ಒತ್ತುವರಿಯಾಗಿರುವ 27,000 ಎಕರೆ ಅರಣ್ಯ ಭೂಮಿ ಹಾಗೂ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಿ, ಅಕ್ರಮ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಆರ್ ಭಾಸ್ಕರ್ ಪ್ರಸಾದ್ ಆಗ್ರಹಿಸಿದರು.
ಚಿಕ್ಕಮಗಳೂರು ನಗರದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ನಡೆಸಿದ ನಾಯಕರ ಸಭೆಯಲ್ಲಿ ಮಾತನಾಡಿ, “ಜಿಲ್ಲೆಯಾದ್ಯಂತ ಒಟ್ಟು 27,000 ಎಕರೆಗೂ ಹೆಚ್ಚು ಅರಣ್ಯ, ಸ್ಮಶಾನ, ಗೋಮಾಳ, ಸರ್ಕಾರಿ ಜಮೀನುಗಳು ಒತ್ತುವರಿಯಾಗಿದ್ದು, ಅರಣ್ಯ ಒತ್ತುವರಿ ತೆರವಿಗೆ ರಾಜ್ಯ ಅರಣ್ಯ ಸಚಿವರು ಈ ಹಿಂದೆ ಖಡಕ್ ಸೂಚನೆ ನೀಡಿದ್ದರು ಹಾಗೂ ಸುಪ್ರೀಂ ಕೋರ್ಟ್‌ನ ಹಸಿರು ಪೀಠವು ಮೀಸಲು ಅರಣ್ಯ ಒತ್ತುವರಿ ತೆರವುಗೊಳಿಸಬೇಕು ಇಲ್ಲದೆ ಹೋದರೆ ಸಂಬಂಧಿಸಿದ ಅರಣ್ಯಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಹಲವು ಪ್ರಕರಣಗಳಲ್ಲಿ ಪುನರುಚ್ಚರಿಸಿಸುತ್ತಲೇ ಬಂದಿದೆ” ಎಂದರು.
“ನ್ಯಾಯಲಯಗಳಲ್ಲಿ ಅರಣ್ಯ ಇಲಾಖೆಯ ಪರವಾಗಿಯೇ ತೀರ್ಪುಗಳು ಬಂದಿದೆ. ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸಿದ ಪ್ರಕರಣದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾನೂನುಬದ್ಧಗೊಳಿಸಿರುವ ಅಕ್ರಮ ಒತ್ತುವರಿದಾರರ ವಿರುದ್ಧ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಪ್ರಕರಣದಲ್ಲಿ ಅಕ್ರಮ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಜೀವನೋಪಾಯಕ್ಕಾಗಿ ಅಲ್ಪಸ್ವಲ್ಪ ಒತ್ತುವರಿ ಮಾಡಿರುವವರನ್ನು ಬಿಡಿಸುವ ಮುನ್ನ ನೂರಾರು ಎಕರೆಗೂ ಹೆಚ್ಚು ಅರಣ್ಯ ಒತ್ತುವರಿ ಮಾಡಿರುವ ಪ್ರಭಾವಿಗಳನ್ನು ಬಿಡಿಸುವ ಕೆಲಸ ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಂಜಾರ ಸಂಸ್ಕೃತಿ, ಕಲೆಗೆ ರಾಷ್ಟ್ರೀಯ ಮಹತ್ವವಿದೆ: ಡಾ. ಎ ಆರ್ ಗೋವಿಂದಸ್ವಾಮಿ
ಪಕ್ಷದ ಜಿಲ್ಲಾಧ್ಯಕ್ಷ ಗೌಸ್ ಮುನೀರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಮೀಲ್ ಅಹ್ಮದ, ಮುಬಾರಕ್, ಜಮೀಲ್ ಖಾನ್, ಅಂಗಡಿ ಚಂದ್ರು, ಮೊಹಮ್ಮದ್ ಜೀಲಾನ್, ಆಫ್ರೀದ್ ಸೇರಿದಂತೆ ಕಾರ್ಯಕರ್ತರು ಹಾಗೂ ಸ್ಥಳೀಯರು ಇದ್ದರು.