ಈ ದಿನ ಸಂಪಾದಕೀಯ | ಎತ್ತಿನಹೊಳೆಯಲ್ಲಿ ನೀರಿಗಿಂತ ಹೆಚ್ಚು ಹಣವೂ ಹರಿದಿದೆ; ಪಶ್ಚಿಮಘಟ್ಟವೂ ನಾಶವಾಗಿದೆ

Date:

Advertisements
ಎತ್ತಿನಹೊಳೆ ಯೋಜನೆ ಆರಂಭದಲ್ಲಿ ಹೇಳಿದ್ದು 24 ಟಿಎಂಸಿ. ಆದರೆ 10 ವರ್ಷಗಳ ನಂತರ, ಕೇವಲ 5 ಟಿಎಂಸಿ ನೀರಿಗಾಗಿ 18 ಸಾವಿರ ಕೋಟಿ ಖರ್ಚು ಮಾಡಿದೆ ಸರ್ಕಾರ. ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರ ಅತ್ಯುತ್ಸಾಹದ ಫಲವಾಗಿ ಎತ್ತಿನಹೊಳೆಯಲ್ಲಿ ನೀರಿಗಿಂತ ಹೆಚ್ಚಾಗಿ ಹಣದ ಹೊಳೆ ಹರಿದಿದೆ, ನೀರಿನ ನೆಪದಲ್ಲಿ ಪಶ್ಚಿಮ ಘಟ್ಟ ನಾಶವಾಗಿದೆ...

‘ಸೆ. 6ರಂದು, ಗೌರಿ ಹಬ್ಬದ ದಿನದಂದು ಎತ್ತಿನಹೊಳೆ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಆ ತಕ್ಷಣವೇ ಬಿಜೆಪಿಯ ಸಿ.ಟಿ. ರವಿ, ‘ಕಾಂಗ್ರೆಸ್ ನಾಯಕರು ಎತ್ತಿನಹೊಳೆ ಅಪೂರ್ಣ ಕಾಮಗಾರಿಯನ್ನು ಲೋಕಾರ್ಪಣೆ ಮಾಡಲು ಹೊರಟಿದ್ದಾರೆ. ಯೋಜನಾ ವೆಚ್ಚ 8 ಸಾವಿರ ಕೋಟಿ ಇದ್ದದ್ದು, ಪರಿಷ್ಕೃತ 12 ಸಾವಿರ ಕೋಟಿ ರೂ. ಆಗಿತ್ತು. ಈಗ 24 ಸಾವಿರ ಕೋಟಿ ಆಗಿದೆ. ಇದು ಏಳು ಜಿಲ್ಲೆಗೆ ನೀರು ಕೊಡುವ ಯೋಜನೆ. ಐಐಎಸ್ಸಿ 24 ಟಿಎಂಸಿ ನೀರು ಸಿಗಲ್ಲ ಅಂತ ವರದಿ ನೀಡಿತ್ತು. ಆದರೂ ನಿವೃತ್ತ ಅಧಿಕಾರಿಗಳನ್ನ ಬಳಸಿಕೊಂಡು 24 ಟಿಎಂಸಿ ನೀರಿದೆ ಅಂತ ಮೂಗಿಗೆ ತುಪ್ಪ ಸವರಿ, ಈಗ 8 ಟಿಎಂಸಿ ನೀರು ಮಾತ್ರ ಇದೆ ಅಂದಿದ್ದಾರೆ. ಕೆದಕಿದರೆ ಇದು ಮುಡಾಗಿಂತ ದೊಡ್ಡ ಹಗರಣ’ ಎಂದಿದ್ದಾರೆ.

