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿ ಅಲ್ಲಿನ ಸ್ಥಳೀಯ ಬಿಜೆಪಿ ಮುಖಂಡ ಭೋಜ್ಪಾಲ್ ಸಿಂಗ್ ಜಾಡನ್ ಮತ್ತು ಆತನ ಇಬ್ಬರು ಸಹಚರರು ದಲಿತ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು.
2010ರ ಮೇ 10ರಂದು ಶಾಸಕ ಡಿ.ಎನ್.ಜೀವರಾಜ್. ತಾಲೂಕು ಪಂಚಾಯಿತಿ ಅಧ್ಯಕ್ಷ ಜಿ.ಜೆ.ನಾಗರಾಜ್. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ಆಶಿಶ್ಕುಮಾರ್ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ’’ ಎಂದು ಆರೋಪಿಸಿ ಮಡಬೂರು ಕೆಸಕಿ ಗ್ರಾಮದ ಯುವತಿ ದೂರು ನೀಡಿದ್ದರು. ದೂರಿನನ್ವಯ ಡಿ.ಎನ್.ಜೀವರಾಜ್ ವಿರುದ್ಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಯುವತಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಅಪಹರಣ. ಅತ್ಯಾಚಾರ ಹಾಗೂ ಪ್ರಾಣ ಬೆದರಿಕೆ ಕೇಸು ದಾಖಲಿಸಿಕೊಂಡಿದ್ದರು.
2009ರ ಅವಧಿಯಲ್ಲಿ ಬಿಜೆಪಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಹರತಾಳು ಹಾಲಪ್ಪ ಅವರು ವಿನೋಬಾ ನಗರದ ಕಲ್ಲಹಳ್ಳಿಯಲ್ಲಿರುವ ಸ್ನೇಹಿತನ ಪತ್ನಿ ಮೇಲೆ 2009 ನವೆಂಬರ್ 26ರಂದು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಸ್ನೇಹಿತನ ಭೇಟಿಗೆ ನ. 26. 2009ರಂದು ನಗರದ ವಿನೋಬನಗರದ ಅವರ ಮನೆಗೆ ಬಂದಿದ್ದ ಹಾಲಪ್ಪ ಅತ್ಯಾಚಾರ ಎಸಗಿದ್ದರು ಎಂದು ಮೇ 2. 2010ರಂದು ರಾಜ್ಯಪಾಲರು ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಲಾಗಿತ್ತು. ಸಂತ್ರಸ್ತೆ ಶಿವಮೊಗ್ಗದ ವಿನೋಬನಗರ ಠಾಣೆಯಲ್ಲಿ ಹಾಲಪ್ಪ ವಿರುದ್ಧ ದೂರು ನೀಡಿದ್ದರು.
2015ರಲ್ಲಿ ಫರೀದಾಬಾದ್ನ ಹೋಟೆಲ್ವೊಂದರಲ್ಲಿ 30ರ ಹರೆಯದ ಮಹಿಳೆಯೊಬ್ಬರನ್ನು ಗುರುಗ್ರಾಮದ ಬಿಜೆಪಿ ಶಾಸಕ ಉಮೇಶ್ ಅಗ್ರವಾಲ್ ಮತ್ತು ಸಂದೀಪ್ ಲುತಾರ ಅತ್ಯಾಚಾರವೆಸಗಿದ್ದರು. ಮಹಿಳೆಗೆ ಮಾದಕ ವಸ್ತು ಬೆರೆಸಿದ ಪಾನೀಯ ನೀಡಿ ರೇಖಾ ರಾಣಿ ಎಂಬ ಮಹಿಳೆಯೊಬ್ಬರ ಸಹಾಯದಿಂದ ಅತ್ಯಾಚಾರವೆಸಗಿದ್ದರು.
2017ರಲ್ಲಿ ದೆಹಲಿಯಲ್ಲಿ ಬಿಜೆಪಿಯ ಮಾಜಿ ಶಾಸಕ ವಿಜಯ್ ಜಾಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು.
ಅಲ್ಲದೆ, ಇತ್ತೀಚೆಗೆ, ಮಹಿಳಾ ಕುಸ್ತಿಪಟುಗಳು ತಮಗೆ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ, ಪ್ರತಿಭಟನೆ ನಡೆಸಿದ್ದರು. ಆಗ, ಮೋದಿ ಸರ್ಕಾರ ದೆಹಲಿಯ ಬೀದಿಗಳಲ್ಲಿ ಕುಸ್ತಿಪಟುಗಳನ್ನು ಎಳೆದಾಡಿ ಅವಮಾನ ಮಾಡಿತು.

