ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಹೊರವಲಯದಲ್ಲಿ ಗುರುವಾರ ಬೆಳಗ್ಗೆ ಖಾಸಗಿ ಶಾಲಾ ಬಸ್ ಹಾಗೂ ಸಾರಿಗೆ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿ, 15 ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ನಡೆದಿತ್ತು.
ಈ ಘಟನೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆ ಗುಂಡಿಗಳನ್ನು ಮುಚ್ಚಿಸದಿರುವುದೇ ಕಾರಣ ಎಂದು ಆರೋಪಿಸಿ, ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಸಾರಿಗೆ ಬಸ್ ಹಾಗೂ ಶಾಲಾ ಬಸ್ ನಡುವಿನ ಅಪಘಾತ ನಡೆಯಲು ಇಲ್ಲಿನ ರಸ್ತೆ ಗುಂಡಿಗಳು ಕಾರಣ. ಈ ಘಟನೆಗೆ ಸ್ಥಳೀಯ ಅಧಿಕಾರಿಗಳು ನೇರ ಹೊಣೆ ಹೊರಬೇಕು. ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ನಿತೀಶ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ವೇಳೆ ಮಾತನಾಡಿದ ಜನಸೇವಾ ಮುಖ್ಯಸ್ಥ ಜಾವೇದ್ ಖಾನ್, “ಹೆದ್ದಾರಿಯು ಸಂಪೂರ್ಣ ಹದೆಗಟ್ಟಿರುವುದರಿಂದ ಗುಂಡಿಗಳು ಬಿದ್ದಿದೆ. ಹಲವು ಅಪಘಾತಗಳು ಸಂಭವಿಸಿ ಸಾವು ನೋವು ಕೂಡ ಸಂಭವಿಸಿದೆ. ಖಾಸಗಿ ಶಾಲಾ ಬಸ್ ಚಾಲಕ ರಸ್ತೆಯ ಗುಂಡಿಯನ್ನು ತಪ್ಪಿಸಲು ಹೋದಾಗ ಎದುರಿಗೆ ಬರುತ್ತಿರುವ ಬಸ್‌ಗೆ ಡಿಕ್ಕಿಯಾಗಿ, ಅಪಘಾತ ಸಂಭವಿಸಿದೆ. ಇದಕ್ಕೆ ನೇರ ಕಾರಣ ಅಧಿಕಾರಿಗಳು ಎಂದು ವಾಗ್ದಾಳಿ ನಡೆಸಿದರು.
ರಾಷ್ಟ್ರೀಯ ಹೆದ್ದಾರಿಯನ್ನು ನಿರ್ವಹಿಸುತ್ತಿರುವ ಕೆಆರ್‌ಡಿಐಎಲ್ ಅವರು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ಹಾಗಾಗಿ, ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು. ಶಾಲಾ ಮಕ್ಕಳ ಕುಟಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಇನ್ಸೂರೆನ್ಸ್ ಕ್ಷೇಮ ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಶಾಲಾ ಬಸ್‌ಗೆ ಸಾರಿಗೆ ಬಸ್ ಡಿಕ್ಕಿ : ಇಬ್ಬರು ವಿದ್ಯಾರ್ಥಿಗಳು ಸಾವು; ಹಲವರಿಗೆ ಗಾಯ
ಲೋಕೋಪಯೋಗಿ ಇಲಾಖೆ ಅಧಿಕಾರಿ ಶ್ಯಾಮಿಲಪ್ಪ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮಕ್ಕಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ: ಸಿಎಂ ಸಿದ್ದರಾಮಯ್ಯ ಭರವಸೆ
ರಾಯಚೂರು ಘಟನೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಕ್ಕಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ತಮ್ಮ ಟ್ವೀಟ್‌ನಲ್ಲಿ, “ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಪಗಲ್ ಬಳಿ ಶಾಲಾ ಬಸ್ ಮತ್ತು ಸರ್ಕಾರಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟು, ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡ ಸುದ್ದಿ ಕೇಳಿ ಸಂಕಟವಾಯಿತು. ಮೃತ ಕಂದಮ್ಮಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡ ಮಕ್ಕಳಿಗೆ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುವುದು. ಮೃತ ಮಕ್ಕಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರವನ್ನು ನೀಡಲಾಗುವುದು. ಮಕ್ಕಳನ್ನು ಕಳೆದುಕೊಂಡ ಪೋಷಕರ ದುಃಖದಲ್ಲಿ ನಾನೂ ಭಾಗಿ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