ಅಧಿಕಾರದಲ್ಲಿರುವವರು ಇದೊಂದು ಮಹತ್ವದ ಯೋಜನೆ ಎಂದು ಸಮರ್ಥಿಸಿಕೊಳ್ಳುವುದು; ವಿರೋಧ ಪಕ್ಷದವರು ಇದು ಬೇಡವಾಗಿದ್ದ ಯೋಜನೆ, ದೊಡ್ಡ ಹಗರಣ ಎಂದು ಟೀಕಿಸುವುದು ಸಾಮಾನ್ಯ. ಈ ಕಳ್ಳ-ಪೊಲೀಸ್ ಆಟವನ್ನು ನಾಡಿನ ಜನ ನೋಡುತ್ತಲೇ ಬಂದಿದ್ದಾರೆ. ಇಬ್ಬರೂ, ಪೊಲೀಸರ ಪೋಸು ಕೊಟ್ಟು ಕಳ್ಳರಾಗುವುದನ್ನೂ ಕಂಡಿದ್ದಾರೆ, ಇರಲಿ.

Advertisements

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಂದ ವಾರ್ಷಿಕ 24 ಟಿಎಂಸಿ ಪ್ರವಾಹದ ನೀರನ್ನು ಸಕಲೇಶಪುರದಿಂದ ರಾಜ್ಯದ ಪೂರ್ವಭಾಗಕ್ಕೆ ತಿರುಗಿಸಿ, ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಹಾಗೂ ಅಂತರ್ಜಲ ಮರುಪೂರಣಕ್ಕಾಗಿ ಈ ಭಾಗಗಳಲ್ಲಿನ ಸುಮಾರು 527 ಸಣ್ಣ ನೀರಾವರಿ ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ. 50ರಷ್ಟು ನೀರು ತುಂಬಿಸುವ ಉದ್ದೇಶಿತ ಯೋಜನೆಯೇ ಎತ್ತಿನಹೊಳೆ.

2014ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಆಡಳಿತಾತ್ಮಕ ಅನುಮೋದನೆ ನೀಡಿದ ಯೋಜನೆ ಇದು. ಆಗ ನೀರಾವರಿ ಸಚಿವರಾಗಿ ಎಂ.ಬಿ. ಪಾಟೀಲರಿದ್ದರು, ಈಗ ಡಿ.ಕೆ. ಶಿವಕುಮಾರ್ ಇದ್ದಾರೆ. ಅವರು ಲಿಂಗಾಯತರು, ಇವರು ಒಕ್ಕಲಿಗರು. ಇಬ್ಬರೂ ಮಳೆ-ಬೆಳೆ ನಂಬಿ ಬದುಕುವ ಕೃಷಿ ಕುಟುಂಬದಿಂದ ಬಂದವರು. ಆದರೆ ಈ ಯೋಜನೆಗಾಗಿ ಕಳೆದುಕೊಳ್ಳುವ ಭೂಮಿ ಬಿಡದ ರೈತರ ವಿರೋಧವನ್ನು ನಿರ್ಲಕ್ಷಿಸಿದವರು.

ಬಯಲು ಸೀಮೆಯ ಜನರ ಕುಡಿಯುವ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಏಳು ಜಿಲ್ಲೆಯ ಕೆಲವು ಭಾಗಗಳಲ್ಲಿ ಹನಿ ನೀರಿಗಾಗಿ ಜನರು ಪರದಾಡುವ ಸ್ಥಿತಿ ಇದೆ. ಕೆಲವು ಜಿಲ್ಲೆಗಳಲ್ಲಂತೂ ಸಾವಿರಾರು ಅಡಿ ಕೊರೆದರೂ ಭೂಮಿಯಲ್ಲಿ ನೀರು ಹುಟ್ಟುತ್ತಿಲ್ಲ. ಬಾವಿಗಳನ್ನು ಬತ್ತಿಸಿದ್ದು, ಕೆರೆಗಳನ್ನು ಹಾಳುಗೆಡವಿದ್ದು, ಮಳೆ ನೀರು ಸಂಗ್ರಹಕ್ಕೆ ಸರಿಯಾದ ವ್ಯವಸ್ಥೆ ಮಾಡದೇ ಹೋಗಿದ್ದು- ಜೀವಜಲ ಬತ್ತಿಹೋಗಲು ಕಾರಣವಾಗಿದೆ. ಅಲ್ಪಸ್ವಲ್ಪ ನೀರು ಸಿಕ್ಕರೂ ಕುಡಿಯಲು ಯೋಗ್ಯವಾಗಿಲ್ಲದೆ, ರೋಗಗಳಿಗೆ ಆಹ್ವಾನಿಸಿ ಜನರ ಬದುಕು ನರಕವಾಗಿದೆ.