ಇನ್ನು, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. 2023 ಜೂನ್‌ನಲ್ಲಿ ಬೆಂಗಳೂರಿನ ಪೈ ವಿಸ್ತಾ ಹೋಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯವೆಸಗಿ ಫೋಟೊ, ಸೆಲ್ಫಿ, ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಿಜೆಪಿಯಲ್ಲಿಯೇ ಕಾಮುಕರ ದಂಡು ಇದ್ದರೂ, ಬಿಜೆಪಿಗರು ಮಹಿಳಾ ವಾದಿಗಳಂತೆ ಪೋಸು ಕೊಡುವುದು ಮಾತ್ರ ನಿಂತಿಲ್ಲ. ಅದರಲ್ಲೂ, ಅತ್ಯಾಚಾರ ಆರೋಪಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೆ ಮುಗಿಯಿತು, ಬಿಜೆಪಿಯ ಎಲ್ಲ ನಾಯಕರು ಬೀದಿಯಲ್ಲಿರುತ್ತಾರೆ. ಅತ್ಯಾಚಾರ ಪ್ರಕರಣಗಳನ್ನೂ ಬಿಜೆಪಿಗರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ.
ಅಂತದ್ದೇ ಪ್ರಕರಣದಲ್ಲಿ, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಳೆದ ತಿಂಗಳು (ಆಗಸ್ಟ್) 23ರಂದು ಯುವತಿಗೆ ಡ್ರಗ್ಸ್ ನೀಡಿ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಪ್ರಕರಣದ ಮೊದಲ ಆರೋಪಿ ಅಲ್ತಾಫ್ ಎಂಬಾತನ ಬಂಧನ ನಡೆದಾಗ ಬಿಜೆಪಿ ಪಟಾಲಂ ಅಬ್ಬರಿಸಿ ಬೊಬ್ಬಿರಿಯಿತು. ಅತ್ಯಾಚಾರ ಪ್ರಕರಣವನ್ನು “ಜಿಹಾದಿ” ಕೃತ್ಯವಾಗಿ ಚಿತ್ರಿಸಲಾಯಿತು. ಆದರೆ, ಬಂಧನಕ್ಕೊಳಗಾಗಿದ್ದ ಮೂರನೇ ಆರೋಪಿ ಅಭಯ್. ಆತ ಬಿಜೆಪಿ ಕಾರ್ಯಕರ್ತ ಎಂದು ಗೊತ್ತಾದ ಬಳಿಕ ಬಿಜೆಪಿ ಸಂಪೂರ್ಣವಾಗಿ ಮೌನಕ್ಕೆ ಶರಣಾಯಿತು.
ಅಂದಹಾಗೆ, ಬಿಜೆಪಿ ಶಾಸಕ, ಸಂಸದರೂ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಅತ್ಯಾಚಾರ ಪ್ರಕರಣದ ಆರೋಪಗಳ ಪರವಾಗಿಯೂ ಪ್ರತಿಭಟನೆಗಳನ್ನು ನಡೆಸಿರುವ ನಿದರ್ಶನಗಳಿವೆ. ಕಾಶ್ಮೀರದ ಕಥುವಾದಲ್ಲಿ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನ ಪರವಾಗಿ ಬಿಜೆಪಿ ಶಾಸಕರು ಸೇರಿದಂತೆ ಕೇಸರಿ ಪಡೆಯ ನಾಯಕರು ಪ್ರತಿಭಟನೆ ನಡೆಸಿದ್ದರು. ಬಿಲ್ಕೀಸ್ ಬಾನೋ ಪ್ರಕರಣದಲ್ಲಿ ಕಾಮುಕರನ್ನು ಜೈಲಿನಿಂದ ಹೊರಬಿಟ್ಟಾಗ, ಬಿಜೆಪಿಗರೇ ಪಟಾಕಿ ಸಿಡಿಸಿ ಸಂಭ್ರಮಿಸಿ ಆರೋಪಿಗಳಿಗೆ ಹಾರ ಹಾಕಿ ಸನ್ಮಾನಿಸಿದ್ದರು.
ಈ ವರದಿ ಓದಿದ್ದೀರಾ?: ಮಹಿಳೆಯರ ಮೇಲಿನ ನಿಲ್ಲದ ಶೋಷಣೆ; ಶಿಕ್ಷಣ ಒಂದೇ ಪರಿಹಾರ
ಭಾರತದಲ್ಲಿ ನಿರಂತರವಾಗಿ ನಡೆಯುತ್ತಿರುವ ಕೃತ್ಯಗಳಲ್ಲಿ ಅತ್ಯಾಚಾರ ಪ್ರಮುಖವಾದದ್ದು. ವರದಿಯಾಗುವ ಅತ್ಯಾಚಾರ ಪ್ರಕರಣಗಳ ಅಂಕಿ-ಅಂಶಗಳ ಆಚೆಗೂ 99% ಲೈಂಗಿಕ ದೌರ್ಜನ್ಯ ಪ್ರಕರಣಗಳು ಭಾರತದಲ್ಲಿ ಬೆಳಕಿಗೆ ಬರುವುದಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ 33% ಹೆಚ್ಚಳವಾಗಿದೆ ಎಂದು ಯೋಗಿ ಸರ್ಕಾರದ ವರದಿಗಳೇ ಹೇಳುತ್ತವೆ.
