ಕೋವಿಡ್ ಹಗರಣದ ತನಿಖಾ ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಸಂಪುಟದಲ್ಲಿ ಚರ್ಚೆಯಾಗಲಿದೆ ಎಂದು ಮಾಧ್ಯಮಗಳ ವರದಿಯಲ್ಲಿ ನೋಡಿದ್ದೇನೆ. ಇದರ ಜೊತೆಗೆ ಅರ್ಕಾವತಿ ಬಡಾವಣೆ ಅಕ್ರಮ ಡಿನೋಟಿಫಿಕೇಷನ್ ಮತ್ತು ಭ್ರಷ್ಟಾಚಾರ ಆರೋಪ ಕುರಿತು ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿ ಬಗ್ಗೆಯೂ ಸಂಪುಟದಲ್ಲಿ ಚರ್ಚೆಯಾಗಲಿ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದರು.
ಶಿವಮೊಗ್ಗದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, “ಕೆಂಪಣ್ಣ ಆಯೋಗದ ವರದಿಯನ್ನು ಏಕೆ ಕ್ಯಾಬಿನೆಟ್ ಮುಂದೆ ತರದೆ ಬಿಟ್ಟಿದ್ದಾರೆ” ಎಂದು ಪ್ರಶ್ನಿಸಿದರು.
“ನಾನು ಮುಖ್ಯಮಂತ್ರಿ ಆಗಿದ್ದಾಗ ಅಂಗಾಂಗ ಚಿಕಿತ್ಸೆಗೆ 30 ಕೋಟಿ ರೂ. ಹಣ ಇಟ್ಟಿದ್ದೆ. ಆದರೆ, ತದನಂತರ ಅದರ ಬಗ್ಗೆ ಯಾರೂ ಗಮನ ಕೊಡಲಿಲ್ಲ. ಆ ಹಣ ಏನಾಯ್ತೋ ಗೊತ್ತಿಲ್ಲ” ಎಂದು ತಿಳಿಸಿದರು.
“ಶಿವಮೊಗ್ಗಕ್ಕೆ ಎನ್ಯು ಆಸ್ಪತ್ರೆ ಅವಶ್ಯಕವಾಗಿತ್ತು. ನಾಡಿಗೆ ಅನೇಕ ಕೊಡುಗೆಗಳನ್ನು ಎನ್ಯು ಆಸ್ಪತ್ರೆ ಕೊಟ್ಟಿದೆ. ಶಿವಮೊಗ್ಗದಲ್ಲಿ ಹಲವಾರು ಕುಟುಂಗಳಿಗೆ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಿದ್ದಾರೆ. ಇಲ್ಲವಾದರೆ ಬೆಂಗಳೂರು ಅಥವಾ ಮಂಗಳೂರಿಗೆ ಇಲ್ಲಿನ ಜನ ಆಸ್ಪತ್ರೆಗೆ ಹೋಗಬೇಕಿತ್ತು. ಇದೀಗ ಆ ಸೌಲಭ್ಯ ಶಿವಮೊಗ್ಗದಲ್ಲಿ ದೊರೆಯುತ್ತಿದೆ” ಎಂದು ಹೇಳಿದರು.
ಮಧ್ಯಾಹ್ನ 3ಕ್ಕೆ ಸಚಿವ ಸಂಪುಟ ಸಭೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಸಚಿವ ಸಂಪುಟ ಸಭೆ ಇದೆ. ಸಭೆಯಲ್ಲಿ ಕೋವಿಡ್ ಹಗರಣ ಸಂಬಂಧ ಸಲ್ಲಿಕೆಯಾಗಿರುವ ವರದಿಯ ಬಗ್ಗೆ ಚರ್ಚೆ ನಡೆಯಲಿದೆ ಈಗಾಗಲೇ ಸಿದ್ದರಾಮಯ್ಯ ಅವರೇ ತಿಳಿಸಿದ್ದಾರೆ. ಸಭೆಯಲ್ಲಿ ಏನು ತೀರ್ಮಾನವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.