ಗೌರಿ ಲಂಕೇಶ್‌ ಹತ್ಯೆಯಾಗಿ ಏಳು ವರ್ಷ: ಕುಂಟುತ್ತ ಸಾಗಿದೆ ಆರೋಪಿಗಳ ವಿಚಾರಣೆ

Date:

Advertisements

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಗಿ ಇಂದಿಗೆ (ಸೆ. 5) ಏಳು ವರ್ಷಗಳಾಗಿವೆ. ಬಹುತೇಕ ಎಲ್ಲ ಆರೋಪಿಗಳ ಬಂಧನವಾಗಿದೆ. ಚಾರ್ಜ್ ಶೀಟ್ ಪ್ರಕಾರ ಪ್ರಕರಣದಲ್ಲಿ 400ಕೂ ಹೆಚ್ಚು ಸಾಕ್ಷಿಗಳು ಮತ್ತು ಸಾವಿರಕ್ಕೂ ಹೆಚ್ಚು ಪುರಾವೆಗಳಿವೆ. ವಿಚಾರಣೆ ಆಮೆಗತಿಯಲ್ಲಿ ನಡೆದಿರುವುದರಿಂದ ಈವರೆಗೆ ಕೇವಲ 137 ಸಾಕ್ಷಿಗಳ ವಿಚಾರಣೆಯಾಗಿದೆ. ವಿಶೇಷ ಕೋರ್ಟ್‌ ಸ್ಥಾಪನೆಯ ಬೇಡಿಕೆ ಹಾಗೇ ಉಳಿದಿದೆ

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ, ಸಮಾನತೆಗಾಗಿ ಅವಿರತ ಶ್ರಮಿಸಿದ ಗೌರಿ ಲಂಕೇಶ್ ಅವರ ಹತ್ಯೆಯಾಗಿ ಇಂದಿಗೆ ಏಳು ವರ್ಷಗಳು ಪೂರ್ಣಗೊಂಡಿವೆ. 2017 ಸೆಪ್ಟಂಬರ್‌ 5ರಂದು ರಾತ್ರಿ ಎಂಟು ಗಂಟೆಯ ವೇಳೆಗೆ ತಮ್ಮ ಕಚೇರಿಯಿಂದ ರಾಜರಾಜೇಶ್ವರಿ ನಗರದ ತಮ್ಮ ಮನೆಯ ಮುಂದೆ ಕಾರಿನಿಂದಿಳಿದು ಗೇಟು ತೆರೆದು ಬಾಗಿಲ ಕಡೆ ಹೆಜ್ಜೆ ಹಾಕುತ್ತಿದ್ದಂತೆ ಅವರ ಎದುರಿಗೆ ಬಂದು ನಿಂತಿದ್ದ ಹಂತಕರು ನೇರವಾಗಿ ಎದೆಗೆ ಗುಂಡಿಟ್ಟು ಪರಾರಿಯಾಗಿದ್ದರು. ಗುಬ್ಬಚ್ಚಿಯಂಥ ಪುಟ್ಟದೇಹ ಬಾಗಿಲ ಬಳಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಗೌರಿಯವರನ್ನು ಕೊಂದಿದ್ದು ಯಾರು ಮತ್ತು ಯಾವ ಕಾರಣಕ್ಕೆ ಎಂಬುದು ಬಹುತೇಕರಿಗೆ ಸ್ಪಷ್ಟವಿತ್ತು. ಅದು ನಿಜವೂ ಆಗಿತ್ತು. ಗೌರಿ ಅವರು ಹಿಂದೂ ಕೋಮುವಾದಿ ಸಂಘಟನೆಗಳನ್ನು ಎದುರು ಹಾಕಿಕೊಂಡಿದ್ದರು. ಗೌರಿ ಅವರ ಹತ್ಯೆಗೂ ಮುನ್ನ ಇಂತಹದೇ ಮೂರು ಹತ್ಯೆಗಳಾಗಿದ್ದವು. ಎರಡು ಮಹಾರಾಷ್ಟ್ರದಲ್ಲಿ ನಡೆದರೆ, ಒಂದು ಕರ್ನಾಟಕದ ಕಲಬುರ್ಗಿಯಲ್ಲಿ ಆಗಿತ್ತು. ಎಲ್ಲರೂ ವಿಚಾರವಾದಿಗಳೇ. ಪ್ರಖರ ಮಾತು, ವಿಚಾರಗಳಿಂದ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದವರೇ ಹಂತಕರ ಟಾರ್ಗೆಟ್‌ ಆಗಿದ್ದರು.

20 ಅಗಸ್ಟ್ 2013 ಮಹಾರಾಷ್ಟ್ರದ ವಿಚಾರವಾದಿಗಳು ಮತ್ತು ಲೇಖಕರೂ ಆಗಿದ್ದ ನರೇಂದ್ರ ಅಚ್ಯುತ ದಾಭೋಲಕರ ಅವರನ್ನು ಗುಂಡಿಟ್ಟು ಸಾಯಿಸಿದ್ದರು. ಅವರು ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಸ್ಥಾಪಕ ಅಧ್ಯಕ್ಷರೂ ಆಗಿದ್ದರು. 2015ಜೂನ್‌ 20ರಂದು ವಿಚಾರವಾದಿ 81 ವರ್ಷ ವಯಸ್ಸಿನ ಗೋವಿಂದ ಪಾನ್ಸರೆ ಅವರನ್ನು ಹತ್ಯೆ ಮಾಡಲಾಗಿತ್ತು. ಇವೆರಡು ಹತ್ಯೆಗಳು ಮಹಾರಾದಾಬೋಷ್ಟ್ರದಲ್ಲಿ ನಡೆದಿದ್ದವು. ಆ ನಂತರ ನಡೆದಿದ್ದೇ ಕರ್ನಾಟಕದ ಎಂ ಎಂ ಕಲಬುರ್ಗಿ ಅವರ ಹತ್ಯೆ. 30 ಆಗಸ್ಟ್ 2015 ಮುಂಜಾನೆ ಮನೆ ಬಾಗಿಲು ಬಡಿದು ಕಲಬುರ್ಗಿ ಅವರ ಶಿಷ್ಯರು ಎಂದು ಹೇಳಿಕೊಂಡ ಯುವಕರು ನೇರವಾಗಿ ಅವರ ಹಣೆಗೆ ಗುಂಡಿಕ್ಕಿದ್ದರು. ಈ ಮೂರೂ ಪ್ರಕರಣಗಳಲ್ಲಿ ಹಂತಕರು ನೇರವಾಗಿ ಸಮೀಪದಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. 2017ರಲ್ಲಿ ಗೌರಿ ಅವರ ಹತ್ಯೆ ಕೂಡಾ ಅದೇ ರೀತಿಯಲ್ಲಿ ನಡೆದಿತ್ತು. ಆದರೆ ಹಿಂದಿನ ಮೂರೂ ಪ್ರಕರಣಗಳಲ್ಲಿ ಹಂತಕರ ಪತ್ತೆ ಆಗಿರಲಿಲ್ಲ. ಗೌರಿ ಹತ್ಯೆ ಆ ಗ್ಯಾಂಗ್‌ನ ಮುಂದಿನ ಕಾರ್ಯಸೂಚಿ ನಡೆಯದಂತೆ ತಡೆದಿತ್ತು. ಗೌರಿ ಹಂತಕರಿಗೂ ದಾಬೋಲ್ಕರ್‌, ಪಾನ್ಸರೆ, ಕಲ್ಬುರ್ಗಿ ಹಂತಕರ ಹಿಂದೆ ಇದ್ದ ಸಿದ್ಧಾಂತ, ಸಂಘಟನೆ ಒಂದೇ ಆಗಿತ್ತು. ಈ ಏಳು ವರ್ಷಗಳಲ್ಲಿ ವಿಚಾರವಾದಿಗಳ ಹತ್ಯೆಗೆ ಕಡಿವಾಣ ಬಿದ್ದಿದೆ ಎಂಬುದು ಮಾತ್ರ ನಿಟ್ಟುಸಿರುವ ಬಿಡುವ ಸಂಗತಿ.