ಇಂತಹ ಸಂದರ್ಭದಲ್ಲಿ ಈ ಜಿಲ್ಲೆಗಳ ಜನರ ದಾಹ ಇಂಗಿಸಲು ಮುಂದಾಗಬೇಕಾದ್ದು ಯಾವುದೇ ನಾಗರಿಕ ಸಮಾಜದ, ಜವಾಬ್ದಾರಿಯುತ ಸರ್ಕಾರದ ಕರ್ತವ್ಯ. ಜಂಜಾಟದಲ್ಲಿರುವ ಜನರ ನೆರವಿಗೆ ನಿಲ್ಲಬೇಕು ಎಂಬುದು ಮಾನವೀಯ ನಿಲುವು. ಆದರೆ, ಇದನ್ನೇ ನೆಪವಾಗಿಸಿಕೊಳ್ಳುವ ಅಧಿಕಾರಸ್ಥರು ಬೃಹತ್‌ ಯೋಜನೆಗಳಿಗೆ ಕೈಹಾಕುತ್ತಾರೆ. ಕೋಟ್ಯಂತರ ರೂಪಾಯಿಗಳ ಕಾಮಗಾರಿಯ ಕನಸು ಕಾಣುತ್ತಾರೆ. 

ಅಂತಹ ಬೃಹತ್‌ ಯೋಜನೆಗಳ ಸಾಲಿಗೆ ಸೇರುವ ಎತ್ತಿನಹೊಳೆ ಯೋಜನೆ ಆರಂಭವಾದಾಗಿನಿಂದಲೂ ಕರಾವಳಿ, ಬಯಲುಸೀಮೆ ಮತ್ತು ಪಶ್ಚಿಮಘಟ್ಟದ ಜನತೆ ಪರಸ್ಪರ ಬಡಿದಾಡುವ ಸನ್ನಿವೇಶ ನಿರ್ಮಾಣವಾಗಿದೆ. ಎತ್ತಿನಹೊಳೆ ತಿರುವು ಯೋಜನೆಯಲ್ಲ, ಅನುಷ್ಠಾನವಾಗಬೇಕಿರುವುದು ನೇತ್ರಾವತಿ ತಿರುವು ಯೋಜನೆ ಎಂದು ಬಯಲುಸೀಮೆಯ ಜನರು ಪಟ್ಟು ಹಿಡಿದಿದ್ದರೆ; ನೇತ್ರಾವತಿಗೆ ಕೈ ಇಟ್ಟರೆ ಪ್ರತ್ಯೇಕ ತುಳುನಾಡು ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಎದ್ದು ನಿಲ್ಲುತ್ತಾರೆ.

ಇವರಿಬ್ಬರಿಗಿಂತ ಭಿನ್ನವಾದ ಸಮಸ್ಯೆ ಪಶ್ಚಿಮಘಟ್ಟದವರದು. ಅಷ್ಟೇನೂ ರಾಜಕೀಯವಾಗಿ ಪ್ರಬಲರಲ್ಲದ ಪಶ್ಚಿಮಘಟ್ಟ ಭಾಗಕ್ಕೆ ಸೇರುವ ಸಕಲೇಶಪುರದ ಸುತ್ತಮುತ್ತಲ ಜನರು, ರೈತರು, ಪರಿಸರವಾದಿಗಳು, ಹೋರಾಟಗಾರರು ಈ ಯೋಜನೆಯಿಂದ ಅರಣ್ಯಕ್ಕೆ, ಜೀವಸಂಕುಲಕ್ಕೆ, ಹವಾಮಾನ ವೈಪರೀತ್ಯಕ್ಕೆ, ಅದರಿಂದ ದೇಶಕ್ಕೆ ಸಮಸ್ಯೆಯಾಗಲಿದೆ ಎಂದು ಆರಂಭದಿಂದ ಇಲ್ಲಿಯವರೆಗೆ ವಿರೋಧಿಸುತ್ತಲೇ ಬಂದಿದ್ದಾರೆ. ಆದರೆ ಆಳುವ ಸರ್ಕಾರ ಅವರ ದನಿ ಅಡಗಿಸುತ್ತಲೇ ಸಾಗಿದೆ.

