ಸಾಮಾಜಿಕ ಹೋರಾಟಗಾರ್ತಿ, ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ನಾಳೆ(ಸೆ.5)ಗೆ ಏಳು ವರ್ಷವಾಗಲಿದೆ. ಸದಾ ಸತ್ಯದ ಪರವಾಗಿದ್ದ, ದಮನಿತರ ಹಕ್ಕುಗಳಿಗಾಗಿ ತಮ್ಮ ಪತ್ರಿಕೆಯನ್ನು ಮೀಸಲಿಟ್ಟಿದ್ದ ಅವರ ಸಾವು ದೇಶದ ಹಲವಾರು ಜನರಿಗೆ ಆಘಾತ ಮೂಡಿಸಿತ್ತು.
ಸೆಪ್ಟೆಂಬರ್ 5, 2017 ರಂದು ಬಲಪಂಥೀಯ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು. ಅವರ ನೆನಪಿಗಾಗಿ ಗೌರಿ ಮೆಮೋರಿಯಲ್ ಟ್ರಸ್ಟ್ ನಾಳೆ ಬೆಂಗಳೂರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಗುರುವಾರ ಬೆಳಗ್ಗೆ 8ಕ್ಕೆ ಚಾಮರಾಜಪೇಟೆಯಲ್ಲಿರುವ ಗೌರಿ ಲಂಕೇಶ್ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ’ ನಡೆಯಲಿದೆ. ಈ ವೇಳೆ ಗೌರಿ ಲಂಕೇಶ್ ಕುಟುಂಬ ಸದಸ್ಯರು, ಹೋರಾಟಗಾರರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಸಂಜೆ 5ಕ್ಕೆ ‘ಗೌರಿ ಲಂಕೇಶ್ ನೆನಪು’ ಕಾರ್ಯಕ್ರಮ
ಸಂಜೆ 5ಕ್ಕೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಮುಂಭಾಗ ಇರುವ ಚಲನಚಿತ್ರ ಕಲಾವಿದರ ಸಂಘದ ಡಾ.ಅಂಬರೀಷ್ ಸಭಾಂಗಣದಲ್ಲಿ ‘ಗೌರಿ ಲಂಕೇಶ್ ನೆನಪು 2024’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗೌರಿ ಲಂಕೇಶ್: ಕೋಮುವಾದಿ ಕತ್ತಲಿಗೆ ಸವಾಲೆಸೆದ ಬೆಳ್ಳಂಬೆಳಕಿನ ದೀವಟಿಗೆ
ಈ ಕಾರ್ಯಕ್ರಮದಲ್ಲಿ ‘ಸಮಕಾಲೀನ ಚಿಂತನೆ, ಗಂಡಾಂತರದಲ್ಲಿ ಗಣರಾಜ್ಯ’ ಎಂಬ ವಿಷಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಪ್ರೊ. ರಹಮತ್ ತರೀಕೆರೆ, ಮುಂಬೈಯ ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಆರ್. ರಾಮಕುಮಾರ್, ಹಿರಿಯ ಸಾಮಾಜಿಕ ಹೋರಾಟಗಾರ್ತಿ ಪ್ರೊ. ಮೀನಾಕ್ಷಿ ಬಾಳಿ ಹಾಗೂ ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