Advertisements
gauri lankesh

ಈ ನಾಲ್ಕೂ ಹತ್ಯೆಗಳಲ್ಲಿ ಸನಾತನ ಸಂಸ್ಥೆ, ಹಿಂದುತ್ವದ ಸಂಘಟನೆಗಳ ಪಾತ್ರ ಇತ್ತು ಎಂಬುದು ಈಗ ಬಹಿರಂಗ ಸತ್ಯ. ಗೌರಿ ಲಂಕೇಶ್‌ ಹಂತಕರ ಬಂಧನವಾದ ನಂತರ ಅವರು ಇನ್ನಷ್ಟು ಪ್ರಗತಿಪರರನ್ನು ಕೊಂದು ಮುಗಿಸುವ ಕಾರ್ಯತಂತ್ರ ರೂಪಿಸಿದ್ದರು ಎಂಬುದು ಬಯಲಾಗಿತ್ತು. ಗೌರಿ ಹತ್ಯೆಯ ಪ್ರಕರಣದಲ್ಲಿ ಹದಿನೆಂಟು ಮಂದಿಯನ್ನು ಬಂಧಿಸಲಾಗಿದೆ. ಆರೋಪ ಪಟ್ಟಿ ಸಲ್ಲಿಸಿ ಆರು ವರ್ಷಗಳೇ ಸರಿದಿದ್ದರೂ ವಿಚಾರಣೆ ಮುಗಿದಿಲ್ಲ. ತನಿಖೆ ನಡೆಸಿದ ವಿಶೇಷ ತಂಡ 9000 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. ವಿಶೇಷ ನ್ಯಾಯಾಲಯ ಸ್ಥಾಪಿಸಬೇಕೆಂಬ ಬೇಡಿಕೆ ಹಾಗೇ ಉಳಿದಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಿದ್ದಾರೆ. ಆದರೂ ವಿಶೇಷ ನ್ಯಾಯಾಲಯ ಸ್ಥಾಪಿಸಿಲ್ಲ. ಕಳೆದ ವರ್ಷ ಜುಲೈನಲ್ಲಿ ವೇಗ ಪಡೆದಿದ್ದ ವಿಚಾರಣೆ ಮತ್ತೆ ಕುಂಟುತ್ತಾ ಸಾಗಿದೆ. ಒಬ್ಬೊಬ್ಬರೇ ಜಾಮೀನಿನನ್ನು ಹೊರಬರುವ ಪ್ರಯತ್ನ ಮಾಡುತ್ತಿದ್ದಾರೆ. ನಾಲ್ವರು ಹೊರ ಬಂದೂ ಆಗಿದೆ.

ಈ ದೇಶದ ಶೋಷಿತ, ಅಲ್ಪಸಂಖ್ಯಾತರ, ಮಹಿಳಾ ಸಮುದಾಯದ ಮೇಲೆ ನಿರಂತರವಾಗಿ ಹಿಂದುತ್ವ ರಾಜಕಾರಣ ನಡೆಸುತ್ತಿರುವ ದಾಳಿಯ ವಿರುದ್ಧ ಗೌರಿ ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಕೋಮುಸೌಹಾರ್ದ ವೇದಿಕೆಯ ಮೂಲಕ ತನ್ನ ಸೈದ್ಧಾಂತಿಕ ಬದ್ಧತೆಯನ್ನು ನಿರ್ಭಯದಿಂದ ಹೇಳುತ್ತಿದ್ದರು. ಈ ಕಾರಣದಿಂದಾಗಿ ಹಿಂದುತ್ವವಾದಿ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಜೀವ ಬೆದರಿಕೆ ಇದ್ದರೂ ಅವರು ಸರ್ಕಾರದ ಭದ್ರತೆಯನ್ನು ನಿರಾಕರಿಸಿದ್ದರು. ರಾಜ್ಯದ ಹಲವು ಕಡೆ ಅವರ ಮೇಲೆ ದೂರುಗಳು ದಾಖಲಾಗಿ ಜಿಲ್ಲಾ ಕೋರ್ಟ್‌ಗಳಿಗೆ ನಿರಂತವಾಗಿ ಅಲೆಯುವಂತಾಗಿತ್ತು. ವೈಯಕ್ತಿಕ ನಿಂದನೆ ಟ್ರೋಲ್‌ಗಳಿಗೆ ಗೌರಿ ಅವರು ಅಷ್ಟೇ ಸಂಯಮದಿಂದ ಉತ್ತರಿಸುತ್ತಿದ್ದರು.

ದೇಶ ವಿದೇಶದ ಪ್ರಜ್ಞಾವಂತರಿಂದ ತೀವ್ರ ಖಂಡನೆ ವ್ಯಕ್ತವಾದ ಈ ಪ್ರಕರಣದಲ್ಲಿ ಕೇವಲ ಐದು ತಿಂಗಳಲ್ಲಿ ಕರ್ನಾಟಕ ಪೊಲೀಸರು ಹಂತಕರ ಜಾಡು ಹಿಡಿದು ಹೆಡೆಮುರಿ ಕಟ್ಟಿದ್ದರು. ಪೊಲೀಸ್ ವ್ಯವಸ್ಥೆಗೆ ಸವಾಲಾಗಿದ್ದ ಈ ಪ್ರಕರಣ ಈಗ ಯಾವ ಹಂತದಲ್ಲಿದೆ ಎಂಬ ಬಗ್ಗೆ ಹಲವರ ಕುತೂಹಲಕ್ಕೆ ಪೂರಕವಾಗಿ ತನಿಖೆಯ ಸಮಗ್ರ ಮಾಹಿತಿ ಇಲ್ಲಿದೆ.