ಇಂಥ ಬೃಹತ್ ಯೋಜನೆ ಜಾರಿಯಾಗುವ ಪ್ರದೇಶದಲ್ಲಿ ಜನರ ಜತೆ ಸರ್ಕಾರ ಸಂವಹನ ನಡೆಸಲಿಲ್ಲ. ಯೋಜನೆಯಿಂದ ಭೂಮಿ ಕಳೆದುಕೊಳ್ಳುವ, ನಷ್ಟ ಅನುಭವಿಸುವ, ಸ್ಥಳಾಂತರಗೊಳ್ಳುವ, ಬೇರೆ ಬೇರೆ ರೀತಿಯ ಪ್ರತ್ಯಕ್ಷ, ಪರೋಕ್ಷ ಸಮಸ್ಯೆಗಳನ್ನು ಎದುರಿಸುವ ಜನರ ಜತೆ ಸಂವಾದ ನಡೆಸಿ, ಅವರ ಅನುಮಾನಗಳನ್ನು ಬಗೆಹರಿಸಲಿಲ್ಲ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಗೌರಿ ಲಂಕೇಶ್: ಕೋಮುವಾದಿ ಕತ್ತಲಿಗೆ ಸವಾಲೆಸೆದ ಬೆಳ್ಳಂಬೆಳಕಿನ ದೀವಟಿಗೆ

ಎತ್ತಿನಹೊಳೆ ಯೋಜನೆಯ ಸಾಧಕಬಾಧಕಗಳ ಬಗ್ಗೆ ನೋಡುವುದಾದರೆ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಯಾದ ನೇತ್ರಾವತಿಗೆ ಇರುವ ಹಲವು ಉಪನದಿಗಳಲ್ಲಿ ಎತ್ತಿನಹೊಳೆಯೂ ಒಂದು. ಹಾಗೆ ನೋಡಿದರೆ ಎತ್ತಿನಹೊಳೆಯು ನೇರವಾಗಿ ನೇತ್ರಾವತಿಯನ್ನು ಸೇರುವುದಿಲ್ಲ. ಅದು ಕೆಂಪುಹೊಳೆಯನ್ನು ಸೇರಿ ನಂತರ ನೇತ್ರಾವತಿಯನ್ನು ಕೂಡುತ್ತದೆ. ಹಾಗಾಗಿ ಅದು ಹೊಳೆಯಲ್ಲ, ಹಳ್ಳ. ಸಕಲೇಶಪುರ ತಾಲ್ಲೂಕಿನ ಮೂರ್ಕಣ್ಣು ಗುಡ್ಡದ ಬಳಿ ಸಣ್ಣ ತೊರೆಯಾಗಿ ಹುಟ್ಟುವ ಈ ಹಳ್ಳ ಆರು ಕಿಮೀ ದೂರ ಹರಿದು ಕೆಂಪುಹೊಳೆಯನ್ನು ಸೇರುತ್ತದೆ.

ಸುಮಾರು ಹತ್ತು ಚದರ ಕಿಮೀ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ನೀರನ್ನು ಹೆಗ್ಗದ್ದೆ ಮತ್ತು ಕಾಡುಮನೆಗಳಲ್ಲಿ ತಲಾ ಎರಡು ಚೆಕ್ ಡ್ಯಾಂ ಮತ್ತು ಕೆಂಕೇರಿಹಳ್ಳದಲ್ಲಿ ಒಂದು ಚೆಕ್ ಡ್ಯಾಂಗಳಲ್ಲಿ ಸಂಗ್ರಹಿಸಿ ಲಿಫ್ಟ್ ಮಾಡುವ ಯೋಜನೆಯೇ ಎತ್ತಿನಹೊಳೆ ಯೋಜನೆ.  ಆದರೆ ಈ ಭಾಗದಲ್ಲಿ ಬೀಳುವ ಮಳೆಯ ಅಂದಾಜು ಏಳೆಂಟು ಟಿಎಂಸಿ ದಾಟುವುದಿಲ್ಲ. ಆದರೂ, ಸರ್ಕಾರ 24 ಟಿಎಂಸಿ ನೀರು ಲಭ್ಯವಾಗುತ್ತದೆ ಎಂದು ಹಸಿಸುಳ್ಳು ಹೇಳಿಕೊಂಡೇ ಬರುತ್ತಿದೆ. ಅದಕ್ಕಾಗಿ ಜನರ ತೆರಿಗೆ ಹಣವಾದ 24 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸುವತ್ತಲೇ ಗಮನ ಹರಿಸುತ್ತಿದೆ.  

