ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿಯಲ್ಲಿ ಕಳೆದ ವಾರ ನಡೆದಿದ್ದ 18 ವರ್ಷದ ಯುವತಿ ಭಾಗ್ಯಶ್ರೀಯ ಕೊಲೆ ಆರೋಪದ ಸಂಬಂಧ ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದ್ದು, ಯುವತಿಯ ಪ್ರಿಯಕರನೇ ಕೊಲೆ ಮಾಡಿರುವುದು ತಾಂತ್ರಿಕ ಸಾಕ್ಷಾಧಾರಗಳಿಂದ ಖಚಿತವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟೆ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ‘ಭಾಗ್ಯಶ್ರೀ ತಂದೆ ಮೊದಲೇ ಕೊಲೆ ನಡೆದಿರುವ ಬಗ್ಗೆ ದೂರು ನೀಡಿದ್ದರು. ಪ್ರೀತಿಸಿ ಮದುವೆ ಮಾಡಿಕೊಳ್ಳದೆ ಯುವತಿ ಮೇಲೆ ಅತ್ಯಾಚಾರ ನಡೆಸಿ, ಕತ್ತು ಹಿಸುಕಿ, ಆಕೆಯ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ’ ಎಂದು ಮಾಹಿತಿ ನೀಡಿದರು.
ಬಸವಕಲ್ಯಾಣ ಹಾಗೂ ಮಂಠಾಳ ಠಾಣೆ ಸಿಪಿಐ ನೇತೃತ್ವದಲ್ಲಿ ಎರಡು ತಂಡ ರಚಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದರು.
ಇದನ್ನು ಓದಿದ್ದೀರಾ? ರಾಯಚೂರು | ಶಾಲಾ ಬಸ್‌ಗೆ ಸಾರಿಗೆ ಬಸ್ ಡಿಕ್ಕಿ : ಇಬ್ಬರು ವಿದ್ಯಾರ್ಥಿಗಳು ಸಾವು; ಹಲವರಿಗೆ ಗಾಯ
‘ಕೊಲೆಯ ಪ್ರಮುಖ ಆರೋಪಿ ಅದೇ ಗ್ರಾಮದವನಾಗಿದ್ದು, ಈ ಕೃತ್ಯಕ್ಕೆ ಸಹಕಾರ ನೀಡಿದ್ದ ಆತನ ಇನ್ನಿಬ್ಬರು ಸ್ನೇಹಿತರನ್ನು ಬಂಧಿಸಲಾಗಿದೆ. ಮೃತಳು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರಿಂದ ಬಸವಕಲ್ಯಾಣ ನಗರ ಠಾಣೆಯಲ್ಲಿ ಎಸ್ಸಿ,ಎಸ್ಟಿ ಕಾಯ್ದೆ ಅನ್ವಯ ಹಾಗೂ ಅತ್ಯಾಚಾರ ಪ್ರಕರಣವೆಂದು ಪರಿಗಣಿಸಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ’ ಎಂದು ಮಾಹಿತಿ ನೀಡಿದರು.