ಗೌರಿ ಅವರ ಕೊಲೆ ನಡೆದಾಗ ಅಧಿಕಾರದಲ್ಲಿದ್ದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್ಐಟಿ ರಚಿಸಿತು. ಐಜಿಪಿ ರ‍್ಯಾಂಕ್ ನ ಬಿ.ಕೆ.ಸಿಂಗ್ ಅದರ ನೇತೃತ್ವ ವಹಿಸಿದರು. ಐಪಿಎಸ್ ರ‍್ಯಾಂಕ್ ನ ಅನುಚೇತ್ ತನಿಖಾಧಿಕಾರಿಯಾದರು. ಸುಮಾರು 52ಕ್ಕೂ ಹೆಚ್ಚು ಅಧಿಕಾರಿಗಳ ಈ ತಂಡ, ತಕ್ಷಣವೇ ಪ್ರಾಥಮಿಕ ಮಾಹಿತಿಗಳನ್ನು ಕಲೆ ಹಾಕಿತು. ಗೌರಿ ಅವರ ಮನೆಯಲ್ಲಿನ ಸಿಸಿಟಿವಿ ಪರಿಶೀಲಿಸಿತು. ಕತ್ತಲಿದ್ದ ಕಾರಣ ಹಂತಕರ ಚಹರೆ ಪತ್ತೆ ಕಷ್ಟವಾಗಿತ್ತು. ಗೌರಿಯವರಿಗೆ ಮೂರು ಗುಂಡುಗಳು ತಗುಲಿದ್ದವು. ಈ ಗುಂಡುಗಳು ನಿರ್ದಿಷ್ಟ ಪಿಸ್ತೂಲಿನಿಂದಲೇ ಬಂದಿವೆ ಎಂಬುದು ಸ್ಪಷ್ಟವಾಗಿತ್ತು. ಗೌರಿ ಹತ್ಯೆಗೆ ವೃತ್ತಿ ವೈಷಮ್ಯ, ಕಚೇರಿಯೊಳಗಿನ ಭಿನ್ನಾಭಿಪ್ರಾಯ, ನಕ್ಸಲ್ ಹೋರಾಟ, ಕೌಟುಂಬಿಕ ವೈಮನಸ್ಸು ಮುಂತಾದ ಗಾಳಿಸುದ್ದಿಗಳನ್ನು ಹರಡಿ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ಫಲಿಸಲಿಲ್ಲ.

ಸಿದ್ದರಾಮಯ್ಯ 96

ಆರೋಪಿಗಳ ಪತ್ತೆಗಾಗಿ ಸಾವಿರಾರು ಫೋನ್ ಕರೆಗಳನ್ನು ಪೊಲೀಸರು ಕೇಳಿಸಿಕೊಂಡಿದ್ದಾರೆ. 2017ರ ನವೆಂಬರ್, ಡಿಸೆಂಬರ್ ವೇಳೆಗೆ ಒಂದು ಸಣ್ಣ ಸುಳಿವು ಪೊಲೀಸರಿಗೆ ಸಿಗುತ್ತದೆ. ಮಂಡ್ಯದ ಕೆ.ಟಿ.ನವೀನ್‌ ಕುಮಾರ್ ಎಂಬಾತನ ಕರೆ ಸಂಚಲನಕ್ಕೆ ಕಾರಣವಾಗುತ್ತದೆ. ಈತ ತನ್ನದೇ ಹಿಂದುತ್ವ ಸಂಘಟನೆ ಮಾಡಿಕೊಂಡು, ಆರ್‌ಎಸ್‌ಎಸ್, ಹಿಂದೂ ಜನಜಾಗೃತಿ ವೇದಿಕೆ ಮತ್ತು ಮಹಾರಾಷ್ಟ್ರದ ಸನಾತನ ಸಂಸ್ಥೆಯ ಜೊತೆ ಸಂಪರ್ಕದಲ್ಲಿದ್ದ. ಸ್ನೇಹಿತನೊಬ್ಬನ ಜೊತೆ ಮಾತನಾಡುತ್ತಾ ಗೌರಿ ಲಂಕೇಶ್‌ ಕೊಲೆಯ ಬಗ್ಗೆ ಬಾಯಿ ಬಿಟ್ಟಿರುತ್ತಾನೆ. ಇದನ್ನು ಕೇಳಿಸಿಕೊಂಡ ಪೊಲೀಸರು ಕೆ.ಟಿ.ನವೀನ್‌ಕುಮಾರ್‌ ಫೋನ್ ಕರೆಗಳ ಮೇಲೆ ನಿಗಾ ವಹಿಸುತ್ತಾರೆ. ನವೀನ್‌ನ ಎಲ್ಲ ಕರೆಗಳು ಕಣ್ಗಾವಲಿಗೆ ಒಳಪಡುತ್ತವೆ. ಒಬ್ಬ ನಿರ್ದಿಷ್ಟವಾದ ವ್ಯಕ್ತಿ ಟೆಲಿಫೋನ್ ಬೂತ್‌ಗಳಿಂದ ಈತನಿಗೆ ಪದೇ ಪದೇ ಕರೆ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬರುತ್ತದೆ. ಹೀಗೆ ಪೋನ್ ಮಾಡುತ್ತಿರುವವನು ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಪಣತೊಡುತ್ತಾರೆ. ಇದರ ನಡುವೆ ವಿಚಾರವಾದಿ ಚಿಂತಕ ಕೆ.ಎಸ್.ಭಗವಾನ್ ಅವರ ಹತ್ಯೆಗಾಗಿ ಬಂದೂಕು ಖರೀದಿಸಲು ಕೆ.ಟಿ.ನವೀನ್‌ಕುಮಾರ್ ಬೆಂಗಳೂರಿಗೆ ಬರುತ್ತಾನೆ ಎಂಬುದು ಫೋನ್ ಕರೆಗಳ ಮೂಲಕ ಸ್ಪಷ್ಟವಾಗುತ್ತದೆ. ಕೆ.ಎಸ್.ಭಗವಾನ್ ಹತ್ಯೆಯ ಸಂಚಿನ ಪ್ರಕರಣದಲ್ಲಿ 2018ರ ಫೆಬ್ರವರಿಯಲ್ಲಿ ನವೀನ್‌ಕುಮಾರ್ ಬಂಧನವಾಗುತ್ತದೆ.

ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಫೋನ್ ಮಾಡುವವನು ಪ್ರವೀಣ್ ಎಂಬಾತ ಎಂದು ಬಾಯಿ ಬಿಡುತ್ತಾನೆ. ಬ್ರಹ್ಮಾವರದಲ್ಲಿ ನಡೆಯುವ ಮದುವೆ ಕಾರ್ಯಕ್ರಮವೊಂದರಲ್ಲಿ ಈ ಪಿಸ್ತೂಲನ್ನು ಪ್ರವೀಣ್‌ಗೆ ನವೀನ್ ಕೊಡಬೇಕಾಗಿತ್ತು ಎಂಬುದು ತಿಳಿಯುತ್ತದೆ. ಗೌರಿ ಹತ್ಯೆಯ ವರದಿ ಮಾಧ್ಯಮಗಳಲ್ಲಿ ಬಂದಿದ್ದರಿಂದ ಬ್ರಹ್ಮಾವರದ ಮದುವೆಗೆ ಯಾರೂ ಬರುವುದಿಲ್ಲ. ಪ್ರವೀಣ್ ಎಂಬಾತನ ದನಿ ಈಗಾಗಲೇ ಪತ್ತೆಯಾಗಿದ್ದರಿಂದ ಅದರ ಸುತ್ತಲಿನ ತನಿಖೆಯನ್ನು ಚುರುಕುಗೊಳಿಸಲಾಗುತ್ತದೆ. ಆತನನ್ನು ಪತ್ತೆ ಹಚ್ಚಿದರೂ ತಕ್ಷಣಕ್ಕೆ ಬಂಧಿಸುವುದಿಲ್ಲ. ಈತ ಮಂಡ್ಯದಲ್ಲಿ ನವೀನ್ ಕುಮಾರ್‌ನನ್ನು ಭೇಟಿಯಾಗಿದ್ದ ಎಂಬುದು ತಿಳಿಯುತ್ತದೆ.