ಮಹಿಳೆಯರ ಮೇಲೆ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚಳವಾಗುತ್ತಲೇ ಇವೆ. ಆದರೆ, ಇದನ್ನು ತಡೆದು ಮಹಿಳೆಯರಿಗೆ ರಕ್ಷಣೆ ನೀಡಬೇಕಾದ ಬಿಜೆಪಿ ಸರ್ಕಾರದ ನಾಯಕರೇ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಮೂರು ಅವಧಿಯಲ್ಲಿ ಮೋದಿ ಅವರು ಪ್ರಧಾನಮಂತ್ರಿ ಹುದ್ದೆಗೇರಿ ಆಡಳಿತ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೂ ಕೂಡ ಅತ್ಯಾಚಾರ ಪ್ರಕರಣದ ಬಗ್ಗೆ ತುಟಿಬಿಚ್ಚಿಲ್ಲ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಮಾತಾಡಿಲ್ಲ. ತನ್ನದೇ ಪಕ್ಷದ ಬ್ರೀಜ್ ಭೂಷಣ್ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದರು. ಇದು ಎಲ್ಲೆಡೆ ಸುದ್ದಿಯಾಗಿತ್ತು. ಆದರೂ ಪ್ರಧಾನಿ ತುಟಿಬಿಚ್ಚಲಿಲ್ಲ. ಮಣಿಪುರದಲ್ಲಿ ಮಹಿಳೆಯರನ್ನ ಬೆತ್ತಲೆ ಮೆರವಣಿಗೆ ಮಾಡಿ, ಅವರ ಮೇಲೆ ಅತ್ಯಾಚಾರ ಎಸಗಿದಾಗಲೂ, ಆ ದುಷ್ಕೃತ್ಯದ ಬಗ್ಗೆ ತುಟಿ ಬಿಚ್ಚೋಕ್ಕೆ ಪ್ರಧಾನಿ ಅವರಿಗೆ ಬರೋಬ್ಬರಿ 72 ದಿನ ಬೇಕಾಯಿತು. ದೇಶದಲ್ಲಿ ಇಷ್ಟೊಂದು ಅತ್ಯಾಚಾರ ಪ್ರಕರಣಗಳು ನಡೆದ್ರೂ ತುಟಿ ಬಿಚ್ಚದ ಪ್ರಧಾನಿ ಮೋದಿ ಅವರು ತಮ್ಮದೇ ಪಕ್ಷದವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಬಗ್ಗೆ ತುಟಿ ಬಿಚ್ಚತಾರಾ? ಚುನಾವಣೆ ಸಮಯದಲ್ಲಿ ಅಥವಾ ಮತ ಬ್ಯಾಂಕ್ ಇದ್ದರೇ ಪ್ರಧಾನಿ ಅವರು ಓಡೋಡಿ ಹೋಗೆ ಹೋಗತಾರೆ ಎಂಬ ಭರವಸೆ ಮಾತ್ರ ಇದೆ.
ಭಾರತದ ಸ್ವಾತಂತ್ರ್ಯಗೊಂಡು 77 ವರ್ಷಗಳು ಘಟಿಸಿವೆ. ಆದರೂ ಇನ್ನು ಕೂಡ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಅತ್ಯಾಚಾರದಂತಹ ಪ್ರಕರಣದಲ್ಲಿ ಆರೋಪಿಯಾದವರಿಗೆ ಯಾವುದೇ ಜಾತಿ, ಧರ್ಮದವರಾಗಿರಲಿ ಕ್ಷಮೆ ಇರಕೂಡದು, ವಿನಾಯಿತಿ ಕೂಡ ಇರಕೂಡದು. ಹಾಗೆಯೇ ಹೆಣ್ಣೊಬ್ಬಳ ಮೇಲೆ ದೌರ್ಜನ್ಯ ನಡೆದಾಗ ಆಕೆಯ ಧರ್ಮ, ಜಾತಿ, ಹುದ್ದೆ, ಸ್ಥಾನಮಾನ, ಹಿನ್ನೆಲೆ ನೋಡದೆ ಅದನ್ನು ಹೆಣ್ಣಿನ ಮೇಲಿನ ಕ್ರೌರ್ಯ ಎಂದು ಮಾತ್ರ ಪರಿಗಣಿಸಿ ಗಂಭೀರವಾಗಿ ಕ್ರಮ ತೆಗೆದುಕೊಳ್ಳಬೇಕಾಗಿದೆ.