ಯೋಜನೆ ಆರಂಭವಾಗಿ 10 ವರ್ಷಗಳ ನಂತರ, ‘ಒಂದನೇ ಹಂತದ ಯೋಜನೆಯಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲು ಸಾಧ್ಯವಾಗಲಿದ್ದು, ಎರಡನೇ ಹಂತದ ಯೋಜನೆಯಡಿ ಉಳಿದ 140 ಕಿಮೀ ಕಾಮಗಾರಿ ಪೂರ್ಣಗೊಳಿಸಿ ತುಮಕೂರಿಗೆ ನೀರು ಹರಿಸಲಾಗುವುದು. ಹೆಬ್ಬನಹಳ್ಳಿ ವಿತರಣಾ ತೊಟ್ಟಿ 4 ರಿಂದ 32 ಕಿಮೀ ದೂರದಲ್ಲಿ ಎಸ್ಕೇಪ್ ಚಾನೆಲ್ ಮಾಡಿದ್ದು, ಅಲ್ಲಿಂದ ನಾಲೆ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುವುದು. ನವೆಂಬರ್ 1ರ ವೇಳೆಗೆ ಸುಮಾರು 5 ಟಿಎಂಸಿ ನೀರನ್ನು ಮೇಲಕ್ಕೆ ಎತ್ತಲಾಗುವುದು. ಮುಂದಿನ 4 ತಿಂಗಳಲ್ಲಿ ಈ ಕೆಲಸ ಮುಗಿಯಲಿದ್ದು, ಆನಂತರ ತುಮಕೂರು ಭಾಗದ ಕೆಲಸವನ್ನು ತ್ವರಿತವಾಗಿ ಮುಗಿಸಲಾಗುವುದು’ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಅಂದರೆ ಯೋಜನೆಯ ಆಮೆಗತಿಯನ್ನು, ಲಭ್ಯವಿರುವ ನೀರನ್ನು, ವಾಸ್ತವ ಚಿತ್ರಣವನ್ನು ಜನರ ಮುಂದಿಟ್ಟಿದ್ದಾರೆ. ಹಾಗೆಯೇ ಕೇವಲ 5 ಟಿಎಂಸಿ ನೀರಿಗಾಗಿ 10 ವರ್ಷ ವ್ಯಯಿಸಿ, 18 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರು- ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ. ಎತ್ತಿನಹೊಳೆಯಲ್ಲಿ ನೀರಿಗಿಂತ ಹೆಚ್ಚಾಗಿ ಹಣವನ್ನೇ ಹರಿಸಿದ್ದಾರೆ.

ಬಯಲುಸೀಮೆಯ ಜನರ ನೀರಿನ ದಾಹ ಇಂಗಿಸುವುದು ಮುಖ್ಯ. ಆದರೆ ಅದರ ನೆಪದಲ್ಲಿ ಪಶ್ಚಿಮಘಟ್ಟವನ್ನು ವಿನಾಶದತ್ತ ದೂಡಿ, ಅದು ದೇಶದ ಹವಾಮಾನ ವೈಪರೀತ್ಯಕ್ಕೆ ಕಾರಣವಾಗುವುದನ್ನು ಅಧಿಕಾರಸ್ಥರು ಅರಿಯುವುದು ಯಾವಾಗ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X