ಈ ಪ್ರವೀಣ್ ದಾವಣಗೆರೆಯಲ್ಲಿರುವ ಬಾಯ್ ಸಾಬ್ ಎಂಬ ಅಡ್ಡಹೆಸರಿನಲ್ಲಿರುವ, ಕೊಲೆಗಡುಕ ಗುಂಪಿನ ಇನ್ನೊಬ್ಬ ಹಿರಿಯ ಸದಸ್ಯನನ್ನು ಭೇಟಿಯಾಗಲು ಹೋಗುತ್ತಿರುವುದು ಸಂಭಾಷಣೆಯಿಂದ ಸ್ಪಷ್ಟವಾಗುತ್ತದೆ. ಉಡುಪಿಯಿಂದ ಹೊರಟಿದ್ದ ಆತನನ್ನು ಬಂಧಿಸಲಾಗುತ್ತದೆ. ಜೊತೆಗೆ ಆತ ಯಾರನ್ನು ಭೇಟಿಯಾಗಲು ಉದ್ದೇಶಿಸಿದ್ದಾನೆಯೋ ಅವರನ್ನು ತೋರಿಸಲು ಹೇಳಲಾಗುತ್ತದೆ. ಆಗ ಕರ್ನಾಟಕ ಪೊಲೀಸರಿಗೆ ಗೌರಿ ಹತ್ಯೆ ಪ್ರಕರಣದಲ್ಲಿ ಬಹುದೊಡ್ಡ ಬ್ರೇಕ್ ಸಿಗುತ್ತದೆ. ಪ್ರವೀಣ್‌ನ ನಿಜವಾದ ಹೆಸರು ಸುಜಿತ್ ಕುಮಾರ್. ಶಿವಮೊಗ್ಗದ ಸೊರಬದ ವ್ಯಕ್ತಿ. ಈ ಸುಜಿತ್ ಸನಾತನ ಸಂಸ್ಥೆಯ ಸಂಘಟಕ. ಕೊಲೆಯಂತಹ ಕೃತ್ಯಗಳಿಗೆ ಜನರನ್ನು ನೇಮಕ ಮಾಡಿಕೊಳ್ಳುತ್ತಿದ್ದದ್ದು ಈತನೇ. ನವೀನ್‌ಕುಮಾರ್‌ನನ್ನು ನೇಮಕ ಮಾಡಿಕೊಂಡಿದ್ದು ಇದೇ ಸುಜಿತ್. ಇವನಿಗೆ ಮಾರ್ಗದರ್ಶನ, ನಿರ್ದೇಶನ ನೀಡುತ್ತಿದ್ದದ್ದು ಸನಾತನ ಸಂಸ್ಥೆಯ ಪ್ರಧಾನ ನಾಯಕ ಮಹಾರಾಷ್ಟ್ರದ ಅಮೋಲ್ ಕಾಳೆ. ಅಮೋಲ್‌ ಕಾಳೆ, ಅಮಿತ್ ದೇಗ್ವೇಕರ್ ಮತ್ತು ಉತ್ತರ ಕರ್ನಾಟಕದ ಮನೋಹರ್ ಯಡವೆ ಎಂಬ ಮೂವರನ್ನು ನಂತರ ಬಂಧಿಸಲಾಗುತ್ತದೆ.

ವಿಚಾರವಾದಿಗಳು
ಹಿಂದುತ್ವವಾದಿಗಳಿಂದ ಹತ್ಯೆಗೀಡಾದ ವಿಚಾರವಾದಿಗಳಾದ ದಾಬೋಲ್ಕರ್‌, ಎಂ ಎಂ ಕಲಬುರ್ಗಿ, ಗೌರಿ ಲಂಕೇಶ್‌, ಪಾನ್ಸರೆ

ಗೌರಿ ಹತ್ಯೆಯಷ್ಟೇ ಅಲ್ಲ, ದಾಬೋಲ್ಕರ್, ಪಾನ್ಸರೆ, ಎಂ.ಎಂ.ಕಲ್ಬುರ್ಗಿ ಈ ನಾಲ್ಕು ಹತ್ಯೆಗಳಿಗೆ ಮಾಸ್ಟರ್ ಮೈಂಡ್ ಈ ಅಮಿತ್. ಅಮೋಲ್ ಕಾಳೆ, ಅಮಿತ್ ದೇಗ್ವೇಕರ್, ಮನೋಹರ್ ಯಡವೆ– ಈ ಮೂವರ ಡೈರಿಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಾರೆ. ಆ ಡೈರಿಯಲ್ಲಿ ಕೋಡ್ ಭಾಷೆಯಲ್ಲಿ ಹಲವಾರು ಟಿಪ್ಪಣಿಗಳು, ಹಲವಾರು ಫೋನ್‌ ನಂಬರ್‌ಗಳು, ಬೇರೆ ಬೇರೆಯವರ ಹೆಸರುಗಳು ಇರುತ್ತವೆ. ತಕ್ಷಣವೇ ಇವುಗಳನ್ನು ಡೀಕೋಡ್ ಮಾಡಲು ಸಾಧ್ಯವಾಗುವುದಿಲ್ಲ. ಬಂಧಿತರು ವಿಚಾರಣೆಗೆ ಸಹಕರಿಸುವುದಿಲ್ಲ. ಏನಾದರೂ ಪ್ರಶ್ನಿಸಿದರೆ ಭಜನೆ ಮಾಡಲು ಶುರು ಮಾಡುತ್ತಾರೆ.

ಆ ನಂತರದಲ್ಲಿ ಪೊಲೀಸರು ಬಗೆಬಗೆಯಾದ ತಂತ್ರಗಳನ್ನು ಬಳಸುತ್ತಾರೆ. ಸೈದ್ಧಾಂತಿಕ ಚರ್ಚೆಗಳನ್ನು ಆರಂಭಿಸಿ, ಅವರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾರೆ. ಈ ಸಂದರ್ಭದಲ್ಲಿ ಅಮಿತ್ ದೇಗ್ವೇಕರ್- “ಗೌರಿಯನ್ನು ಹತ್ಯೆ ಮಾಡಿದ್ದು ಒಬ್ಬ ಬಿಲ್ಡರ್” ಎಂದು ಬಾಯಿ ಬಿಡುತ್ತಾನೆ. ಬಿಲ್ಡರ್ ಎಂಬ ಹೆಸರಿನ ಯಾವುದಾದರೂ ಅಂಶ ಡೈರಿಯಲ್ಲಿ ಇದೆಯಾ ಎಂದು ಪೊಲೀಸರು ಹುಡುಕುತ್ತಾರೆ. ಆಗ ಬಿಲ್ಡರ್ ಎಂಬ ಹೆಸರಲ್ಲಿ ಒಂದು ಫೋನ್ ನಂಬರ್ ಸಿಗುತ್ತದೆ. ಈ ನಂಬರ್ ಉತ್ತರ ಕರ್ನಾಟಕದ ಸಿಂಧಗಿಯಲ್ಲಿನ ಒಬ್ಬ ವ್ಯಕ್ತಿಯ ಹೆಸರಲ್ಲಿದೆ ಎಂಬುದು ಗೊತ್ತಾಗುತ್ತದೆ. ತಕ್ಷಣವೇ ಪೊಲೀಸರು ಸಿಂಧಗಿಯತ್ತ ಗಮನ ಹರಿಸುತ್ತಾರೆ. ಅಲ್ಲಿ ಹಿಂದುತ್ವ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ, ಈಗಾಗಲೇ ಪ್ರಕರಣಗಳನ್ನು ಎದುರಿಸುತ್ತಿರುವವರ ಪಟ್ಟಿಯನ್ನು ತೆಗೆದುಕೊಳ್ಳುತ್ತಾರೆ.

ಗೌರಿಯವರ ಮನೆಯ ಸಿಸಿಟಿವಿ ಮೂಲಕ ಹಂತಕನ ಎತ್ತರ, ಆಕಾರ ಮತ್ತು ಗಾತ್ರವನ್ನು ಪತ್ತೆ ಹಚ್ಚಲಾಗಿರುತ್ತದೆ. ತಲೆಗೆ ಹೆಲ್ಮೇಟ್ ಧರಿಸಿದ್ದರಿಂದ ಮುಖ ಚಹರೆ ಪತ್ತೆಯಾಗಿರಲಿಲ್ಲ. ಆದರೆ ಅಂದಾಜು 5 ಅಡಿ 1 ಇಂಚಿನ ಒಬ್ಬ ವ್ಯಕ್ತಿ ಗುಂಡು ಹಾರಿಸಿದ್ದಾನೆ ಎಂಬುದನ್ನು ಫೋರೆನ್ಸಿಕ್ ಸಾಕ್ಷಿಗಳು ದೃಢಪಡಿಸಿರುತ್ತವೆ. ಇದನ್ನೇ ಮುಂದಿಟ್ಟುಕೊಂಡು ಈ ರೀತಿಯ ವ್ಯಕ್ತಿ ಸಿಂಧಗಿಯಲ್ಲಿ ಯಾರಿದ್ದಾರೆ ಎಂದು ಹುಡುಕುತ್ತಾರೆ. ಆಗ ಸಿಗುವ ಹೆಸರೇ ’ಪರಶುರಾಮ್ ವಾಗ್ಮೋರೆ’. ಈತ ಪ್ರಮೋದ್ ಮುತಾಲಿಕರ ಶ್ರೀರಾಮಸೇನೆಯಲ್ಲಿ ಹಿಂದೆ ಸಕ್ರಿಯನಾಗಿದ್ದ. ಸಿಂಧಗಿಯಲ್ಲಿ ಪಾಕಿಸ್ತಾನದ ಬಾವುಟವನ್ನು ಹಾರಿಸಿ ಮುಸ್ಲಿಮರ ತಲೆಗೆ ಕಟ್ಟಿದ್ದು, ಹುಬ್ಬಳ್ಳಿ ಕೋರ್ಟ್‌ನಲ್ಲಿ ಒಂದು ಬಾಂಬ್ ಬ್ಲಾಸ್ಟ್ ಮಾಡಿದ್ದು- ಇಂತಹ ಪ್ರಕರಣಗಳಲ್ಲಿ ಪರಶುರಾಮ್ ವಾಗ್ಮೋರೆ ಭಾಗಿಯಾಗಿದ್ದ. ಇದೆಲ್ಲದರ ಆಧಾರದಲ್ಲಿ ಪರಶುರಾಮ್ ವಾಗ್ಮೋರೆಯನ್ನು 2018ರ ಮೇ ಕೊನೆಯಲ್ಲಿ ಅರೆಸ್ಟ್ ಮಾಡುತ್ತಾರೆ.

ಪರಶುರಾಮ ವಾಗ್ಮೊರೆ
ಪ್ರಮೋದ್‌ ಮುತಾಲಿಕ್‌ ಜೊತೆ ಪರಶುರಾಮ ವಾಗ್ಮೋರೆ

ಪರಶುರಾಮ್ ವಾಗ್ಮೋರೆ ಶೂಟರ್ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಈತನಿಗೆ ಸಹಾಯ ಮಾಡಿದವರು ಯಾರು? ಎಂಬುದನ್ನು ತಿಳಿಯಬೇಕಾಗುತ್ತದೆ. ತನ್ನನ್ನು ಬೈಕ್‌ನಲ್ಲಿ ಕರೆದುಕೊಂಡು ಬಂದಿದ್ದು ಹುಬ್ಬಳ್ಳಿಯ ವ್ಯಕ್ತಿ ಎಂದು ಬಾಯಿಬಿಡುತ್ತಾನೆ ಪರಶುರಾಮ್. ಕರೆದುಕೊಂಡು ಬಂದವನ ಕಾಲಿನಲ್ಲಿರುವ ನರಗಳು ಊದಿದ್ದವು ಎಂದು ವಿವರಿಸುತ್ತಾನೆ. ಇದು ’ವೆರಿಕೊ ವೇಯ್ನ್ಸ್‌’- ಉಬ್ಬಿರುವ ರಕ್ತನಾಳದ ಸಮಸ್ಯೆಯಾಗಿರುತ್ತದೆ. ಮತ್ತೆ ಪೊಲೀಸರು ಹುಬ್ಬಳ್ಳಿಯಲ್ಲಿ ಹಿಂದುತ್ವ ಚಟುವಟಿಕೆಯಲ್ಲಿ ಸಕ್ರಿಯರಾಗಿರುವವರು, ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿರುವವರ ಪಟ್ಟಿಯನ್ನೆಲ್ಲ ಮಾಡಿದಾಗ ಅಮಿತ್ ಬಡ್ಡಿ ಎಂಬಾತನಿಗೆ ವರಿಕೋ ವೇಯ್ನ್ಸ್‌ ಇರುವುದು ತಿಳಿಯುತ್ತದೆ. ಹುಬ್ಬಳ್ಳಿಯ ಹಲವು ಗಲಭೆಗಳಲ್ಲಿ ಈತ ಪ್ರಕರಣಗಳನ್ನು ಎದುರಿಸುತ್ತಿರುತ್ತಾನೆ. ಗಣೇಶ್ ಮಿಷ್ಕಿನ್ ಎಂಬ ಇನ್ನೊಬ್ಬ ವ್ಯಕ್ತಿ ಇವರ ಜೊತೆಯಲ್ಲಿದ್ದ ಎಂಬುದು ಬಯಲಾಗುತ್ತದೆ.

ಬಳಸಿದ ಪಿಸ್ತೂಲ್ ಎಲ್ಲಿದೆ, ಬಳಸಿದ ವಾಹನ ಎಲ್ಲಿದೆ, ಯಾವ ವಾಹನ ಬಳಸಿದ್ದಾರೆ, ಅವರು ಇಲ್ಲಿರಲು ಅವಕಾಶ ಮಾಡಿಕೊಟ್ಟವರು ಯಾರು- ಈ ರೀತಿಯ ತನಿಖೆಯನ್ನು ಶುರು ಮಾಡಿದಾಗ ಒಂದೊಂದೇ ಡೈರಿಗಳು ತೆರೆದುಕೊಳ್ಳುತ್ತವೆ. ದಕ್ಷಿಣ ಕನ್ನಡದ ಸಂಪಾಜೆಯ ಮೋಹನ್ ನಾಯಕ್ ಎಂಬಾತನಿಗೂ ಸನಾತನ ಸಂಸ್ಥೆಗೂ ಬಹಳ ಹತ್ತಿರದ ಸಂಬಂಧ. ಬೆಂಗಳೂರು- ಮೈಸೂರು ರಸ್ತೆಯ ಕುಂಬಳಗೋಡಿನಲ್ಲಿ ಆಕ್ಯುಪಂಕ್ಚರ್ ವೃತ್ತಿಯ ಹೆಸರಲ್ಲಿ ಒಂದು ಮನೆಯನ್ನು ಪಡೆದಿರುವುದು ತಿಳಿಯುತ್ತದೆ. ಗೌರಿಯವರ ಮನೆ ಮಾರ್ಗದಲ್ಲೇ ಬಾಡಿಗೆ ಮನೆ ಪಡೆಯಲಾಗಿರುತ್ತದೆ. ಕುಮಾರ್ ಎಂಬಾತ ಮಾಗಡಿ ರಸ್ತೆಯಲ್ಲಿನ ಸೀಗೇಹಳ್ಳಿಯಲ್ಲಿ ಇನ್ನೊಂದು ಮನೆಯನ್ನು ಮಾಡಿಕೊಂಡಿರುತ್ತಾನೆ. ಹಂತಕನಿಗೆ ಬಂದೂಕಿನ ತರಬೇತಿಯನ್ನು ನೀಡಿದ್ದು ರಾಜೇಶ್ ಬಂಗೇರ ಎಂಬ ವ್ಯಕ್ತಿ. ಆತ ಕೊಡಗಿನವರು ಮತ್ತು ಸರ್ಕಾರಿ ನೌಕರ ಕೂಡ ಆಗಿದ್ದನು. ಬೆಳಗಾವಿಯ ಕಾಡು ಪ್ರದೇಶಕ್ಕೆ ಭರತ್ ಕುರ್ಣೇ ಎಂಬ ವ್ಯಕ್ತಿ ಇವರನ್ನೆಲ್ಲ ಕರೆದುಕೊಂಡು ಹೋಗಿ ಬಂದೂಕು ತರಬೇತಿಗೆ ಸಹಕರಿಸಿರುತ್ತಾನೆ.

ಅಮೋಲ್ ಕಾಳೆ ಮತ್ತು ಅಮಿತ್ ದೇಗ್ವೇಕರ್ ಇವರೆಲ್ಲ ಮಹಾರಾಷ್ಟ್ರದವರು. ಅವರೇಕೆ ಇಲ್ಲಿಗೆ ಬಂದರು? ಅವರಿಗೂ ಗೌರಿಯವರಿಗೂ ಏನು ಸಂಬಂಧ? ಇದನ್ನು ನೋಡಿದರೆ ಇದೆಲ್ಲದರ ಹಿಂದೆ ಒಂದು ಸೈದ್ಧಾಂತಿಕವಾದ ಮತ್ತು ಸಂಘಟಿತವಾದ ಅಪರಾಧ ನಡೆಸುವ ಗುಂಪಿದೆ ಎಂಬುದು ತಿಳಿದು ಬರುತ್ತದೆ. ಪೊಲೀಸರು ದಾಳಿ ಮಾಡಿ ಆರೋಪಿಗಳ ಮನೆಯಿಂದ ವಶಕ್ಕೆ ಪಡೆದ ಎಲ್ಲರ ಮನೆಗಳಲ್ಲಿ ಸನಾತನ ಸಂಸ್ಥೆಯ ’ಕ್ಷಾತ್ರಧರ್ಮ ಸಾಧನ’ ಎಂಬ ಕೃತಿ ಸಿಗುತ್ತದೆ. ಇವರೆಲ್ಲರೂ ಸನಾತನ ಸಂಸ್ಥಾ, ಹಿಂದೂ ಜಾಗೃತ ಸಮಿತಿಯ ಸದಸ್ಯರು ಎಂಬುದು ಗೊತ್ತಾಗುತ್ತದೆ.

2018ರ ನವೆಂಬರ್- ಡಿಸೆಂಬರ್‌ನಲ್ಲಿ ಮಹಾರಾಷ್ಟ್ರದ ಪೂನಾದಲ್ಲಿ ಹಲವು ಕಡೆ ಪೊಲೀಸರು ದಾಳಿ ಮಾಡುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ಬಂದೂಕು ಮತ್ತು ಪಿಸ್ತೂಲ್‌ಗಳನ್ನು ವಶಕ್ಕೆ ಪಡೆಯುತ್ತಾರೆ. ಸಂಗ್ರಹ ಮತ್ತು ಸಂಚು ಮಾಡುತ್ತಿದ್ದ ಸನಾತನ ಸಂಸ್ಥೆಗೆ ಸೇರಿದ ಸುಧನ್ವ ಗೊಂದಲೇಕರ್, ವಾಸುದೇವರಾವ್ ಸೂರ್ಯವಂಶಿ, ಶ್ರೀಕಾಂತ್ ಪಂಗಾರ್ಕರ್, ಹೃಷಿಕೇಶ್ ದೇವಡೇಕರ್ ಸಿಕ್ಕಿಬೀಳುತ್ತಾರೆ.

ವಾಸುದೇವರಾವ್ ಸೂರ್ಯವಂಶಿ ಎಂಬ ವ್ಯಕ್ತಿ ದಾವಣಗೆರೆಯಲ್ಲಿ ಒಂದು ವಾಹನವನ್ನು ಕದ್ದು ಗೌರಿ ಕೊಲೆಯ ಕೃತ್ಯಕ್ಕೆ ಬಳಸಿರುತ್ತಾನೆ. ಮತ್ತೆ ಅದನ್ನು ತೆಗೆದುಕೊಂಡು ಹೋಗಿ ಮಹಾರಾಷ್ಟ್ರದ ಗಡಿಭಾಗದಲ್ಲಿ ಇಟ್ಟುಕೊಂಡಿದ್ದ. ಆ ವಾಹನವನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಗೌರಿ, ಪಾನ್ಸಾರೆ, ಎಂ.ಎಂ.ಕಲ್ಬುರ್ಗಿ, ನರೇಂದ್ರ ದಾಬೋಲ್ಕರ್- ಈ ನಾಲ್ವರ ಹತ್ಯೆಗೂ ಒಂದೇ ರೀತಿಯ ಪಿಸ್ತೂಲನ್ನು ಇವರು ಬಳಸಿದ್ದಾರೆ. ಇವರ ಪ್ರಕಾರ- ಈ ಬಂದೂಕು ವಿಷ್ಣುವಿನ ಕೈಯಲ್ಲಿರುವ ಸುದರ್ಶನ ಚಕ್ರದ ರೀತಿ. ಶತ್ರುಗಳ ತಲೆ ಕತ್ತರಿಸಿದ ಬಳಿಕ ಈ ಸುದರ್ಶನ ಚಕ್ರ ಮತ್ತೆ ವಿಷ್ಣುವಿನ ಕೈ ಸೇರುತ್ತದೆ. ಹೀಗಾಗಿ ಒಂದೇ ಪಿಸ್ತೂಲು ಬಳಕೆಯಾಗಿದೆ. ಆದರೆ ಗೌರಿ ಹತ್ಯೆಗೆ ಬಳಸಿದ ಪಿಸ್ತೂಲನ್ನು ಪುಣೆಯ ಬಳಿಯ ನದಿಯೊಂದರಲ್ಲಿ ಎಸೆಯುತ್ತಾರೆ. ಬಂದೂಕು ಸಿಕ್ಕರೆ ದೊಡ್ಡ ಸಮಸ್ಯೆಯಾಗುತ್ತದೆ ಎಂದು ತಿಳಿದು ಸಾಕ್ಷ್ಯನಾಶ ಮಾಡುತ್ತಾರೆ. ಮೋಹನ್ ಮತ್ತು ಕುಮಾರ್ ತಾವಿದ್ಧ ಸ್ಥಳದಲ್ಲಿದ್ದ ಎಲ್ಲ ಸಾಕ್ಷಿಗಳನ್ನು ನಾಶ ಮಾಡಿರುವ ಅಪರಾಧವನ್ನು ಎಸಗಿದ್ದಾರೆ. ಆದರೆ ಎಲ್ಲ ಸಾಕ್ಷ್ಯಗಳನ್ನು ಮತ್ತೆ ವಾಪಸ್ ಸಂಗ್ರಹಿಸುವ ನಿಟ್ಟಿನಲ್ಲಿ ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಗಿದೆ. 2018ರ ನವೆಂಬರ್ ವೇಳೆಗೆ 18 ಆರೋಪಿಗಳ ಪೈಕಿ 16 ಜನರ ಬಂಧನವಾಗಿರುತ್ತದೆ. 2020ರಲ್ಲಿ ಜಾರ್ಖಂಡ್‌ನಲ್ಲಿ ಋಷಿಕೇಶ್ ದೇವಡೇಕರ್‌ನನ್ನು ಬಂಧಿಸುವ ಮೂಲಕ 17 ಜನರನ್ನು ವಶಕ್ಕೆ ಪಡೆದಂತಾಗುತ್ತದೆ. ಆದರೆ ವಿಕಾಸ್ ಪಾಟೀಲ್ ಎಂಬಾತ ಮಾತ್ರ ಈಗಲೂ ತಲೆಮರೆಸಿಕೊಂಡಿದ್ದಾನೆ.

2018ರ ನವೆಂಬರ್ 23ರಂದು ಸುಮಾರು 9,235 ಪುಟಗಳ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಆರೋಪಿಗಳ ಮೇಲೆ ಕೊಲೆ, ಸಂಘಟಿತ ಸಂಚು, ಇತ್ಯಾದಿಗಳ ಸೆಕ್ಷನ್ 302, 120 (ಬಿ), ಇತ್ಯಾದಿಗಳು ಹಾಗೂ ಶಸ್ತ್ರಾಸ್ತ್ರ ಕಾಯಿದೆ ಕಲಮುಗಳು ಮತ್ತು ಕರ್ನಾಟಕ ಸಂಘಟಿತ ಅಪರಾಧಗಳ ಕಾಯಿದೆ (KOCCA) ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ.

ಗೌರಿ ಲಂಕೇಶ್ ಅವರನ್ನು ಕೊಲ್ಲಲು ಒಂದು ವರ್ಷ ಕಾಲ ಸಂಚು ನಡೆದಿತ್ತು. ಹಿಂದೂ ಧರ್ಮದಲ್ಲಿನ ಬ್ರಾಹ್ಮಣ್ಯ ಹೇಗೆ ಸನಾತನ ಧರ್ಮ ಎಂಬ ಹೆಸರಲ್ಲಿ ಶೂದ್ರರಿಗೆ, ದಲಿತರಿಗೆ ಅನ್ಯಾಯ ಮಾಡುತ್ತಿದೆ, ಹಿಂದೂರಾಷ್ಟ್ರ ಪರಿಕಲ್ಪನೆಯು ಪ್ರಜಾತಂತ್ರಕ್ಕೆ ಕಂಠಕವಾಗಿದೆ ಎಂಬುದನ್ನು ಗೌರಿ ಪದೇ ಪದೇ ಹೇಳುತ್ತಿದ್ದರು. ಹೀಗಾಗಿ ಇವರನ್ನು ದುರ್ಜನರು ಎಂದು ಪಾತಕಿಗಳು ನಿರ್ಧರಿಸಿದ್ದರು. ಗೌರಿಯವರು ಸಾರ್ವಜನಿಕವಾಗಿ ಹಿಂದೂಧರ್ಮವನ್ನು ಕಟುವಾಗಿ ಟೀಕಿಸಿದ ವಿಡಿಯೊವೊಂದರ ಸಣ್ಣ ತುಣುಕೊಂದನ್ನು ಕಾರಣವಾಗಿ ಇಟ್ಟುಕೊಂಡು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಹದಿನೆಂಟು ಜನ ಆರೋಪಿಗಳಲ್ಲಿ ಯಾರೊಬ್ಬರೂ ಗೌರಿ ಲಂಕೇಶ್ ಪತ್ರಿಕೆಯನ್ನು ಓದಿದವರಲ್ಲ. ಗೌರಿ ಲಂಕೇಶ್ ಅವರ ಬಗ್ಗೆ ತಿಳಿದವರೂ ಅಲ್ಲ.

ಪ್ರೊ ನರೇಂದ್ರ ನಾಯಕ್, ಕೆ ಎಸ್‌ ಭಗವಾನ್ – ಹೀಗೆ ಇಪ್ಪತ್ತೈದರಿಂದ ಮೂವತ್ತು ಜನ ವಿಚಾರವಾದಿಗಳು ಈ ಗುಂಪಿನ ಹಿಟ್‌ ಲಿಸ್ಟ್‌ನಲ್ಲಿದ್ದರು. ಆದರೆ ಗೌರಿ ತಾನು ಸಾಯುವ ಮೂಲಕ ಉಳಿದವರನ್ನೆಲ್ಲ ಬದುಕಿಸಿದರು ಎಂದರೆ ತಪ್ಪಾಗಲಾರದು.

ವಿಚಾರಣೆ ಯಾವ ಹಂತದಲ್ಲಿದೆ?
ಪ್ರಕರಣದ ವಿಚಾರಣೆ ಮೂರು ವರ್ಷ ಆರಂಭವೇ ಆಗಿರಲಿಲ್ಲ. ಇದರ ನಡುವೆ ಕೋವಿಡ್ ಬಂತು. ಆರೋಪಿಗಳು ವಿವಿಧ ಜೈಲಿನಲ್ಲಿ ಇದ್ದಾರೆ. ಅಂತಿಮವಾಗಿ 2022ರ ಜುಲೈನಲ್ಲಿ ವಿಚಾರಣೆ ಶುರುವಾಗಿದೆ. 405 ಸಾಕ್ಷಿಗಳನ್ನು, 909 ಪುರಾವೆಗಳನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ. ವಿಚಾರಣೆ ಮತ್ತು ಪಾಟಿ ಸವಾಲು ಆಗಬೇಕು.

ಕುಂಟುತ್ತಾ ಸಾಗಿರುವ ವಿಚಾರಣೆ ತ್ವರಿತಗತಿಯಲ್ಲಿ ನಡೆದು ತೀರ್ಪು ಹೊರಬೀಳಬೇಕು ಎಂಬುದು ಗೌರಿ ಒಡನಾಡಿಗಳ ಆಗ್ರಹ. ಹೀಗಾಗಿ ಈ ಪ್ರಕರಣದ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪಿಸಬೇಕು ಎಂದು ಆಗ್ರಹಿಸಲಾಗುತ್ತಿದೆ. ಆದರೂ ವಿಚಾರಣೆ ಪ್ರಾರಂಭವಾಗಲು ಐದು ವರ್ಷಗಳೇ ಬೇಕಾಯಿತು. ಅದಕ್ಕೆ ಆರೋಪಿ ಪರ ವಕೀಲರು ವಿನಾಕಾರಣ ವಿಳಂಬ ಮಾಡುತ್ತಿದ್ದದ್ದು ಒಂದು ಕಾರಣ ಎಂಬುದು ಪ್ರಾಸಿಕ್ಯೂಷನ್ ಆರೋಪ.

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸಮುಚ್ಚಯದ ಕೋರ್ಟ್ ಹಾಲ್ 1 ರಲ್ಲಿ ಸಿಟಿ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 2022ರ ಜುಲೈನಿಂದ ವಿಚಾರಣೆಯು ನಡೆಯುತ್ತಿದೆ. ಪ್ರಾಸಿಕ್ಯೂಷನ್ ಪರವಾಗಿ 2018ರಿಂದಲೂ ಖ್ಯಾತ ಜನಪರ ವಕೀಲರಾದ ಬಾಲನ್ ಅವರೇ ಕೇಸು ನಡೆಸುತ್ತಿದ್ದಾರೆ.

ಗೌರಿ ಹತ್ಯಾ ತನಿಖೆ ಮುಗಿದು 2018ರ ನವಂಬರ್ ನಲ್ಲೇ ಚಾರ್ಜ್ ಶೀಟ್ ದಾಖಲಿಸಿದರೂ 2022ರ ತನಕ ವಿಚಾರಣೆಯೇ ಪ್ರಾರಂಭವಾಗಲಿಲ್ಲ. ಚಾರ್ಜ್ ಶೀಟ್ ಪ್ರಕಾರ ಪ್ರಕರಣದಲ್ಲಿ 400ಕೂ ಹೆಚ್ಚು ಸಾಕ್ಷಿಗಳು ಮತ್ತು ಸಾವಿರಕ್ಕೂ ಹೆಚ್ಚು ಪುರಾವೆಗಳಿವೆ. ಆದರೂ ವಿಚಾರಣೆ ಆಮೆಗತಿಯಲ್ಲಿ ನಡೆದಿರುವುದರಿಂದ ಈವರೆಗೆ ಕೇವಲ 137 ಸಾಕ್ಷಿಗಳ ವಿಚಾರಣೆಯಾಗಿದೆ. ವಿಚಾರಣೆ ತ್ವರಿತಗತಿಯಲ್ಲಿ ನಡೆದು ಶಿಕ್ಷೆಯಾಗಬೇಕೆಂಬ ಉದ್ದೆಶದಿಂದ ಪ್ರಾಸಿಕ್ಯೂಶನ್ ವಕೀಲರಾದ ಬಾಲನ್ ಅವರು ಅಷ್ಟು ಮುಖ್ಯವಲ್ಲದ ನೂರಕ್ಕೊ ಹೆಚ್ಚು ಸಾಕ್ಷಿಗಳನ್ನು ಕೈಬಿಡಲು ಸಿದ್ಧವೆಂದು ಕೋರ್ಟಿಗೆ ತಿಳಿಸಿದ್ದಾರೆ.

ಆದರೂ ವಿಚಾರಣೆ ಮುಗಿಯಲು ಇನ್ನೂ ಸಾಕಷ್ಟು ವಿಳಂಬವಾಗುತ್ತದೆ ಎಂಬ ವಾದವನ್ನು ಮುಂದಿಟ್ಟು ಈಗಾಗಲೇ ನಾಲ್ವರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಮೋಹನ್‌ ಕುಮಾರ್‌, ಜುಲೈನಲ್ಲಿ ಅಮಿತ್‌ ದಿಗ್ವೇಕರ್‌, ನವೀನ್‌ ಕುಮಾರ್‌ , ಸುರೇಶ್‌ ಎಚ್‌ ಎಲ್‌ ಗೆ ಜಾಮೀನು ನೀಡಲಾಗಿದೆ.

ಒಂದು ವರ್ಷದ ಒಳಗೆ ವಿಚಾರಣೆ ಮುಗಿಸಲು ಅನುಕೂಲವಾಗುವಂತೆ ಈ ಪ್ರಕರಣಕ್ಕಾಗಿ ಒಂದು ವಿಶೇಷ ಕೋರ್ಟ್‌ ರಚಿಸಬೇಕೆಂಬ ಒತ್ತಾಯವನ್ನು ಕಳೆದ ವರ್ಷವೇ ಮಾಡಲಾಗಿತ್ತು. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಗಳಂತಿದ್ದರು ಗೌರಿ. ಮೊದಲ ಬಾರಿ ಸಿಎಂ ಆಗಿದ್ದಾಗಲೇ ಈ ಹತ್ಯೆ ನಡೆಯಿತು. ಗೌರಿ ಹಂತಕರಿಗೆ ಆದಷ್ಟು ಬೇಗ ಶಿಕ್ಷೆಯಾಗಲು ತ್ವರಿತ ನ್ಯಾಯಾಲಯ ಸ್ಥಾಪಿಸುವ ಭರವಸೆಯನ್ನು ಕಳೆದ ವರ್ಷ ನೀಡಿದ್ದರು. ಆ ಭರವಸೆಯನ್ನು ಆದಷ್ಟು ಬೇಗ ಈಡೇರಿಸಿ ತಮ್ಮ ಅವಧಿ ಮುಗಿಯುವುದರೊಳಗೆ ಗೌರಿ ಹಂತಕರಿಗೆ ಶಿಕ್ಷೆಯಾಗಲಿ ಎಂಬ ಆಶಯ ನಮ್ಮದು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X